ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆವಹಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ ಎಂದ ಗೋವಾ ಸಿಎಂ ಹೇಳಿಕೆ ವಿಚಾರವಾಗಿ ನಗರದ ತಮ್ಮ ನಿವಾಸದಲ್ಲಿ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿ, ಈ ಹಿಂದೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಡಿಸೆಂಬರ್ ನಲ್ಲಿ ಸಿಹಿ ಸುದ್ದಿ ನೀಡುವುದಾಗಿ ಘೋಷಣೆ ಮಾಡಿದ್ದರು ಒಂದು ವರ್ಷ ಕಳೆದರು ರೈತರಿಗೆ ಶುಭ ಸುದ್ದಿ ನೀಡಿಲ್ಲ ಕರ್ನಾಟಕ ಮತ್ತು ಗೋವಾ ಎರಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇವೆ. ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರು ಸಿಎಂಗಳ ಜತೆ ಮಾತುಕತೆ ನಡೆಸಿ ಪ್ರಕರಣಕ್ಕೆ ನಾಂದಿ ಹಾಡಬೇಕು ಎಂದು ಒತ್ತಾಯಿಸಿದರು.
ಮುಂಬೈ ಅವಶ್ಯಕತೆ ನಮಗಿಲ್ಲ!
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು, ರಾಜಕೀಯ ಉದ್ದೇಶದಿಂದ ಗಡಿ ವಿವಾದ ಕೆಣಕಿದ್ದಾರೆ. ಇದಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಕರ್ನಾಟಕ ಎಂದೆಂದಿಗೂ ಮರಾಠಿಗರಿಗೆ ಅನ್ಯಾಯ ಮಾಡಿಲ್ಲ. ಅದರಲ್ಲಿಯೂ ವಿಶೇವಾಗಿ ಯಮನಕಮರಡಿ ಕ್ಷೇತ್ರದಲ್ಲಿ ಮರಾಠಿಗರು ಜಾಸ್ತಿ ಇದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮುಂಬೈ ನಮ್ಮದು ಎಂದ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಂಬೈ ಪಡೆದು ನಾವೇನು ಮಾಡೋಣ. ಅದರ ಅವಶ್ಯಕತೆ ನಮಗೆ ಇಲ್ಲ. ಬೆಂಗಳೂರು ನಮಗೆ ಸಾಕು. ಸಾಕಷ್ಟು ಹಳ್ಳಿಗಳ ಅಭಿವೃದ್ದಿ ಮಾಡಬೇಕಿದೆ. ಮೊದಲು ಆ ಕೆಲಸ ಮಾಡೋಣ ಎಂದರು.
ಕಳೆದ 10 ವರ್ಷದಲ್ಲಿ ರಸ್ತೆ, ಕುಡಿಯುವ ನೀರು, ಹೀಗೆ ಎಲ್ಲ ಸೌಲಭ್ಯ ನೀಡಲಾಗಿದೆ. ಕನ್ನಡ ಶಾಲೆಗಳಿಗೆ ನೀಡಿದಷ್ಟೇ ಪ್ರಾಮುಖ್ಯತೆ ಮರಾಠಿ ಶಾಲೆಗೆ ನೀಡಲಾಗಿದೆ. ಅಥಣಿಯಿಂದ ಹಿಡಿದು ಕಾರವಾರದವರೆಗೂ ಸಾವಿರಾರು ಕೋಟಿ ಅನುದಾನ ಬಳಕೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಅಂಕಿ ಅಂಶಗಳುಳ್ಳ ಪುಸ್ತಕ ಸಿದ್ದಪಡಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರತ್ಯುತ್ತರ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಬಜೆಟ್ : ಮೋದಿಯಿಂದ ನಿರೀಕ್ಷೆ ಏನಿಲ್ಲ!
ನಾಳೆ ಬಜೆಟ್ ಮಂಡನೆಯಾಗಲಿದೆ. ಆದ್ರೆ ಮೋದಿ ಅವರಿಂದ ಏನನ್ನು ನಿರೀಕ್ಷೆ ಮಾಡಲಾಗುವುದಿಲ್ಲ. ಎಂದಿನಂತೆ ಇದು ಕೂಡ ನಿರಾಶದಾಯಕ ಬಜೆಟ್ ಆಗಿರಲಿದೆ. ಕೋವಿಡ್ ನೆಪ ಹೇಳಿ ಎಲ್ಲವನ್ನು ಕಟ್ ಮಾಡಿರುತ್ತಾರೆ. ರಾಜಕೀಯವಾಗಿ ಕೆಲವು ಯೋಜನೆಗಳನ್ನು ಘೋಷಿಸಿದರು ಅವರು ಕಾರ್ಯರೂಪಕ್ಕೆ ಬರಲ್ಲ ಅಂತಾ ಟೀಕಿಸಿದರು.