spot_img
spot_img

ವೇಣು ಜಾಲಿಬೆಂಚಿ ಗಜಲ್ ಗಳು

Must Read

spot_img
- Advertisement -

ಗಜಲ್-೧

ಏನು ಹೇಳಲಿ ಬೇಜಾರಾಗುವ ಸಂಗತಿಗಳು ನೂರೆಂಟಿವೆ ಓ ಮುಸಾಫಿರ್
ಬಿಜಲಿಯ ಸುತ್ತ ನಗುತ ಮೈಸುಟ್ಟುಕೊಳ್ಳುವ ರೆಕ್ಕೆಗಳಿವೆ ಓ ಮುಸಾಫಿರ್

ನನ್ನ ಹಾಡಿನ ನೋವು ಮರೆಯಬೇಕೆಂದು ಬರೆಯುವೆ ಮತ್ತದೇ ನೋವು ಬರೆಯೆಳೆಯುವುದೆ
ಅಂತರಂಗದ ಗುಹೆಗೂ ಮಿಗಿಲು ದಫನಾಗಲು ಬೇರೆ ಉಪಾಧಿಗಳೆಲ್ಲಿವೆ ಓ ಮುಸಾಫಿರ್

- Advertisement -

ನಂಬುವೆಯೋ ನಂಬದಿರುವೆಯೋ ಜೀವವೇ ಜೀವವನು ಬೇಸರಿಸಿಕೊಳುತಿದೆ ಈಗ
ಎಚ್ಚರದ ಬದುಕು ಬದುಕಲು ಇಲ್ಲಿ ರಾಶಿಗಟ್ಟಲೆ ಮುಳ್ಳು ಚೆಲ್ಲಿವೆ ಓ ಮುಸಾಫಿರ್

ಅರ್ಥಕೆ ಒಗ್ಗುತಲೇ ಇಲ್ಲ ಶಬ್ದ ಎಲ್ಲ ಸೂತಕದ ಛಾಯೆ
ಬೇಡಿಕೊಳುತಿರುವೆ ಬೇಗ ತಿಳಿಯಾಗಲಿ
ಹೂವಿಗೂ ಮಕರಂದಕೂ ಇರುವ ಅನುಬಂಧ ನೆಟ್ಟ ಬಾಳಲ್ಲಿ ಹುಡುಕುತಿರುವೆ ಓ ಮುಸಾಫಿರ್

ಎಷ್ಟು ಬರೆದುಕೊಂಡರೂ ಪಾಟಿ ಮೇಲೆ ಗೀಚಿದ ಕಂದನ ಬತ್ತೀಸುರಾಗವಿದು “ಜಾಲಿ”
ಮುಂದೆಯೇ ನಾವಿಲ್ಲಿ ಪಡೆದುಕೊಂಡು ಬಂದವರಲ್ಲ ಮರಳಿ ಹೋಗುವವರೆ ಓ ಮುಸಾಫಿರ್

ಗಜಲ್-೨

- Advertisement -

ಕತ್ತಲಲ್ಲಿ ಏನು ಮಾಡಿದರೂ ನಡೆಯುವುದೆಂದು ಮಾಡಿಯೇ ಬಿಟ್ಟರು
ಇನ್ನೇನು ಹಗಲಲೇ ನೋಡಬಾರದ್ದೆಲ್ಲ ನೋಡಿರೆಂದು ಮಾಡಿಯೇ ಬಿಟ್ಟರು

ಯಾರ ಮುಖದಲ್ಲಿ ಏನು ಬರೆದಿದೆ ಕಂಡವರು ಯಾರು ಕಾಣುವುದೆಂತು
ತಾನೆಂಬ ಮತಿಯು ಸೋಲದೆ ತೋಚಿದ್ದೆ ಸರಿಯೆಂದು ಮಾಡಿಯೇ ಬಿಟ್ಟರು

ಧೈರ್ಯ ಸಾಹಸ ಯಾವುದಕೆ ಮಾಡಬೇಕೊ ಅದಕ್ಕೆ ಮಾಡಲಿಲ್ಲ ನೌಟಂಕಿಗಳು
ಅನಾಚಾರ ಅತ್ಯಾಚಾರಗಳಿಗೆ ಮುನ್ನುಗ್ಗಿ ಬಂದೆವೆಂದು ಮಾಡಿಯೇ ಬಿಟ್ಟರು

ಮಾನಾಪಮಾನದ ಗಡಿಯೆಷ್ಟು ಸೂಕ್ಷ್ಮ ಅರ್ಥ ತಿಳಿಯದ ವಿಷಣ್ಣರು
ಮೂಗಿನ ನೇರಕ್ಕೆ ಮಾತನಾಡುವುದೇ ಬಲವೆಂದು ಮಾಡಿಯೇ ಬಿಟ್ಟರು

ಸಂತೋಷಕ್ಕೆ ಸವಾಲೆಸೆಯುವ ಘಟನೆಗಳು ಒಂದಾದಮೇಲೊಂದು
ನಡೆದರೂ “ಜಾಲಿ” ಕಣ್ಮುಚ್ಚಿ ಕುಳಿತ ಬೆಕ್ಕಿನಂತೆ ಗೊತ್ತಿಲ್ಲವೆಂದು ಮಾಡಿಯೇ ಬಿಟ್ಟರು

ಗಜಲ್-೩

ನೀನಂದುಕೊಂಡದ್ದೆಲ್ಲ ನಿಜವೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ
ಅದೆಲ್ಲಿರುತ್ತೋ ಬಿರುಗಾಳಿ ಬೀಸುವುದೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ

ಇದು ಸುಳ್ಳು ವಂಚನೆಗಳ ಕಪಟ ಲೋಕ ನಿತ್ಯ ನೋಡಲು ಸಿಗುವ ಮಹಾ ನಾಟಕರಂಗ
ಒಳಗೂ ಹೊರಗೂ ಸುಣ್ಣವೊಂದೇಯೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ

ನನಗೆಲ್ಲ ಗೊತ್ತೆಂಬ ಗೋಡೆ ಎಲ್ಲ ಕಾಲಕೂ ಭದ್ರವಲ್ಲ ತಿಳಿದೂ ಯಾಕೆ ಮೋಹವದರ ಮೇಲೆ
ಕತ್ತಲಿಗೂ ಕಾಣುವ ಬೆಳಕಿನ ಸತ್ಯವನು ಸುಳ್ಳೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ

ಇಂದು ಮೆರೆಯುವ ಜೀವನ‌‌ ನಾಳೆಗೆ ಕೊರಗುವ ಪಯಣ ವ್ಯತ್ಯಾಸವರಿತು ನಡೆಯಬೇಕು
ಹಾಸಿಗೆ ಇದ್ದಷ್ಟು ಚಾಚುವ ಕಾಲಿಗೆ ಮಚ್ಚೆಯೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ

“ಜಾಲಿ” ಭೋಗಕ್ಕೆ ಅಂಟಿಕೊಂಡ ಮನುಷ್ಯ ಸತ್ಪುರುಷನಾಗಿ ಬದಲಾದ ವೇಮನ ಚರಿತ್ರೆ
ಈಗಿನ ದುರಿತ ಕಾಲಕೆ ಬರೀ ಕಟ್ಟುಕಥೆಯೆಂದು ಹೃದಯಕ್ಕೆ ನಂಬಿಸಲು ಬರಬೇಡ ಓ ಕಪಟ ಮನವೆ

ಗಜಲ್-೪

ಬದುಕೊಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು
ಜೀವನ ಒಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು

ಊಟದಲಿ ಕಲ್ಲು ಸಹಿಸಿಕೊಳಬೇಕು ಬೈದುಕೊಂಡರಿಲ್ಲ ಪರಿಹಾರ
ದಕ್ಕುವುದೊಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು

ಮುಂಜಾನೆಗೊಂದು ಸಂಜೆಗೊಂದು ಹೆಸರಿನ ವಿರುದ್ಧ ಹೋಗದಿರು
ಸರಿದಾರಿಯೊಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು

ಉಪವಾಸದ ಹೊಟ್ಟೆಯಲಿ ಯೋಚನೆ ಮರಿಗಳು ಚಿಲಿಪಿಲಿಯೆನವು
ತುತ್ತಿನ ಚೀಲವೊಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು

ನೂರೆಂಟು ವಿಸ್ಮಯಗಳಿಗೂ ಕಣ್ಣು ಕಿವಿ ತೆರೆಯದ ನಿರ್ವಿಕಾರ ಜನರು
“ಜಾಲಿ” ತಿಳಿ ನಗುವೊಂದು ಗಿರಗಿಟ್ಲೆಯಾಟ ಆಡಿಸುವವನಾಟಕೆ ಆಡಬೇಕು

-ವೇಣು ಜಾಲಿಬೆಂಚಿ
ರಾಯಚೂರು.

- Advertisement -
- Advertisement -

Latest News

ಜತ್ತ-ಜಾಂಬೋಟಿ ರಸ್ತೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ ಈರಣ್ಣ ಕಡಾಡಿ

ಬೆಳಗಾವಿ: ಜತ್ತ-ಜಾಬೋಂಟಿ ಹೆದ್ದಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಬೆಳಗಾವಿ ವಿಮಾನ ನಿಲ್ದಾಣದಿಂದ ಸಿಟಿ ಬಸ್ ನಿಲ್ದಾಣದವೆರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group