spot_img
spot_img

ಹೊಸ ಪುಸ್ತಕ ಓದು ; ನಾಥ ಸಂಪ್ರದಾಯದ ಇತಿಹಾಸ

Must Read

- Advertisement -

ದಕ್ಷಿಣದ ಪಂಥಗಳ ಮೇಲೆ ಬೆಳಕು ಚೆಲ್ಲುವ ಅಮೂಲ್ಯ ಕೃತಿ

ಪುಸ್ತಕದ ಹೆಸರು: ನಾಥ ಸಂಪ್ರದಾಯದ ಇತಿಹಾಸ
ಮರಾಠಿ ಮೂಲ : ರಾಮಚಂದ್ರ ಚಿಂತಾಮಣ ಢೇರೆ
ಕನ್ನಡಾನುವಾದ : ಪ್ರೊ. ಚಂದ್ರಕಾಂತ ಪೋಕಳೆ
ಪ್ರಕಾಶಕರು : ಸ್ನೇಹಾ ಪ್ರಿಂಟರ್ಸ್, ಬೆಂಗಳೂರು, ೨೦೨೪
(ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯)

[ಪ್ರೊ. ಚಂದ್ರಕಾಂತ ಪೋಕಳೆ ಗುರುಗಳು ಪ್ರಸ್ತುತ ನಾಥ ಸಂಪ್ರದಾಯದ ಇತಿಹಾಸ ಪ್ರಕಟವಾದ ತಕ್ಷಣ ನನಗೆ ಕಳಿಸಿಕೊಟ್ಟರು, ಈ ಹಿಂದೆ ಹತ್ತಾರು ಬಾರಿ ಈ ಕೃತಿಯನ್ನು ಓದಿದ್ದೆ. ಆದರೆ ಹೊಸ ಮುದ್ರಣದಲ್ಲಿ ಆಕರ್ಷಕವಾಗಿ ಮುದ್ರಿತವಾದ ಪುಸ್ತಕವನ್ನು ಮತ್ತೊಮ್ಮೆ ಆಮೂಲಾಗ್ರವಾಗಿ ಓದಿದೆ. ತಕ್ಷಣ ಈ ಕೃತಿ ಕುರಿತು ಬರೆಯಲೇಬೇಕೆಂಬ ಮನದಾಳದಲ್ಲಿ ಒತ್ತಡ ಮೂಡಿತು. ಇಂತಹ ಅಮೂಲ್ಯ ಕೃತಿ ಕುರಿತು ಕನ್ನಡ ವಿದ್ವತ್ ವಲಯದಲ್ಲಿ ಹೆಚ್ಚು ಹೆಚ್ಚು ಚರ್ಚೆಗಳಾಗಬೇಕು. ಈ ನಿಟ್ಟಿನಲ್ಲಿ ಕೃತಿಯ ಮಹತ್ವವನ್ನು ಕುರಿತು ಪ್ರಸ್ತುತ ಲೇಖನದಲ್ಲಿ ವಿವರಿಸುವ ಪ್ರಯತ್ನ ಮಾಡಿರುವೆ]

ನಾಥ ಸಂಪ್ರದಾಯವು ಭಾರತದ ಉದ್ದಗಲಕ್ಕೂ ವಿಸ್ತಾರಗೊಂಡ ಬೃಹತ್ ವ್ಯಾಪ್ತಿಯ ಪಂಥ. ನಾಥ ಸಂಪ್ರದಾಯದ ಉಗಮ ಮತ್ತು ವಿಕಾಸ ಕ್ರಮದ ಬಗ್ಗೆ ಇಂದಿಗೂ ವಿದ್ವಾಂಸ ವಲಯದಲ್ಲಿ ಜಿಜ್ಞಾಸೆ ಇದೆ. ಅನೇಕ ವಿದ್ವಾಂಸರು ನಾಥ ಪಂಥವು ಪಂಜಾಬ, ಆಸಾಮ, ಬಂಗಾಲ, ಉತ್ತರ ಪ್ರದೇಶ ಮತ್ತು ನೇಪಾಳದಲ್ಲಿ ಉಗಮವಾಯಿತೆಂದು ಪರಿಭಾವಿಸಿದ್ದರು.

- Advertisement -

ಡಾ. ರಾ.ಚಿಂ. ಢೇರೆ ಅವರು ೧೯೫೫ರಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾಥ ಸಂಪ್ರದಾಯ’ ಕೃತಿಯ ಮೂಲಕ ಆ ಎಲ್ಲ ಪೂರ್ವಸೂರಿಗಳ ವಿಚಾರಧಾರೆಯನ್ನು ಬುಡಮೇಲು ಮಾಡಿದರು. ನಾಥಪಂಥದ ಉಗಮವು ದಕ್ಷಿಣದ ಶ್ರೀಶೈಲ ಪ್ರದೇಶದಲ್ಲಿ ಆಗಿದೆ ಎಂಬ ಅವರ ವಾದ ಸರ್ವಜನಾದರಣೀಯವೂ ಆಯಿತು.

ಪ್ರೊ. ಚಂದ್ರಕಾಂತ ಪೋಕಳೆ ಅವರು ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಸಂಬಂಧಗಳನ್ನು ಎಲ್ಲ ಆಯಾಮಗಳಿಂದ ಸಂವೃದ್ಧನೆಗೊಳಿಸಲು ಪ್ರಯತ್ನಿಸಿದ ಘನವಿದ್ವಾಂಸರು. ಡಾ. ರಾ.ಚಿಂ.ಢೇರೆ ಅವರ ಸಂಶೋಧನಾತ್ಮಕ ಗ್ರಂಥಗಳಾದ ‘ಶ್ರೀವಿಠ್ಠಲ : ಒಂದು ಮಹಾಸಮನ್ವಯ’, ‘ತುಳಜಾಭವಾನಿ’, ‘ದತ್ತ ಸಂಪ್ರದಾಯದ ಇತಿಹಾಸ’, ಮತ್ತು ‘ನಾಥ ಸಂಪ್ರದಾಯದ ಇತಿಹಾಸ’ ಈ ನಾಲ್ಕು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಕನ್ನಡ ಸಂಶೋಧನಾ ಕ್ಷೇತ್ರದ ಕ್ಷಿತಿಜವನ್ನು ವಿಸ್ತಾರೋನ್ನತಗೊಳಿಸಿದ್ದಾರೆ. ಈ ಕೃತಿಗಳ ಅಧ್ಯಯನದಿಂದ ಕನ್ನಡದಲ್ಲಿ ಅನೇಕ ಹೊಸ ವಿಚಾರಗಳು ಮೊದಲ ಬಾರಿಗೆ ಬೆಳಕಿಗೆ ಬಂದವು.

ಪ್ರೊ. ಪೋಕಳೆ ಅವರು ಅನುವಾದಿಸಿದ ‘ನಾಥ ಸಂಪ್ರದಾಯದ ಇತಿಹಾಸ’ ಕೃತಿ ಇಪ್ಪತ್ತು ವರ್ಷಗಳ ಹಿಂದೆ (೨೦೦೪) ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದ ಕನ್ನಡ ಜಾಗೃತಿಮಾಲೆಯಲ್ಲಿ ಪ್ರಕಟಗೊಂಡಿತ್ತು. ಡಾ. ಎಂ. ಎಂ. ಕಲಬುರ್ಗಿ ಅವರು ಈ ಕೃತಿ ಆಧಾರದ ಮೇಲೆ ನಾಥ ಸಂಪ್ರದಾಯದ ಅಧ್ಯಯನಕ್ಕೆ ಹೆಚ್ಚು ಹೆಚ್ಚು ಒತ್ತು ಕೊಟ್ಟು, ಬಸವಾದಿ ಶಿವಶರಣರ ಲಿಂಗಾಯತ ಪರಂಪರೆಯು ಈ ನಾಥಪಂಥದಿಂದಲೇ ಪ್ರಭಾವಿತಗೊಂಡಿದೆ ಎಂಬುದರತ್ತ ಗಮನ ಸೆಳೆದು, ಮಹತ್ವದ ಲೇಖನಗಳನ್ನು ಬರೆದರು. ಸಿದ್ಧರಾಮನ ನಾಥಪಂಥೀಯತೆ, ರೇವಣಸಿದ್ಧನ ನಾಥ ಹಿನ್ನೆಲೆ ಮೊದಲಾದ ವಿಷಯಗಳು ಮೇಲೆ ವಿದ್ವತ್ ವಲಯದ ಗಮನ ಸೆಳೆದವು.

- Advertisement -

ಡಾ. ಎಂ. ಎಂ. ಕಲಬುರ್ಗಿ ಅವರು ಮಹಾರಾಷ್ಟ್ರದ ಡಾ. ಢೇರೆಯವರ ಸಂಶೋಧನಾ ಕೃತಿಗಳು ಕನ್ನಡದಲ್ಲಿಯೂ ಹೆಚ್ಚು ಚರ್ಚೆಗೆ ಒಳಗಾದರೆ ಮಾತ್ರ ಕನ್ನಡ ಸಂಸ್ಕೃತಿಯ ವಿಶ್ವವಿಕಾಸದ ಮಹೋನ್ನತ ಪರಿಕಲ್ಪನೆಯಾಗುವುದು ಎಂದು ಭಾವಿಸಿ, ಒಂದು ಯೋಜನೆಯನ್ನೇ ರೂಪಿಸಿ, ಢೇರೆಯವರ ಪ್ರಮುಖ ಸಂಶೋಧನಾ ಕೃತಿಗಳನ್ನು ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ. ಚಂದ್ರಕಾಂತ ಪೋಕಳೆ, ಡಾ. ಸರಜೂ ಕಾಟ್ಕರ್, ಡಾ. ರಾಮಕೃಷ್ಣ ಮರಾಠೆ, ಡಾ. ವಿಠ್ಠಲರಾವ ಗಾಯಕ್ವಾಡ ಇವರಿಂದ ಅನುವಾದ ಮಾಡಿಸಿ, ಪ್ರಕಟಿಸುವ ಯೋಜನೆಯನ್ನು ಅಸ್ತಿತ್ವಕ್ಕೆ ತಂದರು. ಈ ಯೋಜನೆಯ ಮೊದಲ ಕೃತಿಯಾಗಿ ಪ್ರಕಟವಾದುದೇ ಪ್ರೊ. ಪೋಕಳೆ ಅವರ ‘ಶ್ರೀ ವಿಠ್ಠಲ : ಒಂದು ಮಹಾಸಮನ್ವಯ’. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವು ಪ್ರಾಪ್ತವಾಯಿತು.

‘ನಾಥ ಸಂಪ್ರದಾಯ’ ಡಾ. ರಾ.ಚಿಂ.ಢೇರೆ ಅವರ ಮೊದಲ ಸಂಶೋಧನ ಗ್ರಂಥವಾಗಿದೆ. ೧೯೫೨ರಲ್ಲಿ ಶಂಕರಾಜಿ ನಾರಾಯಣ ಪುರಸ್ಕಾರಕ್ಕಾಗಿ ‘ನಾಥ ಸಂಪ್ರದಾಯದ ಇತಿಹಾಸ’ ಕುರಿತು ಚಾರಿತ್ರಿಕ ದೃಷ್ಟಿಯ ಹಸ್ತಪ್ರತಿಗಳನ್ನು ಆವ್ಹಾನಿಸಿದ್ದರು. ಆ ಕಾಲದಲ್ಲಿ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದ ಯಾವ ಆಕರಗಳು ಮರಾಠಿಯಲ್ಲಿ ಡಾ. ಢೇರೆ ಅವರಿಗೆ ದೊರೆಯಲಿಲ್ಲ. ಇಂಗ್ಲಿಷಿನಲ್ಲಿ ರೆ. ಬ್ರಿಗ್ಜ್ ಮತ್ತು ಡಾ. ಮನಮೋಹನ ಸಿಂಗ, ಹಿಂದಿಯಲ್ಲಿ ಡಾ. ಹಜಾರಿಪ್ರಸಾದ ದ್ವಿವೇದಿ ಅವರ ಹಿಂದಿ ಗ್ರಂಥಗಳು ಕೆಲವು ಬಂಗಾಲಿ ಕೃತಿಗಳು ಉಪಲಬ್ಧವಿದ್ದವು. ಈ ಶೋಧ ಕಾರ್ಯಕ್ಕಾಗಿಯೇ ಡಾ. ಢೇರೆ ಅವರು ಇಂಗ್ಲಿಷ್, ಹಿಂದಿ, ಸಂಸ್ಕೃತ ಮತ್ತು ಬಂಗಾಲಿ ಭಾಷೆಗಳನ್ನು ಕಲಿತರು. ಆ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದರು.

೧೯೫೫ರಲ್ಲಿ ಪ್ರಸ್ತುತ ಕೃತಿ ಪ್ರಕಟಗೊಂಡಿತು. ೧೯೫೯ರಲ್ಲಿ ಈ ಕೃತಿಗೆ ಮಹಾರಾಷ್ಟç ಸರ್ಕಾರದ ಬಹುಮಾನ ಬಂದಿದೆ. ‘ನನಗೆ ನನ್ನ ಬಗ್ಗೆಯೇ ಅಸೂಯೆ ಮೂಡಬಹುದಾದ ಕಾರ್ಯವಿದು’ ಎಂದು ಒಂದೆಡೆ ಡಾ. ಢೇರೆ ಅವರು ಹೇಳಿಕೊಂಡಿದ್ದಾರೆ.

ನಾಥ ಸಂಪ್ರದಾಯವು ವಾಮಾಚಾರಿ ವಿಕೃತ ಸಾಧನೆಯ ನಿರ್ಮೂಲನೆಗಾಗಿ ಮತ್ತು ಭಾರತೀಯ ಧರ್ಮಿಕ ಜೀವನದ ಶುದ್ಧೀಕರಣಕ್ಕಾಗಿ ಹುಟ್ಟಿಕೊಂಡ ಒಂದು ಪಂಥ. ವರ್ಣಾಶ್ರಮ ಧರ್ಮದ ವಿರುದ್ಧ ಮೊದಲ ವಿದ್ರೋಹಿ ಆಂದೋಲನ ಅಸ್ತಿತ್ವಕ್ಕೆ ತಂದ ಪಂಥ. ವರ್ಣಧರ್ಮದ ಅಪವರ್ಗೀಕರಣ ಮಾಡುವುದೇ ಈ ಪಂಥದ ಮುಖ್ಯ ಉದ್ದೇಶವಾಗಿತ್ತು. ನಾಥಪಂಥ ಒಂದು ಪರಿಶುದ್ಧ ಅವೈದಿಕ ಸಂಪ್ರದಾಯ. ವೈಚಾರಿಕ ನೆಲೆಯಲ್ಲಿ ಧರ್ಮ-ಅಧ್ಯಾತ್ಮ ತತ್ವಗಳನ್ನು ಪಸರಿಸುವುದರ ಜೊತೆಗೆ ಸಮಾನತೆಯ ಸಮಾಜವನ್ನು ರೂಪಿಸುವುದು ನಾಥಸಂಪ್ರದಾಯದ ಮೂಲ ಉದ್ದೇಶವಾಗಿತ್ತು.

ಈ ಪಂಥದ ಉಗಮವನ್ನು ಉತ್ತರದ ವಿದ್ವಾಂಸರು ಉತ್ತರದ ಭಾಗದಲ್ಲಿಯೇ ಹುಡುಕಲು ಪ್ರಯತ್ನಿಸಿದ್ದಾರೆ. ದಕ್ಷಿಣದ ಕಡೆಗೆ ಅವರು ಕಣ್ಣೆತ್ತಿಯೂ ನೋಡಿಲ್ಲ. ಈ ವಿಷಯವಾಗಿ ಡಾ. ಢೇರೆ ಅವರು ಹೀಗೆ ಹೇಳುತ್ತಾರೆ: ‘ನಾಥಸಂಪ್ರದಾಯದ ಉಗಮಪೂರ್ವ ಕಾಲದಲ್ಲಿ ಶ್ರೀಶೈಲವು ತಾಂತ್ರಿಕ ಸಾಧನೆಗಳ ಪ್ರಭಾವಿ ಕೇಂದ್ರವಾಗಿತ್ತು. ಆ ಕಾಲದಲ್ಲಿ ಶ್ರೀಶೈಲವು ಶೈವ, ಬೌದ್ಧ ಮತ್ತು ಶಾಕ್ತತಂತ್ರಗಳ ಕೇಂದ್ರವಾಗಿತ್ತು. ಅಲ್ಲಿ ಯೋಗಿನಿಯರ ಮೇಳವಿರುತ್ತಿತ್ತು. ಸ್ತ್ರೀಪ್ರಧಾನ ಸಾಧನಾಪದ್ಧತಿಯ ಪ್ರಕ್ರಿಯೆಯು ಅಲ್ಲಿ ಶಿಖರಸ್ಥಿತಿಯನ್ನು ತಲುಪಿತ್ತು. ಈ ಶ್ರೀಶೈಲದ ಮೇಲೆ ನಾಥಸಂಪ್ರದಾಯದ ವಿದ್ರೋಹಿ ಆಂದೋಲನ ಪ್ರಾದುರ್ಬಾವಗೊಳ್ಳುವುದು ಹೆಚು ಸಹಜವಾದುದು. ಯಾವ ಕದಳಿ ಬನದ ಯೋಗಿನಿ ಮೇಳಗಳೊಳಗೆ ಮತ್ಸ್ಯೇಂದ್ರನಾಥ ಸಿಲುಕಿದ್ದನೋ, ಆ ಕದಳಿ ಬನವು ಶ್ರೀಶೈಲದ್ದೇ ಒಂದು ಪರಿಸರ ಎನ್ನುವುದು, ಇಲ್ಲಿಯವರೆಗೆ ಉತ್ತರದ ಪಂಡಿತರ ಗಮನಕ್ಕೆ ಬರದೇ ಇದ್ದುದರಿಂದ ನಾಥಸಂಪ್ರದಾಯದ ಉಗಮಭೂಮಿ ನಿರ್ಧರಿಸುವ ಬಾಬತ್ತಿನಲ್ಲಿ ಅವರು ದಿಗ್ಬ್ರಾಂತಗೊಂಡಿದ್ದಾರೆ.’ (ನಾಥಸಂಪ್ರದಾಯ ಪು.೯) ಎಂದು ಹೇಳುತ್ತ ಉತ್ತರಭಾರತದ ವಿದ್ವಾಂಸರಿಗೆ ದಕ್ಷಿಣ ಭಾರತದ ಚಾರಿತ್ರಿಕ ಇತಿಹಾಸದ ಬಗ್ಗೆ ಅಜ್ಞಾನವಿದೆ; ದಕ್ಷಿಣದ ವಿದ್ವಾಂಸರಿಗೆ ಚಾರಿತ್ರಿಕ ಘಟನೆಗಳನ್ನು ದಾಖಲಿಸುವ ವ್ಯವಧಾನವಿಲ್ಲ, ಇವರಿಗೆ ತತ್ವಜ್ಞಾನ ಮಾತ್ರ ಮುಖ್ಯವಾಗಿದೆ. ಹೀಗಾಗಿ ಉತ್ತರ ಭಾರತದ ವಿದ್ವಾಂಸರ ಅಜ್ಞಾನ, ದಕ್ಷಿಣ ಭಾರತದ ವಿದ್ವಾಂಸರ ಅವಜ್ಞೆ ಕಾರಣವಾಗಿ ನಾಥಸಂಪ್ರದಾಯದಂಥ ಅನೇಕ ವಿಷಯಗಳ ಮೇಲೆ ಇನ್ನೂ ಬೆಳಕು ಮೂಡಲು ಸಾಧ್ಯವಾಗಿಲ್ಲ.

ದಕ್ಷಿಣದ ಶ್ರೀಶೈಲದಲ್ಲಿ ಉಗಮಗೊಂಡ ನಾಥಸಂಪ್ರದಾಯವು ಇಡೀ ಭಾರತವನ್ನು ಹೇಗೆ ವ್ಯಾಪಿಸಿತು ಎಂಬ ವಿಷಯವನ್ನು ಕುರಿತು ಅವರು ನೀಡುವ ವಿಶ್ಲೇಷಣೆ ಅರ್ಥಪೂರ್ಣವಾಗಿದೆ : ‘ಶ್ರೀಶೈಲವು ಯಾವ ವಜ್ರಯಾನಿಗಳ ಭದ್ರಕೋಟೆಯಾಗಿತ್ತೋ, ಆ ವಜ್ರಯಾನಿ ಮತ್ತು ಅನ್ಯ ತಾಂತ್ರಿಕ ಸಾಧಕರು ಬಂಗಾಲದ ತುಂಬೆಲ್ಲ ಅಧಿಕ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ ಶ್ರೀಶೈಲದಲ್ಲಿಯ ಪರಾಭವಗೊಂಡ ಸಾಧನಾ ಪ್ರಣಾಲಿಯ ಗೋರಕ್ಷನಾಥರ ಪ್ರಭಾವದ ಕೆಳಗೆ ಬಂದ ಕೂಡಲೇ ನಾಥಸಂಪ್ರದಾಯದ ಪ್ರಸಾರವು ಅವರ ಮೂಲಕ ಬಂಗಾಲದ ಕಡೆಗೆ ವಾಲಿತು. ಬಂಗಾಲದ ಗೋಪಿಚಂದನಂತೆಯೇ ಇತ್ತ ಉಜ್ಜಯನಿಯ ರಾಜ ಭರ್ತೃಹರಿಯು ರಾಜ್ಯತ್ಯಾಗ ಮಾಡಿ ಗೋರಕ್ಷನ ಶಿಷ್ಯನಾಗಿದ್ದರಿಂದ ಭಾರತದ ಪಶ್ಚಿಮ ದಿಶೆಗೆ ನಾಥಸಂಪ್ರದಾಯವು ಪಸರಿಸುತ್ತ ಹೋಯಿತು. ಭರ್ತೃಹರಿ-ಶಿಷ್ಯ ರತನನಾಥ ಮತ್ತು ಅವನ ಉಳಿದ ಸಹಕಾರಿಗಳ ಮೂಲಕ ಪಂಜಾಬ, ಸರಹಿಂದ ಪ್ರಾಂತ ಮತ್ತು ಅದರ ಆಚೆಯ ಅಫಗಾನದವರೆಗೂ ನಾಥಸಂಪ್ರದಾಯದ ಧ್ವಜ ಹಾರಿತು.

ಈ ಕಡೆ ಗಹಿನಿನಾಥ, ಅಮರನಾಥ-ಇಂಥ ಮಹಾರಾಷ್ಟ್ರೀಯ ಶಿಷ್ಯರಿಂದಾಗಿ ಮಹಾರಾಷ್ಟ್ರಕ್ಕೂ ಪಸರಿಸಿತು. ವಿದರ್ಭದಲ್ಲಂತೂ ಹರಿನಾಥಾದಿಗಳ ಕಾರ್ಯವಂತೂ ನಡೆದೇ ಇತ್ತು. ಆಂಧ್ರ ಕರ್ನಾಟಕದಲ್ಲಿಯೂ ನಾಥಪಂಥಿಗಳು ಸಂಚರಿಸುತ್ತಿದ್ದರು. ಕರ್ನಾಟಕದಲ್ಲಿ ಅಲ್ಲಮಪ್ರಭು ಮತ್ತು ರೇವಣಸಿದ್ಧರೆಂಬ ನಾಥ ಸಂಬಂಧ ಹೊಂದಿದ ಶರಣರು ಕನ್ನಡಿಗರ ಜನ ಜೀವನದಲ್ಲಿ ಪರಿವರ್ತನೆಯನ್ನು ತರುತ್ತಿದ್ದರು. ಬಂಗಾಲದಲ್ಲೇ ನಾಥ ಸಂಪ್ರದಾಯವು ನೇಪಾಳದ ಕಡೆಗೆ ನುಗ್ಗಿ, ಅಲ್ಲಿಯ ಜನಜೀವನದಲ್ಲಿ ಸಮರಸಗೊಂಡಿತು.

ಗೋರಕ್ಷನಾಥನೇ ನಾಥಸಂಪ್ರದಾಯದ ಬೀಜಾರೋಪಣ ಮಾಡಿ, ತನ್ನ ಜೀವಿತದ ಕಾಲಾವಧಿಯಲ್ಲಿ ಅದರ ಪರಮೋಚ್ಛ ಶಿಖರವನ್ನು ತಲುಪಿ, ಭಾರತದ ತುಂಬಾ ವಿಶಾಲವೃಕ್ಷ ಪಸರಿಸುವಂತೆ ಮಾಡಿದರು. ‘ಯಾಚಿ ದೇಹಿ ಯಾಚಿ ಡೋಳಿ’ (ಇದೇ ದೇಹ, ಇದೇ ಕಣ್ಣು) ಭಾರತೀಯ ಧರ್ಮಿಕ ಜೀವನದಲ್ಲಿ ಧವಲ ಸ್ವರೂಪ ನಿರ್ಮಿಸಿದರು. ವಿಷಯ ವಿಂಧ್ವಸೈಕವೀರ-ಎಂಬ ಸಾರ್ಥಕ ಉಪಾಧಿಯನ್ನು ಪಡೆದರು. ಭಾರತದ ಸಾಧನೆಯ ಚರಿತ್ರೆಯಲ್ಲಿ ಗೋರಕ್ಷನಾಥನ ಕಾರ್ಯಕ್ಕೆ ಬೇರೊಂದು ಹೋಲಿಕೆಯಿಲ್ಲ. (ನಾಥಸಂಪ್ರದಾಯದ ಇತಿಹಾಸ ಪು. ೫೦)

ಭಾರತದ ತುಂಬ ಪಸರಿಸಿದ ನಾಥಪಂಥದ ಶಾಖೆಗಳು, ಮಹಾರಾಷ್ಟçದಲ್ಲಿ ಬೆಳೆದು ಬಂದ ಮೂರು ಬಗೆಯ ನಾಥಸಂಪ್ರದಾಯದ ಕವಲುಗಳನ್ನು ಕುರಿತು ವಿಸ್ತಾರವಾಗಿ ವಿವೇಚಿಸಿದ್ದಾರೆ. ಗೋರಕ್ಷನಾಥನ ಜೀವನ ಮತ್ತು ಕಾರ್ಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಕೆಲವು ಪ್ರಾಚೀನ ನಾಥಸಿದ್ಧರ ಪರಿಚಯ ಮಾಡಿಕೊಟ್ಟಿದ್ದಾರೆ.

ನಾಥಸಂಪ್ರದಾಯವು ಮಧ್ಯಯುಗದ ಭಾರತೀಯ ಸಾಧನೆಯ ಗಂಗೋತ್ರಿಯೆನಿಸಿದೆ. ಅದು ತನ್ನ ವಿದ್ರೋಹಿ ಆಂದೋಲನದಿಂದ ವಿಕೃತ ಸಾಧನೆಯನ್ನು ಕೊಚ್ಚಿ ಹಾಕಿತ್ತು, ಹಲವು ವಾಮಾಚಾರಿ ಸಾಧಕರನ್ನು ಶ್ರೇಷ್ಠ ಪರಮಾರ್ಥ ಸಾಧನೆಯ ಕಡೆಗೆ ಎಳೆದು ತಂದಿತು. ಸಮಾಜದ ಶೀಲವನ್ನು ನಿರ್ಮಿಸಲು ಗೋರಕ್ಷನಾಥ ಅವಿರತವಾಗಿ ಪರಿಶ್ರಮಿಸಿದ.ಇತನಿಂದ ಭಾರತೀಯ ಇತಿಹಾಸವು ದೇದೀಪ್ಯಮಾನ ಗೊಂಡಿತು. ನಾಥ ಪ್ರಭಾವಿತ ಮಹಾಪುರುಷರು ನಿರ್ಮಿಸಿದ ವಿವಿಧ ಸಾಧನ ಪ್ರಣಾಲಿಯ ಇತಿಹಾಸವೇ ನಿಜವಾದ ನಾಥಸಂಪ್ರದಾಯದ ಯಶಸ್ಸಿನ ಚರಿತ್ರೆಯಾಗಿದೆ. ನಾಥ ಸಂಪ್ರದಾಯ ಇಂದು ಜೀವಂತ ಉಳಿದಿರುವುದು ಉತ್ತರಭಾರತದಲ್ಲಿ ಮಾತ್ರ. ಕೆಲವು ವಾಮಾಚಾರಿಗಳು ಈ ಪರಂಪರೆಯೊಳಗೆ ಸೇರಿಕೊಂಡು ನಾಥಪರಂಪರೆಗೆ ಕಳಂಕ ಅಂಟಿಕೊಳ್ಳುತ್ತಲೇ ಹೋಯಿತು. ಕೆಲವು ಮೂಲನಾಥ ಪೀಠಗಳು ಪ್ರಭಾವಶಾಲಿಗಳ ಕೈಗೆ ಸಿಕ್ಕಿ ರೂಪಾಂತರಗೊಂಡವು. ದಕ್ಷಿಣ ಭಾರತದಲ್ಲಿ ಚಕ್ರಧರ, ಅಲ್ಲಮಪ್ರಭು, ಜ್ಞಾನೇಶ್ವರ, ಏಕನಾಥ, ತುಕಾರಾಮ ಮತ್ತು ಉತ್ತರದಲ್ಲಿ ಕಬೀರ, ನಾನಕ, ದಾದೂ ಮುಂತಾದ ಮಹಾಪುರುಷ ಮೂಲಕ ನಾಥಸಂಪ್ರದಾಯವು ಪ್ರತ್ಯಕ್ಷ ಪರೋಕ್ಷವಾಗಿ ಭಾರತೀಯ ಭವ್ಯ ಮಂದಿರವನ್ನು ನಿರ್ಮಿಸಿತು.

ಡಾ. ಎಂ. ಚಿದಾನಂದಮೂರ್ತಿ ಅವರು ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಸಂಶೋಧನಾ ಪ್ರಬಂಧದಲ್ಲಿ ಕರ್ನಾಟಕದಲ್ಲಿ ನಾಥಪಂಥದ ಕುರುಹುಗಳು ಕ್ವಚಿತ್ತಾಗಿ ಕಾಣಸಿಗುತ್ತವೆ ಎಂದು ಬರೆದಿದ್ದರು. ಆದರೆ ೧೯೫೫ರಷ್ಟು ಹಿಂದೆಯೇ ಡಾ. ಢೇರೆ ಅವರು ಕರ್ನಾಟಕದಲ್ಲಿಯ ನಾಥಕ್ಷೇತ್ರಗಳನ್ನು ಗುರುತಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ. ಮರಾಠಿ ಭಾಷೆಯ ಅಧ್ಯಯನದ ಕೊರತೆಯಿಂದ ಇಂತಹ ಕೆಲವು ಮಹತ್ವದ ವಿಚಾರಗಳು ಇಲ್ಲಿಯವರೆಗೆ ಕಣ್ಮರೆಯಾಗಿದ್ದವು. ಪ್ರೊ. ಪೋಕಳೆ ಅವರ ಈ ಅನುವಾದದ ತರುವಾಯ ಮತ್ತೆ ಕನ್ನಡದಲ್ಲಿ ನಾಥಪಂಥದ ಅಧ್ಯಯನ ಅನುಸಂಧಾನ ಕಾರ್ಯಗಳು ಮುನ್ನಡೆದವು. ದೆಹಲಿಯಲ್ಲಿದ್ದ ಹಿರಿಯ ಕವಿ ಎಚ್. ಎಸ್. ಶಿವಪ್ರಕಾಶ ಅವರು ಈ ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ ರಾಷ್ಟ್ರೀಯ ಪ್ರಸಾರವುಳ್ಳ ದಿ. ಹಿಂದೂ ಇಂಗ್ಲಿಷ್ ಪತ್ರಿಕೆಯಲ್ಲಿ ವಿಮರ್ಶಾತ್ಮಕ ಲೇಖನವನ್ನು ಬರೆದರು. ರಹಮತ್ ತರೀಕೆರೆ ಅವರು ಕ್ಷೇತ್ರಕಾರ್ಯ ಮಾಡಿ ‘ಕರ್ನಾಟಕದ ನಾಥಪಂಥ’ ಎಂಬ ಸಂಶೋಧನಾತ್ಮಕ ಕೃತಿಯನ್ನು ರಚಿಸಿದರು. ಆದರೆ ಕನ್ನಡದ ನೆಲದಲ್ಲಿ ‘ಅಲ್ಲಮ-ಗೋರಕ್ಷರ ಮುಖಾಮುಖಿ’, ‘ರೇವಣಸಿದ್ಧ-ಗೋರಕ್ಷರ ಮುಖಾಮುಖಿ’ ನಡದೇ ಇಲ್ಲ ಎಂದು ರಹಮತ್ ತರಿಕೆರೆ ಅವರು ಬರೆದಿದ್ದಾರೆ. ಆದರೆ ಡಾ. ರಾ.ಚಿಂ.ಢೇರೆ ಅವರು ‘ಅಲ್ಲಮ ಗೋರಕ್ಷರ ಮುಖಾಮುಖಿ’ ಒಂದು ಐತಿಹಾಸಿಕ ಸಂಗತಿ ಎಂಬುದನ್ನು ತಮ್ಮ ಸಂಶೋಧನೆಯಲ್ಲಿ ದೃಢೀಕರಿಸಿದ್ದಾರೆ. ಶರಣ ಪರಂಪರೆಯು ನಾಥಸಂಪ್ರದಾಯದಿಂದ ಪ್ರೇರಣೆ ಪಡೆದರೂ, ಅಷ್ಟೊತ್ತಿಗೆ ಈ ನಾಥಪಂಥದಲ್ಲಿಯೂ ಕೆಲವು ದೋಷಗಳು ಸುಳಿದಿರಬಹುದಾದ ಸಾಧ್ಯತೆ ಇದೆ. ಹೀಗಾಗಿ ಶರಣ ಪರಂಪರೆಯು ಇಂತಹ ಕೆಲವು ವಿಚಾರಗಳನ್ನು ಖಂಡಿಸಲು ಈ ಮುಖಾಮುಖಿಗಳು ಅವಶ್ಯಕತೆ ಇರುವುದನ್ನು ಮನಗಂಡು, ಇಂತಹ ಚಾರಿತ್ರಿಕ ಸಂಗತಿಗಳನ್ನು ದಾಖಲಿಸಿರುವ ಸಾಧ್ಯತೆ ಇದೆ.

ಮೂಲ ಲೇಖಕರಾದ ಡಾ. ರಾ.ಚಿಂ.ಢೇರೆಯವರ ಸಂಶೋಧನಾ ಭಾಷೆ ತುಂಬ ಕ್ಲಿಷ್ಟ. ಮರಾಠಿಯಲ್ಲಿ ಅವರು ಸಂಶೋಧನೆಯ ಪರಮ ಗಂತವ್ಯ ಕಾಣಲು, ನೂರಾರು ಆಕರಗಳನ್ನು ಶಂಬಾ ಜೋಶಿ ಅವರಂತೆ ಕ್ರೋಢೀಕರಿಸುತ್ತ, ಒಂದು ರೀತಿಯಲ್ಲಿ ಕಲಸುಮೇಲೋಗರ ಮಾಡಿದಂತೆ ತೋರುತ್ತದೆ. ಹೀಗಾಗಿ ಮೂಲ ಗ್ರಂಥದ ಕೆಲವು ಮೂಲ ಪಠ್ಯಗಳನ್ನು ಕೈಬಿಟ್ಟು, ಸಂಶೋಧನೆಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಪ್ರೊ. ಚಂದ್ರಕಾಂತ ಪೋಕಳೆ ಅವರು ತುಂಬ ಅರ್ಥಪೂರ್ಣವಾಗಿ ಕನ್ನಡಕ್ಕೆ ತಂದಿದ್ದಾರೆ. ಮರಾಠಿ ಮೂಲ ಗ್ರಂಥವನ್ನು ಓದಿದವರಿಗೆ, ಈ ಕೃತಿಯ ಅನುವಾದದ ಮಹತ್ವ ಮತ್ತು ವೈಶಿಷ್ಟ್ಯ ಗೋಚರವಾಗುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಒಮ್ಮೊಮ್ಮೆ ನನಗನ್ನಿಸುವುದೇನಂದರೆ- ಹೀಗೆ ಕನ್ನಡಕ್ಕೆ ಅನುವಾದಗೊಂಡ ಢೇರೆ ಅವರ ಎಲ್ಲ ಕೃತಿಗಳು ಮತ್ತೆ ಮರಾಠಿ ಭಾಷೆಗೆ ಅನುವಾದವಾದರೆ, ಇಲ್ಲಿಯ ಭಾಷೆಯ ಲಾಲಿತ್ಯದ ಪರಿಣಾಮವಾಗಿ ಮತ್ತೆ ಮರಾಠಿ ಭಾಷೆಯಲ್ಲಿಯೂ ಅವು ಇನ್ನಷ್ಟು ಜನಪ್ರಿಯಗೊಳ್ಳುವ ಸಾಧ್ಯತೆ ಇದೆ.

ಒಟ್ಟಾರೆ, ಪ್ರೊ. ಪೋಕಳೆ ಅವರ ಅನುವಾದಿಸಿದ ಸಂಶೋಧನಾತ್ಮಕ ಕೃತಿಯೊಂದು ಇಪ್ಪತ್ತು ವರ್ಷಗಳ ತರುವಾಯ ಮರುಮುದ್ರಣ ಆಗುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಈ ಕೃತಿ ಕುರಿತು ಹೆಚ್ಚು ಹೆಚ್ಚು ಅಧ್ಯಯನ-ಅನುಸಂಧಾನ ಕ್ರಮಗಳು ಜರುಗಬೇಕಾದ ಅನಿವಾರ್ಯತೆ ಇದೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group