ಗೆಲ್ಲುವುದು ಮೇಲಲ್ಲ ಸೋಲುವುದು ಕೀಳಲ್ಲ
ಆಡುವಾಟದಲಿ ಸಂತೋಷ ಮುಖ್ಯ
ಆಡುವುದು ಸಂಸಾರದಾಟವನು ಲೋಕದಲಿ
ಅನುಭವವೆ ಸಾರಾಯ – ಎಮ್ಮೆತಮ್ಮ
ಶಬ್ಧಾರ್ಥ
ಸಾರಾಯ = ನಿಜತತ್ತ್ವ
ತಾತ್ಪರ್ಯ
ಈ ಜಗತ್ತು ಒಂದು ಆಟದ ಮೈದಾನ. ಇದರಲ್ಲಿ ಎಲ್ಲರು
ಆಟ ಆಡುವವರೆ. ಓಟ ಓಡುವವರೆ. ಆಟವನ್ನು ಕುಳಿತು
ನೋಡುವವರೆ. ಅದರಲ್ಲಿ ಕೆಲವರು ಮಾತ್ರ ವ್ಯಾಯಾಮ ಕಸರತ್ತು ಮಾಡಿ ಗುರಿಸಾಧಿಸುವವರು.ಆಟವಿರುವುದು
ಮನೋರಂಜನೆಗೆ ಮತ್ತು ದೈಹಿಕ ಬೆಳವಣಿಗೆಗೆ. ಆಟದಲ್ಲಿ
ಸೋಲುಗೆಲುವು ಸರ್ವೇ ಸಾಮಾನ್ಯ. ಆಟದಲ್ಲಿ ತನ್ನನ್ನು
ಸಂಪೂರ್ಣ ತೊಡಗಿಸಿಕೊಂಡರೆ ಸಂತೋಷ ಸಿಗುತ್ತದೆ.
ದೇವರು ಆಟವಾಡುವುದು ಸಹ ಆತನಿಗೆ ವಿನೋದ.
ಮಕ್ಕಳು ಅನೇಕ ಆಟವಾಡುತ್ತವೆ . ಉಸುಕಿನಲ್ಲಿ ಮನೆ
ಕಟ್ಟುತ್ತಾರೆ ಮತ್ತು ಕೆಡಿಸಿ ಹೋಗುತ್ತಾರೆ. ಕಟ್ಟುವಾಗ ಮತ್ತು
ಕೆಡಿಸುವಾಗ ಸಂತೋಷಪಡುತ್ತವೆ. ಕೆಲವರು ಇಸ್ಫೀಟು
ಆಟ ದುಡ್ಡು ಬರುತ್ತದೆ ಅಥವಾ ಹೋಗುತ್ತದೆಯೆಂದು
ಆಡುವುದಿಲ್ಲ. ಹಣ ಬರುವುದು ಬಿಡುವುದು ಗೌಣ. ಆದರೆ ಅಲ್ಲಿ ಸಿಗುವ ಸಂತೋಷ ಮುಖ್ಯವಾಗುತ್ತದೆ. ಹಾಗೆ ನಾವು
ಈ ಸಂಸಾರದಲ್ಲಿ ಸಂತೋಷದಿಂದ ಆಟ ಆಡಬೇಕು.
ಮದುವೆಯಾಗುವುದು, ಮಕ್ಕಳ ಹಡೆಯುವುದು ಸಂತೋಷಕ್ಕಾಗಿ. ಆದರೆ ಅದನ್ನು ಮರೆತು ದುಃಖಿಸುತ್ತೇವೆ.
ಸಂಸಾರದಲ್ಲಿದ್ದರು ಕೂಡ ಸದಾ ಸಂತೋಷದಿಂದ ಇದ್ದರೆ
ಅದುವೆ ಬ್ರಹ್ಮಾನಂದ ಸುಖ. ಇದೊಂದು ಆಟವೆಂದು ಭಾವಿಸಿ ಜೀವನ ಸಾಗಿಸಬೇಕು. ಅದುವೆ ಸಾರ್ಥಕ ಜೀವನ.