ಲಿಂಗಾಯತ ಸಂಘಟನೆ ವತಿಯಿಂದ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ – ರವಿವಾರ ದಿ 13 ರಂದು ನಗರದ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಶರಣೆ ಕಲ್ಯಾಣಮ್ಮರವರ ಕುರಿತು ವಿಶೇಷ ಉಪನ್ಯಾಸದಲ್ಲಿ ಸುನಿತಾ ನಂದೆನ್ನವರ ಮಾತನಾಡಿ 12ನೇ ಶತಮಾನದ ಶರಣ ಬಳಗದಲ್ಲಿ ವಿಶೇಷವಾದ ಸೇವಾ ಮನೋಭಾವದಿಂದ ಸಮಾಜದಲ್ಲಿ ಏಕತೆ ತರುವಲ್ಲಿ ಶ್ರಮಿಸಿದವರಲ್ಲಿ ಕಲ್ಯಾಣಮ್ಮ ಹಿರಿಯ ಸ್ಥಾನದಲ್ಲಿ ನಿಲ್ಲುತ್ತಾರೆ. ಶರಣರ ಅನುಭಾವ ಮತ್ತು ಅವರ ವಚನಗಳನ್ನು ಪ್ರಸಾರ ಮಾಡುವುದರ ಜೊತೆಗೆ ಕಲ್ಯಾಣ ಕ್ರಾಂತಿಯಾದಾಗ ಇಡೀ ವಚನ ಸಾಹಿತ್ಯವೇ ನಾಶವಾಗಿ ಹೋಗುವ ಸ್ಥಿತಿ ತಲುಪಿದಾಗ ಅತ್ಯಂತ ಕಾಳಜಿ ಮತ್ತು ಧೈರ್ಯದಿಂದ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಿ ವಚನ ಸಾಹಿತ್ಯ ನಾಶವಾಗುವುದನ್ನು ತಡೆದರು. ಇಡೀ ಶರಣ ಸಮುದಾಯ ದಾಳಿಗೆ ತುತ್ತಾದ ಸಂದರ್ಭದಲ್ಲಿ ನಮ್ಮ ಜೀವಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯವನ್ನು ರಕ್ಷಿಸಿದ್ದೇ ಆದರೆ ಮುಂದಿನ ತಲೆಮಾರಿನವರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮಿಸುವುದರ ಜೊತೆಗೆ ತಮ್ಮ ಜೀವನದುದ್ದಕ್ಕೂ ಶರಣ ಸಂಪ್ರದಾಯವನ್ನು ಪಾಲಿಸುತ್ತಾ ನಿರಂತರವಾಗಿ ಕಾಯಕನಿಷ್ಠೆಯಿಂದ ದುಡಿದರು. ಅವರ ಮಾದರಿ ಮತ್ತು ಸರಳ ಜೀವನ ಮತ್ತು ಬಸವಣ್ಣನವರ ಕುರಿತಾದ ಅಪಾರ ಭಕ್ತಿ ಸಮಾಜದಲ್ಲಿ ಸಮಾನತೆಗಾಗಿ ದುಡಿಯುತ್ತಿರುವ ಆ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು ಎಂದು ಅವರ ಅನೇಕ ದೃಷ್ಟಾಂತ ನೀಡುವುದರ ಜೊತೆಗೆ ಜೀವನ ವೃತ್ತಾಂತವನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಪ್ರಸ್ತುತ ಅಸಮಾನತೆಯಿಂದ ದಾರಿ ತಪ್ಪುತ್ತಿರುವ ಸಮಾಜಕ್ಕೆ ಕಲ್ಯಾಣಮ್ಮನವರಂಥವರ ಜೀವನ ನಿಜಕ್ಕೂ ಸ್ಪೂರ್ತಿಯನ್ನು ಉಂಟುಮಾಡುತ್ತದೆ. ಸಮಾಜಕ್ಕೆ ದಾರಿದೀಪವಾಗಿರುವ ವಚನ ಸಾಹಿತ್ಯ ಅಮೂಲ್ಯವಾದದ್ದು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಹಿರಿಯರ ಈಜು ಸ್ಪರ್ಧೆಯಲ್ಲಿ ವಿಶೇಷ ಸಾಧನೆ ಎರಡು ಚಿನ್ನ ಸಹಿತ ನಾಲ್ಕು ಪದಕಗಳನ್ನು ಗೆದ್ದು ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶರಣ ಲಕ್ಷ್ಮಣ ಕು೦ಬಾರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ಶಂಕರ ಗುಡಸ, ಸದಾಶಿವ ದೇವರಮನಿ , ಆನ೦ದ ಕಕಿ೯, ಸುನೀಲ ಸಾನಿಕೊಪ್ಪ, ವಿರುಪಾಕ್ಷಿ ದೊಡ್ಡಮನಿ, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ, ಶಿವಾನಂದ ನಾಯಕ, ಜ್ಯೋತಿ ಬದಾಮಿ, ಶೋಭಾ ದೇಯನ್ನವರ,ವಿದ್ಯಾ ಕಕಿ೯,ಶಾಂತಮ್ಮ ತಿಗಡಿ, ಬಾಬು ತಿಗಡಿ, ಸೇರಿದಂತೆ ಶರಣರು ಉಪಸ್ಥಿತರಿದ್ದರು
ಕಾರ್ಯಕ್ರಮ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು, ಸುರೇಶ ನರಗುಂದ ಸ್ವಾಗತಿಸಿದರು ಉಪಾಧ್ಯಕ್ಷ ಸಂಗಮೇಶ ಅರಳಿ ನಿರೂಪಿಸಿದರು ವಿಕೆ ಪಾಟೀಲ ವಂದಿಸಿದರು.