spot_img
spot_img

ಡಾ. ಶಶಿಕಾಂತ ಪಟ್ಟಣರ ಕವಿತೆಗಳು

Must Read

- Advertisement -

ಕೈಲಾಗದವರು ನಾವು

ಕೈಲಾಗದವರು ನಾವು .
ಬಸವಣ್ಣ ಕೈಲಾಗದವರು.
ನಿನ್ನ ಹೆಸರು ಹೇಳಿ
ಕೋಟಿ ಗಳಿಸಿದವರ
ಜೀತದಾಳುಗಳು ನಾವು
ಕೈಲಾಗದವರು ಬಸವಣ್ಣ .
ಲಿಂಗ ಜಂಗಮ ಹರಾಜು ಹಾಕಿ
ಕಾಯಕ ದಾಸೋಹವ ಮರೆತು
ಮಾರಿಕೊಂಡಿದ್ದೇವೆ ನಿನ್ನನ್ನು
ಬಸವಣ್ಣ ಕೈಲಾಗದವರು ನಾವು.
ಅಕ್ಕ ಮಾತೆ ಸ್ವಾಮಿಗಳು
ಸಾಕಿದ ಬೆಕ್ಕು ನಾಯಿಗಳು ನಾವು .
ಬಸವಣ್ಣ ಕೈಲಾಗದವರು ನಾವು.
ಜಾತ್ರೆ ಮೇಳ ಉತ್ಸವದಲ್ಲಿ
ಕಾಲ ಕಳೆಯುವ ಮುಖವಿಲ್ಲದವರು.
ನಾವು ಕೈಲಾಗದವರು ಬಸವಣ್ಣ .
ಕಾಯಕವೇ ಕೈಲಾಸ
ದಯವೇ ಧರ್ಮದ ಮೂಲ
ವಚನಗಳ ಮಾತು ಗುನುಗುತ್ತೇವೆ.
ಕಾವಿಗಳಿಗೆ ತತ್ವವ ಒತ್ತೆ ಇಟ್ಟಿದ್ದೇವೆ.
ಗುಡಿ ಮಠಗಳಿಗೆ ದಾನ ಕೊಟ್ಟು
ಸತ್ಕಾರ ಸನ್ಮಾನ ಬಿರುದು ಪಡೆಯುತ್ತೇವೆ.
ಲಾಂಛನದಲಿ ಜಾತಿಯ ವೋಟು ಬ್ಯಾಂಕಾಗುತ್ತೆವೆ.
ದೊಡ್ಡವರ ಸುತ್ತು ಉಧೊ ಉಧೊ ಹೇಳಿ
ಕುಣಿವ ಗಂಡು ಜೋಗತಿಗಳು ನಾವು.
ಕೈಲಾಗದವರು ಬಸವಣ್ಣ ಕೈಲಾಗದವರು.
ಮರೆತಿದ್ದೇವೆ ನಿನ್ನ ತತ್ವಗಳ ಕ್ಷಮಿಸಿ ಬಿಡು .
ದುಡ್ಡು ಮಾಡುವ ಉದ್ಯಮಕ್ಕೆ
ನಿನ್ನ ಹೆಸರು ಇಟ್ಟಿದ್ದೇವೆ ಬಸವಣ್ಣ
ಕೈಲಾಗದವರು ನಾವು ಕೈಲಾಗದವರು.


ನೀನೀಗ ಮುಕ್ತಳು

ಅತ್ತ ಇತ್ತ ನೋಡದೆ
ಹಿಂದೆ ಮುಂದೆ ಸುಳಿಯದೆ
ಒಳಗೊಳಗೇ ಬೇಯದೆ
ಇಚ್ಛೆಗಳ ರೆಕ್ಕೆ ಬಿಚ್ಚು
ಆಗಸಕೆ ಹಾರಿ ಬೀಡು
ಅಲ್ಲ ನೀನು ಅಹಲ್ಯೆ
ಕಾಡಿನಲ್ಲಿನ ಬಂಡೆಗಲ್ಲು
ಆಗಬೇಡ ಸೀತಾ ಮಾತೆ
ಹಾರದಿರು ಬೆಂಕಿಯ
ಕುರುಡು ಗಂಡನ ಕರುಣೆಗೆ
ಕಣ್ಣು ಕಟ್ಟದಿರು ಗಾಂಧಾರಿ .
ನೋವುಂಡ ಹೆಂಗರುಳು
ತಾರಾ ಸಾವಿತ್ರಿ ಮಂಡೋದರಿ.
ಮಹಿಳೆ ಮೇಲೆ ನಿಂತಿಲ್ಲ
ರೇಪು ಕೊಲೆ ದೌರ್ಜನ್ಯವು.
ನಾರಿ ದೇವತೆ ಪೂಜೆ ಶೋಭಿತೆ
ಮಡುಗಟ್ಟಿದೆ ಶೋಕ ದನಿಯು
ಅಕ್ಕ ತಾಯಿ ಮಗಳ ಮಮತೆ
ಕನಲುತಿವೆ ಭಾವಗಳು.
ಸಾಕು ಸೈರಣೆ ಶಾಂತಿ ಮಂತ್ರ
ಹೊಸಕಿ ಬೀಡು ರಕ್ಕಸರ.
ಅಲ್ಲ ನೀನು ಅಬಲಳು
ಕಾಳಿ ಶಕ್ತಿಯ ಸಬಲಳು
ನಿನ್ನ ಇಚ್ಛೆ ರೆಕ್ಕೆ ಬಿಚ್ಚಿ
ಹಾರಿ ಬೀಡು ಆಗಸಕೆ
ನೀನೀಗ ಮುಕ್ತಳು
ಬದುಕು ನೂಕುಲು ಶಕ್ತಳು
ಅತ್ತ ಮಹಾದೇವಿಯಕ್ಕ ನಕ್ಕಳು


ಕಡಲ ಒಡಲು.

ಹುಣ್ಣಿಮೆಯ ಶಶಿಗೆ
ಆರ್ಭಟಿಸುವ ಕಡಲ .
ನಿನ್ನಾಗಮನಕ್ಕೆ ……
ಕುದಿವ ಒಡಲ
ಚಿವುಟದಿರು ಗೆಳತಿ
ಚಿಗುರುವ ಕನಸುಗಳ .
ತಡೆಯದಿರು ಬಿರುಗಾಳಿ
ಹಾರಲಿ ಬಣ್ಣ ಬಣ್ಣದ ಪಟ
ಕಟ್ಟಿ ಹಾಕದಿರು ಬಿರಿವ
ಮಳೆ ಹೊಯ್ಯುವ ಮೋಡ .
ಹಿಚುಕದಿರು ಅರಳುವ
ಪರಿಮಳದ ಮಲ್ಲಿಗೆಯ .
ಕಿತ್ತೆಸೆಯ ಬೇಡ ಚೆಲುವೆ
ಭಾವ ತುಂಬಿದ ಭ್ರೂಣ .
ನಸು ನಕ್ಕು ಒಡಲ ತುಂಬಿಕೊಂಡು
ಬದುಕೋಣ ಹಾದಿ ಹುಡಿಕಿಕೊಂಡು .

- Advertisement -

ಹಾಲು ಕೊಟ್ಟ ಹಸುವಿಗೆ

ಅಂದು ದಟ್ಟ ಮಳೆ
ಹಸಿರು ಹುಲ್ಲು
ಚಿಗುರು ಬಳ್ಳಿ
ತುಂಬಿ ಕೊಂಡಿತು ಕಾಡು .
ಹೊಳೆ ಹಳ್ಳ ಕೆರೆಗಳೆಲ್ಲ .
ನೀರು ಉಕ್ಕಿ ಹರಿಯಿತು.
ಬೆಂಕಿ ಉಂಡೆ ಬರದ ಛಾಯೆ .
ಬಿರುಕು ನೆಲ ಜಲ ಬತ್ತಿತು .
ಹೊಟ್ಟು ಬಣವಿ ಕರಗಿತು.
ಹಸಿವು ತಾಳದೆ
ಒದುರುತಿವೆ ಪಶುಗಳು.
ಹಾಲು ನೊರೆ ಕೆನೆಯ ತುಪ್ಪ .
ದನಕೆ ಮೇವು ಕೊರತೆಯು.
ಹಾಲು ಕೊಟ್ಟ ಹಸುವಿಗೆ
ಹುಲ್ಲು ಹಾಕಿ ಸಲುಹ ಬೇಕು.
ಕ್ರೂರ ಕಟುಗನ ಕೈಗೆ ಕೊಟ್ಟು
ಹಸುವ ಕೊಲ್ಲಬಾರದು .
ಹಾಲು ಕೊಟ್ಟ ಹಸುವಿಗೆ
ವಿಷವ ಉಣಿಸಿಬಾರದು .


ಮತ್ತೆ ಮರಳಿ ಬನ್ನಿ

ಎಲ್ಲಿ ಇರುವಿರಿ
ಮಧುರ ಭಾವಗಳೆ
ಮತ್ತೆ ಮರಳಿ ಬನ್ನಿ
ನಿಮ್ಮ ಸ್ನೇಹ ಪ್ರೀತಿ
ಒಲುಮೆ ಗಟ್ಟಿಗೊಳಿಸಲಿ
ಜೀವ ಬೇರು

ಉದುರುತಿವೆ
ಒಣಗಿದ ಎಲೆಗಳು
ಸುಕ್ಕುಗಟ್ಟಿದೆ ಸ್ಪೂರ್ತಿ ಸೆಲೆಯು
ಮೋಡ ಬಿರಿದು
ಮಳೆಯು ಸುರಿಯಲಿ
ಹಸಿರುಗೊಳ್ಳಲಿ ಭೂಮಿಯು

- Advertisement -

ಏಕೆ ಬೇಸರ ಮನದಿ ತುಂಬಿದೆ
ಮರಳಿ ಸಂತಸ ಚಿಗುರಲಿ
ನೋವು ಮರೆಸಿ ನಗೆಯ ಚೆಲ್ಲುವ
ಮತ್ತೆ ಋತುವಿನ ಚೇತನ
ಬಿರುಕು ನೆಲಕೆ ತಂಪು ಸಿಂಚರ
ಬನ್ನಿ ಹೃದಯ ಗೂಡಿಗೆ


ಅಲ್ಲ ಅವಳು

ಅಲ್ಲ ಅವಳು
ಬದುಕ ನೂಕಿದವಳು
ಅಸನಕ್ಕೆಬಳಲದವಳು .
ತುಡಿತಕ್ಕೆ ಕುದಿಯದವಳು.
ಸೋತೆನೆಂದು ಮರುಗದವಳು.
ಕಣ್ಣ ತುಂಬಾ ಕನಸು
ನುಡಿಯುವ ನಡೆಯುವ
ಸ್ವಚಂದ ಮನಸು
ಭಾವ ಶುದ್ಧ ನೋಟ
ಅಸ್ಮಿತೆಯ ನಯನ
ಮುಗ್ಧ ನಗೆ ಗುಳಿ ಗಲ್ಲ
ದೂರ ಪಯಣಕೆ ಹೆಜ್ಜೆ
ಬದುಕಿದ್ದಾಳೆ ಸತ್ಯದಲಿ
ಗೆಲುವಾದಳು
ವಿಷಯಗಳ ಕೊಂದು.
ಅಲ್ಲ ಅವಳು
ಹೀಗೆ ಬದುಕ ನೂಕಿದವಳು


ಪ್ರೇಮ ಗೂಡಲಿ

ಚಿಗುರು ಮಾವಿನ
ಮರದ ನೆರಳಲಿ
ನಿನ್ನ ಜೊತೆ
ತಂಗುವಾಸೆ .

ನಿನ್ನ ಅದರಕೆ
ಅದರವಿಟ್ಟು
ಬಿಸಿಯುಸಿರು
ಚೆಲ್ಲುವಾಸೆ

ತೋಳ ತುಂಬಾ
ನಿನ್ನ ಬಳಸಿ
ಎದೆಯ ನೋವ
ಮರೆಯುವಾಸೆ .

ರೆಕ್ಕೆ ಬಿಚ್ಚಿ
ನಿನ್ನ ಜೊತೆಗೆ
ಆಗಸದಿ
ಹಾರುವಾಸೆ

ನದಿಯ ದಡದಲ್ಲಿ
ಮಿಂದು ಬಂದು
ಗುಬ್ಬಿ ಗೂಡು
ಕಟ್ಟುವಾಸೆ

ಕೈಯ ಕುಲುಕಿ
ಮನವ ಬೆಸೆದು
ದೂರ ದಾರಿಗೆ
ಸಾಗುವಾಸೆ.

ಕಣ್ಣ ತುಂಬಾ
ನೂರು ಕನಸು
ನನಸು ಕಾಣುತ
ಬಾಳುವಾಸೆ

ಆಶೆ ಬಳ್ಳಿ
ಹೂವು ಅರಳಿ
ನಿತ್ಯ ಕಾವ್ಯದಿ
ಕಾಣುವಾಸೆ.

ಬಾರೆ ಗೆಳತಿ
ಒಲವ ತೋರಿ
ಪ್ರೇಮ ಗೂಡಲಿ
ಸೇರುವಾಸೆ


ಪ್ರೀತಿ…..

ಭಾವ ಅರಳಿ

ಭಾಷೆಯಾಗಿ
ಹುಟ್ಟಿಕೊಂಡಿತು
ಕವನವು.

ನೋವು ನಲಿವು
ಹಂಚಿಕೊಂಡೆವು
ಸ್ನೇಹ ಪ್ರೀತಿಯ
ತವರಲಿ.

ಅಳವು ದುಃಖ
ದೂರವಾದವು
ಸರಸ ಸಂತಸ
ನಗೆಯಲಿ

ಹಸಿವು ತಳಮಳ
ಇಲ್ಲವಾದವು
ಬಾಳದೊಲುಮೆ
ಕುಲುಮೆಯಲ್ಲಿ

ಬಾನಿನಲ್ಲಿ
ಬಾನ ಚಂದಿರ
ಹಾಲು ಚೆಲ್ಲಿದ
ಮೋಡವು .

ನಡೆವ ಹೆಜ್ಜೆ
ದೂರ ದಾರಿ
ಪ್ರೇಮ ಸಿಂಚನ
ಚಿಮ್ಮಿದೆ .

ಕನಸು ಮನಸು
ಕೂಡಿಕೊಂಡವು
ಸೀಮೆ ದಾಟುವ
ಕಡಲಿನಲ್ಲಿ

ಪ್ರೀತಿ ಎಮ್ಮಯ್ಯ
ಭಾಷೆಯು
ಭಾವ
ಶಬ್ದದ ಕವನವು .


ಮರಿಬೇಡ

ಬೇಕೆಂದೆನಬೇಡ
ಬೇಡವೆಂದೆನಬೇಡ
ಮಧುರ ಭಾವದ
ಬುತ್ತಿ
ಒಲ್ಲೆ ಎನಬೇಡ
ಮನಕೆ ಮನವು
ಕೂಡಿ ಕೊಂಡಿತು
ಹೃದಯ ಪಿಸುಮಾತು
ದೂರ ತಳ್ಳಬೇಡ
ಗೆದ್ದೆನೆಂದು ಬೀಗಬೇಡ
ಸೋತರೆ ಕೈ ಚೆಲ್ಲಬೇಡ
ಗಟ್ಟಿ ಗೊಳ್ಳಲಿ
ಭಾವ ಭದ್ರತೆ
ಸ್ನೇಹ ಪ್ರೀತಿ
ಪ್ರೇಮವು
ದಶ ದಿಕ್ಕಿನಲ್ಲಿ
ಯಶವು ಸೂಸಲಿ
ಪುಷ್ಪ ರೂಪ ಲತೆ
ಚಿಗುರಲಿ .
ಬಾಳ ಬಟ್ಟೆಯ
ದಿಟ್ಟ ಚೆಲುವೆ
ನಿತ್ಯ ಸಂತಸ
ತುಂಬಲಿ .
ಬೇಕೆಂದೆನಬೇಡ
ಬೇಡವೆಂದೆನಬೇಡ
ಭಾವ ಬಂಧುರ ಕಟ್ಟೆ
ಕೆಡುವ ಬೇಡ
ಗೆಳತಿ
ನಿನ್ನ ಬದುಕಿನಲಿ
ನನ್ನ ಮರಿಬೇಡ


ಡಾ ಶಶಿಕಾಂತ ಪಟ್ಟಣ, ರಾಮದುರ್ಗ

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group