ಕಾರ್ತಿಕ ಮಾಸದಲ್ಲಿ ಬರುವ ಉತ್ಥಾನ ದ್ವಾದಶಿಯಂದೇ ತುಳಸಿ ವಿವಾಹದ ಸಂಭ್ರಮ.
ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪ ಪರಿಹಾರವಾಗುತ್ತದೆ. ಎಂಬುದು ಪುರಾಣಗಳಲ್ಲಿದೆ. ಹಾಗೇ ತುಳಸಿ ಪೂಜೆ ಮಾಡಿದರೆ ಕನ್ಯಾದಾನ ಮಾಡಿದಷ್ಟು ಫಲ ಬರುತ್ತದೆ.
“ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವಃ ದೇವತಾಃ/
ಯದಾಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ/
ಎಂದು ನಿತ್ಯದಲ್ಲಿ ತುಳಸಿಯನ್ನು ಪೂಜಿಸಿದರೆ ಸರ್ವವಿಧದ ಪೀಡಾವ್ಯಾಧಿಗಳು,ಪಾಪ ನಾಶವಾಗುತ್ತದೆ.ತುಳಸಿಗತ ಹರಿಯ ರೂಪಗಳು ೫೩೧೭ ಇರುತ್ತದೆ.
ಮತ್ತು ತುಳಸಿ ಗಿಡ ಹಚ್ಚಿ ಎರಡು ತಿಂಗಳು(ಅಷ್ಟರಲ್ಲಿ ತೆನೆ ಬಂದಿರುತ್ತದೆ.) ಆಗುವವರಿಗೆ ಪೂಜೆಗೆ ಸ್ವೀಕರಿಸಲು ಬರುವುದಿಲ್ಲ.
ಹೆಣ್ಮಕ್ಕಳು ತುಳಸಿ ತಗೆಯಲು ಬರುವುದಿಲ್ಲ. ಇನ್ನು ಪುರುಷರು ಚಪ್ಪಾಳೆ ಬಾರಿಸಿ ಕ್ಷಮಾ ಕೇಳಿ, ರಾಮಕೃಷ್ಣರ ಸ್ಮರಿಸುತ್ತಾ ವಿಹಿತ ಕಾಲದಲ್ಲಿ ತೆಗೆಯಬೇಕು.ವಾಯುಪುರಾಣದಲ್ಲಿ ೯ ರೀತಿಯ ತುಳಸಿ ಪೂಜೆ ಹೇಳಿದ್ದಾರೆ.
ದರ್ಶನ, ಸ್ಪರ್ಶನ, ಧ್ಯಾನ, ನಮನ, ಕೀರ್ತನ, ಶ್ರವಣ, ರೋಪಣ, ಸೇಚನ, ಪೂಜನ ಹೀಗೆ ಯಾವುದಾದರೊಂದು ಪೂಜೆ ಮಾಡಿದರೂ ಅಗಣಿತ ಫಲಗಳುಂಟು
ಅದಕ್ಕೆ ದಾಸರ ನುಡಿಯಲ್ಲಿ ತುಳಸಿ ವರ್ಣನೆ ಮಾಡಿದ್ದಾರೆ.
ತುಳಸಿ ಗಿಡದ ಮೂಲದಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳು. ಮಧ್ಯದಲ್ಲಿ ರುದ್ರ,ಇಂದ್ರ ,ಅಗ್ನಿ, ಸೂರ್ಯಚಂದ್ರ ದೇವತೆಗಳ ಸನ್ನಿಧಾನ, ಅಗ್ರದಲ್ಲಿ ಲಕ್ಷ್ಮಿ ಸಹಿತ ಶ್ರೀಹರಿ ಮತ್ತು ಚತುರ್ವೇದಾಭಿಮಾನಿ ದೇವತೆಗಳು ಇದ್ದಾರೆ. ಹೀಗಾಗಿಯೇ ತುಳಸಿಗೆ ಮಹತ್ವವಿದೆ.
ತುಳಸಿ ಇಲ್ಲದೇ ಪೂಜೆ ಒಲ್ಲನೋ,ಹರಿ ಕೊಳ್ಳನೋ ಎಂಬ ದಾಸರ ಉಕ್ತಿಯಿದೆ. ಹೀಗಾಗಿ ತುಳಸಿ ಇರದೇ ಪೂಜೆ ಮತ್ತು ನೈವೇದ್ಯ ಮಾಡಲು ಬರುವುದಿಲ್ಲ. ತುಳಸಿ ದಳಗಳು ದೊರೆಯದಿದ್ದರೆ, ತುಳಸಿ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸಿ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು.
ಇನ್ನು ವ್ಯತಿಪಾತ, ಪರ್ವಕಾಲ, ದ್ವಾದಶಿ,ಪಿತೃಶ್ರಾದ್ಧ, ಊಟ ಮಾಡಿದ ಮೇಲೆ ,ಹೆಣ್ಮಕ್ಕಳು,ಶೂದ್ರರು ,ತುಳಸಿ ತೆಗೆಯಬಾರದು. ಮೃತರಿಗೆ ತುಳಸಿ ಸದ್ಗತಿ ನೀಡುತ್ತಾಳೆ.
ತುಳಸಿಯ ಪೌರಾಣಿಕ ಹಿನ್ನೆಲೆ
ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು ಪಡೆದುಕೊಳ್ಳುತ್ತಾನೆ.
ಆ ಸಂದರ್ಭದಲ್ಲಿ ವಿಷ್ಣುವಿಗೆ ಆನಂದಭಾಷ್ಪ ಉಕ್ಕಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾರಾಯಣನಿಗೆ ಲಕ್ಷ್ಮಿಯಷ್ಟೇ ತುಳಸಿ ಪ್ರಿಯಳು.
ತುಳಸಿ ವಿವಾಹದ ಹಿನ್ನೆಲೆ
ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.
ಜಲಂಧರ ಎಂಬ ಅಸುರ .ಆತನ ಪತ್ನಿ ವೃಂದಾ ದೈವಭಕ್ತೆ ಮತ್ತು ಪತಿವ್ರತೆಯಾಗಿದ್ದಳು. ಹೀಗಾಗಿ ಜಲಂಧರನಿಗೆ ಸೋಲು ಎಂಬುದೇ ಇರಲಿಲ್ಲ. ಇದರಿಂದ ಅಹಂಕಾರದಿಂದ ಮೆರೆಯುತ್ತಿದ್ದನು. ಜಲಂಧರನು ದೇವತೆಗಳ ಮೇಲೆ ಯುದ್ಧ ಮಾಡಲು ಹೋರಟನು. ಇವನು ಬಲಿಷ್ಠ ಮತ್ತು ವೃಂದೆಯ ಪಾತಿವೃತ್ಯದಿಂದ ದೇವತೆಗಳ ಮೇಲೆ ಯಶಸ್ಸು ಸಾಧಿಸ ತೊಡಗಿದನು.
ಈತನ ಉಪಟಳ ಸಹಿಸಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಇದರಿಂದ ಜಲಂಧರನ ವೇಷಧರಿಸಿದ ವಿಷ್ಣು ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾನೆ. ಇತ್ತ ಯುದ್ಧದಲ್ಲಿ ರುದ್ರ ದೇವರು ತಮ್ಮ ತ್ರಿಶೂಲದಿಂದ ಜಲಂಧರನ ರುಂಡವನ್ನು ಕತ್ತರಿಸುತ್ತಾರೆ.ಅದು ನೇರ ಭೂಮಿಯ ಕಡೆ ಬಂದು ವೃಂದೆಯ ಪಾದ ಬಳಿ ಬೀಳುತ್ತದೆ. ಅವನ ಇದರಿಂದ ಜಲಂಧರ ಸಾಯುತ್ತಾನೆ.
ಇದರಿಂದ ಕೋಪಿತಗೊಂಡ ವೃಂದಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ಕೊಡುತ್ತಾಳೆ. ಅದನ್ನೇ “ಶಾಲಿಗ್ರಾಮ” ಎನ್ನುವರು.ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಎರಡು ಶಾಪ ಕೊಡುತ್ತಾಳೆ. ಹೀಗಾಗಿಯೇ ರಾಮಾಯಣದಲ್ಲಿ ವಿಷ್ಣುವಿನ ಅವತಾರ ರಾಮನಿಗೆ ಸೀತೆಯು ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಾಗುತ್ತಾಳೆ. ಆ ಶಾಲಿಗ್ರಾಮ ಪ್ರಳಯಕ್ಕೆ ಕಾರಣವಾಗುತ್ತದೆ.
ಇದರಿಂದ ದೇವತೆ ಸಹಿತ ಲಕ್ಷ್ಮಿ ದೇವಿಯು, ವೃಂದೆಯ ಹತ್ತಿರ ಶಾಪ ಹಿಂಪಡೆಯಲು ಕೋರುತ್ತಾರೆ. ಆಗ ವಿಷ್ಣುವನ್ನು ಶಾಪವಿಮೋಚನೆ ಮಾಡಿ; ತಾನು ಅಗ್ನಿಗೆ ಹಾರುತ್ತಾಳೆ. ಈ ಶರೀರದ ಬೂದಿಯ ಮೇಲೆ ತುಳಸಿ ಗಿಡ ಕಾಣಿಸಿಕೊಳ್ಳುತ್ತದೆ. ಆಗ ತುಳಸಿಯನ್ನು ತಾನು ತಲೆಯ ಮೇಲೆ ಧರಿಸಿ, ಲಕ್ಷ್ಮಿ ಯಷ್ಟೇ ನೀನು ಪ್ರಿಯಳು ಎಂದು ಹೇಳುತ್ತಾನೆ.
ಆಚರಣೆ ವಿಧಾನ:
ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ಮಾವಿನ ಟೊಂಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು ಪೂಜಿಸುವ ರೂಢಿ ಇದೆ. ದೀಪದಿಂದ ಗಿಡದ ಸುತ್ತ ಅಲಂಕರಿಸಲಾಗುತ್ತದೆ.
ಕೃಷ್ಣನ ಮೂರ್ತಿಯನ್ನಿರಿಸಿ ತುಳಸಿಯನ್ನು ಪೂಜಿಸುತ್ತಾರೆ.
ತುಳಸಿ ವಿವಾಹವು ಹಿಂದೂ ಪದ್ದತಿಯ ಮದುವೆಯ ಸಂಕೇತವಾಗಿರುವುದರಿಂದ ಹಿಂದೂಗಳ ಮನೆಗಳಲ್ಲಿ, ದೇವಾಲಯಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಆ ದಿನ ಪೂಜೆಯಲ್ಲಿ ಪಾಲ್ಗೊಳ್ಳುವವರು
ತುಳಸಿಯ ಔಷಧಿ ಗುಣಗಳು:
ತುಳಸಿ ಗಿಡ ಉತ್ತಮ ಔಷಧೀಯ ಗುಣವುಳ್ಳದ್ದು. ಮನೆಯ ಸುತ್ತಮುತ್ತ ತುಳಸಿ ಗಿಡ ಬೆಳೆಸಿದರೆ ಸೋಂಕು, ಕ್ರಿಮಿ ಕೀಟಗಳು, ರೋಗ-ರುಜಿನಗಳು ಬರುವುದಿಲ್ಲ ಇನ್ನು ಮಳೆಗಾಲ, ಚಳಿಗಾಲದಲ್ಲಿ ತುಳಸಿ ಎಲೆಯನ್ನು ಕಾಳುಮೆಣಸು ಜೊತೆ ಸೇರಿಸಿ ಕಷಾಯ ಮಾಡಿ ಕುಡಿದರೆ ಶೀತ ತಲೆನೋವು, ಜ್ವರ, ಕಫ ಒಂದೆರಡು ದಿನಗಳಲ್ಲಿ ವಾಸಿಯಾಗುತ್ತದೆ.
ಚಿಕ್ಕ ಮಕ್ಕಳು ಹೊಟ್ಟೆ ನೋವು ಎಂದು ಅಳುತ್ತಿದ್ದರೆ ತುಳಸಿ ಎಲೆಯನ್ನು ಚೆನ್ನಾಗಿ ಅರೆದು ರಸ ಹಿಂಡಿ ಒಂದು ಕಲ್ಲು ಉಪ್ಪು ಬೆರೆಸಿ ಒಂದೆರಡು ಚಮಚ ಕುಡಿಸಿ ನೋಡಿ ಸ್ವಲ್ಪ ಹೊತ್ತಿನಲ್ಲಿ ಗುಣವಾಗುತ್ತದೆ. ಚರ್ಮರೋಗ, ಮಧುಮೇಹ, ಮರೆವು ಹತೋಟಿಯಲ್ಲಿಟ್ಟು ಕೊಳ್ಳಬಹುದು.
ಪ್ರಿಯಾ ಪ್ರಾಣೇಶ ಹರಿದಾಸ (ವಿಜಯಪುರ)