spot_img
spot_img

ಭಾರತ ಸಂವಿಧಾನದಿಂದ ಮಾನವ ಘನತೆಯ ರಕ್ಷಣೆ: ಚಿಂತಕ ಡಾ.ಸರ್ಜಾಶಂಕರ್ ಹರಳಿಮಠ ಅವರ ಅಭಿಮತ

Must Read

spot_img
- Advertisement -

ಬೆಂಗಳೂರು- ವಿಶ್ವದ ಶ್ರೇಷ್ಠ ಸಾಹಿತ್ಯ ಹೇಗೆ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿ ಹಿಡಿಯುತ್ತದೆಯೋ ಹಾಗೆಯೇ ನಮ್ಮ ಭಾರತದ ಸಂವಿಧಾನವೂ ಕೂಡ ಕೆಲವೇ ಜನರ ಘನತೆಯನ್ನು ಮಾತ್ರ ಎತ್ತಿಹಿಡಿಯುವ ಮತ್ತು ರಕ್ಷಿಸುವ ಕೆಲಸ ಮಾಡುವುದಿಲ್ಲ ಬದಲಾಗಿ ಭಾರತದ ನೆಲದಲ್ಲಿರುವ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿಹಿಡಿದು ರಕ್ಷಣೆ ಮಾಡುತ್ತದೆ ಎಂದು ಕಥೆಗಾರರೂ ಹಾಗೂ ಚಿಂತಕರಾದ ಡಾ.ಸರ್ಜಾಶಂಕರ್ ಹರಳಿಮಠ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ಸಾಹಿತ್ಯದಲ್ಲಿ ಭಾರತ ಸಂವಿಧಾನದ ಆಶಯ” ಎಂಬ ವಿಷಯ ಕುರಿತಾದ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಂವಿಧಾನಶಿಲ್ಪಿ ಎಂದೇ ನಾವು ಗೌರವಿಸುವ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಎಂದರೆ ಏನು ಎಂಬುದಕ್ಕೆ ಒಂದು ವಾಕ್ಯದಲ್ಲಿ ಉತ್ತರಿಸಿದ್ದಾರೆ. ಸಂವಿಧಾನವೆಂದರೆ ಕೇವಲ ವಕೀಲರ ದಾಖಲೆಯಲ್ಲ. ಅದು ಕಾಲದ ಶಕ್ತಿಯನ್ನು ತನ್ನೊಳಗೆ ಇರಿಸಿಕೊಂಡಿರುವ ಬದುಕಿನ ಸಾಧನ”. ಅಂದರೆ ಸಂವಿಧಾನ ಕೇವಲ ಕಾನೂನು ಕಟ್ಟಳೆಗಳ ಪುಸ್ತಕವಲ್ಲ. ಅದು ಭಾರತೀಯರ ಬದುಕಿನ ಸಾಧನ. ಅದಕ್ಕೆ ಕಾಲದ ಶಕ್ತಿಯಿದೆ. ಭಾರತ ಬಹುಸಂಸ್ಕೃತಿಯ ನಾಡು. ಇಲ್ಲಿ ನೂರಾರು ಜಾತಿಗಳು, ಹತ್ತಾರು ಧರ್ಮಗಳು, ಸಾವಿರಾರು ಭಾಷೆಗಳು, ನೂರಾರು ಜೀವನಶೈಲಿಗಳು, ಆದಿವಾಸಿಗಳು, ಬುಡಕಟ್ಟು ಜನರು ಎಲ್ಲರೂ ಇದ್ದಾರೆ. ನಮ್ಮೆಲ್ಲರ ಸಂಪ್ರದಾಯಗಳು, ನಮ್ಮ ವಿಚಾರಗಳು, ಆಹಾರ ಪದ್ಧತಿಗಳು ಒಂದಕ್ಕಿಂತ ಒಂದು ಬೇರೆ. ಹೀಗಿರುವ ದೇಶದಲ್ಲಿ ನಾವು ಜಗಳವಾಡದೆ, ದ್ವೇಷ ಮಾಡದೇ ಹಿಂಸೆಗೆ ಇಳಿಯದೆ ಪರಸ್ಪರರನ್ನು ಅರ್ಥ ಮಾಡಿಕೊಂಡು ಬದುಕಲು ಹಾಕಿಕೊಟ್ಟಿರುವ ವಿಧಿವಿಧಾನಗಳ ಒಂದು ನೀಲನಕ್ಷೆ ಅಥವಾ ಬ್ಲೂಪ್ರಿಂಟ್ ನಮ್ಮ ಸಂವಿಧಾನ ಎಂದು ವಿವರಿಸಿದರು.

- Advertisement -

ನಮ್ಮ ಸಂವಿಧಾನದ ಆಶಯಗಳು ಕನ್ನಡ ಸಾಹಿತ್ಯದಲ್ಲಿ ಹೇಗೆ ಧ್ವನಿಸುತ್ತವೆ ಎಂಬುದನ್ನು ನೋಡುವುದಾದರೆ, “ಕವಿರಾಜಮಾರ್ಗ” ಕನ್ನಡದ ಮೊಟ್ಟಮೊದಲ ಗ್ರಂಥದಲ್ಲಿರುವ ‘ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಂ ಪರಧರ್ಮುಮಂ’ ಎಂಬ ಮಾತು ಸಾಕ್ಷಿಯಾಗಿದೆ. ಕಸವರ ಎಂದರೆ ಚಿನ್ನ, ಬಂಗಾರ. ನಮ್ಮ ಬದುಕು ಬಂಗಾರವಾಗುವುದು ಹೇಗೆ ಎಂದರೆ ನಮ್ಮ ನೆರೆಹೊರೆಯವರ ವಿಚಾರವನ್ನೂ, ಅವರ ಧರ್ಮವನ್ನೂ ಸಹನೆಯಿಂದ ನೋಡಿದಾಗ ಮಾತ್ರ. ಇಲ್ಲಿ ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ಎರಡು ನೀತಿಸಂಹಿತೆಯನ್ನು ಇವು ಆಗಲೇ ಹೇಳಿವೆ. ಜಾತಿ, ಧರ್ಮ, ಲಿಂಗ, ಗಡಿ, ಭಾಷೆಯೆಲ್ಲವನ್ನೂ ಮೀರಿ ಭಾರತೀಯರೆಲ್ಲರೂ ಒಂದು ಎಂದು ಸಂವಿಧಾನ ಹೇಳುತ್ತದೆ. ಕವಿರಾಜಮಾರ್ಗ ಇದನ್ನು ಅಂದೆ ಹೇಳಿರುವುದು ಗಮನಾರ್ಹ. ಪಂಪ ಮಹಾಕವಿ ತನ್ನ ಕಾವ್ಯದಲ್ಲಿ ”ಮನುಷ್ಯಕುಲಂ ತಾನೋಂದೆ ವಲಂ” ಎಂದಂತೆ, ನಮ್ಮ ಸಂವಿಧಾನವೂ ಭಾರತದ ಮನುಷ್ಯಕುಲವನ್ನೆಲ್ಲ ಒಂದು ಎಂದು ಭಾವಿಸುತ್ತದೆ. ನಮ್ಮ ಸಂವಿಧಾನ ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಸಮಾನ ಹಕ್ಕುಬಾಧ್ಯತೆಗಳನ್ನು ನೀಡಿದೆ. ಅನಕ್ಷರಸ್ಥರಿಗೂ ಅಕ್ಷರಸ್ಥರಿಗೂ ಒಂದೇ ಓಟು. ನಮಗೆ ವಿದ್ಯೆಯಿದೆ ಎಂದು ಅಹಂಕಾರಪಡಬಾರದು. ಅನಕ್ಷರಸ್ಥರು ಓದು ಬಾರದಿದ್ದರೂ ನಮಗಿಂತ ವಿವೇಕಿಗಳಾಗಿರಬಹುದು. ಪ್ರತಿಭಾವಂತರಾಗಿರಬಹುದು. ಅನಕ್ಷರಸ್ಥರು ರಚಿಸಿದ ಅಪೂರ್ವ ಜನಪದ ಸಾಹಿತ್ಯವೇ ಇದಕ್ಕೆ ಉದಾಹರಣೆ ಎಂದರು.

ಹನ್ನೊಂದನೆಯ ಶತಮಾನದ ಮೊದಲ ವಚನಕಾರ ಜೇಡರ ದಾಸಿಮಯ್ಯ ತನ್ನದೊಂದು ವಚನದಲ್ಲಿ, ‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನೂ ಗಂಡು ಅಲ್ಲ, ಹೆಣ್ಣೂ ಅಲ್ಲ’ ಎಂದು ಹೇಳುತ್ತಾರೆ. ಗಂಡು ಮತ್ತು ಹೆಣ್ಣು ಬಾಹ್ಯರೂಪದಲ್ಲಿ ಮಾತ್ರ ಭಿನ್ನ. ಅವರ ಪ್ರತಿಭೆ, ಚೈತನ್ಯ ಎಲ್ಲವೂ ಇಬ್ಬರಲ್ಲೂ ಇವೆ. ಯಾವುದೇ ತಾರತಮ್ಯವಿಲ್ಲ. ಲಿಂಗಭೇದ ಸಲ್ಲದು. ನಮ್ಮ ಸಂವಿಧಾನ ಗಂಡುಹೆಣ್ಣಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಮುಂದೆ ಬಸವಣ್ಣ, ಅಕ್ಕಮಹಾದೇವಿಯಂತಹ ವಚನಕಾರರು, ಕನಕ-ಪುರಂದರರಂತಹ ದಾಸರು, ಮುಂದೆ ಬಂದ ಕುಮಾರವ್ಯಾಸನ್ನೂ ಒಳಗೊಂಡಂತೆ ಕುವೆಂಪು, ದೇವನೂರು ಮಹಾದೇವ ಅವರವರೆಗೂ ನೂರಾರು ಕವಿಗಳು, ಸಾಹಿತಿಗಳು ಮನುಷ್ಯನ ಘನತೆಯನ್ನು, ಎತ್ತಿಹಿಡಿಯುವ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ತಮ್ಮ ಸಾಹಿತ್ಯದಲ್ಲಿ ಪಡಿಮೂಡಿಸಿದ್ದಾರೆ. ಹೀಗೆ ನಮ್ಮ ಕನ್ನಡ ಸಾಹಿತ್ಯವು ಭಾರತದ ಸಂವಿಧಾನವು ಇಂದು ಒಳಗೊಂಡಿರುವ ಆಶಯಗಳನ್ನು ಆಗಲೇ ತನ್ನ ಸಾಹಿತ್ಯದ ಮೂಲಕ ಧ್ವನಿಸಿರುವುದು ಮಹತ್ವದ ಸಂಗತಿ ಎಂದು ನಿರೂಪಿಸಿದರು.

ಲೇಖಕರಾದ ಎ.ಆರ್.ಮಣಿಕಾಂತ್ ಅವರು ಬರೆದ ‘ಸೈಕಲ್ ರಿಕ್ಷಾದವನ ಮಗ ಐಎಎಸ್ ಮಾಡಿದ’ ಎಂಬೊಂದು ಲೇಖನದಲ್ಲಿ ಅತ್ಯಂತ ಕಡುಬಡವ ಗೋವಿಂದ ಜೈಸ್ವಾಲನು ಐಎಎಸ್ ಆದ ಕಥೆಯಿದೆ. ಇದರಲ್ಲಿ ಲೇಖಕರು ಹೇಳುತ್ತಾರೆ: ಸಾಧನೆಗೆ ಅಸಾಧ್ಯವಾದುದು ಯಾವೂದೂ ಇಲ್ಲ. ಛಲವಿದ್ದರೆ, ಕಣ್ಮುಂದೆ ಒಂದು ಗುರಿಯಿದ್ದರೆ ಕಠಿಣ ಪರಿಶ್ರಮವೂ ಜತೆಗಿದ್ದರೆ ಆಕಾಶದಷ್ಟೇ ಎತ್ತರವಿರುವ ಗೌರಿಶಂಕರನನ್ನೂ ಹತ್ತಬಹುದು. ಚಂದ್ರಲೋಕಕ್ಕೂ ಹೋಗಿ ಬರಬಹುದು ಅಂತ. ಆದರೆ ನಾವು ಅರಿಯಬೇಕಾದದ್ದು ಏನೆಂದರೆ ಇಂತಹ ಅಪರಿಮಿತ ಸಾಧನೆ, ಛಲ, ಪರಿಶ್ರಮ ಎಲ್ಲವೂ ಇದ್ದರೂ ಇನ್ನೊಂದು ಬಹಳ ಮಹತ್ವದ್ದು ಇಲ್ಲದಿದ್ದರೆ ಛಲ, ಸಾಧನೆ, ಪರಿಶ್ರಮ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಅದೇನೆಂದರೆ ಪ್ರಜಾಪ್ರಭುತ್ವ ಮತ್ತು ಇದರ ಧರ್ಮಗ್ರಂಥ ಅಂಬೇಡ್ಕರ್ ರಚಿಸಿದ ಸಂವಿಧಾನ. ಈ ಸಂವಿಧಾನವಿಲ್ಲದಿದ್ದರೆ ಲಾಗಾಯ್ತನಿಂದ ಶಿಕ್ಷಣದ ಅವಕಾಶ ಪಡೆದ ಜಾತಿಯವರು ಮಾತ್ರ ಐಎಎಸ್, ಐಪಿಎಸ್ ಮಾಡುತ್ತಿದ್ದರು. ಆದರೆ ನಮ್ಮ ಭಾರತ ಸಂವಿಧಾನದಿಂದ ಇಲ್ಲಿ ಯಾವ ಜಾತಿ, ಜನಾಂಗದವರು ಬೇಕಾದರೂ ಐಎಎಸ್ ಪಾಸು ಮಾಡಿ ಜಿಲ್ಲಾಧಿಕಾರಿಯಾಗಬಹುದು. ಅಷ್ಟೇ ಅಲ್ಲ, ಕುರಿ ಕಾಯುವ ಜಾತಿಯಿಂದ ಬಂದವರು ಮುಖ್ಯಮಂತ್ರಿಯಾಗಬಹುದು, ಟೀ ಮಾರುವವರು ಪ್ರಧಾನ ಮಂತ್ರಿಯಾಗಬಹುದು, ದಿನಬೆಳಿಗ್ಗೆ ಪೇಪರ್ ಹಂಚುತ್ತಿದ್ದ ಹುಡುಗ ರಾಷ್ಟ್ರಪತಿಯಾಗಬಹುದು. ಇದೆಲ್ಲವೂ ಸಾಧ್ಯವಾಗಿರುವುದು ನಮ್ಮ ಸಂವಿಧಾನದಿಂದ ಎಂದು ತಿಳಿಸಿದರು.

- Advertisement -

ಪ್ರಜಾಪ್ರಭುತ್ವವನ್ನು ಸಾಧಿಸುವುದೇ ಸ್ವಾತಂತ್ರ್ಯಪೂರ್ವದ ಭಾರತೀಯರ ಕನಸಾಗಿತ್ತು. ಈ ಕನಸುಗಳಿಗೆ ಜೀವ ಕೊಟ್ಟವರು ನಮ್ಮ ಕವಿ, ಸಾಹಿತಿಗಳು. ಭಾರತ ಸ್ವಾತಂತ್ರ್ಯ ಪಡೆದ ನಂತರ ನಮ್ಮ ದೇಶ ಹೇಗಿರಬೇಕು ಎಂದು ಇವರು ಕನಸು ಕಂಡರು. ಇವರ ದೃಷ್ಟಿಯಲ್ಲಿ ದೇಶವೆಂದರೆ ಕೇವಲ ಒಂದು ಭೂಪಟವಲ್ಲ. ಇಲ್ಲಿ ಬಾಳಿ ಬದುಕುವ ಜೀವಂತ ಜನ. ಇವರು ತಮ್ಮ ಸಾಹಿತ್ಯದ ಮೂಲಕ ಒಂದು ಅಲಿಖಿತ ಭಾರತದ ಸಂವಿಧಾನವನ್ನೇ ರೂಪಿಸಿಬಿಟ್ಟರು. ಇದರಲ್ಲಿ ಕನ್ನಡ ಸಾಹಿತ್ಯದ ಪಾಲೂ ಗಣನೀಯವಾಗಿದೆ. ನಮ್ಮ ಸಂವಿಧಾನ ರಚನಾ ಕತೃಗಳಿಗೆ ಭಾರತೀಯ ಸಾಹಿತ್ಯವೂ ಪ್ರೇರಣೆ ಕೊಟ್ಟಿರಬೇಕು ಎಂದರು.

ಅತಿಥಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ವಹಿಸಿದ್ದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್ ಅವರು ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಸಹಸಂಚಾಲಕ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಹೆಚ್.ಜಿ., ವಿದ್ಯಾರ್ಥಿ ಸಂಚಾಲಕರಾದ ಮಧು, ಕನ್ನಡ ಸಾಹಿತ್ಯ ವೇದಿಕೆಯ ಸಂಚಾಲಕರಾದ ಹರ್ಷಿತ, ಗುರುಕಿರಣ್ ಮೊದಲಾದವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group