ಆತ್ಮೀಯ ಪೋಷಕರೆ, ಇತ್ತ ಸ್ವಲ್ಪ ಕೇಳಿ ಕೋರೋಣ ಎಂಬ ಖಾಯಿಲೆಯು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ ಇದರ ನಡುವೆ ನಮ್ಮ ಜೀವನ ಸಂತಸಮಯವಾಗಿಯೇ ಇಡಲು ಶತ ಪ್ರಯತ್ನ ಮಾಡಲೇಬೇಕಿದೆ. ನಮಗಾಗಿ ಅಲ್ಲ ನಮ್ಮ ಮುಂದಿನ ಉಜ್ವಲ ಭವಿಷ್ಯ ಕ್ಕಾಗಿ….ಹೌದು, ನಾನು ಹೇಳಲು ಹೊರಟಿರುವ ಮಾತುಗಳು ಮಕ್ಕಳ ಸಲವಾಗಿಯೇ ಆಗಿವೆ.
ದಯವಿಟ್ಟು ಮಕ್ಕಳ ಮುಂದೆ ನಕಾರಾತ್ಮಕ ಯೋಚನೆಗಳು ಬೇಡವೇ ಬೇಡ. ನಮ್ಮ ಗೋಳು ,ನೋವು, ದು:ಖ ,ಎಲ್ಲವೂ ನಮ್ಮಗಳಿಗೆ ಇರಲಿ. ಮಕ್ಕಳ ಮನಸ್ಸು ಹಚ್ಚ ಹಸುರಿನ ಪೈರು ಇದ್ದಂತೆ ಅದಕ್ಕೆ ಒಳ್ಳೆಯ ಧನಾತ್ಮಕ ಚಿಂತನೆಗಳು ,ಸುವಿಚಾರಗಳು,ಗಟ್ಟಿತನ ,ಧೈರ್ಯ ,ಮಾನವೀಯತೆ,ಎಂಬೆಲ್ಲ ಅಂಶಗಳುಳ್ಳ ಗೊಬ್ಬರ ಹಾಕಿ ಬೆಳೆಸಬೇಕಿದೆ
ಸಾವು ನೋವು ಯಾರಿಗಿಲ್ಲ ಹೇಳಿ ಹುಟ್ಟವ ಮನುಷ್ಯ ಸಾಯಲೇ ಬೇಕು ಇದು ತಿಳಿದ ವಿಷಯವೇ ಆಗಿದೆ ಹೇಳುವುದು ಸುಲಭ ಅನುಭವಿಸುವುದು ಕಷ್ಟ ಆದರೂ ಕೂಡಾ ಮಕ್ಕಳಿಗಾಗಿ ,ಯುವ ಪೀಳಿಗೆಗಾಗಿ ಅವರ ಆತ್ಮ ಸ್ಥೈರ್ಯ ,ಮನೋಬಲ ಹೆಚ್ಚಿಸುವ ಸಲುವಾಗಿ ಧನಾತ್ಮಕ ಚಿಂತನೆಗಳು ಅತೀ ಅವಶ್ಯಕವಾಗಿವೆ.
ಸಾವು ನೋವುಗಳ ಸಾಲ ಸರತಿಯನ್ನು ದೂರ ಮಾಡಿ ಮನೆಯಲ್ಲಿ ಮಕ್ಕಳನ್ನು ಸಂತೋಷದಿಂದಿಡಲು ಯತ್ನಸಿ. ಮನೆ ಅವರಿಗೆ ಬಂಧನ ವಾಗದಿರಲಿ ಚಿಕ್ಕ ಪುಟ್ಟ ಆಟಗಳನ್ನು ಪಾಲಕರು ಮಕ್ಕಳೊಂದಿಗೆ ಬೆರೆತು ಆಟ ಆಡಿಸಿರಿ. ಯೋಗ ಧ್ಯಾನ ಗಳನ್ನು ಮಕ್ಕಳೊಂದಿಗೆ ಮಾಡಿರಿ ,ಮುಗ್ದ ಮನಸಿನ ಮಕ್ಕಳು ಹೆಚ್ಚಿನ ಸಮಯ ಮನೆಯಲ್ಲಿಯೇ ಕಳೆಯಬೇಕಾಗಿರುವುದರಿಂದ ಅವರ ಸಂತಸದ ಕ್ಷಣಗಳು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸಿ.
ಪುಸ್ತಕದ ಅಭ್ಯಾಸ ಹೇಳಲು ಬರುವುದಿಲ್ಲ ಎಂದು ಚಿಂತಿಸದಿರಿ. ನಿಮ್ಮ ಕೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ ಬದುಕಲು ಇರುವ ಹಲವಾರು ಮಾರ್ಗಗಳನ್ನು ತೋರಿಸಿ ಕೈತೋಟ ,ಹಿತ್ತಲು ,ಮನೆ ಟೆರೆಸ್ ಗಳ ಮೇಲೆ ಮಕ್ಕಳಿಂದ ಸಸ್ಯಗಳನ್ನು ನೆಡೆಸಿ ಬೆಳೆಸಿ ಮುಂದಿನ ದಿನಮಾನಗಳಿಗೆ ಮಕ್ಕಳನ್ನು ತಯಾರು ಮಾಡಬೇಕಿದೆ ಶಿಕ್ಷಣ ವಂಚಿತರಾದ ಮಕ್ಕಳಿಗೀಗ ಮನೆಯೇ ಪಾಠ ಶಾಲೆ ಎಲ್ಲವೂ ಆಗಿದೆ ಮಕ್ಕಳಲ್ಲಿರುವ ಪ್ರತಿಭೆ ಯನ್ನು ಗಮನಿಸಿ ಅದಕ್ಕೆ ಅವಕಾಶ ಮಾಡಿ ಕೊಡಿ.
ಮಕ್ಕಳ ಕನಸುಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಸೇರಿಸಿ, ನೀವೂ ಏಕಾಂಗಿಯಾಗಿರದೆ ಮಕ್ಕಳನ್ನು ಏಕಾಂಗಿಯಾಗಿ ಮಾಡದೆ ಸಂಸದಾಯಕ ಉಲ್ಲಾಸದಾಯಕ ,ಆರೋಗ್ಯದಾಯಕ ವಾತಾವರಣ ನಿರ್ಮಿಸಿಕೊಳ್ಳಿ.
ಮಕ್ಕಳಿಗೆ ರೋಗರುಜಿನಗಳ ಬಗ್ಗೆ ತಿಳಿಸಿಕೊಡಿ ಶಿಸ್ತುಬದ್ದ ಜಿವನ ನಮ್ಮದಾದಾಗ ಮಾತ್ರ ಮಕ್ಕಳದ್ದೂ ಆಗುತ್ತದೆ. ರೋಗದ ಕುರಿತು ಭಯ ಬೇಡ ಎದುರಿಸುವ ಹಠ ತೊಡಿ ಮಕ್ಕಳಿಗೂ ತಿಳಿಸಿಕೊಡಿ.
ಏಕೆಂದರೆ ಈ ಖಾಯಿಲೆಯಿಂದ ಕುಟುಂಬಕ್ಕೆ ಕುಟುಂಬವೇ ಸಾವನ್ನಪ್ಪುತ್ತಿರುವಾಗ ಭಯದ ವಾತಾವರಣ ನಿರ್ಮಾಣ ವಾಗುವುದು ಅತೀ ಸಹಜವಾಗಿದೆ .ಬದುಕಿನ ಅನಿವಾರ್ಯತೆಗಾಗಿ ಹಾಗೂ ಬದುಕಲೇ ಬೇಕೆಂಬ ಛಲವನು ಮಕ್ಕಳಲ್ಲಿ ತುಂಬಿ ಒಬ್ಬಂಟಿಯಾಗಿದ್ದರೂ ಜೀವನ ನಿರ್ವಹಿಸುವ ಭರವಸೆಯನ್ನು ಮೂಡಿಸಿ.
ಒಟ್ಟಾರೆಯಾಗಿ ನನ್ನ ಬಯಕೆ ಎಂದುಕೊಳ್ಳಿ ಅಥವಾ ಕೋರಿಕೆಯೇ ಎಂದುಕೊಳ್ಳಿ ದಯವಿಟ್ಟು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಒಳ್ಳೆಯ ಧನಾತ್ಮಕ ವಿಚಾರಗಳನ್ನಷ್ಟೆ ಮಕ್ಕಳ ಮುಂದೆ ಚರ್ಚಿಸಿ ಓದಿಸಿ ಆಡಿಸಿ ಲಾಲಿಸಿ ಪಾಲಿಸಿ ಮಕ್ಕಳನ್ನು ಹೊಳೆಯುವ ಮುತ್ತುಗಳನ್ನಾಗಿ ಮಾಡುವ ಜವಾಬ್ದಾರಿ ಈಗ ಪೋಷಕರಾದ ನಮ್ಮ ಮೇಲೆ ಇದೆ ಎಂಬುದನ್ನು ಮರೆಯದಿರಿ.
ಶ್ರೀಮತಿ ಜ್ಯೋತಿ ಸಿ ಕೋಟಗಿ
ಸಹ ಶಿಕ್ಷಕಿ
ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ