ಬೆಂಗಳೂರು – ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುವ ಹಾಗೂ ಅವರ ವಾಟ್ಸಾಪ್ ಗ್ರುಪ್ ರಚಿಸುವ ಬಗ್ಗೆ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ ) ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪತ್ರ ಬರೆದಿದ್ದಾರೆ.
ಆಯುಕ್ತರ ಕಚೇರಿಯ ಆದೇಶ ದಿ.೨೦.೦೧.೨೦೨೪ ರ ಅನುಸಾರ ಹಳೆಯ ಸರ್ಕಾರಿ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅವರೆಲ್ಲ ವಾಟ್ಸಾಪ್ ನಲ್ಲಿ ಹೆಚ್ಚು ಹೆಚ್ಚು ಸೇರುವಂತೆ ಮಾಡಲು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿತ್ತು. ಈವರೆಗೆ ೨೫೦೦೭ ಶಾಲೆಗಳು ವಿದ್ಯಾರ್ಥಿಗಳ ಸಂಘ ಸ್ಥಾಪಿಸಿಕೊಂಡಿದ್ದು, ಅವುಗಳಲ್ಲಿ ೧೫೧೭೦ ಶಾಲೆಗಳು ವಾಟ್ಸಾಪ್ ಗ್ರುಪ್ ರಚಿಸಿಕೊಂಡಿರುತ್ತವೆ. ಇದುವರೆಗೂ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸದ ಶಾಲೆಗಳು ದಿ. ೩೦.೦೫.೨೦೨೪ ರಿಂದ ಒಂದು ವಾರದ ಒಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು ( ಆಡಳಿತ ) ಎಲ್ಲ ಶಾಲೆಗಳಲ್ಲಿ ಸಂಘ ಸ್ಥಾಪನೆ ಹಾಗೂ ವಾಟ್ಸಾಪ್ ಗ್ರುಪ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಆದೇಶಿಸಿ ಪ್ರತಿಗಳನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಕಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕುರಿತಂತೆ ಆಯುಕ್ತರ ಚಿಂತನೆ ಸ್ವಾಗತಾರ್ಹವಾಗಿದ್ದು ವಿದ್ಯಾರ್ಥಿಗಳು ತಮ್ಮ ದಿನಗಳಿಂದ ಇಲ್ಲಿಯವರೆಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಕುರಿತು ಮಾಹಿತಿ ಹಂಚಿಕೊಳ್ಳಬಹುದು, ತಮ್ಮ ಶಿಕ್ಷಕರನ್ನು ನೆನೆಸಿಕೊಳ್ಳಬಹುದು, ತಮ್ಮ ಹಳೆಯ ಮಿತೃತ್ವವನ್ನು ಜ್ಞಾಪಿಸಿಕೊಳ್ಳಬಹುದು.
ಇಂಥ ಒಂದು ಸ್ವಾಗತಾರ್ಹ ಕ್ರಮಕ್ಕೆ ಆಯುಕ್ತರು ಮುಂದಾಗಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾಗಿದೆ. ಆಯುಕ್ತರ ಈ ಕ್ರಮ ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ಕಾದು ನೋಡಬೇಕು.