ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ 20,024 ಪಿಎನ್ಜಿ ದೇಶಿಯ ಗೃಹ ಸಂಪರ್ಕಗಳನ್ನು ಒದಗಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಕ್ಕಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಸಚಿವಾಲಯವು ಕೈಗೊಂಡಿರುವ ಕ್ರಮಗಳು ಹಾಗೂ ಸಂಪರ್ಕವಿಲ್ಲದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಗ್ಯಾಸ್ ಸಂಪರ್ಕಕ್ಕೆ ಕೈಗೊಳ್ಳಲಾದ ಕ್ರಮಗಳು ಹಾಗೂ ಸರ್ಕಾರಿ ತೈಲ ಕಂಪನಿಗಳು ದೇಶದಲ್ಲಿ ಸಿಎನ್ ಜಿ ಗ್ಯಾಸ್ ಸಂಪರ್ಕಕ್ಕೆ ಕ್ರಮ ಕೈಗೊಂಡಿದ್ದರೆ ಆ ಬಗ್ಗೆ ಮಾಹಿತಿ ಒದಗಿಸುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮನವಿ ಮಾಡಿಕೊಂಡಿದ್ದರು.
ಪ್ರಶ್ನೆಗೆ ಉತ್ತರಿಸಿದ ಸಚಿವರು ಪಿಎನ್ಜಿ ಗೃಹ ಸಂಪರ್ಕಗಳನ್ನು ಒದಗಿಸುವುದು ಮತ್ತು ಸಿಎನ್ಜಿ ಕೇಂದ್ರಗಳ ಸ್ಥಾಪನೆಯು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ನೆಟ್ವರ್ಕ್ಗಳ ಅಭಿವೃದ್ಧಿಯ ಭಾಗವಾಗಿದೆ. ಕರ್ನಾಟಕ ರಾಜ್ಯದಲ್ಲಿ 3,43,256 ಪಿಎನ್ಜಿ ದೇಶಿಯ ಸಂಪರ್ಕಗಳನ್ನು ಒದಗಿಸಿವೆ ಮತ್ತು 194 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿಎನ್ಜಿಆರ್ಬಿ) ಯಿಂದ ಅಧಿಕಾರ ಪಡೆದ ಘಟಕಗಳು ಇದನ್ನು ನಡೆಸುತ್ತಿವೆ ಎಂದು ತಿಳಿಸಿದರು.
11-ಎ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ಸ್ ಬಿಡ್ಡಿಂಗ್ ಪೂರ್ಣಗೊಳಿಸಿದ ನಂತರ, 295 ಭೌಗೋಳಿಕ ಪ್ರದೇಶಗಳು ಸುಮಾರು 98% ಜನಸಂಖ್ಯೆಯನ್ನು ಮತ್ತು ದೇಶದ ಒಟ್ಟು ಭೌಗೋಳಿಕ ಪ್ರದೇಶದ 88% ಅನ್ನು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ನೆಟ್ವರ್ಕ್ ಅಡಿಯಲ್ಲಿ ಸುಮಾರು 630 ಜಿಲ್ಲೆಗಳಲ್ಲಿ ಒಳಪಟ್ಟಿವೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದರು ಮಾಹಿತಿ ಹಂಚಿಕೊಂಡರು.