spot_img
spot_img

ಮರೆಯಲಾಗದ ಮಹಾನ್ ಚೇತನ ಸರ್ ಎಮ್. ವಿಶ್ವೇಶ್ವರಯ್ಯ Engineers’ Day

Must Read

spot_img
- Advertisement -

“ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇದೀಗ ಅವರ 158ನೇ ಜನ್ಮದಿನಕ್ಕೆ ಕಾಲಿಡುತ್ತಿದ್ದೇವೆ. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾದರು. ಜಗತ್ಪ್ರಸಿದ್ಧರಾದರು.

ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು.

- Advertisement -

1908ರಲ್ಲಿ ಅತ್ಯಂತ ಕೆಟ್ಟ ಪ್ರವಾಹ ಏರಿ ಬಂದು, ಹೈದರಾಬಾದಿಗೆ ಎಲ್ಲಿಲ್ಲದ ಹಾನಿಯಾಯಿತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯ ಅವರಿಗೆ ಹೈದರಾಬಾದಿನ ನಿಜಾಮರಿಂದ ತುರ್ತು ಕರೆ ಹೋಯಿತು. ತಮ್ಮ ವಿದೇಶ ಯಾತ್ರೆಯನ್ನು ಪೂರ್ಣಗೊಳಿಸದೆಯೇ ಹಿಂದಿರುಗಿ ಬಂದ ವಿಶ್ವೇಶ್ವರಯ್ಯ ಅವರು, ಅಂದಿನ ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಲು ಯೋಜನೆಗಳನ್ನು ತಯಾರಿಸಿಕೊಟ್ಟರು. ಅಂದಿನ ಹೈದರಾಬಾದ್ ನಗರದಿಂದ ಹದಿನಾರು ಮೈಲಿಗಳಾಚೆಗೆ ಓಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾದರು. ನಗರದ ಒಳಚರಂಡಿ, ನೀರ್ಗಾಲುವೆಗಳ ವ್ಯವಸ್ಥೆಯನ್ನೂ ನಿರೂಪಿಸಿದರು. ಒಂದು ಕಾಲಕ್ಕೆ ಅಬ್ಬರಿಸಿ ಹರಿದ ಮುಸಿಯನ್ನು ಪಳಗಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಕಾರಣರಾದರು.

ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು.

ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಅದೆಷ್ಟೋ ಕತೆಗಳಿದ್ದವು. ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.

- Advertisement -

ವಿಶ್ವೇಶ್ವರಯ್ಯನವರು 1861 ಸೆಪ್ಟೆಂಬರ್ 15ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷಮ್ಮ. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ವಿಶ್ವೇಶ್ವರಯ್ಯ ಅವರಿಗೆ ಹದಿನೈದು ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ದಟ್ಟ ದಾರಿದ್ರ್ಯದ ಬದುಕು. ತಲೆ ಬೋಳಿಸಿಕೊಂಡು ಕೆಂಪು ಸೀರೆಯುಟ್ಟು ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ ಎಚ್ ರಾಮಯ್ಯನವರ ಸಹಾಯದಿಂದ 1875ರಲ್ಲಿ ವಿಶ್ವೇಶ್ವರಯ್ಯ ಬೆಂಗಳೂರಿಗೆ ಬಂದು ವೆಸ್ಲಿ ಮಿಶನ್ ಹೈಸ್ಕೂಲ್ ಸೇರಿದರು.

ಒಮ್ಮೆಯಂತೂ ಎಸ್ ಎಸ್. ಎಲ್. ಸಿ ಪರೀಕ್ಷೆಗೆ ಕೂರಲು ಹಣದ ತೀವ್ರ ಮುಗ್ಗಟ್ಟಿನಿಂದಾಗಿ ಬೆಂಗಳೂರಿನಿಂದ ಮುದ್ದೇನಹಳ್ಳಿಗೆ 35 ಕಿಲೋಮೀಟರ್ ನಡೆದುಕೊಂಡೇ ಹೋದದ್ದುಂಟು. ಮನೆಯ ಪಾತ್ರೆ ಅಡವಿಟ್ಟು ಆ ತಾಯಿ ಹಣ ಹೊಂದಿಸಿಕೊಟ್ಟಿದ್ದರು. ಆದರೆ ಅವರಲ್ಲಿ ಬಡತನಕ್ಕೂ ಬಗ್ಗದ ಜೀವನೋತ್ಸಾಹವಿತ್ತು. ಬದುಕನ್ನು ಎದುರಿಸುವ ದಿಟ್ಟತನವಿತ್ತು. ಭವಿಷ್ಯದ ದೃಢ ಸಂಕಲ್ಪಗಳಿದ್ದವು. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಓದತೊಡಗಿದರು. ಆ ಕಾಲದಲ್ಲಿ ಬಿ.ಎ ತರಗತಿಗಳಲ್ಲಿಯೇ ವಿಜ್ಞಾನದ ವಿಷಯವನ್ನೂ ಹೇಳಿಕೊಡುತ್ತಿದ್ದರು. ಬದುಕು ಸುಲಭವಿರಲಿಲ್ಲ. ಅನಾನುಕೂಲತೆಗಳ ನಡುವೆಯೇ ಮುಂದುವರೆದ ವಿದ್ಯಾಭ್ಯಾಸ. ದೈನಂದಿಕ ಖರ್ಚಿಗೆ ಹಣವಿಲ್ಲದೆ, ಒಂದು ಕೂರ್ಗಿ ಕುಟುಂಬದಲ್ಲಿ ಪಾಠ ಹೇಳಿಕೊಟ್ಟು ಹಣ ಹೊಂದಿಸಿದರು.

1880ರಲ್ಲಿ ಡಿಸ್ಟಿಂಕ್ಷನ್ ಪಡೆದು ಬಿ.ಎ. ಪಾಸು ಮಾಡಿದ ವಿಶ್ವೇಶ್ವರಯ್ಯನವರಿಗೆ ಪುಣೆಯಲ್ಲಿ ಇಂಜಿನಿಯರಿಂಗ್ ಓದಲು ವಿದ್ಯಾರ್ಥಿವೇತನ ಲಭಿಸಿತು. ಮೈಸೂರು ಸಂಸ್ಥಾನದಲ್ಲಿ ಇಂಜಿನಿಯರಿಂಗ್ ಕಾಲೇಜಿರಲಿಲ್ಲ. 1881ರಲ್ಲಿ ಇಂಜಿನಿಯರಿಂಗ್ ಸೇರಿದ ವಿಶ್ವೇಶ್ವರಯ್ಯ ಮೂರು ವರ್ಷದ ಕೋರ್ಸನ್ನು ಎರಡೂವರೆ ವರ್ಷಕ್ಕೆ ಮುಗಿಸಿದರು. ಪರೀಕ್ಷೆಯಲ್ಲಿ ಅವರ ಮೇಧಾವಿತನ ಪ್ರಜ್ವಲಿಸಿತು. ಜೇಮ್ಸ್ ಬರ್ಕ್ಲಿ ಬಹುಮಾನ ದೊರೆತುದಲ್ಲದೆ, ಬಾಂಬೆ ಪಿ.ಡಬ್ಲ್ಯೂ.ಡಿ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ನೌಕರಿ ದೊರೆಯಿತು. ಅಲ್ಲಿಂದ ಪುಣೆಗೆ ವರ್ಗವಾಯಿತು.

ಪುಣೆಯಲ್ಲಿ ವಿಶ್ವೇಶ್ವರಯ್ಯನವರ ಅನೇಕ ಅನ್ವೇಷಣೆಗಳು ಅವರ ಮೇಧಾವಿತನವನ್ನು ಎತ್ತಿ ತೋರಿದವು. ವಿಶ್ವೇಶ್ವರಯ್ಯ ಅಟೋಮ್ಯಾಟಿಕ್ ಸ್ಲೂಸ್ ಗೇಟ್ ಕಂಡು ಹಿಡಿದರು. ಪುಣೆ ನಗರಕ್ಕೆ ಒಂದು ಸರೋವರದಿಂದ ನೀರಿನ ಪೂರೈಕೆಯಾಗುತ್ತಿತ್ತು. ಸರೋವರ ಕೆಲವು ತಿಂಗಳು ಉಕ್ಕಿ ಹರಿಯುತ್ತಿತ್ತು. ಕೆಲವು ತಿಂಗಳಲ್ಲಿ ಬತ್ತಿ ಇಳಿಯುತ್ತಿತ್ತು. ವಿಶ್ವೇಶ್ವರಯ್ಯನವರು ಸರೋವರದ ಅಡ್ಡಕಟ್ಟೆಯ ಮೇಲೆ ಸ್ವಯಂಚಾಲಿತ ಜಾರು ಬಾಗಿಲುಗಳನ್ನು ವಿನ್ಯಾಸ ಮಾಡಿ ನೆಟ್ಟರು.

ನೀರು ಪ್ರವಾಹದ ಮಟ್ಟ ಮುಟ್ಟಿದಾಗ ಜಾರು ಬಾಗಿಲುಗಳು ಸ್ವಯಂಚಾಲಿತವಾಗಿ ತೆರದು ಹೆಚ್ಚುವರಿ ನೀರನ್ನು ಹೊರಹೋಗಲು ಬಿಡುತ್ತಿದ್ದವು. ಅದೇ ನೀರಿನ ಮಟ್ಟ ಕಡಿಮೆ ಇದ್ದಾಗ, ಈ ದ್ವಾರಗಳು ಮುಚ್ಚಿಕೊಂಡು ನೀರನ್ನು ಹಿಡಿದಿಡುತ್ತಿದ್ದವು. ವಿಶ್ವೇಶ್ವರಯ್ಯ ತಮ್ಮ ಈ ಆವಿಷ್ಕಾರಕ್ಕೆ ಪೇಟೆಂಟ್ ಪಡೆದರು. ಆದರೆ ಆ ಪೇಟೆಂಟಿಗೆ ಯಾವುದೇ ಸಂಭಾವನೆ ಪಡೆಯಲು ನಿರಾಕರಿಸಿದರು. ಸರ್ಕಾರದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿದರು. ಈ ದ್ವಾರಗಳನ್ನು ಅವರು 1910ರಲ್ಲಿ ನೆಟ್ಟಿದ್ದರು. ನಲವತ್ತೈದು ವರ್ಷಗಳ ಅನಂತರ ಅವುಗಳನ್ನು ವಿಶ್ವೇಶ್ವರಯ್ಯ ನೋಡಿದಾಗಲೂ ಅವು ತ್ರಪ್ತಿಕರವಾಗಿ ಕೆಲಸ ಮಾಡುತ್ತಿದ್ದವು! 1904ರಲ್ಲಿ ಬಾಂಬೆ ಸರ್ಕಾರದ ಸ್ಯಾನಿಟರಿ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರು ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯರಾಗಿದ್ದರು.

1906ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ಯೆಮೆನ್ ದೇಶದ ಏಡನ್ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ವಿಶ್ವೇಶ್ವರಯ್ಯನವರನ್ನು ಕಳುಹಿಸಲಾಯಿತು. ಬೆಟ್ಟಗಳಿಂದ ಸುತ್ತುವರೆದ ಏಡನ್ ನಗರದಲ್ಲಿ ಸುರಿದ ಮಳೆ, ಮರಳು ಭೂಮಿಯಲ್ಲಿ ಹಿಂಗಿ ಹೋಗುತ್ತಿತ್ತು. ವಿಶ್ವೇಶ್ವರಯ್ಯನವರು ಆ ಭೂಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ದೂರದ ಗುಡ್ಡಗಾಡುಗಳಲ್ಲಿ ಬಿದ್ದ ಮಳೆ ಹರಿದು ಹಿಂಗುವ ಜಾಗ, ಏಡನ್ ನಗರದಿಂದ 18 ಮೈಲಿಗಳ ದೂರದಲ್ಲಿತ್ತು. ಇಲ್ಲಿ ನೆಲದಾಳದಲ್ಲಿ ನೀರಿನ ಜಲಾಶಯವಿರುವುದನ್ನು ವಿಶ್ವೇಶ್ವರಯ್ಯನವರು ಗುರುತಿಸಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಯೋಜಿಸಿಕೊಟ್ಟರು. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಏಡನ್ ನಗರ ಇಂದೂ ನೆನಪಿಟ್ಟುಕೊಂಡಿದೆ. ವಿಶ್ವೇಶ್ವರಯ್ಯನವರ ಈ ಅನುಪಮ ಸೇವೆಗೆ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್– ಎ-ಹಿಂದ್ ಬಿರುದು ನೀಡಿ ಗೌರವಿಸಿತು.

1908ರಲ್ಲಿ ತಮ್ಮ ಬಾಂಬೆ ಕೆಲಸಕ್ಕೆ ರಾಜೀನಾಮೆ ನೀಡಿದ ವಿಶ್ವೇಶ್ವರಯ್ಯನವರು ವಿದೇಶ ಪ್ರವಾಸಕ್ಕೆ ತೊಡಗಿದ್ದರು. ಆ ಸಂದರ್ಭದಲ್ಲಿ ಪ್ರವಾಹಗಳಿಂದ ದುಸ್ಥಿತಿಯಲ್ಲಿದ ಹೈದರಾಬಾದಿಗೆ ನೆರವಾಗಲು ಹೈದರಾಬಾದಿನ ನಿಜಾಮರು ಸಲ್ಲಿಸಿದ ಕೋರಿಕೆಯನ್ನು ಮನ್ನಿಸಿ ವಿದೇಶ ಪ್ರವಾಸದಿಂದ ಅರ್ಧ ಹಾದಿಯಲ್ಲಿ ಹಿಂದಿರುಗಿ ಬಂದ ಅವರು, 1909ರಲ್ಲಿ ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆದರು. ಅದೇ ಸಂದರ್ಭದಲ್ಲಿ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರು ವಿಶ್ವೇಶ್ವರಯ್ಯ ಅವರಿಗೆ ಮೈಸೂರು ರಾಜ್ಯದ ಚೀಫ್ ಇಂಜಿನಿಯರ್ ಆಗುವಂತೆ ಕೋರಿಕೆ ಇಟ್ಟರು. ಮೈಸೂರಿನವರೇ ಆದ ಅವರ ಪ್ರತಿಭೆ, ಪ್ರಸಿದ್ಧಿ ಮಹಾರಾಜರನ್ನು ಪ್ರಭಾವಿಸಿತ್ತು. ಆದರೆ, ವಿಶ್ವೇಶ್ವರಯ್ಯ ಅವರಿಗೆ ವಿಶೇಷವಿಲ್ಲದ ಸಾಮಾನ್ಯ ಕೆಲಸಗಳಲ್ಲಿ ತೊಡಗುವ ಇಚ್ಛೆ ಇರಲಿಲ್ಲ. ಮೈಸೂರು ಸರ್ಕಾರಕ್ಕೆ ತಾಂತ್ರಿಕ ವಿದ್ಯಾಭ್ಯಾಸ ಮತ್ತು ಕಾರ್ಖಾನೆಗಳ ಅಬಿವೃದ್ಧಿಗೆ ಭಾರೀ ಯೋಜನೆಗಳನ್ನು ಹಾಕುವುದರಲ್ಲಿ ಆಸಕ್ತಿ ಇದ್ದರೆ ಮಾತ್ರ ತಾವು ಬರುವುದಾಗಿ ಹೇಳಿದರು. ಮುಸಿ ನದಿಯ ಪ್ರವಾಹ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟ ವಿಶ್ವೇಶ್ವರಯ್ಯನವರು ಹೈದಾರಾಬಾದಿನಿಂದ ಬೀಳ್ಕೊಂಡು ಮಹಾರಾಜ ಕೃಷ್ಣರಾಜ ಒಡೆಯರ ಒತ್ತಾಯದ ಆಹ್ವಾನದ ಮೇಲೆ ಮೈಸೂರಿಗೆ ಬಂದರು.

ನವೆಂಬರ್ 1909ರಲ್ಲಿ ವಿಶ್ವೇಶ್ವರಯ್ಯ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ಸೇರಿಕೊಂಡರು. ಸೇರಿದೊಡನೆ ಅವರಿಗೆ ಪಿ.ಡಬ್ಲ್ಯೂ.ಡಿ ಗೆ ಹೊಸದಾಗಿ ನೇಮಿಸಿಕೊಂಡ ಜನರ ಹೆಸರುಗಳ ಪಟ್ಟಿ ಕಳುಹಿಸಲಾಯಿತು. ಹೊಸದಾಗಿ ನೇಮಕಗೊಂಡ ಅವರ ಮುಖ್ಯ ಅರ್ಹತೆ ಎಂದರೆ, ಅವರೆಲ್ಲ ದೊಡ್ಡ ಅಧಿಕಾರಿಗಳ ಸಂಬಂಧಿಗಳಾಗಿದ್ದದ್ದು! ವಿಶ್ವೇಶ್ವರಯ್ಯ ಆ ಪಟ್ಟಿಯನ್ನು ನಿರಾಕರಿಸಿ, ಕೇವಲ ಪ್ರತಿಭೆ ಮತ್ತು ವಿದ್ಯಾರ್ಹತೆಯ ಮೇಲೆ ಮತ್ತೊಂದು ಪಟ್ಟಿ ಸಿದ್ಧ ಮಾಡಲು ಹೇಳಿದರು. ತಮಗೆ ಇಂತಹ ನಡೆಗಳಿಂದ ಬಂದ ತೊಂದರೆಗಳನ್ನು ಲೆಕ್ಕಿಸದೆ, ತಾವು ಹಿಡಿದ ಅಭಿವೃದ್ಧಿಯ ಹಾದಿಯಲ್ಲಿ ಮೈಸೂರನ್ನು ನಡೆಸಿದರು.

ಮೈಸೂರು ಸರ್ಕಾರ ಎರಡು ಮಂಡಲಿಗಳನ್ನು ನೇಮಿಸಿತು. ಒಂದು ತಾಂತ್ರಿಕ ಶಿಕ್ಷಣಕ್ಕೆ. ಇನ್ನೊಂದು ಕಾರ್ಖಾನೆಗಳ ಅಭಿವೃದ್ಧಿಗೆ. ಇವೆರಡೂ ಕಮಿಟಿಗಳಿಗೆ ವಿಶ್ವೇಶ್ವರಯ್ಯ ಅಧ್ಯಕ್ಷರಾದರು. ನಮ್ಮ ಎಲ್ಲ ಆರ್ಥಿಕ ರೋಗಗಳಿಗೂ ವಿದ್ಯಾಭ್ಯಾಸವೇ ಮದ್ದು ಎಂದು ವಿಶ್ವೇಶ್ವರಯ್ಯ ಅವರು ಬಲವಾಗಿ ನಂಬಿದ್ದರು.

ಕನ್ನಂಬಾಡಿ ಆಣೆಕಟ್ಟು ಮತ್ತು ವಿದ್ಯುಚ್ಚಕ್ತಿ ಯೋಜನೆಗಳನ್ನೂ ಪೂರೈಸಿದಂತಹ ಮಹತ್ವದ ಸಾಧನೆಗಳಿಗಾಗಿ ಬ್ರಿಟಿಷ್ ಸರ್ಕಾರ ಅವರನ್ನು ನೈಟ್ ಕಮಾಂಡರ್ ಆಗಿ ಅಲಂಕರಿಸಿ ಸರ್ ಪದವಿಯನ್ನು ನೀಡಿತು. ಆಡಳಿತದಲ್ಲಿ ದಕ್ಷರಾದ ವಿಶ್ವೇಶ್ವರಯ್ಯನವರು 1912ರಲ್ಲಿ ಮೈಸೂರು ಸಂಸ್ಥಾನದ ಏಳನೆ ದಿವಾನರಾದರು. ದಿವಾನರಾಗುವ ಮೊದಲು ತನ್ನ ತಾಯಿಗೆ ನೀನು ಯಾರ ಶಿಫಾರಸ್ಸನ್ನೂ ನನ್ನಲ್ಲಿಗೆ ತರುವುದಿಲ್ಲ ಎಂದರೆ ಮಾತ್ರ ನಾನು ದಿವಾನ ಪದವಿಯನ್ನು ಒಪ್ಪಿಕೊಳ್ಳುವೆ ಎಂದು ಹೇಳಿದರಂತೆ! ವಿಶ್ವೇಶ್ವರಯ್ಯನವರು ಶಿಕ್ಷಣ, ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದರು.

ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾರಾಣಿ ಕಾಲೇಜು, ಹಲವಾರು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಸೌಲಭ್ಯಗಳು, ಮೈಸೂರು ವಿಶ್ವವಿದ್ಯಾಲಯ, ವಿವಿಧರೀತಿಯ ಕೈಗಾರಿಕೆಗಳು, ಸಾರ್ವಜನಿಕ ಗ್ರಂಥಾಲಯಗಳು ಇವೆಲ್ಲಾ ವಿಶ್ವೇಶ್ವರಯ್ಯನವರ ಸಮಗ್ರ ಕೊಡುಗೆಗಳು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣ ಹಾಗೂ ಆ ಮೂಲಕ ಕನ್ನಡಿಗರ ಒಕ್ಕೂಟ, ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಕೂಡಾ ವಿಶ್ವೇಶ್ವರಯ್ಯನವರ ಬೆಂಬಲ ಪ್ರಮುಖವಾದದ್ದು.

ಭಾರತದ ಆರ್ಥಿಕ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಗಾಧವಾದದ್ದು. 1920ರಲ್ಲಿ Reconstructing India, 1934ರಲ್ಲಿ Planned Economy for India ಪುಸ್ತಕಗಳನ್ನು ಪ್ರಕಟಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ 1955ರಲ್ಲಿ ವಿಶ್ವೇಶ್ವರಯ್ಯ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಭಾರತರತ್ನ ಪುರಸ್ಕಾರ ಸಂದಿತು. ಅವರ ನೂರನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನೆಹರೂ ಅವರು ಬಂದರು.

ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ, ನಿಸ್ವಾರ್ಥ, ಸಮರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು.

ಈ ಮಹಾನ್ ಪ್ರೇರಕ ಶಕ್ತಿ, ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಚೇತನಗಳಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.


ಸಂಗ್ರಹ: ಎಮ್ ವೈ ಮೆಣಸಿನಕಾಯಿ

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group