spot_img
spot_img

ಯೋಗ – ಸ್ವಸ್ಥ ವಿಶ್ವಕ್ಕೆ ಭಾರತದ ಕೊಡುಗೆ

Must Read

- Advertisement -

ಜೂನ್ 21 – ವಿಶ್ವ ಯೋಗ ದಿನದ ನಿಮಿತ್ತ ಹೀಗೊಂದು ಚಿಂತನೆ

ಜೂನ 21, ವಿಶ್ವ ಯೋಗ ದಿನ, ಯೋಗವೆಂದರೆ ಶಾರೀರಿಕ ವ್ಯಾಯಾಮವಲ್ಲ. ಅದು ಮನಸ್ಸಿನ ಸಂಭ್ರಮವನ್ನು ಸಾಧನ. ಯೋಗಾಭ್ಯಾಸದಿಂದ ಬಾಹ್ಯ ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗುವುದಿಲ್ಲ. ಬದಲಿಗೆ ನಾವೇ ಬದಲಾಗುತ್ತೇವೆ. ಯೋಗ ಅಂತರ್ಯದ ಅರಿವನ್ನು ಹೆಚ್ಚಿಸುತ್ತದೆ. ಅಧ್ಯಾತ್ಮಯಾನದಲ್ಲಿ ಸಾರ್ಥಕತೆ ಹೊಂದುವಂತೆ ಮಾಡುತ್ತದೆ.
“ಹಿತ್ತಲ ಗಿಡ ಮದ್ದಲ್ಲ” ಎಂಬ ನಾಣ್ಣುಡಿಯಂತೆ ಅದು ಮದ್ದಾಗುವುದು, ಹೊರಗಿನವರು ಆ ಗಿಡವನ್ನು ಆರಿಸಿಕೊಂಡಾಗ, ವಿದೇಶಿಯರು ತಮ್ಮ ಆತ್ಮಶಾಂತಿ, ದೇಹಸ್ವಾಸ್ಥ್ಯಕ್ಕಾಗಿ ಭಾರತದ ಯೋಗವಿದ್ಯೆಯ ಕಡೆ ತಿರುಗಿ ನೋಡುತ್ತಿರುವಾಗ, ನಮಗೆ ನಮ್ಮಲ್ಲೊಂದು ಇಂತಹ ಮಹಾವಿದ್ಯೆ ಇದೆ ಎಂಬ ಅರಿವುಂಟಾಗಿದೆ.
ನಾವೂ ಕಲಿಯಬೇಕೆಂಬ ಎಚ್ಚರ ಉಂಟಾಗಿದೆ. ಗಾಳಿ, ನೀರಿನಂತೆ, ಆಹಾರ ಪಾನೀಯಗಳಂತೆ ಯೋಗಸಾಧನೆಯೂ ಆರೋಗ್ಯ ಜೀವನಕ್ಕೆ ಅತ್ಯವಶ್ಯಕ. ಸತ್ವಹೀನ ಆಹಾರ, ಪರಿಸರ ಮಾಲಿನ್ಯ, ಪ್ರಕ್ಷುಬ್ಧ ವಾತಾವರಣಗಳ ಇಂದಿನ ಸನ್ನಿವೇಶದಲ್ಲಿ, ಗಂಡು-ಹೆಣ್ಣೆನ್ನದೆ ಸರ್ವರೂ ಕ್ಷಣ-ಕ್ಷಣಕ್ಕೂ ಉದ್ವಿಗ್ನತೆಯಿಂದ ಬಳಲಿ ಬೆಂಡಾಗುತ್ತಿರುವಾಗ, ಮನಶಾಂತಿ ಆತ್ಮಕಲ್ಯಾಣಕ್ಕಾಗಿ, ಯೋಗ ಮಾರ್ಗವೇ ಜೀವನ್ಮುಕ್ತಿಗೆ ದಾರಿದೀಪವಾಗಿದೆ.

ಯೋಗವು ಶಿಸ್ತನ್ನು ಕಲಿಸುತ್ತದೆ. ದೇಹ ಮತ್ತು ಮನಸ್ಸುಗಳನ್ನು ಹತೋಟಿಯಲ್ಲಿಡುವ ವಿಧಾನವನ್ನು ಬೋಧಿಸುತ್ತದೆ. ಎಲ್ಲ ಸಮಸ್ಯೆಗಳನ್ನು ದೂರವಿಡುತ್ತದೆ. ಇಂತಹ ಬಹುಉಪಕಾರಿಯಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನಸಿಕ ಒತ್ತಡವನ್ನು ದೂರಮಾಡಲು ಇರುವ ‘ದಿವ್ಯೌಷಧ’ ಯೋಗ.

- Advertisement -

ಯೋಗ ಮತ್ತು ಆಯುರ್ವೇದ ಮೊಟ್ಟಮೊದಲು ಪ್ರಾರಂಭವಾಗಿದ್ದು ಭಾರತ ದೇಶದಲ್ಲೇ, ಇವುಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು ಮಾತ್ರ ಬೇರೆ ಬೇರೆ ದೇಶದ ಜನರು. ಆಯುರ್ವೇದದ ವಿಜ್ಞಾನವು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಪೂರ್ವಮೀಮಾಂಸೆ ಮತ್ತು ಉತ್ತರ ಮೀಮಾಂಸೆ ಅಥವಾ ವೇದಾಂತಗಳೆಂಬ ದರ್ಶನಗಳನ್ನೊಳಗೊಂಡ ವಿಜ್ಞಾನ. ಯೋಗಶಾಸ್ತ್ರವು ಆಯುರ್ವೇದದ ಒಂದು ವಿಭಾಗ ಎಂದರ್ಥ. ಅಂತೆಯೇ ಯೋಗಶಾಸ್ತ್ರದ ಸೂತ್ರಧಾರಿ ಪತಂಜಲಿ ಮಹರ್ಷಿಯನ್ನು ಸ್ಮರಿಸುತ್ತೇವೆ. ಯೋಗಶಾಸ್ತ್ರದಲ್ಲೇ ಚಿಕಿತ್ಸಾಶಾಸ್ತ್ರವೂ ಅಡಗಿದೆ. ಆದುದರಿಂದ ವೈದ್ಯನಾದವನಿಗೆ ಯೋಗಶಾಸ್ತ್ರದ ಪರಿಜ್ಞಾನವಿರುವುದೂ, ಯೋಗಿಯಾದವನಿಗೆ ವೈದ್ಯಶಾಸ್ತ್ರದ ಅನುಭವವಿರುವುದೂ ಅಗತ್ಯ. ಹವಾಮಾನ, ವಯೋಮಾನ ಇವುಗಳನ್ನು ಅನುಸರಿಸಿ, ಅಗತ್ಯವಿದ್ದಲ್ಲಿ ಕೆಲವು ಔಷಧಿಗಳನ್ನು ರೋಗಕ್ಕನುಸಾರವಾಗಿ ನೀಡಬೇಕು. ಆತನ ಮಾನಸಿಕ ಸ್ಥಿತಿ, ವಯಸ್ಸನ್ನು ಹಾಗೂ ಚಿಕಿತ್ಸಿಸುವ ಕಾಲವನ್ನು ಮುಂದಿಟ್ಟುಕೊಂಡು ಪ್ರಥಮವಾಗಿ ಯಮ, ನಿಯಮಗಳ ಪರಿಜ್ಞಾನವನ್ನು ಆತನಿಗೆ ತಿಳಿಸಿ, ಯೋಗಚಿಕಿತ್ಸೆಯನ್ನು ಪ್ರಾರಂಭಿಸುವುದು ಒಳ್ಳೆಯದು.

ರೋಗಿಗಳು ಯಾವ ದೇಹಭಾಗಕ್ಕೆ ಚಿಕಿತ್ಸೆ ಬೇಕು ಎಂಬ ಮೂಲ ಅರಿವು ಚಿಕಿತ್ಸಕನಿಗೆ ಅಗತ್ಯ ಎಂಬುದನ್ನು ಮೂಲತಃ ತಿಳಿದುಕೊಂಡು, ಅದಕ್ಕನುಸರಿಸಿ, ಶಾಸ್ತ್ರೋಕ್ತವಾಗಿ ಅಗತ್ಯವಿರುವ ಆಸನಗಳನ್ನು ಕಲಿಸಿಕೊಡಬೇಕು, ಅದನ್ನು ರೋಗಿಯಿಂದ ನಿತ್ಯ ಅಭ್ಯಾಸ ಮಾಡಿಸಬೇಕು, ಇದರಿಂದಾಗಿ ಅಗತ್ಯವಿರುವ ಮಾಂಸ ಖಂಡಗಳು ಸ್ವಸ್ಥ ಸ್ಥಿತಿಯನ್ನು ಪಡೆದು ರೋಗಪ್ರತಿಬಂಧಕ ಹಾಗೂ ರೋಗ ಗುಣವಾಗಲು ಅನುಕೂಲವಾಗುವುದು. ಮಾನವ ಜೀವನಕ್ಕೆ ಅತ್ಯಂತ ಮೂಲಭೂತ ವಸ್ತುವೆಂದರೆ, ಗಾಳಿ, ಈ ಗಾಳಿಯನ್ನು ದೇಹದ ಒಳಗೆ ಸೇವಿಸುವ, ದೇಹದಲ್ಲಿ ಧಾರಣೆ ಮಾಡುವ, ದೇಹದಿಂದ ಹೊರಗೆ ಹಾಕುವ ಕ್ಷಮಗಳಿಗೆ ಯೋಗಶಾಸ್ತ್ರದಲ್ಲಿ ‘ಪೂರಕ’, ‘ಕುಂಭಕ’, ‘ರೇಚಕ’ಗಳೆಂಬ ಹೆಸರುಗಳಿವೆ. ಕ್ರಮಬದ್ಧವಾಗಿ ಆಚರಿಸುವ ಈ ಕ್ರಮಕ್ಕೆ “ಪ್ರಾಣಾಯಾಮ” ಎಂಬ ಹೆಸರೂ ಯೋಗಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಪ್ರಾಣಾಯಾಮದ ಬೇರೆ ಬೇರೆ ವಿಧಗಳನ್ನು ಕ್ರಮವಾಗಿ ಅಭ್ಯಾಸ ಮಾಡುವ ವಿಧಾನಗಳನ್ನೂ ಯೋಗಶಾಸ್ತ್ರ ವಿವರಿಸಿದೆ.

ಮಾನವಕುಲದಲ್ಲಿ ಬರತಕ್ಕ ಎಲ್ಲಾ ವ್ಯಾಧಿಗಳಿಗೂ ಯೋಗದಿಂದಲೇ ಚಿಕಿತ್ಸೆ ದೊರಕುವುದು ಸಾಧ್ಯವಿಲ್ಲ ಆದರೆ ಯೋಗಾಭ್ಯಾಸವನ್ನು ಕ್ರಮವಾಗಿ ಆಚರಿಸುವ ವ್ಯಕ್ತಿಯು ನಿರೋಗಿಯಾಗಿ ಬಾಳಬಹುದೆಂಬುದು ಅನುಭವ. ಯೋಗವನ್ನು ದಿನನಿತ್ಯ ಮಾಡುವುದರಿಂದ ನೂರಾರು ಮಾನಸಿಕ ಚಿಂತೆಗಳು/ಸಮಸ್ಯೆಗಳು ಮಾಯವಾಗಿ ಮನಸ್ಸು ಪ್ರಪುಲ್ಲವಾಗಿರುತ್ತದೆ. ಯೋಗಾಸನ, ಪ್ರಾಣಾಯಾಮಗಳ ಜೊತೆಗೆ ಧ್ಯಾನ, ಭಕ್ತಿಯೋಗ ಮತ್ತು ಜ್ಞಾನಯೋಗಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥ್ಯ, ದೈಹಿಕ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

- Advertisement -

ಯೋಗ ವ್ಯಾಖ್ಯೆಗಳು
ಯೋಗವನ್ನು ಕುರಿತಂತೆ ಹಲವಾರು ವ್ಯಾಖ್ಯೆಗಳು ಬಹು ಹಿಂದಿನಿಂದಲೂ ಲಭ್ಯವಿದೆ. ನಾವಿಲ್ಲಿ ಮುಖ್ಯವಾಗಿ ನಾಲ್ಕು ವ್ಯಾಖ್ಯೆಗಳನ್ನು ಗಮನಿಸಬಹುದು. ‘ಯೋಗಃ ಕರ್ಮಸು ಕೌಶಲಂ’ ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳಿರುವಂತೆ ಕೆಲಸದಲ್ಲಿ ಕುಶಲತೆ ಪಡೆಯುವುದೇ ಯೋಗವೆನಿಸಿಕೊಳ್ಳುತ್ತದೆ. ‘ಸಮತ್ವಂ ಯೋಗಮುಚ್ಯತೇ’ ಜೀವನದಲ್ಲಿ ನೋವು-ನಲಿವು, ಸಿಹಿ-ಕಹಿ, ಉಷ್ಣ-ಶೀತ, ಕತ್ತಲೆ-ಬೆಳಕು ಇತ್ಯಾದಿ ದ್ವಂದ್ವಗಳು ವ್ಯಾಪಕ, ನಿರಂತರ. ಈ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದು. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಮೈಮರೆಯದೆ ಅವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದೇ ಯೋಗ.
‘ಯೋಗ ಪಿತಾಮಹಾ’ ಎಂದು ಕರೆಸಿಕೊಳ್ಳುವ ಪತಂಜಲಿ ಮಹಾಮುನಿಗಳು ‘ಯೋಗಶ್ಚಿತ್ತವೃತ್ತಿನಿರೋಧಃ’ ಎಂದು ವ್ಯಾಖೆಯನ್ನು ಮುಂದಿಟ್ಟಿದ್ದಾರೆ. ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧ. ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರಾ, ಸ್ಮೃತಿ ಎಂಬ ಚಿತ್ತವೃತ್ತಿಗಳು ಮತ್ತು ದುಃಖಕ್ಕೆ ಕಾರಣವಾದ ಅವಿದ್ಯಾ, ಅಸ್ಮಿತಾ, ರಾಗ, ದ್ವೇಷ, ಅಭನಿವೇಶ ಮುಂತಾದ ಕ್ಲೇಶಗಳ, ವ್ಯಾದಿ (ವೈಷಮ್ಯ), ಸ್ತ್ಯಾನ (ಸೋಮಾರಿತನ), ಸಂಶಯ (ಅನುಮಾನ), ಪ್ರಮಾದ (ಆತುರತೆ), ಆಲಸ್ಯ (ಜಡತ್ವ), ಅವಿರತಿ (ನಿರಾಸಕ್ತಿ), ಭ್ರಾಂತಿದರ್ಶನ (ಭ್ರಾಂತಿ), ಅಲಬ್ಧಭೂಮಿಕತ್ವ (ಮನಸ್ಸು ಏಕಾಗ್ರತೆಯಿಲ್ಲದಿರುವುದು), ಅನವಸ್ಥಿತತ್ವ (ಏಕಾಗ್ರತೆ ಬಹುಕಾಲ ಉಳಿಯದಿರುವುದು) ಮುಂತಾದ ಚಿತ್ತ ವಿಕ್ಷೇಪಗಳನ್ನು ನಿಯಂತ್ರಣಗೊಳಿಸುವುದೇ ಯೋಗ.
“ಮನಃ ಪ್ರಶಮನೋಪಾಯ: ಯೋಗಃ ಇತ್ಯಭಿಧೀಯತೇ” ಅರ್ಥಾತ್ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ, ಉಪಾಯವೇ ಯೋಗ ಎನ್ನುವ ವಸಿಷ್ಠರ ಸೂತ್ರ.
ಯೋಗಫಲಗಳು: ನಿರ್ದಿಷ್ಟವಾದ ಒಂದು ಗುರಿ ತಲುಪಲು ವಿವಿಧ ಮಾರ್ಗಗಳು ಇರುವಂತೆಯೆ ಯೋಗದಲ್ಲಿಯೂ, ಜೀವಾತ್ಮ ಪರಮಾತ್ಮ ಸಂಯೋಗ ಹೊಂದಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಇವು ಪ್ರಮುಖವಾಗಿದೆ.

ಕರ್ಮಯೋಗ: ನಾವು ಮಾಡುವ ಕೆಲಸಗಳಿಗೆಲ್ಲಾ ಫಲ ಉಂಟು. ಆದರೆ ಫಲದ ಕಡೆ ಗಮನ ನೀಡಕೂಡದು. ಇದನ್ನೇ ‘ನಿಷ್ಕಾಮ ಕರ್ಮ’ವೆಂತಲೂ ಕರೆಯುತ್ತಾರೆ. ಮಾಡುವ ಕೆಲಸದಲ್ಲಿ ವ್ಯಾಮೋಹವಿಲ್ಲದ ಮನೋಭಾವ ಇದ್ದಾಗ ಮನಸ್ಸು ಕರ್ಮಗಳ ಬಂಧನದಿಂದ ಮುಕ್ತವಾಗಿರುವುದು. ಆಗ ಮನಸ್ಸು ಸ್ಥಿರತೆ ಮತ್ತು ಶಾಂತಿಯಿಂದ ಕೂಡಿರುತ್ತದೆ. ಇದೇ ಕರ್ಮಯೋಗ.

ಭಕ್ತಿಯೋಗ: ಅಧ್ಯಯನ, ತರ್ಕ, ಜಿಜ್ಞಾಸೆ ನಮ್ಮಿಂದ ಸಾಧ್ಯವಿಲ್ಲ ಎಂದಾದರೆ ಮತ್ತೊಂದು ಮಾರ್ಗವನ್ನು ನಾವು ಆರಿಸಿಕೊಳ್ಳಬಹುದು. ಅದು ಭಕ್ತಿಯಿಂದ. ನಾವು ಸ್ವಭಾವತಃ ಭಾವುಕರಾಗಿದ್ದಲ್ಲಿ, ದೇವರು-ಧರ್ಮ ಇತ್ಯಾದಿಗಳ ಬಗ್ಗೆ ಗಮನ ನೀಡಬಲ್ಲರಾಗಿದ್ದಲ್ಲಿ ಭಕ್ತಿಯೋಗದ ಮಾರ್ಗದಲ್ಲಿ ಮುನ್ನಡೆದು ಗುರಿ ತಲುಪಬಹುದು. ಆಸ್ತಿ, ಅಂತಸ್ತು, ಅಧಿಕಾರಗಳು ಗೌಣ, ಭಕ್ತಿ, ಭಾವನೆಗಳೇ ಇಲ್ಲಿ ಪ್ರಧಾನ, ಭಜನೆ, ಪ್ರಾರ್ಥನೆ, ಪೂಜೆ, ಹೋಮ, ಹವನ, ಜಪ, ತಪ, ಧ್ಯಾನ, ಮೌನ ಈ ಮಾರ್ಗಗಳ ಮೂಲಕ ಗುರಿ ತಲುಪುವುದೇ ಭಕ್ತಿಯೋಗ. ಶ್ರೀನಿವಾಸ ನಾಯ್ಕರಿಗೆ ಜೀವನದಲ್ಲಿ ಯಾವ ಕೊರತೆಯಿತ್ತು ಹೇಳಿ? ಹತ್ತು ತಲೆಮಾರು ಕುಳಿತು ಊಟ ಮಾಡಿದರೂ ಕರಗದಷ್ಟು ಸಂಪತ್ತು ಅವರಲ್ಲಿತ್ತು ಒಂದರ್ಥದಲ್ಲಿ ಅವರು ನವಕೋಟಿ ನಾರಾಯಣ. ಆದರೆ ಅವೆಲ್ಲವನ್ನೂ ಬಿಟ್ಟು ಪುರಂದರದಾಸರಾಗಿ ಹೊರ ಬಂದುದೇಕೆ? ರಾಜ್ಯದ ಒಡೆಯನಾಗಿದ್ದ ಕನಕದಾಸರು ದಾಸರಾಗಿ ಹೊರಬಂದುದೇಕೆ? ಅಕ್ಕಮಹಾದೇವಿ ಕೌಶಿಕನ ಪತ್ನಿಯಾಗಿ ಮೆರೆಯಬಹುದಾದವಳು, ಎಂಥ ಮೀರಾಬಾಯಿ ರಾಜಸ್ತಾನದ ರಾಜಕುಮಾರಿಯಾಗಿ ಸುಖ ಅನುಭವಿಸಬಹುದಾದವಳು. ಇವರೆಲ್ಲ ತಮ್ಮ ತೊರೆದು ಭಕ್ತಿಮಾರ್ಗದಲ್ಲಿ ಮುನ್ನಡೆದರು ಜನಜಾಗೃತಿಗೊಳಿಸಿದರು ಭಕ್ತಿಯಲ್ಲೇ ಮೆರೆದು ಆ ಮೂಲಕ ಗುರಿ ತಲುಪಿದವರು.

ಜ್ಞಾನಯೋಗ: ವೇದ, ಉಪನಿಷತ್ತು, ಪುರಾಣ, ಇತಿಹಾಸಗಳ ಅಧ್ಯಯನದ ಮೂಲಕ, ಸಜ್ಜನರ ಸಹವಾಸ, ಸತ್ಸಂಗ, ತರ್ಕ, ಮೀಮಾಂಸೆ ಇತ್ಯಾದಿ ಮಾಧ್ಯಮಗಳ ಮೂಲಕ ನಾನು ಯಾರು? ನನ್ನ ಕೈ, ಕಾಲು, ನನ್ನ ಕಣ್ಣು ಇವುಗಳೆಲ್ಲದರ ಹಿಂದಿರಿವ ‘ನಾನು’ ಯಾರು, ಈ ಸೃಷ್ಠಿಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಿತ್ತಿರುವ ಶಕ್ತಿ ಯಾವುದು? ಆ ಶಕ್ತಿಗೂ ಜೀವಾತ್ಮನಿಗೂ ಇರುವ ಸಂಬಂಧವೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಅಧ್ಯಯನ, ತರ್ಕ, ಜಿಜ್ಞಾಸೆಗಳ ಮಾರ್ಗದಲ್ಲಿ ಮುಂದುವರೆದು ಗುರಿ ತಲುಪುವುದೇ ಜ್ಞಾನಯೋಗ. ಶಂಕರ, ಮಧ್ವ, ರಾಮಾನುಜಾಚಾರ್ಯರೇ ಮೊದಲಾದ ತತ್ವಜ್ಞಾನಿಗಳು, ದಾರ್ಶನಿಕರು ಈ ಪಥದಲ್ಲಿ ಮುನ್ನಡೆದವರು.
ಶಿಸ್ತಿನ ಪ್ರತಿರೂಪ
ಯೋಗವು ಒಂದು ಜ್ಞಾನ. ಇದು ದೇಹ, ಉಸಿರು, ಮನಸ್ಸು, ಆತ್ಮ ಹಾಗೂ ಅಂತಿಮವಾಗಿ ಪೂರ್ತಿ ಬ್ರಹ್ಮಾಂಡದೊಂದಿಗೆ ವ್ಯವಹರಿಸುತ್ತದೆ. ಜನ ಯೋಗವನ್ನು ಕೇವಲ ಭೌತಿಕ ಶರೀರಕ್ಕೆ ಮಾತ್ರ ಸಂಬಂಧಿಸಿದ ಸಂಗತಿ ಎಂದು ಆಲೋಚಿಸುತ್ತಾರೆ. ಯೋಗವು ಪ್ರಯೋಗ ಮತ್ತು ಸಿದ್ಧಾಂತಗಳನ್ನು ಒಳಗೊಂಡಿರುವ ಶಿಸ್ತು. ಜ್ಞಾನದ ಇತರ ವಿಷಯಗಳಂತೆ ಇದೂ ಒಂದು ಶಿಸ್ತಿನ ಅಧ್ಯಯನ ಮತ್ತು ಸಾಧನೆ. ಹಾಗಾಗಿ ಇದೂ ಒಂದು ಜ್ಞಾನವೇ. ಪತಂಜಲಿಯ ಯೋಗ ಸೂತ್ರವು, ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬುದಾಗಿ ಹೇಳುವುದಿಲ್ಲ, ಆದರೆ ಹೇಗೆ ಮಾಡಬೇಕು ಎಂಬುದನ್ನು ಉಪದೇಶಿಸುತ್ತದೆ. ಅದು ನೋವುಗಳು ಹಾಗೂ ಸಂಕಟಗಳಿಂದ ನೀವು ಮುಕ್ತರಾಗಲು ನಿಮಗೆ ನೆರವಾಗುತ್ತದೆ ಮತ್ತು ನೋವುಗಳು ಹಾಗೂ ಸಂಕಟಗಳಿಂದ ಮುಕ್ತವಾದ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ.

ವಿದೇಶಿಯರಲ್ಲಿ ಭಾರತ ಎಂಬ ಪದ ಕೇಳಿದಾಕ್ಷಣ ನೆನಪಿಗೆ ಬರುವುದೇ ಅಧ್ಯಾತ್ಮ. ಅದೇ ಭಾರತೀಯರ ಶಕ್ತಿ. ಅಧ್ಯಾತ್ಮಕ್ಕೆ ತವರೂರಾಗಿರುವ ನಮ್ಮ ದೇಶದಲ್ಲಿ ಎಲ್ಲ ರೀತಿಯ ಬಾಧೆಗಳಿಗೂ ಒಂದೇ ಅಸ್ತ್ರವಿದೇ ಅದೇ ಯೋಗ. ಉಸಿರಿನ ಮೇಲೆ ನಂಬಿಕೆ ಇಟ್ಟು ಬದುಕುವವರು ನಾವು ನಮ್ಮ ಉಸಿರಿನಲ್ಲೇ ಯೋಗವಿದೆ. ಈ ಯೋಗಕ್ಕೆ ಈಗ ರಾಜಯೋಗ ಬಂದಿದೆ. ಯೋಗದ ಮಹತ್ವ ವಿಶ್ವಮಟ್ಟದಲ್ಲಿ ಮತ್ತೆ ಸಾಬೀತಾಗಿದೆ. ಕಳೆದ ವರ್ಷ ವಿಶ್ವಸಂಸ್ಥೆ ಜೂನ್ 21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವೆಂದು ಘೋಷಿಸಿದೆ. ಜೂನ್ 21ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದೆ. ಯೋಗಕ್ಕೆ ಇಂದು ವಿಶ್ವವೇ ಮನಸೋತಿದೆ.
ಕಳೆದ ವರ್ಷ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಮನಸ್ಸು, ದೇಹ ಮತ್ತು ಆತ್ಮಗಳ ಆರೋಗ್ಯಕ್ಕೆ ಇಂದು ಅನಿವಾರ್ಯವಾಗಿರುವ ಭಾರತದ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು. ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಬೇಕು,” ಎಂದು ಆಗ್ರಹಿಸಿದ್ದರು. ಅದರಂತೆ ಕಳೆದ ವರ್ಷದಿಂದ ಜೂ 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಮನ್ನಣೆಗೆ ಪಾತ್ರವಾದ ಯೋಗದ ಮೂಲ ಭಾರತವೆಂದು ಹೇಳಿಕೊಳ್ಳಲು ನಾವು ನಿಜವಾಗಿಯೂ ಹೆಮ್ಮೆ ಪಡಲೇಬೇಕು. ಏಕೆಂದರೆ ಈ ಯೋಗಕ್ಕೆ ಅಷ್ಟೊಂದು ಶಕ್ತಿಯಿದೆ. ನಮ್ಮ ಪಾಲಿಗೆ ಅದೊಂದು ಬರಿ ವ್ಯಾಯಾಮವಲ್ಲ ಅದೊಂದು ತಪಸ್ಸು. ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಯೋಗದ ಜನನವಾಗಿತ್ತು. ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಕಲೆ ಇವೇ ಮುಂತಾದ ಕ್ಷೇತ್ರಗಳಿಗೆ ಪ್ರಾಚೀನ ಭಾರತದ ಕೊಡುಗೆಗಳೆಲ್ಲ ನಗಣ್ಯವಾಗಿ ಯೋಗಶಾಸ್ತ್ರವೇ ಮನುಕುಲಕ್ಕೆ ಭಾರತದ ಅತಿ ಶ್ರೇಷ್ಠವಾದ ಕೊಡುಗೆಯೆಂದು ಹೇಳಲಾಗುತ್ತಿದೆ.

ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು , 9739369621

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group