spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಸರ್ವಾಂಗವೆ ಸಕಲ ತೀರ್ಥಗಳೆಂದ ಹಾವಿನಾಳ ಕಲ್ಲಯ್ಯ

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿ ತನ್ನ ಆಯಸ್ಕಾಂತೀಯ ಗುಣದಿಂದ ಸಮಾಜದ ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆಯಿತು. ಆ ಸೆಳೆತದ ಪ್ರಭಾವಕ್ಕೆ ಒಳಗಾಗಿ ಹಲವಾರು ಜನ ಬಸವಣ್ಣನವರ ಕ್ರಾಂತಿ ವಲಯವನ್ನು ಸೇರಿಕೊಂಡು ಯುಗ ಯುಗಕ್ಕೂ ಬೆಳಕು ಚೆಲ್ಲುವ ಪ್ರಗತಿಪರ ಆಚಾರ ವಿಚಾರಗಳ
ವಿಧ್ಯುಲ್ಲತೆಯ ಸಂಚಲನವನ್ನೇ ಸೃಷ್ಟಿ ಮಾಡಿದರು.
ಸ್ವಯಂ ಬೆಳಕಿನಲ್ಲಿ ಅರಿವನ್ನು ಜಾಗ್ರತಗೊಳಿಸುವ ವಚನಗಳನ್ನು ರಚಿಸಿ ಆತ್ಮೋನ್ನತಿಯ ದಾರಿ ತೋರಿದ ಶರಣರಲ್ಲಿ ಪ್ರಮುಖನಾದವನು ಶರಣ ಹಾವಿನಾಳ ಕಲ್ಲಯ್ಯ

ವಿಜಯಪುರ ಜಿಲ್ಲೆಯ ಹಾವಿನಾಳ ಗ್ರಾಮದ ಅಕ್ಕಸಾಲಿಗ ದಂಪತಿ ಶಿವಯ್ಯ ಮತ್ತು ಸೊಮವ್ವೆಯ ಮಗ
ಕಲ್ಲಯ್ಯ. ಕಾಲ ಹನ್ನೆರಡನೆಯ ಶತಮಾನ. ರೇವಣಸಿದ್ಧ, ರುದ್ರಮುನಿ, ಮತ್ತು ಸಿದ್ದರಾಮರ ಒಡನಾಟ ಮತ್ತು ಆ ಕಾಲದ ಪರಿಸರದ ಪ್ರಭಾವದಿಂದ ಕಲ್ಲಯ್ಯ ಶರಣತತ್ವ ಪರಿಪಾಲಕನಾದ.ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಟಿ ಯಲ್ಲಿ ಭಾಗವಹಿಸಿದ. ತನ್ನ ಆರಾಧ್ಯ ದೈವ *ಮಹಾಲಿಂಗ ಕಲ್ಲೇಶ್ವರ* ಅಂಕಿತದಲ್ಲಿ ವಚನಗಳನ್ನು ರಚಿಸಿದ. ಕಲ್ಯಾಣ ಕ್ರಾಂತಿಯ ನಂತರ ಸೊಲ್ಲಾಪುರಕೆ ಬಂದು ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಆವರಣದಲ್ಲಿದೆ.

- Advertisement -

ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ?
ನೀರಿನ ಶೀತಲ ಗುಣದ ಮಹತ್ವ ಕೊಳದಲ್ಲಿರುವ ತಾವರೆಗೆ ಮಾತ್ರವೇ ಗೊತ್ತು, ಭೂಮಿಯ ಮೇಲಿನ ಕೊರಡಿಗೆ ನೀರಿನ ಶೀತಲ ಗುಣದ ಮಹತ್ವ ಗೊತ್ತಿರುವುದಿಲ್ಲ ಒಂದು ವೇಳೆ ಕೊರಡು ನೀರಿನ ತೇವಾಂಶವಿರುವ ಸ್ಥಳದಲ್ಲಿ ಬಿದ್ದರೆ ಅದು ಕೊಳೆತು ಹೋಗುತ್ತದೆ ಆದರೆ ಕಮಲ ಆ ತೇವಾಂಶವನ್ನು ಹೀರಿ ತನ್ನ ಅಸ್ತಿತ್ವದ ಶಕ್ತಿಯಾಗಿ ಮಾಡಿಕೊಂಡು ಕೊಳದ ತುಂಬ ಹರಡುತ್ತದೆ.

ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ?
ದುಂಬಿ ಮತ್ತು ನೋಣ ಒಂದೇ ಜಾತಿಗೆ ಸೇರಿದ ಹಾರುವ ಕೀಟಗಳು ದುಂಬಿ ಪರಿಮಳ ಸೂಸೂವ ಹೂಗಳು ಜಾಡು ಹಿಡಿದು ಹೂಗಳೊಳಗೆ ಮುಚ್ಚಿಕೊಂಡು ಪರಿಮಳದಲ್ಲಿ ಹೊರಳಾಡುತ್ತದೆ. ನೊಣದ ಆಯ್ಕೆ ಬೇರೆಯೇ ಆಗಿರುತ್ತದೆ ಹೂವಿನ ಪರಿಮಳ ಆಸ್ವಾದಿಸುವ ವಿಶೇಷ ಗುಣ,ಎಲ್ಲೆಂದರಲ್ಲಿ ಕೂರುವ ನೊಣಕ್ಕೆ ಬರಲಾರದು. ಹೂವಿನ ಪರಿಮಳ ಸವಿಯುವ ಆಯ್ಕೆಯನ್ನು ಅದು ಮಾಡಲಾರದು ನೊಣದ ಮುಂದೆ ಆಯ್ಕೆಗಳಿದ್ದಾಗಲು ಅದು ಶ್ರೇಷ್ಟವಾದುದನ್ನು ಆಯ್ಕೆ ಮಾಡಲಾರದು.

ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ?

- Advertisement -

ಬಕ ಮತ್ತು ಹಂಸೆ ನೋಡಲು ಒಂದೇ ತರನಾದ ಪಕ್ಷಿಗಳು ಆದರೆ ಅವುಗಳ ಸ್ವಭಾವ ತದ್ವಿರುದ್ಧ. ಬಕ ನೋಡಲು ಹಂಸದ ತರಹವೇ ಇದ್ದರೂ, ತನ್ನ ಉದ್ದವಾದ ಕಾಲುಗಳನ್ನು ಕೊಳದೊಳಗೆ ಇಳಿಬಿಟ್ಟು ಸದಾ ಆಹಾರಕ್ಕೆ ಅರಸುತ್ತಿರುತ್ತದೆ ಅದಕ್ಕೆ ಹಾಲಿನ ರುಚಿ ಗೊತ್ತಾಗುವುದಿಲ್ಲ . ಹಂಸ
ಹಾಲಿನ ರುಚಿಯನ್ನು ಸವಿಯಬಲ್ಲದು. ಕೊಳದಲ್ಲಿ ಹಾಲು ಸುರಿದರೆ , ಹಾಲನ್ನು ಮಾತ್ರ ಹೀರುವ ವಿಶೇಷ ಗುಣ ಹಂಸಪಕ್ಷಿಗಿದೆ.

ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ
ಹೊರಗಣ ಕೋಳಿಗಳೆತ್ತ ಬಲ್ಲವೊ ?

ಮರದಿಂದ ಮರಕ್ಕೆ ಹಾರುತ್ತಾ ವಿಧವಿಧವಾದ ಹಣ್ಣುಗಳನ್ನು ಕಚ್ಚಿ ರುಚಿ ಸವಿಯುವ ಅರಗಿಣಿಗಳು ಮಾತ್ರ ಹಣ್ಣುಗಳ ರಾಜ ಮಾವಿನ ರುಚಿಯ ವಿಶೇಷತೆಯನ್ನು ಗುರುತಿಸಬಲ್ಲದು.
ತಿಪ್ಪೇಗುಂಡಿ ಕೆದರುವ ಕೋಳಿ ಮಾವಿನ ಹಣ್ಣಿನ ರುಚಿಯನ್ನು ಅರಿಯಲಾರದು.

ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ?

ಊಟ ಮಾಡಲು ಸಹಾಯ ಮಾಡುವ ದೇಹದ ಪ್ರಮುಖ ಅಂಗ ಕೈ. ಆದರೆ ಊಟದ ಸವಿಯನ್ನು ಸವಿಯುವ ಅಂಗ ನಾಲಿಗೆ

ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ?
ಗಂಡು ಹೆಣ್ಣಿನ ಸ್ನೇಹ ಪ್ರೇಮದ ಆಪ್ತತೆಯನ್ನು ಯೌವನಾವಸ್ಥೆಯಲ್ಲಿರುವವಳು ಮಾತ್ರ ಬಲ್ಲಳು. ಪ್ರೇಮ ಕಾಮ ಅವು ಹರೆಯದ ಸಹಜ ಭಾವನೆಗಳು.
ಬಾಲ್ಯಾವಸ್ಥೆಯಲ್ಲಿರುವ ಬಾಲಕಿಗೆ ಆ ರೀತಿ ಬಯಕೆ ಮತ್ತು ಭಾವನೆಗಳು ಬರಲಾರವು ಹಾಗಾಗಿ ಬಾಲೆಗೆ
ಗಂಡು ಹೆಣ್ಣಿನ ಮಿಲನದ ಸುಖ ತಿಳಿಯಲಾರದು

ಚಂದ್ರಸೂರ್ಯರಂತರಾಂತರವ ಖೇಚರರು ಬಲ್ಲರಲ್ಲದೆ
ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ?
ಸೌರಮಂಡಲದ ಲ್ಲಿರುವ ಸೂರ್ಯ ಚಂದ್ರರು ಭೂಮಿಯಿಂದ ಮತ್ತು ಪರಸ್ಪರ ಎಷ್ಟು ದೂರದಲ್ಲಿದ್ದಾರೆ ಎನ್ನುವ ಸತ್ಯಾಂಶ , ಅಂತರೀಕ್ಷದಲ್ಲಿ ಸಂಚರಿಸುವ ಗಂಧರ್ವರಿಗೆ ಗೊತ್ತಿರುತ್ತದೆ ಹೊರತಾಗಿ ಭೂಮಿಯಿಂದ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯವಿರುವ ಹದ್ದಿಗೆ ಅಂತರವನ್ನು ತಿಳಿಯುವುದು ಸಾಧ್ಯವಿಲ್ಲ. ಅದು ಎಷ್ಟೇ ಎತ್ತರಕ್ಕೆ ಹಾರಿದರೂ ಸೂರ್ಯ ಚಂದ್ರರನ್ನು ತಲುಪಲು ಸಾಧ್ಯವಿಲ್ಲ.

ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ
ನಿಮ್ಮ ನಿತ್ಯನಿಜೈಕ್ಯರ
ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ
ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ

ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ನಿನ್ನನ್ನು ಅಂದರೆ ಮಹಾಲಿಂಗ ಕಲ್ಲೇಶ್ವರನನ್ನು ಸಾಕ್ಷಾತ್ಕಾರಿಸಿಕೊಂಡ ಶರಣರ ನಿಲುವು ಅವರ ನಿಜ ಮೌಲ್ಯ, ಸಾಧನೆಯ ಪಥ ತುಳಿಯದ ಮೌಲ್ಯ ಅರಿಯದ , ಚೈತನ್ಯ ಮತ್ತು ಚಲನಶೀಲತೆ ಇಲ್ಲದ ಸಂಸಾರವೆಂಬ ಕೊಳದಲ್ಲಿ ಮುಳುಗಿದ ಜಡ ಜೀವಿಗಳಾದ ಸಾಮಾನ್ಯ ಮಾನವರಿಗೆ ತಿಳಿಯಲಾರದು ಮಹಾಲಿಂಗ ಕಲ್ಲೇಶ್ವರನಿಗೆ ಶರಣು ಹೋದವರ ಮೌಲ್ಯವನ್ನು ಮಹಾನುಭಾವರು ಅಂದರೆ ಸಾಧಕರು ಮಾತ್ರ ಅರಿಯಬಲ್ಲರು

ರೂಪ, ಆಕಾರದಲ್ಲಿ ಒಂದೇ ತೇರನಾಗಿ ಇದ್ದ ಮಾತ್ರಕ್ಕೆ ಗುಣ ವಿಶೇಷತೆಗಳು, ಸಾಮರ್ಥ್ಯಗಳು ಮತ್ತು ಆಯ್ಕೆಗಳು ಒಂದೇ ತೆರನಾಗಿ ಇರುವುದಿಲ್ಲ. ಭಿನ್ನತೆ ಮತ್ತು ವಿಶೇಷತೆಗೆ ಅನುಗುಣವಾಗಿ ಅವುಗಳು ಮೌಲ್ಯ ನನ್ನು ಪಡೆದುಕೊಳ್ಳುತ್ತವೆ. ಮೌಲ್ಯವನ್ನು ಕಂಡುಹಿಡಿಯುವುದು ಸಾಮಾನ್ಯರಿಂದ ಸಾಧ್ಯವಿಲ್ಲದ ಕಾರ್ಯ. ಭಿನ್ನತೆಯನ್ನು, ವಿಶೇಷತೆಯನ್ನ ಕಂಡುಹಿಡಿಯುವುದು ಮಹಾನುಭಾವರಿಂದ ಮಾತ್ರ ಸಾಧ್ಯ.

ಉರವೆ ಕುರುಕ್ಷೇತ್ರ, ಶಿರವೆ ಶ್ರೀಪರ್ವತ
ಲಲಾಟವೆ ಕೇದಾರ,
ಭ್ರೂನಾಸಿಕದ ಮದ್ಯವೆ
ವಾರಣಾಸಿ ನೋಡಾ
ಹೃದಯವೇ ಪ್ರಯಾಗ, ಸರ್ವಾಂಗವೆ ಸಕಲತೀರ್ಥಳಾಗಿ
ಮಹಾಲಿಂಗ ಕಲ್ಲೇಶ್ವರನ ಶರಣರ ಸುಳುಹು ಜಗವತ್ಪಾವನ
ಈ ವಚನದಲ್ಲಿ ಕಲ್ಲಯ್ಯ ನವರು ದೇಹದ ಭಾಗಗಳನ್ನು ತೀರ್ಥಕ್ಷೇತ್ರ ಗಳಿಗೆ ಹೋಲಿಸಿದ್ದಾರೆ ಕುರುಕ್ಷೇತ್ರ, ಹಿಮಾಲಯ ಪರ್ವತ, ಕೇದಾರ, ವಾರಣಾಸಿ ಪ್ರಯಾಗ ಮುಂತಾದ ತೀರ್ಥ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡರೆ ಮುಕ್ತಿ ಪ್ರಾಪ್ತಿ, ಪಾಪನಾಶ, ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಈ ಸ್ಥಳಗಳಿಗೆ ಯಾತ್ರೆ ಕೈಗೊಳ್ಳಲು ಎಲ್ಲರಿಂದಲೂ ಸಾಧ್ಯವಿಲ್ಲ. ಅದನ್ನು ಸಾಧ್ಯ ಮಾಡುವ ಬಗೆಯನ್ನು ಶರಣು ಕಲ್ಲಯ್ಯ ತುಂಬಾ ಸರಳಿಕರಣಗೊಳಿಸಿದ್ದಾರೆ ಬಸವಣ್ಣನವರು ದೇಹವೇ ದೇಗುಲ ಎಂದರು ಕಲ್ಲಯ್ಯ ದೇಹವೇ ತೀರ್ಥ ಕ್ಷೇತ್ರವೆಂದು ಬಣ್ಣಿಸಿದ್ದಾರೆ ವಿಶಾಲವಾದ ಎದೆಯ ಭಾಗವೇ ಕುರುಕ್ಷೇತ್ರ. ದೇಹಕ್ಕೆ ಕಳಶಪ್ರಾಯವಾದ ತಲೆ ಶ್ರೀ ಪರ್ವತ
ಹಣೆಯ ಭಾಗವು ಕೇದಾರ ಎರಡು ಹುಬ್ಬುಗಳ ನಡುವೆ ವಾರಣಾಸಿ ಹೃದಯ ಪ್ರಯಾಗ ದೇಹದ ಉಳಿದ ಎಲ್ಲಾ ಅಂಗಗಳೂ ತೀರ್ಥ ಕ್ಷೇತ್ರಗಳು ಎಂದು ಭಾವಿಸಿ ಕಾಯವನ್ನು ಶುದ್ದವಾಗಿ ಇಟ್ಟು ಕೊಂಡು ಕಾಯಕ್ಕೆ ಗೌರವವನ್ನು ಕೊಟ್ಟ ಕಾಯದ ಕಾರ್ಯವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು. ಮಹಾಲಿಂಗ ಕಲ್ಲೇಶ್ವರನ ಶರಣರು ದೇಹವನ್ನು ಪುಣ್ಯ ಕ್ಷೇತ್ರಗಳನ್ನಾಗಿ ಮಾಡಿಕೊಂಡ ಸಾಧಕರು. ಇಂಥ ಸಾಧಕರಿರುವ ಪ್ರದೇಶ ಪಾವನವಾಗಿರುತ್ತದೆ.
ಹಾವಿನಾಳ ಕಲ್ಲಯ್ಯ ನವರ ಈ ವಚನದಲ್ಲಿ ಉನ್ನತ ಸ್ವಯಂ ಪರಿಕಲ್ಪನೆಯ ತತ್ವವನ್ನು ಕಾಣಬಹುದು( High self esteem ) ಈ ರೀತಿಯ ಧನಾತ್ಮಕ ಆಲೋಚನೆಗಳು ಕೊರತೆ,ಕೀಳರಿಮೆಗಳಿಂದ ಹೊರಬಂದು ಆತ್ಮ ಸಾಕ್ಷಾತ್ಕಾರ
ಪಡೆಯಲು ಸಹಾಯಕ ಮತ್ತು ಪ್ರೇರಕವಾಗುತ್ತವೆ.

ಹಾವಿನಾಳ ಕಲ್ಲಯ್ಯನವರು ತಮ್ಮ ಸಮಕಾಲೀನ ವಚನಕಾರರ ವ್ಯಕ್ತಿತ್ವದ ಮಹತ್ವವನ್ನು ಅರಿತುಕೊಂಡು ಅವರ ಸುಪರ್ದಿಗೆ ತಮ್ಮ ದೇಹವನ್ನು ಒಪ್ಪಿಸಿದ್ದಾರೆ ಅವರ ಅಧೀನದಲ್ಲಿ ತನ್ನ ದೇಹದ ಕಾರ್ಯ ಚಟುವಟಿಕೆಗಳು ಸಮೀಕರಣಗೊಂಡು ನಿಯಂತ್ರಿಸಲ್ಪಡುತ್ತದೆ. ಎನ್ನುವುದನ್ನು ತುಂಬಾ ಮಾರ್ಮಿಕ ವಾಗಿ ಈ ಕೆಳಗಿನ ವಚನದಲ್ಲಿ ವಿವರಿಸಿದ್ದಾರೆ

ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು
ಗುರುತ್ವಾಕರ್ಷಣ ಶಕ್ತಿಗೆ ಒಳಪಟ್ಟ ಒಂದು ವಸ್ತು ಅದರ ಸುತ್ತ ಪಥದಲ್ಲಿ ಸುತ್ತುವುದೊ ಅದೇ ರೀತಿ ತಾನು
ಶರಣ ಶಂಕರ ದಾಸಿಮಯ್ಯನವರ ಗುರುತ್ವ ಶಕ್ತಿಗೆ ಸಾಕ್ಷಾತ್ಕಾರಗೊಂಡಿದ್ದೇನೆ ಅವರ ಪ್ರಭಾವ ವಲಯ ಎನ್ನ ಸೂತ್ತ ಹರಡಿಕೊಂಡಿದೆ. ಆ ಶಕ್ತಿಯ ಪ್ರಭಾವಕ್ಕೆ ನಾನು ಒಳಗಾಗಿದ್ದೇನೆ.

ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು
ಶರಣ ಉರಿಲಿಂಗಪೆದ್ದಿ ಕರಸ್ಥಲದ ಇಷ್ಟ ಲಿಂಗದಂತೆ ತನ್ನ ಧ್ಯಾನವನ್ನು ಕೇಂದ್ರಿಕರಿಸಿರುವನು ಮತ್ತು ತನ್ನ ಆಧ್ಯಾತ್ಮಿಕ ಚೈತನ್ಯವನ್ನು ಉನ್ನತಿಕರಿಸುವನು

ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು
ನನ್ನ ಎದೆಯಗೂಡಿನಲ್ಲಿ ಗಟ್ಟಿವಾಳ ಮದ್ದಯ್ಯನು ನೆಲೆಗೊಳ್ಳುವಂತೆ ಸಾಕ್ಷಾತ್ಕರಿಸಿಕೊಂಡಿದ್ದೇನೆ . ತನ್ನ ಸಂವೇದನೆಗಳೆಲ್ಲವು ಮದ್ದಯ್ಯನ
ಅಣತಿಯಂತೆ ಕಾರ್ಯ ತತ್ಪರತೆ ತೋರುತ್ತವೆ

ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು
ಎನ್ನ ಬಾಯಿಯೊಳು ಅಜಗಣ್ಣಯ್ಯನನ್ನ ಸಾಕ್ಷಾತ್ಕಾರ ಪಡೆಸಿಕೊಂಡಿದ್ದೇನೆ ಅಂದರೆ ನನ್ನ ಬಾಯಿಂದ ಹೊರಡುವ ಮಾತುಗಳು ಅಜಗಣ್ಣಯ್ಯನಿಂದ ನಿಯಂತ್ರಿಸಲ್ಪಟ್ಟವುಗಳು.

ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು
ಮುಖದ ಕೋಮಲ ಭಾವದಲ್ಲಿ ನಿಜಗುಣ ದೇವರು ಸಾಕ್ಷಾತ್ಕಾರಗೊಂಡು ನೆಲೆಸಿದ್ದಾರೆ ನಾನು ಹೊರಡಿಸುವ ಮುಖಭಾವದ ಎಲ್ಲಾ ಭಾವನೆಗಳು ನಿಜಗುಣ ದೇವರಿಂದ ನಿಯಂತ್ರಿಸಲ್ಪಟ್ಟಿವೆ

ಎನ್ನ  ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು
ಎನ್ನ ತಲೆಯ ಮೇಲಿನ ಕೂದಲಿನ ಗುಚ್ಚದಲ್ಲಿ ಅನಿಮಿಷ ದೇವರು ನೆಲೆಗೊಂಡು ಅದನ್ನು ನಿಯಂತ್ರಿಸುತ್ತಾರೆ

ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು
ನನ್ನ ನಾಸಿಕದ ಕ್ರಿಯೆಗಳಾದ ಉಸಿರಾಟ ಪ್ರಕ್ರಿಯೆ ಮತ್ತು ವಾಸನೆಯನ್ನು ಗ್ರಹಿಸುವ ಎಲ್ಲ ಕ್ರಿಯೆಗಳ ಮೇಲೆ ಏಕೋ ರಾಮಿ ತಂದೆಯು ನಿಯಂತ್ರಣವನ್ನ ಹೊಂದಿದ್ದಾರೆ

ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು
ಎಂದು ನಾಲಿಗೆಯಿಂದ ಹೊರಡುವ ಎಲ್ಲ ನುಡಿಗಳ ನಿಯಂತ್ರಿಸುವವರು ಪಂಡಿತಾರಧ್ಯರು ನನ್ನ ನಾಲಿಗೆಯು ಅವರ ಅಧೀನಕ್ಕೆ ಒಳಪಟ್ಟಿದೆ

  1. ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು
    ನನ್ನ ಕಣ್ಣುಗಳಿಂದ ನೋಡುವ ನೋಟವು ರೇವಣಸಿದ್ಧ ಸಿದ್ದೇಶ್ವರ ದೇವರಿಂದ ನಿಯಂತ್ರಿಸಲ್ಪಟ್ಟಿದೆ ಕಣ್ಣಿನ ನೋಟದ ಮೇಲಿನ ಹಿಡಿತ ಯಾವುದನ್ನು ನೋಡಬೇಕು ಯಾವುದನ್ನು ನೋಡಬಾರದು ಎನ್ನುವುದನ್ನು ಅವರ ವಶಕ್ಕೆ ನಾನು ಬಿಟ್ಟುಕೊಟ್ಟಿದ್ದೇನೆ

ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು
ನನ್ನ ಪರಿಚಯ ಸ್ಪರ್ಶಜ್ಞಾನದ ಗ್ರಹಿಕೆಯನ್ನು ಸಿದ್ದರಾಮಯ್ಯರು ನಿಯಂತ್ರಿಸುತ್ತಾರೆ ಯಾವುದನ್ನ ಸ್ಪರ್ಶಿಸಬೇಕು ಆ ಸ್ಪರ್ಶದಿಂದ ಎಂತಹ ಜ್ಞಾನವನ್ನು ಪಡೆಯಬೇಕು ಎನ್ನುವುದನ್ನು ಅವರ ಅಧೀನಕ್ಕೆ ನಾನು ಬಿಟ್ಟಿರುವೆ

ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು
ನನ್ನ ಕಿವಿಗಳ ನಿಯಂತ್ರಣವನ್ನು ನಾನು ಮರುಳ ಶಂಕರ ದೇವರೇ ಹಿಡಿತಕ್ಕೆ ಒಪ್ಪಿಸುತ್ತೇನೆ ಯಾವುದನ್ನ ಕೇಳಬೇಕು ಯಾವುದನ್ನು ಕೇಳಬಾರದು ಎನ್ನುವುದು ಅವರೇ ಇಚ್ಚೆಗೆ ಬಿಟ್ಟದ್ದು

ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು
ನಿನ್ನ ಹೃದಯದಲ್ಲಿ ಅಡಕವಾಗಿರುವ ಪ್ರಾಣ ಸೂಕ್ಷತೆಯನ್ನು ನಿಯಂತ್ರಿಸುವವರು ಪ್ರಭುದೇವರು ನನ್ನ ಪ್ರಾಣ ಶಕ್ತಿಯ ನಿಯಂತ್ರಣದ ಅಧಿಕಾರವೋ ಪ್ರಭುದೇವರಿಗೆ ಸೇರಿದ್ದು

ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು

ನನ್ನ ಹುಬ್ಬುಗಳ ಮಧ್ಯದಲ್ಲಿ ಕೇಂದ್ರೀಕೃತವಾಗಿರುವ ಜ್ಞಾನ ದೃಷ್ಟಿ ಚನ್ನಬಸವಣ್ಣನವರ ಅಧೀನಕ್ಕೆ ಒಳಪಟ್ಟಿದೆ ಸುಜ್ಞಾನ ದೊರೆತರೆ ಅದು ಚನ್ನಬಸವಣ್ಣನವರ ಅಧೀನ

ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು
ನನ್ನ ತಲೆಯ ಮೇಲೆ ಇರುವ ಬ್ರಹ್ಮರಂದ್ರ ದಿಂದ ಹೊರಡುವ ದೈವಿ ಬೆಳಕಿಗೆ ಕಾರಣೀಭೂತರು ಸಂಗನಬಸವಣ್ಣ ನನ್ನ ಬ್ರಹ್ಮರಂದ್ರ ಸಂಗನ ಬಸವಣ್ಣನ ಅಧೀನದಲ್ಲಿದೆ
ಬಸವಣ್ಣನವರು ತನ್ನಲ್ಲಿ ಸಮೀಕರಣಗೊಂಡಿದ್ದರಿಂದ ಬ್ರಹ್ಮ ರಂದ್ರದಿಂದ ದಿವ್ಯ ಜ್ಞಾನವನ್ನು ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲು ಸಾದ್ಯವಾಯಿತು.

ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು

ದೇಹದ ಉತ್ತಮ ಅಂಗವೆಂದು ಕರೆಸಿಕೊಳ್ಳುವ ಶಿರವು ಅಂದರೆ ಬೌದ್ದಿಕ ಶಕ್ತಿ ಮಡಿವಾಳಯ್ಯನ ಅಧೀನದಲ್ಲಿದೆ

ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು

ಎನ್ನ ಹಣೆಯ ಭಾಗವು ಸುಡ್ಡಾಳ ಭಾಚರಸರ ಅಧೀನದಲ್ಲಿದೆ

ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು

ನನ್ನ ಪಶ್ಚಿಮ ಭಾಗದ ಕಾರ್ಯ ಚಟುವಟಿಕೆಗಳು ಕಿನ್ನರಿ ಬ್ರಹ್ಮಯ್ಯನಿಂದ ನಿಯಂತ್ರಿಸಲ್ಪಟ್ಟಿವೆ

ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು
ಒಂದೊಂದು ಅಂಗಗಳು ಒಂದೊಂದು ಶರಣರ ಅಧೀನದಲ್ಲಿ ಇದ್ದು ಇನ್ನುಳಿದ ಎಲ್ಲ ಅಂಗಗಳು ಗಣಂಗಗಳ ನಿಯಂತ್ರಣಕ್ಕೆ ಒಳಪಟ್ಟಿವೆ.

ಮಹಾಲಿಂಗ ಕಲ್ಲೇಶ್ವರಾ
ನಿಮ್ಮ ಶರಣರ ಶ್ರೀ ಪಾದಕ್ಕೆ ನಮೋ ನಮೋ ಎನ್ನುರ್ದೆನು

ಮಹಾಲಿಂಗ ಕಲ್ಲೇಶ್ವರ ನಾನು ಶರಣನಾಗಿ ಈ ಎಲ್ಲರ ಅಧೀನಕ್ಕೆ ನನ್ನ ಅಂಗಾಂಗಗಳನ್ನು ಅರ್ಪಿಸಿ ನಿನ್ನ ಪಾದಗಳಿಗೆ ನಮೋ ನಮೋ ಎನ್ನುತ್ತಿದ್ದೇನೆ.

ಈ ವಚನದಲ್ಲಿ ಕಲ್ಲಯ್ಯ ನವರು
ನಾನು ಎಂಬ ಅಹಂ ಭಾವವನ್ನು ತೊರೆದು ನನ್ನೊಳಗೆ ಎಲ್ಲರು, ಎಲ್ಲರೊಳಗೆ ನಾನು ಎನ್ನುವ ಸಮಷ್ಟಿ ಪ್ರಜ್ಞೆಯನ್ನು ಮೂಡಿಸುತ್ತಾರೆ.

ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು
ಎಚ್ಚತ್ತು ಉಳಿದಾದ ಹೊತ್ತಿನಲ್ಲೆಲ್ಲಾ ಪಂಚೇಂದ್ರಿಯಂಗಳ ವಿಷಯಕ್ಕೆ ಹರಿದು
ಅಯ್ಯಾ, ನಿಮ್ಮ ನೆನೆಯಲರಿಯದ ಪಾಪಿಯಯ್ಯಾ
ಅಯ್ಯಾ, ನಿಮ್ಮ ದೆಸೆಯ ನೋಡದ ಕರ್ಮಿಯಯ್ಯಾ
ಮಹಾಲಿಂಗ ಕಲ್ಲೇಶ್ವರಾ, ಅಸಗ ನೀರಡಿಸಿ ಸಾವಂತೆ ಎನ್ನ ಭಕ್ತಿ

ಈ ವಚನದಲ್ಲಿ ಡಾಂಭಿಕ ಭಕ್ತಯ ವಿಡಂಬನೆಯನ್ನು ಕಾಣುತ್ತೇವೆ.ಲೋಕದ ವ್ಯವಹಾರದಲ್ಲಿ ಹಗಲಿನ 12 ತಾಸುಗಳನ್ನ ಮೂರು ಹೊತ್ತು ಊಟದ ಚಿಂತೆಯಲ್ಲಿ ಕಳೆಯುತ್ತೇವೆ. ರಾತ್ರಿ ನಿದ್ದೆಯಲ್ಲಿ ಕಳೆಯುತ್ತೇನೆ ಇನ್ನು ಉಳಿದ ಸಮಯದ ಪಂಚೇಂದ್ರಿಯ ಆಸೆ ಆಕಾಂಕ್ಷೆಗಳ ಪೂರೈಸಲು ಕಳೆದು ಹೋಗುತ್ತದೆ ಹೀಗೆ ದಿನದ ಸಮಯವನ್ನ ವ್ಯರ್ಥ ಮಾಡಿಕೊಳ್ಳುವ ನಾನು ಮಹಾಲಿಂಗ ಕಲ್ಲೇಶ್ವರನನ್ನು ಸ್ಮರಿಸದ ಪಾಪಿ
ಇವೆಲ್ಲವುಗಳನ್ನು ಮೀರಿ ನಿಮ್ಮ ಸನಿಹಕೆ ಬರುವ ಪ್ರಯತ್ನ ಮಾಡಿದವನು ಅಗಸನಂತೆ ನೀರೊಳಗಿದ್ದರೂ ಬಾಯಾರಿ ಬಳಲಿ ಸಾಯುವಂತೆ ನನ್ನ ಭಕ್ತಿ
ಎಂದು ತಮ್ಮನ್ನು ದೂಷಿಸಿಕೊಳ್ಳುತ್ತಾರೆ ತಮ್ಮ ಭಕ್ತಿಯ ಸ್ಥಿತಿಯ ಬಗೆಗೆ ವಿಷಾದಿಸಿಕೊಳ್ಳುತ್ತಾರೆ.

ಹಾವಿನಾಳ ಕಲ್ಲಯ್ಯನವರ ವಚನಗಳನ್ನು ವಿಶ್ಲೇಷಿಸಿದಾಗ
ಸ್ವ ಪ್ರತಿಷ್ಠೆ , ಸ್ವ ಪ್ರಜ್ಞೆ ಉದಾತ್ತತೆ.ಸಮಷ್ಟಿ, ಸಾಮಾಜಿಕ ವಿಡಂಬನೆ ಮತ್ತು ಪ್ರಗತಿಪರ ಚಿಂತನೆಗಳನ್ನು ಕಾಣಬಹುದು.
ಈ ಎಲ್ಲ ವಿಚಾರಗಳು ಓದುಗನಲ್ಲಿ ಆತ್ಮೋನ್ನತಿಯ ಸಾಲು ದೀಪಗಳಾಗಿ ಮಿನುಗುತ್ತವೆ.

ಡಾ. ನಿರ್ಮಲ ಬಟ್ಟಲ

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group