Homeಕವನಗಜಲ್

ಗಜಲ್

ಗಜಲ್

ಏಕಾಂಗಿ ಬೆಂಕಿಯಲಿ ಈ ಬದುಕು
ಬೇಯುತ್ತಿದೆ ಈಗ ನೀನಿರಬೇಕಿತ್ತು
ನಡೆವ ಹೆಜ್ಜೆ ಹೊಸ್ತಿಲಲಿ ನಿಂತು
ಕಾಯುತ್ತಿದೆ ಈಗ ನೀನಿರಬೇಕಿತ್ತು

ಮಗ್ಗುಲು ಬದಲಾಯಿಸುತ್ತ ನಿದ್ದೆ ಇಲ್ಲದ
ಅದೆಷ್ಟೋ ರಜನಿ ಕಳೆದವು
ಹರಿದ ಕಂಬನಿಯಲಿ ದಿಂಬು
ತೋಯುತ್ತಿದೆ ಈಗ ನೀನಿರಬೇಕಿತ್ತು

ಶಿಶಿರದ ಬೋಳು ಮರಕೆ ಗತದ ಚಿಗುರ
ನೆನಕೆಗಳು ಸಹಜವೇ ಸಾಕಿ
ಗೂಡಿನ ಹುಳು ತನ್ನ ಸುತ್ತ ಎಳೆಯ
ನೇಯುತ್ತಿದೆ ಈಗ ನೀನಿರಬೇಕಿತ್ತು
.
ಸ್ವಚ್ಛ ಆಗಸದಲಿ ನಿತ್ಯ ತಾರೆಗಳ ಎಣಿಸುತ
ಸೋಲನು ಒಪ್ಪಿದೆ ದೊರೆಯೆ
ಇರುವ ಭ್ರಮಿಸಿ ಸಂಭ್ರಮಿಸಿ ಈ ಮನ
ನೋಯುತ್ತಿದೆ ಈಗ ನೀನಿರಬೇಕಿತ್ತು

ಏಕತಾನತೆಯ ಬದುಕು ನೀರಸವೆನಿಸಿ
ಭಾರವಾಯಿತು ಸಾಕಿ
ಸ್ಪರ್ಧೆ ಬೆಂಬತ್ತಲಾಗದು ಕಾಮನೆ
ಸಾಯುತ್ತಿದೆ ಈಗ ನೀನಿರಬೇಕಿತ್ತು

ಏರಿಳಿಕೆಯಿಲ್ಲದ ತೂಕದ ಮಾತು ನವ
ರಸವ ದ್ರವಿಸಲಿಲ್ಲ ದೊರೆಯೆ
ನೋವಿಗೂ ನಗುವ ನೆನಪು ಎದೆ
ಮೀಯುತ್ತಿದೆ ಈಗ ನೀನಿರಬೇಕಿತ್ತು

ಕೆರೆ ಪಾಲು ಕೆರೆಗೆ ಸಾಗರಕೆ ಸಮವೆ
ಹೋಲಿಕೆ ಅನೂಹ್ಯ ಅನು
ನೆಲೆ ನಿಲ್ಲದ ಮನ ಬರಿಯ ಓಟವೇ
ಬೀಯುತ್ತಿದೆ ಈಗ ನೀನಿರಬೇಕಿತ್ತು


ಅನಸೂಯ ಜಹಗೀರದಾರ

RELATED ARTICLES

Most Popular

error: Content is protected !!
Join WhatsApp Group