ಮೂಡಲಗಿ: ಬೆಳಗಾವಿಯ ಇಎಸ್‍ಐಸಿ ಆಸ್ಪತ್ರೆ ಕಟ್ಟಡದ ಶಿಥಿಲಾವಸ್ಥೆಯನ್ನು ಪರಿಗಣಿಸಿ, ಕಾರ್ಮಿಕರ ಹಿತದೃಷ್ಟಿಯಿಂದ ಬೆಳಗಾವಿಯಲ್ಲಿ 100 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ ರಾಜ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಇಎಸ್‍ಐಸಿ ನಿಯಮದ ಪ್ರಕಾರ 100 ಹಾಸಿಗೆ ಆಸ್ಪತ್ರೆ ಮಾಡಲು 25 ಕಿ.ಮೀ ವ್ಯಾಪ್ತಿಯಲ್ಲಿ 50000 ಕಾರ್ಮಿಕರಿರಬೇಕು ಬೆಳಗಾವಿಯಲ್ಲಿ 1.28 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕಾರ್ಮಿಕ ವಿಮಾ ನಿಗಮದಡಿ ನೊಂದಣಿಯಾಗಿದ್ದಾರೆ.
ಬೆಳಗಾವಿಯಲ್ಲಿರುವ ರಾಜ್ಯ ಕಾರ್ಮಿಕ ವಿಮಾ ನಿಗಮದ ಆಸ್ಪತ್ರೆ (ಇಎಸ್‍ಐ) ಕೇವಲ 50 ಹಾಸಿಗೆ ಆಸ್ಪತ್ರೆ ಇದೆ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿರುಚಪ್ಪಲಿ ಸಂಸ್ಥೆಯು ಈ ಆಸ್ಪತ್ರೆಯ ಕಟ್ಟಡವನ್ನು ಪರಿಶೀಲಿಸಿ, ಕಟ್ಟಡವನ್ನು ಕೆಡವಲು ಶಿಫಾರಸ್ಸು ಮಾಡಿದೆ ಎಂದರು.
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿಯನ್ನು ಹೊಂದಿದ್ದು, ಈ ಭಾಗದಲ್ಲಿ 100 ಹಾಸಿಗೆಯ ಹೊಸ ಇಎಸ್‍ಐಸಿ ಆಸ್ಪತ್ರೆ ನಿರ್ಮಾಣ ಮಾಡುವುದರಿಂದ 3 ರಾಜ್ಯಗಳ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು. ಸಂಸದರ ಮನವಿಯನ್ನು ಆಲಿಸಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಇದು ಬೆಳಗಾವಿ ಜಿಲ್ಲೆಗೆ ಸಂಬಂದಪಟ್ಟ ಪ್ರಶ್ನೆ ಕೇಳಿರುವುದರಿಂದ ನಾನು ಇದನ್ನು ಪರಿಶೀಲನೆ ಮಾಡಿ ಲಿಖಿತ ಉತ್ತರ ನೀಡುತ್ತೇನೆಂದು ಸಚಿವರು ಉತ್ತರಿಸಿದ್ದಾರೆಂದು ಸಂಸದರು ಮಾಹಿತಿ ಹಂಚಿಕೊಂಡರು.