ಕನ್ನಡ ಸಾಹಿತ್ಯದ ಭುವನ ಕೋಶ- ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ
- ಪುಸ್ತಕದ ಹೆಸರು : ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ
- ಲೇಖಕರು: ಪ್ರೊ. ಡಿ. ವಿ. ಪರಮಶಿವಮೂರ್ತಿ
- ಪ್ರಕಾಶಕರು: ಜಿ. ಎಸ್. ಎಸ್. ಟ್ರಸ್ಟ್, ತುಮಕೂರು
- ಮುದ್ರಣ: ೨೦೨೨ ಪುಟಗಳು : ೯೧೨
- ಬೆಲೆ: ೮೦೦
- ಪ್ರಕಾಶಕರ ಸಂಪರ್ಕವಾಣಿ : ೯೭೩೧೩೯೪೬೧೧
ಕನ್ನಡದ ಮಹಾಕವಿಗಳ ಕಾವ್ಯಗಳನ್ನು ಮುದ್ರಣ ಮಾಧ್ಯಮದಲ್ಲಿ ಇಂಗ್ಲಿಷರು ಪ್ರಕಟಿಸಲು ಪ್ರಾರಂಭಿಸಿದರೂ, ಅವುಗಳನ್ನು ಆಧುನಿಕ ಗ್ರಂಥಸಂಪಾದನಾ ಶಾಸ್ತçದ ಚೌಕಟ್ಟಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದ್ದು ಸ್ವಾತಂತ್ರ್ಯಾನಂತರವೇ ಎಂದು ಹೇಳಬೇಕು. ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಇಂಥ ಕೆಲವು ಮಹತ್ವದ ಪ್ರಾಚೀನ ಕಾವ್ಯ ಗ್ರಂಥಗಳನ್ನು ವಿದ್ವಾಂಸರಿಂದ ಪರಿಷ್ಕರಣೆ ಮಾಡಿಸಿ, ಅವುಗಳಿಗೆ ವಿಸ್ತೃತವಾದ ಪ್ರಸ್ತಾವನೆಯನ್ನು ಬರೆಯಿಸಿ ಪ್ರಕಟಿಸುವ ಮಹಾಕಾರ್ಯ ಮಾಡಿದವು.
ಡಾ. ಆರ್. ಸಿ. ಹಿರೇಮಠ, ಡಾ. ಎಲ್. ಬಸವರಾಜು, ಪ್ರೊ. ದೇವೀರಪ್ಪ, ಡಿ.ಎಲ್.ಎನ್. ಮೊದಲಾದ ಹಿರಿಯ ವಿದ್ವಾಂಸರು ತಮ್ಮ ಗ್ರಂಥ ಸಂಪಾದನೆಗಳಿಗೆ ಬರೆದಿರುವ ಪ್ರಸ್ತಾವನೆಗಳು ಅತ್ಯಂತ ಸುದೀರ್ಘವಾಗಿವೆ. ಆರ್. ಸಿ. ಹಿರೇಮಠ ಅವರ ಕೃತಿಗಳಲ್ಲಂತೂ ನೂರು-ಇನ್ನೂರು-ಮುನ್ನೂರು ಪುಟಗಳ ಪ್ರಸ್ತಾವನೆಗಳನ್ನು ಕಾಣುತ್ತೇವೆ. ಆದರೆ ಆ ಹಿರಿಯ ವಿದ್ವಜ್ಜನರ ಪಾಂಡಿತ್ಯ ಪ್ರತಿಭೆಗಳು ಆಧುನಿಕ ಗ್ರಂಥ ಸಂಪಾದನಾಕಾರರಲ್ಲಿ ಕಾಣುವುದು ವಿರಳ. ಹಿಂದಿನವರು ಸಂಪಾದಿಸಿದ ಕೃತಿಗಳನ್ನೇ ತಮ್ಮ ಹೆಸರಿನಲ್ಲಿ ಪ್ರಕಟಿಸುವ ಕೆಟ್ಟ ಪದ್ಧತಿಗೆ ಇಂದಿನ ಕೆಲವು ವಿದ್ವಾಂಸರು ಜೋತು ಬಿದ್ದಿದ್ದಾರೆ. ಇಂಥ ಸಂಕ್ರಮಣ ಸ್ಥಿತಿಯಲ್ಲಿ ಪೂರ್ವಸೂರಿಗಳ ಪರಂಪರೆಯನ್ನು ಅಕ್ಷರಶಃ ಮುಂದುವರಿಸಿ, ಆಧುನಿಕ ಗ್ರಂಥ ಸಂಪಾದನಾ ಶಾಸ್ತ್ರಕ್ಕೊಂದು ತುರಾಯಿ ಮೂಡಿಸಿದ ಕೀರ್ತಿ ವಿದ್ವಾಂಸರಾದ ಡಾ. ಡಿ. ವಿ. ಪರಮಶಿವಮೂರ್ತಿ ಅವರ ನೂತನ ಗ್ರಂಥ ‘ಲಕ್ಕಣ್ಣ ದಂಡೇಶ ಮತ್ತು ಶಿವತತ್ತ್ವ ಚಿಂತಾಮಣಿ’ ಕೃತಿಗೆ ಸಲ್ಲುತ್ತದೆ.
ಪ್ರೊ. ಡಿ.ವಿ. ಪರಮಶಿವಮೂರ್ತಿ ಅವರು ೧೯೬೦ರಲ್ಲಿ ಎಸ್. ಬಸಪ್ಪನವರಿಂದ ಸಂಪಾದಿತವಾದ ಶಿವತತ್ವ ಚಿಂತಾಮಣಿ ಕೃತಿಯನ್ನು ಓದಿ ಪ್ರಭಾವಿತರಾಗಿ ಆ ಕೃತಿಯ ಕುರಿತು ಐದು ದಶಕಗಳ ಕಾಲ ಪ್ರಕಟಗೊಂಡ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿದ್ದ ಅಪರೂಪದ ಹಸ್ತಪ್ರತಿಯೊಂದನ್ನು ತುಂಬ ಪ್ರಯತ್ನ ಪಟ್ಟು ಶೋಧಿಸಿ, ಶಾಸ್ತ್ರಶುದ್ಧವಾಗಿ ತುಂಬ ಶ್ರಮ ಶ್ರದ್ಧೆಗಳಿಂದ ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
ಪ್ರೊ. ಪರಮಶಿವಮೂರ್ತಿ ಅವರು ಈ ಕೃತಿಗೆ ಮೂರು ನೂರು ಪುಟಗಳ ವಿಸ್ತಾರವಾದ ಪ್ರಸ್ತಾವನೆಯನ್ನು ಬರೆದಿರುವುದು ಸೋಜಿಗಪಡುವ ಸಂಗತಿಯಾಗಿದೆ. ೧೨ನೇ ಶತಮಾನದಲ್ಲಿ ಉದಿಸಿ ಬಂದ ಶರಣ ಸಾಹಿತ್ಯ ಮುಂದೆ ವಿಜಯನಗರ ಅರಸರ ಕಾಲಕ್ಕೆ ಇನ್ನಷ್ಟು ಪರಿಪುಷ್ಟಿಯಾಗಿ ಬೆಳೆದ ಇತಿಹಾಸವನ್ನು ಈ ಕೃತಿಯಲ್ಲಿ ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ವಿಜಯನಗರ- ವಿದ್ಯಾರಣ್ಯ-ಕ್ರಿಯಾಶಕ್ತಿ ಮೊದಲಾದ ಕೆಲವು ಐತಿಹಾಸಿಕ ವಿಷಯಗಳ ಕುರಿತು ಶಾಸನಗಳ ಹಿನ್ನೆಲೆಯಲ್ಲಿ ಹೊಸ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಇಮ್ಮಡಿ ದೇವರಾಯನ ಕಾಲವನ್ನು ಶರಣ ಸಾಹಿತ್ಯದ ಸುವರ್ಣಯುಗವೆಂದು ಗುರುತಿಸುತ್ತ ಇತನ ಆಸ್ಥಾನದಲ್ಲಿ ಅಮಾತ್ಯನಾಗಿದ್ದ ಲಕ್ಕಣ್ಣ ದಂಡೇಶನ ಕುರಿತು ಅನೇಕ ಹೊಸ ವಿಚಾರಗಳನ್ನು ಮೊದಲ ಬಾರಿಗೆ ಇಲ್ಲಿ ತಿಳಿಸಿರುವುದು ಪ್ರೊ. ಪರಮಶಿವಮೂರ್ತಿ ಅವರ ಆಳವಾದ ವಿದ್ವತ್ತು ಪಾಂಡಿತ್ಯ ಶೋಧಗುಣಕ್ಕೆ ನಿದರ್ಶನವೆನಿಸಿದೆ.
ಪ್ರೌಢದೇವರಾಯನ ಕಾಲದಲ್ಲಿದ್ದ ಎಲ್ಲ ಕವಿಗಳ ಸಮಗ್ರ ವಿವರವನ್ನು ನೀಡುವುದರ ಜೊತೆಗೆ ಲಕ್ಕಣ್ಣ ದಂಡೇಶನ ಕೌಟುಂಬಿಕ ವಿವರಗಳನ್ನು ಶಾಸನಗಳ ಹಿನ್ನೆಲೆಯಲ್ಲಿಯೇ ವಸ್ತುನಿಷ್ಠವಾಗಿ ನಿರೂಪಿಸಿದ್ದಾರೆ. ನಂತರ ಶಿವತತ್ವ ಚಿಂತಾಮಣಿ ಕೃತಿಯ ಸ್ವರೂಪ ಕುರಿತು ತಲಸ್ಪರ್ಶಿಯಾಗಿ ವಿವೇಚನೆ ಮಾಡಿದ್ದಾರೆ. ಕಾವ್ಯದ ಒಟ್ಟು ಸಾರವನ್ನು ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ಕೊಟ್ಟಿದ್ದಾರೆ.
ಲಕ್ಕಣ್ಣ ದಂಡೇಶನಿಗೆ ಸಂಬಂಧಿಸಿದ ೫೦ ಶಾಸನಗಳ ಪಾಠವನ್ನು ಕೊಟ್ಟಿರುವುದು ಅಧ್ಯಯನಾಸಕ್ತರಿಗೆ ತುಂಬ ಉಪಯುಕ್ತವಾಗಿದೆ. ಕರ್ನಾಟಕ-ತಮಿಳುನಾಡು ಉಭಯ ರಾಜ್ಯಗಳಲ್ಲಿ ಲಕ್ಕಣ್ಣ ದಂಡೇಶನ ೫೦ ಶಾಸನಗಳನ್ನು ಗುರುತಿಸಿದ್ದು ಪರಮಶಿವಮೂರ್ತಿ ಅವರ ಸಂಶೋಧನಾ ವಿಚಕ್ಷಣತೆಗೆ ಸಾಕ್ಷಿ ಎನಿಸಿದೆ.
ಕನ್ನಡದಲ್ಲಿ ವಿಶ್ವಕೋಶ ಮಾದರಿಯ ಕೃತಿಗಳನ್ನು ಗಮನಿಸಿದಾಗ, ನಿಜಗುಣರ ವಿವೇಕ ಚಿಂತಾಮಣಿ, ಕೆಳದಿ ಬಸವ ಭೂಪಾಲನ ಶಿವತತ್ವ ರತ್ನಾಕರ ಕೃತಿಗಳ ಜೊತೆಗೆ ಅವಶ್ಯವಾಗಿ ಸೇರಿಸಬೇಕಾದುದು ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ. ಶಿವತತ್ವ ಚಿಂತಾಮಣಿ ಕೃತಿಯ ಕರ್ತೃ ಲಕ್ಕಣ್ಣ ದಂಡೇಶ. ಇವನು ವಿಜಯನಗರದ ದೊರೆ ಪ್ರೌಢದೇವರಾಯನ ಆಳಿಕೆಯಲ್ಲಿ (೧೪೧೯-೧೪೪೬) ಅವನ ಮಂತ್ರಿಯಾಗಿಯೂ ಆಪ್ತ ಮಿತ್ರನಾಗಿಯೂ ಇದ್ದನು. ಅನೇಕ ಶಾಸನಗಳು ಈ ಅಂಶವನ್ನು ಸ್ಥಿರ ಪಡಿಸಿವೆ. ಶಿವತತ್ವ ಚಿಂತಾಮಣಿಯಲ್ಲಿ ೨೧೨೧ ವಾರ್ಧಿಕ ಷಟ್ಪದಿಗಳಿವೆ. ಪ್ರತಿಪದ್ಧವೂ ‘ವಿಮಲ ಚರಣಾಂಬುಜಕ್ಕೆ ಶರಣು’ ಎಂದು ಮುಗಿಯುವುದು ಶತಕಗಳ ಪದ್ಧತಿಯನ್ನು ನೆನಪಿಗೆ ತರುತ್ತದೆ. ಇದರಲ್ಲಿ – ನಿತ್ಯಾನಿತ್ಯವಸ್ತು ವಿವರಣ, ಸಕಲ ನಿಷ್ಕಲ ವಿಚಾರ, ಶಿವನ ೨೫ ಲೀಲೆಗಳು, ಭುವನಕೋಶ, ಶಿವಲೋಕ ವರ್ಣನೆ, ಶಿವನಂದೀಶ ಸಂವಾದ, ಬಸವ ಚರಿತ, ಗಣಪ್ರಶಂಸೆ, ಧರ್ಮಾಧರ್ಮ ವಿವರಣ, ಪಂಚಾಕ್ಷರೀ ಭಸಿತ ರುದ್ರಾಕ್ಷಿಗಳ ಮಹಾತ್ಮ ಲಿಂಗಧಾರಣ, ಶಿವಪೂಜಾವಿಧಿ, ಪಾದೋದಕ ಪ್ರಸಾದ ಮಹಿಮೆ, ಶಿವಾಧಿಕ್ಯ, ಮಾಹೇಶ್ವರಾಚರಣೆ, ಷಟ್ಸ್ಥಲ, ಇವೇ ಮುಂತಾದ ವಿಷಯಗಳು ಪ್ರತಿಪಾದಿತವಾಗಿವೆ. ‘ಇದು ಪರಮ ನಿರ್ವಾಣ ಪರಿಪದವೆನಿಪ ಶಾಂಭವೀಯ ಯೋಗದ ಸೂತ್ರ’ ಎಂದು ಗ್ರಂಥದ ವಿಷಯ ನಿರೂಪಣೆಯ ಬಗೆಗೆ ಹೇಳಿದ ಕವಿಯ ಮಾತು, ಹಾಗೂ ಅದರ ಹೆಸರು, ಗ್ರಂಥದಲ್ಲಿ ವೀರಶೈವ-ಲಿಂಗಾಯತ ತತ್ವ ಪ್ರತಿಪಾದನೆಗೆ ಪ್ರಾಧಾನ್ಯವಿದೆಯೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಕೃತಿ, “ವೀರಶೈವ-ಲಿಂಗಾಯತಕ್ಕೆ ಸಂಬಂಧಿಸಿದ್ದು. ಇದರಲ್ಲಿ ಬಾರದ ತಾತ್ತ್ವಿಕ ಮತ್ತು ಚಾರಿತ್ರಿಕ ವಿಷಯವಿಲ್ಲ.
ವೀರಶೈವ-ಲಿಂಗಾಯತ ವಿಶ್ವಕೋಶವನ್ನು ಒಂದೇ ಗ್ರಂಥದಲ್ಲಿ ಒದಗಿಸಿಕೊಡಬೇಕೆಂಬ ಹೇತು ಇದಕ್ಕೆ ಪ್ರೇರಕವಾಗಿದೆ. “ಶಿವತತ್ವ ಚಿಂತಾಮಣಿ’ ಎಂಬ ಹೆಸರೂ ಸಾರ್ಥಕವಾಗಿದೆ. ಲಕ್ಕಣ್ಣನಲ್ಲಿ ಚರಿತ್ರಕಾರ ಕವಿಯ ಶಕ್ತಿಯಿದೆ. ಗುಬ್ಬಿಯ ಮಲ್ಲಣಾರ್ಯನ `ವೀರಶೈವಾಮೃತ ಪುರಾಣ’ ಕೆಲವು ವಿಷಯಗಳಲ್ಲಿ ಇದಕ್ಕೆ ಋಣಿಯಾಗಿದೆ ಎಂಬುದು ಗಮನಾರ್ಹ. ಲಕ್ಕಣ್ಣ ದಂಡೇಶನು ತನ್ನ ಕೃತಿಯಲ್ಲಿ ೧೮ ವೀರಶೈವ ಪುರಾಣ ಲಕ್ಷಣಗಳನ್ನು ವಿವರಿಸಿದ್ದು, “ವೀರತಶೈವ ಪುರಾಣ ಪ್ರವರ್ತಕ’ ಎಂಬ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಗುರುರಾಜ ಚಾರಿತ್ರದ ಸಿದ್ಧನಂಜೇಶನು ಲಕ್ಕಣನ ಕೃತಿಯನ್ನು ‘ಶಾಸ್ತ್ರ’ ಎಂದೇ ಗೌರವಿಸಿದ್ದಾನೆ.
ಅನುಬಂಧದಲ್ಲಿ ನೂತನ ಗಣಂಗಳ ವಿವರ, ಪದಕೋಶ ಮತ್ತು ಸುಂದರ ವರ್ಣಚಿತ್ರಗಳನ್ನು ಪ್ರಕಟಿಸಿದ್ದು ತುಂಬ ಔಚಿತ್ಯಪೂರ್ಣವಾಗಿದೆ. ವಿಜಯನಗರ ಅರಸರ ಕಾಲದ ಸಾಂಸ್ಕೃತಿಕ ಚರಿತ್ರೆಯನ್ನು ಅಧ್ಯಯನ ಮಾಡುವ ಯಾರೇ ಆದರೂ ಈ ಕೃತಿಯನ್ನು ಗಮನಿಸಿಯೇ ಮುಂದೆ ಹೋಗಬೇಕು. ಅಷ್ಟರ ಮಟ್ಟಿಗೆ ಒಂದು ಮೌಲಿಕ ಆಕರ ಕೃತಿಯಾಗಿ ರೂಪುಗೊಂಡಿದೆ.
ಒಟ್ಟಾರೆ, ಡಾ. ಪರಮಶಿವಮೂರ್ತಿ ಅವರ ಅಪಾರ ತಾಳ್ಮೆ-ಸಹನೆಯಿಂದ, ಅನನ್ಯವಾದ ಪಾಂಡಿತ್ಯ-ಪ್ರತಿಭೆಯ ಪರಿಪಾಕದಲ್ಲಿ ಅರಳಿನಿಂತ ಅಪರೂಪದ ಕೃತಿಯಾಗಿದೆ. ಇಂದು ಸಂಶೋಧನೆ ವಿದ್ವತ್ತಿನ ಕೆಲಸಗಳು ಕಡಿಮೆಯಾಗುತ್ತಿವೆ ಎಂಬ ಕೊರಗಿನಲ್ಲಿರುವಾಗ ಇಂಥದೊಂದು ಕೃತಿ ರಚನೆಯಾದುದು ಕನ್ನಡ ಭಾಷೆ ಸಂಸ್ಕೃತಿಗಳಿಗೆ ಇನ್ನೂ ಸಾವಿರ ವರ್ಷ ಸಾವಿಲ್ಲವೆಂಬುದನ್ನು ದೃಢಪಡಿಸುತ್ತದೆ.
ಪುಸ್ತಕ ಪ್ರಕಾಶಕರ ಕುರಿತು ಒಂದು ಮಾತನ್ನು ಮುಖ್ಯವಾಗಿ ಇಲ್ಲಿ ಹೇಳಲೇಬೇಕು. ಒಟ್ಟು ೯೧೨ ಪುಟಗಳ ಈ ಬೃಹತ್ ಗ್ರಂಥವನ್ನು ಸಾಹಿತ್ಯದ ಮೇಲಿನ ಪ್ರೀತಿಯಿಂದ ಪ್ರಕಟಿಸಿದವರು.
ಜಿ.ಎಸ್.ಎಸ್. ಟ್ರಸ್ಟ್ ಸ್ಥಾಪಕರಾದ ಜಿ. ಎಸ್. ಪ್ರಸನ್ಕುಮಾರ. ಇವರ ವಿದ್ವತ್ ಪ್ರೀತಿಗೆ ಸಕಲ ಕನ್ನಡಿಗರು ಕೃತಜ್ಞರಾಗಬೇಕು. ನ್ಯಾಯವಾದಿಗಳಾದ ಪ್ರಸನ್ ಕುಮಾರ ಅವರು ತಮ್ಮ ದುಡಿಮೆಯ ಒಂದು ಭಾಗವನ್ನು ಇಂಥ ಸಾಹಿತ್ಯ ಸೇವಾಕಾರ್ಯಗಳಿಗೆ ವಿನಯೋಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಜಿ. ಎಸ್. ಪ್ರಸನ್ಕುಮಾರ ಅವರು ಈ ಕೃತಿಯನ್ನು ಸಾಹಿತ್ಯ ಸಂಸ್ಕೃತಿಗಳ ಮೇಲಿನ ಪ್ರೀತಿ ಕಾರಣವಾಗಿ ಪ್ರಕಟಿಸಿದ್ದಾರೆ. ಇಂಥ ಉದಾರ ಮಹನೀಯರ ಪ್ರೇರಣೆ ಪ್ರೋತ್ಸಾಹಗಳಿಂದ ಕನ್ನಡ ಸಾರಸ್ವತ ಪ್ರಪಂಚ ಸಿರಿವಂತಗೊಳ್ಳುವುದರಲ್ಲಿ ಸಂದೇಹವಿಲ್ಲ.
ಅನೇಕ ವರ್ಷಗಳ ತಪಸ್ಸಿನ ಫಲವೆಂಬಂತೆ ಧರ್ಮ-ಸಂಸ್ಕೃತಿ-ರಾಜಕೀಯ ಇತಿಹಾಸಗಳನ್ನು ಒಳಗೊಂಡ ಒಂದು ಕಾಲಘಟ್ಟದ ಚರಿತ್ರೆಯನ್ನು ಪ್ರೀತಿಯಿಂದ ದಾಖಲಿಸುವ ಪ್ರಯತ್ನ ಸ್ತುತ್ಯಾರ್ಹವಾದುದು. ಈ ವರ್ಷದ ಸರ್ವಶ್ರೇಷ್ಠ ಕೃತಿಗಳಲ್ಲಿ ಈ ಕೃತಿಯು ಅಗ್ರಗಣ್ಯ ಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲ. ಇಂಥ ಮೌಲಿಕ ದಾಖಲಾರ್ಹ ಕೃತಿಯನ್ನು ಸಮಸ್ತ ಕನ್ನಡಿಗರಿಗೆ ನೀಡಿದ ಡಾ. ಡಿ. ವಿ. ಪರಮಶಿವಮೂರ್ತಿ ಅವರಿಗೆ ಅನಂತ ವಂದನೆ-ಅಭಿನಂದನೆಗಳು.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧