spot_img
spot_img

ಎನ್ನ ಕರಸ್ಥಲವೇ ಬಸವಣ್ಣನಯ್ಯ ಅಲ್ಲಮಪ್ರಭುಗಗಳ ಅನುಯಾಯಿ ಶರಣ ಗಜೇಶ ಮಸಣಯ್ಯ

Must Read

- Advertisement -

ಎನ್ನ ಕರಸ್ಥಲವೇ ಬಸವಣ್ಣನಯ್ಯ

ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ
ಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ
ಮಹಾಲಿಂಗ ಗಜೇಶ್ವರ
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.
ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7

ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡನು ಮಸಣಯ್ಯ ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .

- Advertisement -

ಎನ್ನ ಕರಸ್ಥಲವೇ ಬಸವಣ್ಣನಯ್ಯ


ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .
ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ ಗಜೇಶ ಮಸಣಯ್ಯ.

ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ.

- Advertisement -

ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ )

ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಜಂಗಮವಾಗಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ.

ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ


ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು.

ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,


ಇಷ್ಟಲಿಂಗ ಬಸವಣ್ಣ ಪ್ರಾಣಲಿಂಗ ಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು.

ಇಷ್ಟಲಿಂಗವೆಂಬುದು ಅರಿವಿನ ಕುರುಹು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರ
ಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು.

ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ


ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು ಮನವನ್ನು ಭಾವವನ್ನು ಶುದ್ಧ ಮಾಡುವ
ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲು
ಅಣಿಯಾಗುವ ಉಪಕ್ರಮ ಮಾತ್ರ. ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.

ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ.

ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.


ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರು
ತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.

ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟಾದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅಂತಹ ಎತ್ತರದ ನಿಲುವನ್ನು ಕಾಣಲು ಸಾಧ್ಯ


ಡಾ.ಶಶಿಕಾಂತ ಪಟ್ಟಣ, ಪುಣೆ

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group