ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ವಿಶೇಷ ಉಪನ್ಯಾಸ ಮಾಲೆಯನ್ನು ದಿ.28-01-2024 ರಂದು ಜಯಲಕ್ಷ್ಮೀಪುರಂನ ಸತ್ಯಸಾಯಿಬಾಬಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಚಿಂತಕ, ವಿಮರ್ಶಕರು ಆದ ಬಿ.ಮಹೇಶ್ ಹರವೆ ರವರು ವಿಮಲಕೀರ್ತಿ ನಿರ್ದೇಶ ಕುರಿತು ಮಾತನಾಡಿ, ಬೌದ್ಧ ಸಾಹಿತ್ಯದಲ್ಲಿ ತನ್ನದೆಯಾದ ಮಹತ್ವ ಪಡೆದಿರುವ ಈತ ಅಂದಿನ ವೈಶಾಲಿ ನಗರದ ಗಣ್ಯ ಶ್ರೀಮಂತ. ಬುದ್ಧ ಗುರುವಿನ ಸಮಕಾಲೀನ, ವಿಮೋಚನಾ ಕೌಶಲ್ಯದ ಮೂಲಕ ಬೌದ್ಧ ಗುರುವಿನ ಚಿಂತನೆಗಳನ್ನು, ನಾಗರೀಕರನ್ನು ಒಳಗೊಂಡಂತೆ ಅನೇಕರಿಗೆ ಹಾಗೂ ರಾಜಮಹಾರಾಜರಿಗೆ ತಿಳಿಸಿದವನು. ಇವನ ಮಹತ್ವವಾದ ಉದ್ದೇಶ ಎಲ್ಲ ಜೀವಿಗಳು ಸಂತಸದಿಂದ ಇರುವ ಜಗತ್ತನ್ನು ಕಟ್ಟುವುದೇ ಆಗಿತ್ತು. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯು ಸ್ವಾತಂತ್ರಕ್ಕೆ ಧಕ್ಕೆಯಾಗದೆ, ಪರಾವಲಂಬಿಗಳು ಆಗದಂತೆ ಸಹಾನುಭೂತಿಯಿಂದ ಹೇಗಿರಬೇಕೆಂದು ವಿಮಲಕೀರ್ತಿ ಚಿಂತಿಸಿದ್ದಾನೆ. ಈತ ಸತ್ಯ, ಸ್ನೇಹಪರತೆ, ನಿರ್ಮೋಹಗಳಿರಬೇಕೆಂದು ಆಶಿಸುತ್ತಾನೆ. ವಿಮಲಕೀರ್ತಿಯ ಬಹಳ ಮುಖ್ಯವಾದ ಅಂಶ ಧರ್ಮ ಎಲ್ಲ ಪ್ರಜ್ಞೆಯ ಆಚೆಗಿದೆ. ಅದು ಯಾವುದನ್ನು ಅವಲಂಭಿಸುವುದಿಲ್ಲ, ಅದು ಸಹಜವಾಗಿದೆ ಎಂದು ತನ್ನ ಕೃತಿಗಳಲ್ಲಿ ವಿವರಿಸಿದ್ದಾನೆ. ಇವನು ಬುದ್ಧ ಗುರುವಿನ ಶಿಷ್ಯರು ಬೋಧಿಸುವ ಸ್ಥಳಗಳಲ್ಲಿ ಅವರನ್ನು ಭೇಟಿಯಾಗಿ ಧರ್ಮದ ಸೂಕ್ಷ್ಮತೆಯನ್ನು ತಿಳಿಸುತ್ತಾನೆ. ಕನ್ನಡದಲ್ಲಿ ನೋಡುವುದಾದರೆ ಅಲ್ಲಮ ಮತ್ತು ಬಸವಣ್ಣನವರ ವ್ಯಕ್ತಿತ್ವದ ಸಂಗಮದಂತೆ ವಿಮಲಕೀರ್ತಿ ಎಂದು ತಿಳಿಸಿದರು.
ಕನ್ನಡದಲ್ಲಿ ನಟರಾಜ್ ಭೂತಾಳ್ ರವರು ಅಲ್ಲಮ ಹಾಗೂ ವಿಮಲಕೀರ್ತಿಯ ಸ್ವಾಮ್ಯತೆಯನ್ನು ಗುರುತಿಸಿದ್ದಾರೆ. ಇದನ್ನು ಹೊರತುಪಡಿಸಿ ಎಲ್ಲಿಯೂ ವಿಮಲಕೀರ್ತಿಯ ಬಗ್ಗೆ ಚರ್ಚೆಗಳು ಕಂಡುಬಂದಿಲ್ಲ. ಮಹೇಶ್ ಹರವೆ ರವರ ವಿಮಲಕೀರ್ತಿಯ ನಿರ್ದೇಶ ಭಾವಾನುವಾದ ಸ್ಥೂಲವಾಗಿ ಕನ್ನಡದಲ್ಲಿ ಪರಿಚಯಿಸುತ್ತದೆ ಎಂದು ತಿಳಿಸಿದರು. ವಿಮಲಕೀರ್ತಿ ಹಾದಿ ತಪ್ಪಿದವರನ್ನು ಸರಿ ಹಾದಿಗೆ ಪರಿವರ್ತಿಸುವಲ್ಲಿ ಯಶಸ್ಸು ಕಂಡರು. ಬೌದ್ಧ ತತ್ವಗಳು ಹೇಗೆ ವಿಚಾರ ಹಾಗೂ ಜ್ಞಾನ ಪ್ರಖರತೆಗೆ ಒಳಗೊಂಡಿತ್ತೋ ಹಾಗೆಯೇ ವಿಮಲಕೀರ್ತಿಯು ಅದನ್ನು ಅನುಸರಿಸಿದರು. ಅಕ್ಷರ ಬಲ್ಲವನ ಟೊಳ್ಳುತನವನ್ನು ಬಯಲಿಗೆ ಎಳೆದು ಹೆಣ್ಣನ್ನು ನಿಸರ್ಗಕ್ಕೆ ಹೋಲಿಸಿರುವುದನ್ನು ನೋಡಬಹುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷರಾದ ನೀ.ಗೂ.ರಮೇಶ್ ವಹಿಸಿ ಮಾತನಾಡಿ ಎಲ್ಲರಿಗೂ ಶುಭ ಹಾರೈಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಬಾಲಸುಬ್ರಮಣ್ಯಂ, ನಿವೃತ್ತ ಪ್ರಾಂಶುಪಾಲರಾದ ಮಾದಯ್ಯ, ಖಜಾಂಚಿಗಳಾದ ಕೆಂಪಯ್ಯ, ಉಪಾಧ್ಯಕ್ಷರಾದ ಡಾ.ಮಾಲತಿ, ಡಾ.ಉಮೇಶ್ ಬೇವಿನಹಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಉಪನ್ಯಾಸಕರಾದ ಮಹದೇವು ಪ್ರಾರ್ಥಿಸಿದರೆ, ಸುನೀತ ನಿರೂಪಿಸಿದರು, ಇಂದ್ರ ವಂದನಾರ್ಪಣೆ ಸಲ್ಲಿಸಿದರು