ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ ಮಾಡ್ಕೊಂಡು ಇರು ಆದ್ರೆ ನೀನು ನನ್ನ ಮಾತೆಲ್ಲಿ ಕೇಳ್ತಿಯಾ?? ನಾನು ಆಫಿಸಿಗೆ ಹೋಗೋದನ್ನೆ ಕಾಯ್ತಾ ಇರ್ತೀಯಾ ಯಾಕಮ್ಮ ಹೀಗ್ ಮಾಡಿ ನನ್ನ ಜೀವ ತಿಂತಿಯಾ ಅಂದ ಮಗನತ್ತ ನೋಡಿದ ಸಾವಿತ್ರಮ್ಮಳ ಕಣ್ಣುಗಳು ಅವಳಿಗೆ ತಿಳಿಯದಂತೆಯೇ ಮಂಜಾದವು…
ತನ್ನಂತೆಯೇ ಪಕ್ಕದ ಮನೆಯಲ್ಲಿ ಇರುವ ಮತ್ತೊಬ್ಬ ವಿಧವೆ ವಿಶಾಲಾಕ್ಷಮ್ಮನ ಜೊತೆಗೆ ಮಾತಿಗೆ ಕುಳಿತರೆ ಗತಕಾಲದ ವೈಭವಗಳ ನೆನಪು ಹರಡಿಕೊಳ್ಳುತ್ತ ಹೋಗಿ ಸಮಯ ಕಳೆದದ್ದೇ ಗೊತ್ತಾಗದ ಆ ಹೆಂಗಸು ಇನ್ನೇನು ತಾನೆ ಮಾಡಲು ಸಾಧ್ಯ??
ಹೇ ದೋಸ್ತ ಎಷ್ಟ ಸಲಾ ಹೇಳಿನಿ ಆ ಮಾದ್ಯಾನ ಜೋಡಿ ದೋಸ್ತಿ ಮಾಡಬ್ಯಾಡ ಅಂತ.ನೀ ನೋಡಿದ್ರ ನಮನ್ ಕೆರ್ ಮಾಡಲ್ದ್ ಬರೆ ಅವನ ಜೋಡಿನ ಇರ್ತಿ ಪಾ ಅಂದ ಸುರೇಶನ ಮುಖ ನೋಡಿದ ಮಹೇಶ ತಣ್ಣಗಿನ ನಗು ಬೀಸಾಕುವ ಪುಟ್ಟ ಪ್ರಯತ್ನ ಮಾಡಿದನಾದರೂ ಯಾಕೋ ಅವನ ತುಟಿಗಳು ಅಗಲವಾಗಲೇ ಇಲ್ಲ…
ಹೀಗೆ ಎಷ್ಟೋ ಸಲ ಅಲ್ಲಿಗೆ ಹೋಗಬೇಡ,ಅವರೊಂದಿಗೆ ಬೆರೆಯಬೇಡ,ಇದನ್ನ ಮಾಡಬೇಡ,ಅದನ್ನ ನೋಡಬೇಡ ಅಂತ ಹತ್ತು ಹಲವು ಉಪದೇಶಗಳು ಉಚಿತವಾಗಿ ಬಂದರೂ ಕೂಡ ಯಾಕೋ ನಮ್ಮ ಮಕ್ಕಳಿಂದ ಹಿಡಿದು ಮನೆಯ ಹಿರಿಯರ ತನಕ ಮತ್ತು ಆಪ್ತರೆಂದುಕೊಂಡ ಒಂದಷ್ಟು ಗೆಳೆಯ ಗೆಳತಿಯರತನಕ ಯಾರೂ ಕೂಡ ನಮ್ಮ ಮಾತು ಕೇಳುವದೇ ಇಲ್ಲ..
ರೆಸಾರ್ಟುಗಳಲ್ಲಿ ಡೇ ಔಟ್ ,ನೈಟ್ ಕ್ಲಬ್ ಮತ್ತು ಪಬ್,ಕ್ಯಾಸಿನೋ,ಫೈರ್ ಕ್ಯಾಂಪ್, ಸೇರಿದಂತೆ ಒಂದಷ್ಟು ಒನ್ ಡೇ ಟೂರ್,ತೀರ್ಥ ಯಾತ್ರೆ,ಪ್ಲೈ ಆನ್ ಎರ್ ನಿಂದ ಹಿಡಿದು ಸಮುದ್ರದ ಆಳದ ಸ್ಕೂಬಾ ಡೈವಿಂಗ್,ಬೋಟಿಂಗ್,ಮತ್ತು ರ್ಯಾಪ್ಟಿಂಗ್, ಲಾಂಗ್ ಡ್ರೈವ್, ಜಿಪ್ ಲೈನ್ ಜಂಪಿಂಗ್,ಟ್ರೆಕ್ಕಿಂಗ್,ಜಂಗಲ್ ಸಫಾರಿ ಹಾಗೂ
ಮೆಡಿಟೇಷನ್ ಹೀಗೆ ಏನು ಮಾಡಿದ್ರೂ ಕೂಡ ಈಗೀಗ ಮನಸಿಗೆ ನೆಮ್ಮದಿ ಇಲ್ಲ ಅಂತ ಎಲ್ಲರಿಗೂ ಅನ್ನಿಸುತ್ತಲೇ ಇರುತ್ತದೆ.
ಯಾಕೆಂದರೆ ನಾವು ನಮ್ಮವರನ್ನು ಪ್ರೀತಿಸುವ ಮತ್ತು ಅವರ ಬಗ್ಗೆ ಕಾಳಜಿ ವಹಿಸುವ ಭರದಲ್ಲಿ ನಮಗೆ ತಿಳಿಯದಂತೆಯೇ ಅವರ ಮೇಲೆ ಒಂದಷ್ಟು ಒತ್ತಡಗಳನ್ನ ಹಾಕುತ್ತಲೇ ಇರುತ್ತೇವೆ.ಎಲ್ಲರಿಗೂ ತಮ್ಮ ಬಗ್ಗೆಯೂ ಕೇರ್ ಮಾಡುವ ಒಂದು ಜೀವ ಇರಬೇಕು ಅನ್ನಿಸಿದರೂ ಕೂಡ ಅತಿಯಾದರೆ ಅಮೃತವೂ ವಿಷ ಅನದನುವ ಹಾಗೆ ಎಷ್ಟೋ ಸಲ ಅತಿಯಾದ ಕಾಳಜಿಯೂ ರೇಜಿಗೆ ಹುಟ್ಟಿಸುತ್ತದೆ.
ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಅಡಲ್ಟ್ಸ್ ಓನ್ಲಿ ಅನ್ನುವ ಗುಂಪುಗಳಿಂದ ಹಿಡಿದು ಫಾರ್ ವರ್ಕಿಂಗ್ ವುಮೆನ್ಸ್, ಮತ್ತು ಓಲ್ಡ್ ಯೇಜ್ ಗ್ರೂಪ್ ಯಾಂಡ್ ವಿಡೋಸ್ ಓನ್ಲಿ ಅನ್ನುವಂತಹ ಹಲವಾರು ಸಂಘಟನೆಗಳು ಹುಟ್ಟಿಕೊಳ್ಳಲು ಇರುವ ಪ್ರಮುಖ ಕಾರಣವೇ ಇದು.
ಅಪ್ಪ ನಿಂಗೆ ವಯಸ್ಸಾಯ್ತು ಹೊರಗಡೆ ಹೋಗಬೇಡ ಮಗನೇ ನೀನು ಇನ್ನೂ ಚಿಕ್ಕವನು ಇದನ್ನೆಲ್ಲ ತಿನಬೇಡ ಅಂತೆಲ್ಲ ಹಾಕುವ ರಿಸ್ಟ್ರಿಕ್ಷನ್ನುಗಳು ನಮ್ಮವರಲ್ಲಿ ನಮ್ಮ ಬಗ್ಗೆ ಒಂದಷ್ಟು ಜಿಗುಪ್ಸೆ ಹುಟ್ಟಿಸುತ್ತವೆಯೇ ಹೊರತು ಅವರಿಗೆ ನಾವು ಮಾಡುವ ಕಾಳಜಿಗಳು ಯಾವವೂ ಸರಿ ಅನ್ನಿಸುವದಿಲ್ಲ.
ಯಾಕೆಂದರೆ ಮನುಷ್ಯ ಮೂಲತಹ ಸಂಘ ಜೀವಿ ಆದ್ದರಿಂದ ಒಂಟಿ ಮನೆಗಳಲ್ಲಿ ಬದುಕುವದು ಕಷ್ಟ ಅನ್ನಿಸುವದರ ಜೊತೆಗೆ ಗಲ್ಲಿಯಲ್ಲಿ ಹೊಸದಾಗಿ ಬಾಡಿಗೆ ಬಂದ ಕುಟುಂಬದವರಾದರೂ ನಮ್ಮ ಜೊತೆಗೆ ಸ್ನೇಹ ಸಲುಗೆಯಿಂದ ಮಾತನಾಡಬಹುದಾ ಅಂತ ಅದೆಷ್ಟೋ ಹಿರಿಯ ಜೀವಗಳು ನಿರೀಕ್ಷೆ ಹೊತ್ತು ಕಾಯುವ ದಿನಗಳಿವು.
ಆರಂಭದಲ್ಲಿ ಅಪ್ಪ ಅಮ್ಮನನ್ನ ಮನೆಯಿಂದ ಫರ್ಲಾಂಗು ದೂರದ ಕಿರಾಣಿ ಅಂಗಡಿಗಳಿಂದ ಬೆಳಿಗ್ಗೆ ಬೇಗ ಎದ್ದು ಹಾಲು ತರುವದಕ್ಕೆ,ಮತ್ತು ತಾವಿನ್ನೂ ಹಾಸಿಗೆಯಲ್ಲಿ ಮಲಗಿರುವಾಗಲೇ ಟೀ ಮಾಡಿ ಎಚ್ಚರಿಸುವದಕ್ಕೆ,ಸ್ನಾನದ ನೀರು ಕಾಯಿಸಿ ಬಕೇಟಿಗೆ ಸುರಿದು ಟವೆಲ್ಲು ಕೊಡುವದಕ್ಕೆ ಅಂತ ಆರಂಭಿಸಿ ಮದುವೆ ಆದಾಗ ಸೊಸೆಯರನ್ನ ಪಳಗಿಸುವದಕ್ಕೆ,ಹಸು ಕಂದಮ್ಮಗಳಿಗೆ ಸ್ನಾನ ಮಾಡಿಸಲಿಕ್ಕೆ,ತಾವುಡ್ಯೂಟಿಗೆ ಹೊರಟಾಗ ಮನೆಯ ಗೇಟು ಹಾಕುವದಕ್ಕೆ,ಅಥವಾ ಎಲ್ಲಿಯೋ ಟೂರಿಗೆ ಹೊರಟಾಗ ಅಯ್ಯೋ ಅಮ್ಮ ಅಲ್ಲಿ ನೂರೆಂಟು ಮೆಟ್ಟಿಲಿದೆ ನಿನಗೆ ಬೆಟ್ಟ ಹತ್ತೋಕೆ ಆಗಲ್ಲ ಅಂತೆಲ್ಲ ಸುಳ್ಳು ಹೇಳಿ ಅವರು ಮನೆಯಲ್ಲೆ ಉಳಿಯುವಂತೆ ಮಾಡಿ ಮನೆಯ ಕಾವಲು ಮಾಡಿಸಲಿಕ್ಕೆ ಹವಣಿಸುವ ಸ್ವಾರ್ಥಿ ಮನಸ್ಸುಗಳು ಅವರ ಮಕ್ಕಳು ಒಂದಷ್ಟು ಬೆಳೆದ ಮೇಲೋ,ಅಥವಾ ಒಂದಷ್ಟು ಆರ್ಥಿಕ ಸಭಲತೆ ಬಂದು ಯಾವುದೋ ಅಪಾರ್ಟಮೆಂಟಿನಲ್ಲಿ ಮನೆ ಬಾಡಿಗೆ ಹಿಡಿದ ಮೇಲೋ ಅಲ್ಲಿರುವ ವಾಚಮನ್ ಕೊಡುವ ಸೆಲ್ಯೂಟು ನಂಬಿಕೊಂಡು ಬಹಳಷ್ಟು ಸಿಟಿಗಳಲ್ಲಿ ಮಕ್ಕಳು ತಮ್ಮ ಹೆತ್ತವರನ್ನೆ ನಿಧಾನಕ್ಕೆ ಗದರಲು ಆರಂಭಿಸುವದರ ಜೊತೆಗೆ ಯಾವುದೋ ಒಂದು ವೃದ್ದಾಶ್ರಮಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಾರೆ.
ಮೊದ ಮೊದಲು ಚಡ್ಡಿ ದೋಸ್ತ ಅನ್ನಿಸಿಕೊಂಡ ಗೆಳೆಯನೊಬ್ಬ ನಿಧಾನಕ್ಕೆ ತಮ್ಮ ಟೀಮಿನಿಂದ ದೂರವಾಗುತ್ತಿರುವದನ್ನ ನೋಡಿದಾಗ ಮತ್ತು ಮನೆಯ ಹಿರಿಯರು ಪಕ್ಕದ ಮನೆಗಳಲ್ಲಿ ಕೂತು ಹರಟೆ ಹೊಡೆಯುವದು ನೋಡಿದಾಗ ಹೀಗೆ ನಮ್ಮ ಮನಸ್ಸುಗಳಲ್ಲಿಯೂ ಅವರ ಬಗ್ಗೆ ಒಂದಷ್ಟು ಅಸೂಯೆ ಅನ್ನುವದು ಹುಟ್ಟಿಕೊಂಡು ಬಿಡುತ್ತದೆಯೆ ಹೊರತು ನಾವು ಯಾರೂ ಅವರ ಸ್ಥಾನದಲ್ಲಿ ನಿಂತು ಯೋಚಿಸುವದೇ ಇಲ್ಲ.
ಗಂಡ ಹೆಂಡತಿ ಇಬ್ಬರೂ ದುಡಿಯುವ ಶಹರುಗಳಲ್ಲಿ ಮನೆಯಲ್ಲಿ ಇರುವ ಹಿರಿಯರನ್ನ ಯಾರೂ ನೋಡಿಕೊಳ್ಳಲು ದಿಕ್ಕಿಲ್ಲ ಅನ್ನುವದರಿಂದ ಹಿಡಿದು ಗೂರಲು ಹತ್ತಿದ ಅಪ್ಪ ರಾತ್ರಿ ಇಡೀ ಕೆಮ್ಮುತ್ತಾರೆ ಇದರಿಂದ ನಮ್ ನಿದ್ದೆ ಭಂಗ ಆಗ್ತಿದೆ ಅನ್ನುವ ನೆಪಗಳನ್ನೇ ಮುಂದಿಟ್ಟುಕೊಂಡು ಬಿಪಿ,ಶುಗರ್ ನಂತಹ ವಯೋ ಸಹಜ ಕಾಯಿಲೆಗೆ ತುತ್ತಾದ ಹಿರಿಯರನ್ನ ಒಂದಿನಿತೂ ಪ್ರೀತಿ ತೋರಿಸದೆ ಅಪ್ಪಾ ಜಾಸ್ತಿ ಟಿ ಕಾಫಿ ಕುಡಿಬೇಡಿ, ಅಮ್ಮ ಸ್ವೀಟ್ ತಿನಬೇಡಿ ಅಯ್ಯೋ ಮತ್ತೆ ಎರಡ್ ಜಿಲೇಬಿ ತಿಂದ್ರಾ, ಅನ್ನುವ ಮಕ್ಕಳ ಷರತ್ತುಗಳು ಹಿರಿಯರಿಗೆ ಆಘಾತಗಳನ್ನ ಉಂಟು ಮಾಡುತ್ತಲೇ ಇರುತ್ತವೆ.
ಅಪರೂಪಕ್ಕೆ ವೀಕ್ ಆಫ್,ವೀಕೆಂಡ್,ಸಮ್ಮರ ಹಾಲಿಡೇ ಅಂತ ಮನೆಗಳಲ್ಲಿ ಇದ್ದಾಗಲೂ ಅಪ್ಪ ಊಟ ಆಯ್ತಾ ಅಮ್ಮ ಮಾರ್ಕೆಟಿಂದ ಏನಾದ್ರೂ ತರಬೇಕಿತ್ತ ಅನ್ನುವ ಮಾತುಗಳಾಗಲೀ ಅಥವಾ ಗೆಳೆಯನೊಬ್ಬ ಮೊದಲಿನಂತೆ ಇಲ್ಲ ಅನ್ನಿಸಿದಾಗ ಯಾಕ್ ದೋಸ್ತ ಏನರೆ ಪ್ರಾಬ್ಲಮ್ ಆಗೆತಿ ಏನು ಅಂತ ವಿಚಾರಿಸುವದನ್ನಾಗಲಿ ಮಾಡದ ನಾವುಗಳು ಮೊಬೈಲಿನ ರೀಲ್ಸು ಮತ್ತು ಟೀವಿಗಳಲ್ಲಿ ಬರುವ ಬಿಗ್ ಬಾಸ್ ನಂತಹ ರಿಯಾಲಿಟಿ ಶೋ ಅನ್ನುವ ರೀಲು ಸುತ್ತಿದ ಧಾರಾವಾಹಿಗಳನ್ನು ನೋಡುತ್ತ ನಮ್ಮ ಅಕ್ಕಪಕ್ಕದವರ ಬಗ್ಗೆ ಅನಾದರ ತೋರಿಸತೊಡಗಿದ ಮೇಲೆ ಸಹಜವಾಗಿಯೇ ಅವರು ತಮ್ಮ ಸುತ್ತ ಮುತ್ತ ಇರುವವರಲ್ಲಿ ಮತ್ತು ಅಕ್ಕ ಪಕ್ಕದ ಮನೆಗಳಲ್ಲಿ ಒಂದಷ್ಟು ನೆಮ್ಮದಿ ಅನ್ನಿಸುವಂತಹ ಸಂಭಂಧಗಳಿಗಾಗಿ ಹಾತೊರೆಯ ತೊಡಗುತ್ತಾರೆ.
ಎಷ್ಟೋ ಸಲ ನೀನೆನು ನಿನ್ನ ವಯಸ್ಸೇನು?? ಅಂತೆಲ್ಲ ಮಾತನಾಡುವ ನಾವು ಅವರೊಂದಿಗೆ ಸಮಾನ ಮನಸ್ಕರಾಗಿ ಬೆರೆಯದೆ ಇರುವದೆ ಇಂತಹ ಬೇಜಾರುಗಳಿಗೆ ಕಾರಣವಾಗುತ್ತದೆ ಅನ್ನುವದು ನೆನಪಿರಲಿ.
ಇವತ್ತು ಇದನ್ನೆಲ್ಲಓದು,ಬಾಯಿ ಪಾಠ ಮಾಡು,ಕರಾಠೆ ಕಲಿ,ಕಂಪ್ಯೂಟರ್ ಕ್ಲಾಸಿಗೆ ಹಚ್ಚು,ಬೆಳಿಗ್ಗೆ ಬೇಗ ಏಳೋದ್ ಕಲಿ,ಅಂತ ನಿಧಾನಕ್ಕೆ ಅವರಿಗೆ ಇಷ್ಟವಿಲ್ಲದ ಯಾವುದನ್ನೋ ಮಕ್ಕಳಿಗೆ ಹೊರೆ ಹಾಕುತ್ತ ಹೊರಟ ಮೇಲೆ ಅವರಲ್ಲಿ ಮತ್ತೆನನ್ನೋ ಕಲಿಯಬೇಕು,ಅಥವಾ ಇನ್ನೇನೋ ಮಾಡಬೇಕು ಅನ್ನುವ ಆಸೆಗಳನ್ನ ಸಾಯಿಸುತ್ತ ಹೊರಟ ಮೇಲೆ ಅವರು ಭಾವನಾತ್ಮಕವಾಗಿ ನಮ್ಮಿಂದ ದೂರವಾಗುತ್ತ ಹೋಗುತ್ತಾರೆ ಅನ್ನುವದು ಇಂದಿನ ತಲೆಮಾರಿಗೆ ಹೇಳುವವರು ಯಾರು ಅನ್ನಿಸಿದಾಗೆಲ್ಲ ನನಗೆ ಮೇಲಿನ ಘಟನೆಗಳು ನೆನಪಾಗುತ್ತವೆ.
ನಮ್ಮ ಮನೆಯಲ್ಲಿ ಇರುವ ವಿಧವೆ ಅಮ್ಮನಿಗೋ ವಿಧುರ ಅಪ್ಪನಿಗೋ ,ಅಸ್ತಮಾ ಅಮರಿಕೊಂಡ ಚಿಕ್ಕಮ್ಮನಿಗೋ,ಇಂಗ್ಲೀಷು ತಲೆಗೆ ಹತ್ತದ ನಮ್ಮದೇ ಮಗುವಿಗೋ ಕನಿಷ್ಟ ಪಕ್ಷ ಅವರಿಗೆ ಯಾವುದು ಸರಿ ಅನ್ನಿಸುತ್ತದೆಯೋ ಅದನ್ನು ಮಾಡಲು ಬಿಟ್ಟು ನೋಡಿ ಯಾಕೆಂದರೆ ಅಪ್ಪ ಅಮ್ಮನ ಒತ್ತಡಕ್ಕೆ ಅಥವಾ ಡೋನೆಷನ್ ಕೊಟ್ಟು ಅಡ್ಮಿಷನ್ ಮಾಡಿದ ಶಾಲೆ ಕಾಲೇಜುಗಳ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿದು ಹತ್ತಾರು ಗಂಟೆ ವಿದ್ಯಾಭ್ಯಾಸ ಮಾಡಿ ಪುಸ್ತಕದ ಹುಳುಗಳಾಗಿ ಓದಿಕೊಂಡು ಪಸ್ಟ್ ಕ್ಲಾಸ್ ಮತ್ತು ಡಿಸ್ಟಿಂಕ್ಷನ್ ಬಂದ ಮಕ್ಕಳು ಕೂಡ ಅದು ಯಾವದೋ ಕೆಟ್ಟ ಘಳಿಗೆಯಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತು ಮಕ್ಕಳು ತಮಗೇ ಬುದ್ದಿ ಹೇಳಿದರು ಅನ್ನುವ ಕಾರಣಕ್ಕೋ ಜನರ ನಡುವೆ ಗದರಿದರು ಅಂತಲೋ ರೈಲುಕಂಬಿಗಳಿಗೆ ತಲೆ ಕೊಟ್ಟ ಎಷ್ಟೋ ಹಿರಿಯರ ಶವಗಳು ಇದನ್ನೆಲ್ಲ ಓದುತ್ತ ಹೋದಂತೆಯೆ ನಮ್ಮ ಕಣ್ಣ ಮುಂದೆ ಸರಿದಂತಾಗುತ್ತದೆ ಆದ್ದರಿಂದ ಅವರು ಮಾಡುತ್ತಿರುವದು
ಸರಿಯೋ ತಪ್ಪೋ ಅನ್ನುವ ಅರಿವು ಅವರಿಗೆ ಬರುವ ವೇಳೆಗಾಗಲೇ ಅವರೋ ಅಥವಾ ನಾವೋ ಮುಂದೊಮ್ಮೆ ಈ ಬದುಕೆಂಬ ಪ್ರಯಾಣದಲ್ಲಿ ಬಸ್ಸಿನಿಂದ ಎದ್ದು ಇಳಿದು ಹೊರಟು ಬಿಟ್ಟಿರುತ್ತೇವೆ.
ಇಷ್ಟಕ್ಕೂ ಎಷ್ಟು ದಿನ ಅಂತ ನಾವು ಇನ್ನೊಬ್ಬರನ್ನ ತಿದ್ದುವ ಪ್ರಯತ್ನ ಮಾಡುವದು?? ಅವರ ಮನಸ್ಥಿತಿ ಹೇಗಿದೆ ಅನ್ನುವದರಿಂದ ಹಿಡಿದು ಅವರಿಗೆ ಯಾವದು ಇಷ್ಟವೋ ಅದನ್ನು ಮಾಡಲು ಬಿಟ್ಟೆವು ಅನ್ನುವ ಸಮಾಧಾನವಾದರೂ ನಮ್ಮದಾಗಲೀ ಅನ್ನುವ ಅಭಿಲಾಷೆಯೊಂದಿಗೆ
ನಮ್ಮ ಮನೆಯ ಹಿರಿಯರೋ,ನಮ್ಮ ವಂಶದ ಕುಡಿಗಳೋ,ಅಥವಾ ನಮ್ಮದೇ ಓರಗೆಯ ಗೆಳೆಯರೋ ಒಂದಷ್ಟು ನೆಮ್ಮದಿ ಮತ್ತು ಹರುಷವನ್ನು, ಕನಿಷ್ಟ ಮಟ್ಟಿಗಿನ ಕಾಳಜಿಯ ಹುಡುಕಿಕೊಂಡು ಅಲೆಯುವಂತೆ ಆಗದಿರಲಿ ಅನ್ನುವ ಆಶಯದೊಂದಿಗೆ ಇದ್ದಷ್ಟು ದಿನ ಎಲ್ಲರೊಂದಿಗೆ ಸಾಧ್ಯವಾದಷ್ಟು ನಗುತ್ತ ನಗಿಸುತ್ತ ಇರುವ ಪ್ರಯತ್ನ ಮಾಡೋಣ.
ಯಾಕೆಂದರೆ ಮನುಷ್ಯನಿಗೆ ಒಂದಷ್ಟು ಸ್ಫೂರ್ತಿ ಸಿಗಲು ಅವರ ಬದುಕಿನ ಚೈತನ್ಯದ ಚಿಲುಮೆ ಉಕ್ಕಲು ಬೇಕಿರುವದು ಸಮಾನ ವಯಸ್ಕರಲ್ಲ ಸಮಾನ ಮನಸ್ಕರು ಅನ್ನುವದು ನಿಮಗೆ ತಿಳಿದಿರಲಿ…ಇಷ್ಟಕ್ಕೂ ಯಾರ ನೆಮ್ಮದಿ ಯಾವುದರಲ್ಲಿ ಅಡಗಿದೆಯೋ ಬಲ್ಲವರಾರು ಅಲ್ಲವಾ??
ದೀಪಕ ಶಿಂಧೇ
9482766018