ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ
ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಹರಿದಾಸ ಸಾಹಿತ್ಯ ವಿಚಾರ ಸಂಕಿರಣ ‘ಶ್ರೀ ವಿಜಯದಾಸರ ಜೀವನ ಮತ್ತು ಸಾಹಿತ್ಯ ‘ಉದ್ಘಾಟನಾ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡುತ್ತಾ, ಹರಿದಾಸ ಸಾಹಿತ್ಯವನ್ನು ಪುನರುತ್ಥಾನ ಮಾಡಿದ ದ್ವಿತೀಯ ಘಟ್ಟದ ಮೇರು ಶೃಂಗ ಶ್ರೀ ವಿಜಯ ದಾಸರ ಜೀವನ ಸಾಧನೆ ಅಧ್ಯಾತ್ಮ ಸಾಧಕರಿಗೆ ಸ್ಪೂರ್ತಿಯ ಚಿಲುಮೆ.ಕನ್ನಡದ ಸವಿ ನುಡಿಯಲ್ಲಿ ವೇದ ವೇದಾಂತದ ತಿರುಳನ್ನು ನೀಡಿ ಉಪಕರಿಸಿದ ಅವರ ಕೀರ್ತನೆಗಳು ಇoದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಹರಿದಾಸ ಸಾಹಿತ್ಯದ ವಿದ್ವಾಂಸರಾಗಿದ್ದ ಕೀರ್ತಿಶೇಷ ಡಾ. ಕೆ. ಗೋಕುಲ್ ನಾಥ್ ಅವರ ಆಶಯದಂತೆ ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ವಿಜಯ ದಾಸರ ಜೀವನ ಮತ್ತು ಸಾಹಿತ್ಯದ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಿ ಜಿಜ್ಞಾಸು ವೃಂದಕ್ಕೆ ಅವರ ಕೃತಿಗಳ ಕುರಿತು ಅವಲೋಕನ ಕಾರ್ಯಕ್ರಮ ಮಾಡುವ ಮೂಲಕ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಮಾದರಿ ಉಪಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯ ನಿಧಿ ತೀರ್ಥ ಶ್ರೀಪಾದರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.
ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಹರಿದಾಸ ಚಿಂತಕ ಸೇಡಂನ ಡಾ ವಾಸುದೇವ ಅಗ್ನಿಹೋತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್ ಬಿ ಲಕ್ಷ್ಮೀನಾರಾಯಣ ಆಚಾರ್ಯ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಪ್ರಕಟವಾದ ಡಾ.ಆ.ರಾ ಪಂಚಮುಖಿ ರವರ ಶ್ರೀಮದ್ ಭಾಗವತ ಭಾಸ್ಕರ ದರ್ಶನ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ವಿಚಾರ ಸಂಕಿರಣದಲ್ಲಿ ಮಂಡ್ಯದ ವರಾಹ ವಿಠಲದಾಸರು ‘ವಿಜಯ ರಾಯರ ಕವಚದ’ ಬಗ್ಗೆ ಹಾಗೂ ಮೈಸೂರು ವಿವಿಯ ಪ್ರಸಾರಂಗದ ನಿರ್ದೇಶಕ ಡಾ.ಬಿ ಎಸ್ ಅನಿಲ್ ಕುಮಾರ್ ಬೊಮ್ಮಘಟ್ಟ ರವರು ‘ವಿಜಯದಾಸರ ಕೃತಿಗಳಲ್ಲಿ ಜೀವನಾದರ್ಶನದ ‘ಬಗ್ಗೆ ಪ್ರಬಂಧ ಮಂಡಿಸಿದರು .ಸಂಸ್ಥೆಯ ಡಾ .ಎಸ್ ಎಲ್ ಮಂಜುನಾಥ್ ಸ್ವಾಗತಿಸಿದರು, ಆರ್ ವಾದಿರಾಜು ನಿರೂಪಣೆ ಮಾಡಿದರು.