ಬೆಳಗಾವಿ – ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಟರ್ಮಿನಲ್ ಹೊರಗೆ ಪ್ರಯಾಣಿಕರನ್ನು ಕಳಿಸಲು, ಸ್ವಾಗತಿಸಲು ಬರುವವರಿಗೆ ಶೌಚಾಲಯವಿಲ್ಲದೆ ಪರದಾಡುವಂತಾಯಿತು. ಅಲ್ಲಿ ಇದ್ದ ಅಂಗಡಿಯವರನ್ನು ಕೇಳಿದರೆ ಸರಿಯಾದ ಉತ್ತರ ಕೂಡ ಬರಲಿಲ್ಲ.
ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ, ತಂಪಾದ ಗಾಳಿ ಬೀಸುತ್ತಿದೆ ಇದರಿಂದಾಗಿ ಮೂತ್ರಕ್ಕೆ ಕರೆ ಬರುವುದು ಸ್ವಾಭಾವಿಕವಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುವವರು ಟರ್ಮಿನಲ್ ಒಳಗೆ ಹೋದರೆ ಅಲ್ಲಿ ಶೌಚಾಲಯಗಳಿವೆ ಆದರೆ ಅವರನ್ನು ಬೀಳ್ಕೊಡಲು ಬಂದವರು, ಬೇರೆ ಕಡೆಯಿಂದ ಬಂದವರನ್ನು ಸ್ವಾಗತಿಸಲು ಬಂದವರು ಶೌಚಕ್ಕೆ ಹೋಗಬೇಕೆಂದರೆ ಸಮಸ್ಯೆಯಾಗುತ್ತದೆ.
ಈ ಬಗ್ಗೆ ವಿಮಾನಯಾನ ಖಾತೆ ವಿಚಾರ ಮಾಡದೇ ಇದ್ದದ್ದು ಆಶ್ಚರ್ಯಕರ.
ಬೆಳಗಾವಿ ವಿಮಾನ ನಿಲ್ದಾಣ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ ಇಲ್ಲಿ ಪ್ರಯಾಣಿಕರಿಗೆ ಹಾಗೂ ಅವರ ಜೊತೆ ಬರುವವರಿಗೆ ಅನುಕೂಲವಾಗುವ ಸೌಲಭ್ಯಗಳು ಇನ್ನೂ ಆಗಬೇಕಾಗಿದೆ. ಟರ್ಮಿನಲ್ ಹೊರಗೆ ಶೌಚಾಲಯ ಇಲ್ಲದೆ ಇರುವುದರಿಂದ ಅಲ್ಲೇ ಎಲ್ಲಾದರೂ ಪೊದೆ ನೋಡಿಕೊಳ್ಳಬೇಕಾಗುತ್ತದೆ. ಆದಷ್ಟು ಬೇಗ ಶೌಚಾಲಯ ಸಮಸ್ಯೆ ಬಗೆಹರಿಯಲಿ.
ಪಾರ್ಕಿಂಗ್ ಶುಲ್ಕ ಗೊಂದಲ
ರವಿವಾರದಂದು ನಾನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋದಾಗ ಕಾರು ಪಾರ್ಕಿಂಗ್ ಶುಲ್ಕ ಕುರಿತಂತೆ ಗೊಂದಲ ಉಂಟಾಯಿತು. ನಿಲ್ದಾಣಕ್ಕೆ ಹೋಗುವಾಗಲೇ ಒಂದು ಚೀಟಿ ಕೊಟ್ಟರು ಅದರಲ್ಲಿ ಪಾರ್ಕಿಂಗ್ ೧೩೦ ರೂ ಎಂದು ಬರೆದಿತ್ತು. ನಾನು ಅಲ್ಲಿಯೇ ಕಾರು ಪಾರ್ಕ್ ಮಾಡಿ ಟರ್ಮಿನಲ್ ಗೆ ಹೋಗಿ ನಮ್ಮ ಸಂಬಂಧಿಕರಿಗಾಗಿ ಸುಮಾರು ಮುಕ್ಕಾಲು ಗಂಟೆ ಕಾಯ್ದ ನಂತರ ಮತ್ತೆ ಪಾರ್ಕಿಂಗ್ ಸ್ಥಳಕ್ಕೆ ಬಂದು ಕಾರು ತೆಗೆದುಕೊಂಡು ಹೋಗಿ ನಮ್ಮ ಮಾವನವರನ್ನು ಕರೆದುಕೊಂಡು ಬರುವಾಗ ಒಬ್ಬ ವ್ಯಕ್ತಿ ಬಂದು ರೂ. ೧೩೦ ಕೊಡಿ ಅಂದ. ಇಷ್ಟೊಂದು ಯಾಕೆ ? ಅಂದಿದ್ದಕ್ಕೆ ಇಲ್ಲಿ ಮೂರು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾರು ನಿಲ್ಲಿಸುವಂತಿಲ್ಲ ಅಂದ. ನಾನು ಇಲ್ಲಿ ನಿಲ್ಲಿಸಿಲ್ಲ ದೂರದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದೆ ಅಂದೆ.
ಹೌದಾ, ಹಾಗಾದರೆ ನೀವು ೫೦ ರೂ. ಕೊಡಿ ಅಂದ. ಅದು ಪಾರ್ಕಿಂಗ್ ಫೀ ಅಂತೆ.
ನಾನು ೫೦ ರೂ. ಕೊಟ್ಟೆ ಇನ್ನೂ ೫ ರೂ. ಕೊಡಿ ಅಂದ . ಕೊಟ್ಟು ಹೊರ ಬರುವಾಗ ದಾರಿಯಲ್ಲಿ ಇನ್ನೊಬ್ಬ ಸಿಕ್ಕ ಆತನಿಗೆ ಚೀಟಿ ತೋರಿಸಿದೆ. ಪಾರ್ಕಿಂಗ್ ಛಾರ್ಜ್ ಕೊಟ್ರಾ ಎಂದು ಕೇಳಿದ. ಆಮೇಲೆ ಆಯ್ತು ಹೋಗಿ ಅಂದ.
ನಮಗೆ ಗೊಂದಲ. ಈ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಒಂದು ನೀತಿ ನಿಯಮ ಇದೆಯಾ ? ಗುತ್ತಿಗೆದಾರರೇನಾದರೂ ಇದ್ದಾರೆಯೇ? ಪಾರ್ಕಿಂಗ್ ಫೀ ಇಷ್ಟು ಅಂತ ಅಲ್ಲಿ ಯಾವುದೇ ಬೋರ್ಡ್ ಕಾಣಲಿಲ್ಲ. ವಿಮಾನ ನಿಲ್ದಾಣಾಧಿಕಾರಿಗಳು ಇದಕ್ಕೆ ಉತ್ತರ ಹೇಳಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ವಿಚಾರಣೆ ಮಾಡಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ