ಇ ತ್ತೀಚೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಏನೇ ಹಗರಣಗಳು ನಡೆದರೂ, ಏನೇ ಅಪಸವ್ಯಗಳು ನಡೆದರೂ ಅದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಒಂದೇ ವರಾತ ಏನೆಂದರೆ, ಹಾಗೆ ಅದು ಬಿಜೆಪಿ ಆಡಳಿತದಲ್ಲಿಯೂ ನಡೆದಿತ್ತು ಎಂಬುದು ! ಇದು ಒಂದು ರೀತಿಯಲ್ಲಿ ಹೊಟ್ಟೆ ನೋವೆಂದು ಶಾಲೆಗೆ ಹೋಗದ ಅಕ್ಕನ ನೆಪದಿಂದ ತಾನೂ ಶಾಲೆಗೆ ಚಕ್ಕರ್ ಹಾಕುವ ತಮ್ಮನಂತಾಯಿತು !
ಕಾಂಗ್ರೆಸ್ ನವರ ಅರ್ಥದಲ್ಲಿ ಈ ಹಿಂದೆ ಬಿಜೆಪಿಯವರು ಏನೇ ಮಾಡಿದ್ದರೂ ಅದಕ್ಕೆ ಮೌನ ಸಮ್ಮತಿ ಕೊಟ್ಟು ಅದನ್ನು ನೋಟ್ ಮಾಡಿಕೊಂಡು ತಮ್ಮ ಆಡಳಿತದಲ್ಲಿ ಅದೇ ನೆಪ ಹೇಳಿಕೊಂಡು ಮಾಡಬಾರದ್ದನ್ನು ಮಾಡಬಹುದು ಎಂದಾಯಿತಲ್ಲವೆ ? ಈಗ ಬಸ್ ಏರಿಕೆಯ ಕುರಿತ ಸಾರಿಗೆ ಸಚಿವರು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಯೊಂದಕ್ಕೂ ಭಾರತೀಯ ಜನತಾ ಪಕ್ಷವನ್ನೇ ಎಳೆದು ತಂದಿದ್ದನ್ನು ನೋಡಿದರೆ ಇವರಿಗೆ ಜನರ ಹಿತಕ್ಕಿಂತ ತಮ್ಮ ತೂತುಗಳನ್ನು ಮುಚ್ಚಿಕೊಳ್ಳಲು ಒಂದು ಪಿಳ್ಳೆನೆವ ಹೇಳಬೇಕಾಗಿದೆಯಷ್ಟೇ ಎಂದು ಹೇಳಲು ಅಡ್ಡಿಯಿಲ್ಲ.
ಒಂದು ವಿಶ್ಲೇಷಣೆ ಮಾಡೋಣ. ಮಾನ್ಯ ಸಚಿವರು ಸಾರಿಗೆ ದರ ಏರಿಕೆಗೆ ಡೀಸೆಲ್ ದರ ಏರಿಕೆ ಕಾರಣ ಎಂದಿದ್ದಾರೆ. ಆದರೆ ದಿನಕ್ಕೆ ಎರಡು ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡದೇ ಇದ್ದಿದ್ದರೆ ಅದರಿಂದ ಬರುವ ಆದಾಯ ಸಂಸ್ಥಗೆ ನೆರವಾಗುತ್ತಿತ್ತೇ ಇಲ್ಲವೆ ? ಈಗ ಮೋದಿಯವರು ಡೀಸೆಲ್ ದರ ತಗ್ಗಿಸಿದರೂ ಉಚಿತ ಪ್ರಯಾಣ ಮಾಡಿದರೆ ಆದಾಯ ಹೇಗೆ ಬಂದೀತು ಎಂಬುದನ್ನು ಮಾನ್ಯ ಸಚಿವರು ಹೇಳಬೇಕು. ಮಾತು ಮಾತಿಗೂ ಬಿಜೆಪಿಯವರಿಗೆ ಬುದ್ಧಿ ಇಲ್ಲ ಎನ್ನುವ ಸಚಿವರಿಗೆ ಈಗ ಸ್ಪಷ್ಟ ಹಾಗೂ ಆಧಾರ ಸಹಿತ ಉತ್ತರ ಕೊಡುವ ಜವಾಬ್ದಾರಿ ಬಿಜೆಪಿ ನಾಯಕರ ಮೇಲೆ ಇದೆ. ಜನತೆಯ ಪರವಾಗಿ ನಾವು ಇದನ್ನು ನಿರೀಕ್ಷಿಸಿದ್ದೇವೆ.
ಸಂದರ್ಶನದ ಉದ್ದಕ್ಕೂ ಸಚಿವರು ಹೇಳಿರುವ ಮಾತುಗಳು ; ಬಿಜೆಪಿ ಶೇ. ೪೮ ರಷ್ಟು ಬಸ್ ದರ ಏರಿಸಿದೆ, ಕೇಂದ್ರದ ಮೋದಿ ಸರ್ಕಾರ ಡೀಸೆಲ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿದ್ದರಿಂದ ಸಾರಿಗೆ ದರ ಹೆಚ್ಚಳವಾಗಿದೆ, ಸಾರಿಗೆ ನಿಗಮಕ್ಕೆ ಬಿಜೆಪಿಯವರು ೫೯೦೦ ಕೋಟಿ ರೂ. ಸಾಲ ಮಾಡಿದ್ದಾರೆ, ಇದು ಬಿಜೆಪಿಯ ಕೆಟ್ಟ ನಿರ್ಧಾರ, ನಮ್ಮ ಸರ್ಕಾರ ಬಂದ ಮೇಲೆ ಐದು ಸಾವಿರಕ್ಕೂ ಹೆಚ್ಚು ಬಸ್ ಖರೀದಿ ಮಾಡಿದ್ದೇವೆ, ಬಿಜೆಪಿಯು ಅಧಿಕಾರ ಬಿಟ್ಟು ಕೊಟ್ಟಾಗ ಎಲ್ಲ ಇಲಾಖೆಯಲ್ಲಿಯೂ ಸಾಲ ಬಿಟ್ಟು ಹೋಗಿದ್ದಾರೆ. ಸಂಸ್ಥೆಗಳು ಉಳಿಯಬೇಕಾದರೆ ದರ ಏರಿಕೆ ಅನಿವಾರ್ಯ, ವಕ್ಫ್ ಆಸ್ತಿ ಸಂಬಂಧಿಸಿದಂತೆ ಅತಿ ಹೆಚ್ಚು ನೋಟೀಸು ನೀಡಿರುವುದು ಬಿಜೆಪಿಯವರೇ ! ( ಆಗ ನೋಟೀಸು ಪಡೆದವರು, ರೈತರು ಕಡ್ಲೆಕಾಯಿ ತಿನ್ನುತ್ತಿದ್ದರೇ ಅಥವಾ ಜನರಿಗಾಗಿ ಹೋರಾಡಬೇಕಾದ ಕಾಂಗ್ರೆಸ್ ತಿನ್ನುತ್ತಿತ್ತೋ !?)
ಈ ಎಲ್ಲ ಪ್ರಶ್ನೆಗಳಿಗೆ ಭಾರತೀಯ ಜನತಾ ಪಕ್ಷದ ನಾಯಕರು ಜನರಿಗಾಗಿ ಉತ್ತರ ಕೊಡಬೇಕು. ಯಾಕೆಂದರೆ, ಇವರು ಮಾಡಿದರೆಂದು ಅವರು, ಅವರು ಮಾಡಿದರೆಂದು ಇವರು ಹೀಗೆ ಇವರು ನಮ್ಮನ್ನು ಯಾಮಾರಿಸುತ್ತ, ತಮ್ಮಷ್ಟಕ್ಕೆ ತಾವು ಲೂಟಿ ಹೊಡೆಯುತ್ತ ಇದ್ದರೆ ರಾಜ್ಯದ ಜನತೆಯ ಕೈಯಲ್ಲಿ ಇಬ್ಬರೂ ಸೇರಿಯೇ ಚಿಪ್ಪು ಕೊಡುವುದಂತೂ ಗ್ಯಾರಂಟಿ ! ಯಾರಾದರೂ ಉತ್ತರಿಸುವರೇ ?
ಉಮೇಶ ಮ. ಬೆಳಕೂಡ, ಮೂಡಲಗಿ