ಕದಡದಿದ್ದರೆ ನೀರು ತಿಳಿಯಾಗಿ ನಿಲ್ಲುವುದು
ವಸ್ತುಗಳ ತಳದಲ್ಲಿ ಕಾಣಬಹುದು
ಶಾಂತಿಯನು ಬಯಸುವೊಡೆ ಸುಮ್ಮನಿರುವುದೆ ಲೇಸು
ನಿಶ್ಯಬ್ಧ ನಿಜಯೋಗ – ಎಮ್ಮೆತಮ್ಮ
ಶಬ್ಧಾರ್ಥ
ಲೇಸು – ಒಳ್ಳೆಯದು , ನಿಶ್ಯಬ್ಧ – ನೀರವ, ಸದ್ದಿಲ್ಲದ, ಮೌನ
ತಾತ್ಪರ್ಯ
ಸರೋವರದಲ್ಲಿ ನೀರು ಬಗ್ಗಡವಿದ್ದರೆ ತಳದಲ್ಲಿದ್ದ ವಸ್ತುಗಳು ಕಾಣಿಸುವುದಿಲ್ಲ. ಸ್ವಲ್ವ ಸಮಯ ಬಿಟ್ಟರೆ ಸಾಕು ತಿಳಿಯಾಗಿ ನೀರು ಪಾರದರ್ಶಕವಾಗಿ ಕೆಳಗಿನ ವಸ್ತುಗಳು ಕಾಣಿಸುತ್ತವೆ. ಹಾಗೆ ತಲೆಯೆಂಬ ಸರೋವರದಲ್ಲಿ ಮನವೆಂಬ ನೀರಲ್ಲಿ ಬಗ್ಗಡವೆಂಬ ಆಲೋಚನೆಗಳಿದ್ದರೆ ಅಶಾಂತಿ ಇರುತ್ತದೆ.
ಆಲೋಚನಾರಹಿತ ನಿರ್ಮಲವಾದ ಮನಸ್ಸಿನ ತಳದಲ್ಲಿ ಪರವಸ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ಬೇಕಾದರೆ ಒಳಹೊರಗೆ ಮೌನವಾಗಿ ಇದ್ದರೆ ಸಾಕು ಶಾಂತಿ ಸಮಾಧಾನ ದೊರಕುತ್ತದೆ. ಮೌನಾಚರಣೆ ಎಂದರೆ ಬರಿ ಬಾಯಿಂದಷ್ಟೆ ಅಲ್ಲದೆ ಮನದಿಂದ ಮಾತಾಡದೆ ಇರುವುದು. ಅಂದರೆ ಯೋಚನೆಗಳನ್ನು ಬಿಟ್ಟು ನಿನ್ನೊಳಗೆ ಇಣಿಕಿದರೆ ಅಲ್ಲಿ ಬ್ರಹ್ಮಾನಂದ ದೊರಕುತ್ತದೆ. ಆ ನಿಶ್ಯಬ್ಧದಲ್ಲಿ ಒಳಗಿನ ಅಂತರ್ವಾಣಿ ಕೇಳಿಸುತ್ತದೆ. ಆದಕಾರಣ ಧ್ಯಾನಮೌನ ಎಂದರೆ ಒಳಹೊರಗೆ ಸುಮ್ಮನಿರುವುದು. ಶಾಂತಿ ಬೇಕೆಂದರೆ ಸುಮ್ಮನಿರುವುದನ್ನು ಕಲಿಯುವುದೆ ಸಾಧನೆ. ಯೋಚನಾರಹಿತ ಸ್ಥಿತಿಯಲ್ಲಿ ವಿಶ್ವಶಕ್ತಿ ದೇಹವನ್ನು ಪ್ರವೇಶಿಸಿ ತಲೆಯಲ್ಲಿ ಹಿಮದಂತೆ ತಣ್ಣಗಿನ ಅನುಭವಾಗಿ ಶಾಂತಿ ಸಂತೋಷ ನೆಲೆಗೊಳ್ಳುತ್ತದೆ. ಶಬ್ಧಮುಗ್ಧನಾಗುವುದೆ ನಿಜವಾದ ಯೋಗ. ಅದಕ್ಕೆ ನಿಶ್ಯಬ್ಧಂ ಯೋಗಮುಚ್ಚತೆಎಂದು ಗೀತೆಯಲ್ಲಿ ಹೇಳಲಾಗಿದೆ
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ