ರಕ್ಷಾ ಬಂಧನ: ಏನು? ಏಕೆ? ಹೇಗೆ? ಸಹೋದರನಿಲ್ಲದಿದ್ದರೆ ರಾಖಿಯನ್ನು ಯಾರಿಗೆ ಕಟ್ಟಬೇಕು.? ರಕ್ಷಾ ಬಂಧನ ಎನ್ನುವ ಆಚರಣೆ ಆರಂಭವಾಗಿದ್ದು ಹೇಗೆ ಗೊತ್ತಾ.. ?
ರಕ್ಷಾ ಬಂಧನದಂದು ಸಹೋದರ ಜೊತೆಯಲ್ಲಿ ಇಲ್ಲದಿದ್ದರೆ ನಾವು ರಾಖಿಯನ್ನು ಯಾರಿಗೆ ಕಟ್ಟಬಹುದು… ?
ಇಲ್ಲಿದೆ ರಕ್ಷಾ ಬಂಧನದ ಇತಿಹಾಸ.
ಬಂಧವನ್ನು ಬೆಸೆಯುವ ಹಬ್ಬವಾದ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಅಂದರೆ 2024 ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 19 ರಂದು ಸೋಮವಾರ ಆಚರಿಸಲಾಗುವುದು. ರಕ್ಷಾ ಬಂಧನ ಹಬ್ಬವನ್ನು ವಿವಿಧ ಪ್ರದೇಶದಲ್ಲಿ ರಾಖಿ, ಶ್ರಾವಣಿ, ಸಾವನಿ ಮತ್ತು ಸಲೂನೋ ಎನ್ನುವ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ರಕ್ಷಾ ಬಂಧನ ಹಬ್ಬವು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಭಿನ್ನವಾಗಿರಬಹುದು. ಆಚರಣೆ ಬೇರೆ ಬೇರೆ ರೀತಿ ಇರಬಹುದು. ಆದರೆ ಮುಖ್ಯ ಉದ್ದೇಶ ಒಂದೇ, ಬಾಂಧವ್ಯವನ್ನು ಎತ್ತಿ ಸಾರುವುದು.
ಅಣ್ಣನಿಗೆ ರಾಖಿ ಕಟ್ಟಲು ಸಾಧ್ಯವಾಗದಿದ್ದರೆ ಯಾರಿಗೆ ರಾಖಿಯನ್ನು ಕಟ್ಟಬಹುದು.. ?
ರಾಖಿಯನ್ನು ಯಾರಿಗೆ ಕಟ್ಟಬಹುದು..?
ಒಂದು ವೇಳೆ ನಿಮಗೆ ಸಹೋದರರು ಇಲ್ಲದಿದ್ದರೆ ನೀವು ನಿಮ್ಮ ಸಂಬಂಧಿಕರಲ್ಲಿ ಅಣ್ಣನ ಸ್ಥಾನದಲ್ಲಿರುವವರಿಗೆ ರಾಖಿಯನ್ನು ಕಟ್ಟಬಹುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೀವು ರಕ್ಷಾ ಬಂಧನದ ದಿನ ರಾಖಿಯನ್ನು ಪುರೋಹಿತರಿಗೆ, ಗುರುಗಳಿಗೆ ಅಥವಾ ತಂದೆಗೆ ರಾಖಿಯನ್ನು ಕಟ್ಟಬಹುದು. ಇದರಿಂದ ನೀವು ಶ್ರಾವಣ ಹುಣ್ಣಿಮೆಯ ದಿನದಂದು ಶುಭ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ಸಹೋದರ ಇಲ್ಲವಲ್ಲ ಎನ್ನುವ ಕೊರಗನ್ನು ಬಿಟ್ಟು, ನೀವು ಈ ಕೆಲಸವನ್ನು ಮಾಡಬಹುದು.
ಪ್ರಾಚೀನ ಕಾಲದಲ್ಲಿ ರಕ್ಷಾಸೂತ್ರವನ್ನು ಕಟ್ಟುತ್ತಿದ್ದರು:
ರಾಖಿ ಕಟ್ಟುವುದು ಇತ್ತೀಚೆಗೆ ಬೆಳೆದು ಬಂದ ಸಂಪ್ರದಾಯವಲ್ಲ. ಬದಲಾಗಿ, ಇದು ಪ್ರಾಚೀನ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯವಾಗಿದೆ. ಪ್ರಾಚೀನ ಕಾಲದಲ್ಲಿ ಪುರೋಹಿತರು ರಕ್ಷಾ ಸೂತ್ರವನ್ನು ಕಟ್ಟುತ್ತಿದ್ದರು. ಪ್ರಾಚೀನ ಕಾಲದಲ್ಲಿ ಶ್ರಾವಣ ಹುಣ್ಣಿಮೆ ದಿನದಂದು ಪುರೋಹಿತರು ರಕ್ಷಾ ಸೂತ್ರವನ್ನು ರಾಜರಿಗೆ ಮತ್ತು ಸಮಾಜದ ಹಿರಿಯ ಕುಟುಂಬದವರಿಗೆ ಕಟ್ಟುತ್ತಿದ್ದರು. ಯಾಕೆಂದರೆ ಇವರು ಸಮಾಜವನ್ನು ರಕ್ಷಿಸುತ್ತಾರೆ ಎನ್ನುವ ಕಾರಣದಿಂದ ರಕ್ಷಾ ಸೂತ್ರವನ್ನು ಕಟ್ಟುತ್ತಿದ್ದರು. ಮನೆಯಲ್ಲಿ ಪೂಜಾ ಕಾರ್ಯಕ್ರಮಗಳಿದ್ದರೆ ಪುರೋಹಿತರು ತಪ್ಪದೇ ಎಲ್ಲರ ಕೈಗೂ ರಕ್ಷಾ ಸೂತ್ರವನ್ನು ಕಟ್ಟುತ್ತಿದ್ದರು. ಆದರೆ ಇದೇ ಸಂಪ್ರದಾಯ ದಿನಗಳು ಕಳೆದಂತೆ ರಾಖಿ ಹಬ್ಬವಾಗಿ ಮಾರ್ಪಟ್ಟಿತು.
ರಕ್ಷಾ ಬಂಧನದ ದಂತಕಥೆ:
ಒಂದು ವೇಳೆ ನಿಮಗೆ ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಇಲ್ಲದಿದ್ದರೆ, ಅಥವಾ ಸಹೋದರಿಯ ಬಳಿ ನಿಮಗೆ ಹೋಗಲು ಸಾಧ್ಯವಾಗದಿದ್ದರೆ ನೀವು ನಿಮ್ಮ ಪತ್ನಿಯ ಕೈಯಿಂದ ರಾಖಿಯನ್ನು ಕಟ್ಟಿಸಿಕೊಳ್ಳಬಹುದು. ಇದೇನು ಎಂದು ಆಶ್ಚರ್ಯ ಆಗುವುದು ಅಲ್ಲವೇ ??
ಭವಿಷ್ಯ ಪುರಾಣದ ಪ್ರಕಾರ, ದೇವರಾಜ ಇಂದ್ರನನ್ನು ರಕ್ಷಿಸಲು ಆತನ ಪತ್ನಿ ಶುಚಿ ರಕ್ಷಾ ಸೂತ್ರವನ್ನು ದೇವರಾಜ ಇಂದ್ರನಿಗೆ ಕಟ್ಟುತ್ತಾಳೆ. ಇದರ ಕುರಿತು ಒಂದು ಕಥೆಯೇ ಇದೆ. ಈ ಕಥೆಯ ಪ್ರಕಾರ, ವ್ರತಾಸುರ ಎನ್ನುವ ರಾಕ್ಷಸನು ಅತ್ಯಂತ ಶಕ್ತಿಶಾಲಿ ಅಸುರನಾಗಿದ್ದನು. ಯಾರಿಂದಲೂ ಆತನನ್ನು ಸೋಲಿಸಲಾಗದಷ್ಟು ಬಲಶಾಲಿಯಾಗಿದ್ದನು. ಆತನನ್ನು ಸೋಲಿಸಲು ದೇವರಾಜ ಇಂದ್ರ ಎಷ್ಟೇ ಪ್ರಯತ್ನಿಸಿದರೂ ಇಂದ್ರನೇ ಸೋಲನುಭವಿಸಬೇಕಾಯಿತು.
ಪತ್ನಿಯ ರಕ್ಷಾ ಸೂತ್ರದಿಂದ ಇಂದ್ರನು ಗೆಲುವನ್ನು ಸಾಧಿಸಿದನು:
ಇಂದ್ರನ ಸೋಲನ್ನು ಕಂಡು, ವ್ರತಾಸುರನ ಬಲವನ್ನು ಕಂಡು ಇಂದ್ರನ ಪತ್ನಿ ಶುಚಿ ದೇವಿಗೆ ಚಿಂತೆಯಾಗತೊಡಗಿತು. ತನ್ನ ಪತಿಯನ್ನು ಎಲ್ಲಿ ಕಳೆದುಕೊಳ್ಳಬೇಕಾದಿತೋ ಎನ್ನುವ ಭಯ ಮೂಡಿತು. ಆಗ ಶುಚಿಯು ತನ್ನ ತಪೋಬಲದಿಂದ ರಕ್ಷಾ ಸೂತ್ರವನ್ನು ತಯಾರಿಸಿ ಇಂದ್ರನ ಮಣಿಕಟ್ಟಿಗೆ ಕಟ್ಟುತ್ತಾಳೆ. *ಆಕೆ ಇಂದ್ರನಿಗೆ ರಕ್ಷಾ ಸೂತ್ರ ಕಟ್ಟಿದ ದಿನವನ್ನೇ ಇಂದು ರಕ್ಷಾ ಬಂಧನವೆಂದು ಕರೆಯಲಾಗುತ್ತಿದೆ*. ರಕ್ಷಾ ಸೂತ್ರದಿಂದಾಗಿ ಇಂದ್ರನು ವ್ರತಾಸುರನ ವಿರುದ್ಧ ಜಯವನ್ನು ಸಾಧಿಸುತ್ತಾನೆ. ನಂತರ ಲಕ್ಷ್ಮಿ ಕೂಡ ರಾಜ ಬಲಿ ಚಕ್ರವರ್ತಿಗೆ ರಕ್ಷಾ ಸೂತ್ರವನ್ನು ಕಟ್ಟಿ ತನ್ನ ಪತಿಯನ್ನು ಮರಳಿ ಪಡೆಯುತ್ತಾಳೆ.
ಇದು ರಕ್ಷಾ ಬಂಧನ ಆಚರಣೆಯ ಹಿಂದಿರುವ ಹಿನ್ನೆಲೆ. ರಕ್ಷಾ ಬಂಧನವನ್ನು ಆಚರಿಸುವ ಮುನ್ನ ನಾವು ಅದರ ಹಿನ್ನೆಲೆಯನ್ನು ತಿಳಿದುಕೊಂಡಿರಬೇಕಲ್ಲವೇ..?
ನಿಮಗೆ ಸಹೋದರನಿಲ್ಲದಿದ್ದರೆ ನೀವು ಇನ್ನೊಂದು ಉಪಾಯವನ್ನು ಮಾಡಬಹುದು. ಅದೇನೆಂದರೆ ನೀವು ರಕ್ಷಾ ಬಂಧನದಂದು ಸ್ನಾನ ಮಾಡಿ, ನಂತರ ಕೃಷ್ಣನ ಮೂರ್ತಿಯ ಮುಂದೆ, ಫೋಟೋದ ಮುಂದೆ ರಾಖಿಯನ್ನಿಟ್ಟು ಭಕ್ತಿಯಿಂದ ಪೂಜಿಸಬಹುದು.
ಒಟ್ಟಾರೆ ರಕ್ಷಾ ಬಂಧನ ಎಂದರೆ ನಮ್ಮವರು ಎಂಬ ಬಾಂಧವ್ಯ ಹೊಂದಿರುವವರಿಂದ ರಕ್ಷಣೆಯನ್ನು ಕೋರಿ ಸೂತ್ರವನ್ನು ಕಟ್ಟುವುದು. ನೀವೂ ಕೂಡ ಎಲ್ಲರೂ ನಿಮ್ಮವರಿಗೆ ರಾಖಿ ಅಥವಾ ರಕ್ಷಾ ಸೂತ್ರವನ್ನು ಕಟ್ಟಿ / ಕಟ್ಟಿಸಿಕೊಂಡು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಿ.
ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ