ಗಜಲ್ : ಗೆಳತಿ…..

0
196

ಗೆಳತಿ…….

ಕಣ್ಣ ಪರದೆಯ ಮೇಲೆ ನಿನ್ನಯ ಬಣ್ಣಚೆಲ್ಲಿದೆ ಮುಚ್ಚಲಿ ಹ್ಯಾಂಗ ಗೆಳತಿ
ಸುಣ್ಣದ ಹರಳ ಹೊಳಪಿನ ಕಣ್ಣಿಗೆ ರೆಪ್ಪೆಗಳು ಹೊಚ್ಚಲಿ ಹ್ಯಾಂಗ ಗೆಳತಿ

ಬಚ್ಚಿಡುವ ಆಸೆಯಿದೆ ಬೊಗಸೆಯಲ್ಲಿ ಅದು ಸಾಧ್ಯವೇ ಹೇಳು ಪ್ರಿಯೆ
ಮುಚ್ಚಿಟ್ಟ ರೂಪರಾಶಿ ಕದಿಯುವ ರೆಪ್ಪೆಯನು ನೆಚ್ಚಲಿ ಹ್ಯಾಂಗ ಗೆಳತಿ

ಎನ್ನೆದೆ ಗೊಡೆಗೆ ತೂಗಿ ಹಾಕಿರುವೆ ನಿನ್ನ ಭಾವ ತುಂಬಿದ ಭಾವಚಿತ್ರವ
ಕಣ್ಸನ್ನೆಯಲಿ ತಿವಿದು ನೋವು ನೀಡಲು ದಾರ ಬಿಚ್ಚಲಿ ಹ್ಯಾಂಗ ಗೆಳತಿ

ಹತ್ತಿಯ ಹಾಗೆ ಮೆತ್ತನೆಯ ದೇಹವು ಮುಟ್ಟಿ ನೋಡುವ ಬಯಕೆ ಮನದಿ
ನಿತ್ಯವು ಹೊಳೆವ ಮೈಕಾಂತಿ ಕೊಳೆಯಾದ ಕೈಯ ಹಚ್ಚಲಿ ಹ್ಯಾಂಗ ಗೆಳತಿ

ಯಾವ ಮರದ ಹಣ್ಣು ಯಾವ ದೇವರ ನೈವೇದ್ಯ ಗೊತ್ತಿಲ್ಲ ಶಾಂತಿಪ್ರಿಯ
ಭಾವ ಅರಿಯದೆ ದಾಹವು ತೀರಿಸಲು ನಿನ್ನರಸಗಲ್ಲ ಕಚ್ಚಲಿ ಹ್ಯಾಂಗ ಗೆಳತಿ

ಸಿದ್ಧರಾಮ ಸಿ ಸರಸಂಬಿ, ಕಲಬುರ್ಗಿ