ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

0
171

 

ಹೇಳಿಕೊಡುವಂಥ ಗುರುವರನಿಲ್ಲದಿದ್ದರೂ
ಏಕಲವ್ಯನು ಕಲಿತ ಧನುರ್ವಿದ್ಯೆ
ಹಿಂದೊಬ್ಬ ಗುರುವಿಲ್ಲದಿದ್ದರೂ ನಡೆದೀತು
ಮುಂದೊಂದು ಗುರಿಯಿರಲಿ – ಎಮ್ಮೆತಮ್ಮ

ಶಬ್ಧಾರ್ಥ
ಗುರುವರ = ಗುರು ಶ್ರೇಷ್ಠ

ತಾತ್ಪರ್ಯ
ಪ್ರತಿಯೊಬ್ಬರಲ್ಲಿ‌ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಗುರುವು‌ ನಿಮಿತ್ತ ಮಾತ್ರ. ಅದನ್ನು ಗುರುತಿಸಿ ಹೊರಗೆ
ತರುತ್ತಾನೆ. ನಮ್ಮ‌‌ ಸಾಮರ್ಥ್ಯ‌ ನಮಗೆ‌ ಗೊತ್ತಾಗುವುದಿಲ್ಲ.
ಗುರುವಿನಲ್ಲಿ ಭಕ್ತಿಶ್ರದ್ಧೆಯಿದ್ದರೆ ಸಾಕು ವಿದ್ಯೆ ತನ್ಮಷ್ಟಕ್ಕೆ ತಾನೆ
ಕರಗತವಾಗುತ್ತದೆ. ಕಾಡಿನಲ್ಲಿದ್ದ ಏಕಲವ್ಯನು ರಾಜಗುರು ದ್ರೋಣಾಚಾರ್ಯರ ಮೂರ್ತಿಯನ್ನು ಇಟ್ಟು ಅದರ ಮುಂದೆ
ಬಿಲ್ವಿದ್ಯೆ ಕಲಿತು ಪಾರಂಗತನಾಗುತ್ತಾನೆ. ಕುವೆಂಪುರವರ ಒಂದು ಕವನ ಹೀಗಿದೆ. “ಅಂದು? ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತಿತ್ತು ಧೀರರ ದಂಡು”.ಇದನ್ನು ನಾವು ಹೀಗೆ ಹೇಳಬಹುದು. ಹಿಂದೆ ಗುರುವಿಲ್ಲದಿದ್ದರು ಮುಂದೆ ಒಂದು ಗುರಿಯೊಂದಿದ್ದರೆ ಸಾಕು‌ ಅದನ್ನು ಗಳಿಸಲು ಸಾಧ್ಯವಾಗುತ್ತದೆ. ನಾವು ಮೊದಲು ಸಾಧಿಸುವ ಒಂದು ಗುರಿಯಿಟ್ಟುಕೊಳ್ಳಬೇಕು. ಮುಂದೆ ಆ ಗುರಿಯನ್ನು ಸುಲಭವಾಗಿ ಮುಟ್ಟಬಹುದು.

ನಮ್ಮ ಅರಿವೆ ನಮಗೆ ಗುರುವೆಂದು ಶರಣರ ವಚನವಿದೆ. ಅದನ್ನೆ ಡಿವಿಜಿ “ನಿನಗಾರು ಗುರುವಹರು? ನೀನೊಬ್ಬ ತಬ್ಬಲಿ ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು |ದಿನವ ಕಳೆ; ಗುರು ಶಿಷ್ಯ ಪಟ್ಟಗಳು ನಿನಗೇಕೆ?ನಿನಗೆ ನೀನೇ ಗುರುವೊ – ಮಂಕುತಿಮ್ಮ”ಎಂದು‌ ಹೇಳುತ್ತಾರೆ. ಮೊದಲು ಗುರಿ ಮುಖ್ಯ. ಆಮೇಲೆ ನಮಗೆ ನಾವೆ ಗುರುವಾಗಿ ಗುರಿ ಸಾಧಿಸಲು ಸಾಧ್ಯವಾಗುತ್ತದೆ.

ರಚನೆ ಮತ್ತು ವಿವರಣೆ ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990