ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್‌ನ ಅಣ್ಣಾವ್ರ ಅಭಿಮಾನಿ ಮೈಸೂರು ಜಯರಾಂರವರಿಂದ ಆಯೋಜನೆ
ಮೈಸೂರು -ನಗರದ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಅಣ್ಣಾವ್ರ ಅಪ್ಪಟ ಅಭಿಮಾನಿ ಮೈಸೂರು ಜಯರಾಂರವರ ನೇತೃತ್ವದಲ್ಲಿ ೪ನೇ ‘ವಿಷ್ಣು ಸಂಭ್ರಮ’ ಸಂಗೀತ ಸಂಜೆ ನೈಜ ವಾದ್ಯಗಳ (ಲೈವ್ ಮ್ಯೂಸಿಕ್) ಕಾರ್ಯಕ್ರಮ ಇತ್ತೀಚೆಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಸುಂದರವಾದ ದೀಪಾಲಂಕಾರ, ಉತ್ತಮ ವೇದಿಕೆ, ಒಳ್ಳೆಯ ಗುಣಮಟ್ಟದ ಧ್ವನಿವರ್ಧಕ ಹಾಗೂ ತುಂಬಿದ ಸಭಾಂಗಣದಲ್ಲಿ ಅತಿ ಹೆಚ್ಚು ಪ್ರೇಕ್ಷಕರಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಲಾವಿದರು ಡಾ.ವಿಷ್ಣುವರ್ಧನ್ ಅಭಿನಯಿಸಿರುವ ಚಲನಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆಯನ್ನು ನೀಡಿದರು.
ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳ್ಳೆ ಆಳ್ವಾರ್ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ, ಮಾತನಾಡಿ, ಮೈಸೂರು ಜಯರಾಂ ನಗರದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ, ಪ್ರೇಕ್ಷಕರ ಮನದಾಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇವರು ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿದ್ದರೂ, ವಿಷ್ಣುವರ್ಧನ್‌ರವರ ಕಾರ್ಯಕ್ರಮ ಮಾಡಿರುವುದು ಸಮಾಜಕ್ಕೆ ಮಾದರಿಯ ಸಂದೇಶ. ಜೊತೆಗೆ ನೂರಾರು ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿ, ನಿಸ್ವಾರ್ಥ ಸೇವೆಯಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ, ಕಲೆಯನ್ನು ಉಳಿಸಿ, ಬೆಳೆಸುತ್ತಿರುವ ಇಂತಹ ಕಲಾವಿದನಿಗೆ ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಅಥವಾ ಇನ್ನಿತರ ಪ್ರಶಸ್ತಿಯನ್ನು ನೀಡುವಲ್ಲಿ ಗಮನ ಹರಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ.ನಾಗರಾಜ್ ವಿ.ಭೈರಿಯವರು ಮಾತನಾಡಿ, ಇವತ್ತು ಎರಡು ಅದ್ಭುತ ಒಂದು ಡಾ.ವಿಷ್ಣುವರ್ಧನ್ ಅವರು ಅಗಲಿ ಬಹಶಃ ೧೪ ವರ್ಷ ಕಳೆದಿರಬೇಕು. ಇಷ್ಟು ವರ್ಷಗಳು ಕಳೆದರೂ ಕೂಡ ಅವರ ನೆನಪಿನಲ್ಲಿ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಹೆಮ್ಮೆಯ ವಿಚಾರ. ಮತ್ತೊಂದು ಏನೆಂದರೆ ಇಲ್ಲಿಗೆ ಬಂದ ತಕ್ಷಣ ನನಗೆ ಇಲ್ಲಿನ ದೀಪಾಲಂಕಾರ, ಗುಣಮಟ್ಟದ ಧ್ವನಿವರ್ಧಕ, ವೇದಿಕೆ ನೋಡಿ ಯಾವುದೋ ೩ಡಿ ಚಲನಚಿತ್ರಕ್ಕೆ ಬಂದಿದ್ದೀನೇನೋ ಎಂಬ ಭಾವನೆ ಭಾಸವಾಯಿತು. ಮೈಸೂರು ಜಯರಾಂರವರ ಈ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ವಮಂಗಳ ಅವರು ಪ್ರಾರ್ಥನೆ ಸಲ್ಲಿಸಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ತಂಡದ ಕಲಾವಿದರಿಂದ ‘ಸುಪ್ರಭಾತ’ ಚಿತ್ರದ ಹಾಡನ್ನು ಜಗದೀಶ್, ‘ಬಂಧನ’ ಚಿತ್ರದ ಯುಗಳ ಗೀತೆಯನ್ನು ಚಂದ್ರಶೇಖರ್ ಹಾಗೂ ಅಶ್ವಿನಿ ಶಾಸ್ತ್ರಿ, ‘ಕೋಟಿಗೊಬ್ಬ’ ಚಿತ್ರದ ಹಾಡನ್ನು ರಾಮಚಂದ್ರು ಹಾಗೂ ಸಂಗಡಿಗರು, ‘ಸಿಂಹಾದ್ರಿಯ ಸಿಂಹ’ ಚಿತ್ರದ ಗೀತೆಯನ್ನು ಅನಿತಾ ಹಾಗೂ ನಂದಕುಮಾರ್, ‘ಕದಂಬ’ ಚಿತ್ರದ ಸಂಗಾತಿಯೇ, ‘ಜೀವನದಿ’, ಎಲ್ಲೋ ಯಾರೋ ಹೇಗೋ ಈ ಗೀತೆಗಳನ್ನು ಮೈಸೂರು ಜಯರಾಂ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ವೇದಿಕೆಯಲ್ಲಿ ಕೊಳ್ಳೇಗಾಲ ಮಾಜಿ ಶಾಸಕ ಬಾಲರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಸಂಸ್ಕೃತಿ ಚಿಂತಕ ರಘುರಾಂ ವಾಜಪೇಯಿ, ಉದ್ಯಮಿ ರವಿಗೌಡ, ವೈ.ಡಿ.ರಾಜಣ್ಣ, ಸಮಾಜ ಸೇವಕಿ ಲತಾ ಬಾಲಕೃಷ್ಣ, ಕಬಾನಾ ಗಾರ್ಡನ್ ಮಾಲೀಕ ದೇವಪ್ರಕಾಶ್, ನಿವೃತ್ತ ರೈಲ್ವೆ ಅಧಿಕಾರಿ ಓಂಪ್ರಕಾಶ್, ಹಿರಿಯ ಬಿಜೆಪಿ ಮುಖಂಡ ಗೋಪಾಲರಾವ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.