ಮೂಡಲಗಿ – ನ.೧ ಕರ್ನಾಟಕ ರಾಜ್ಯೋತ್ಸವದಂದು ತಾಲೂಕಿನ ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅನೇಕ ಕಲಾತಂಡಗಳು, ಕಲಾವಿದರಿಂದ ಕನ್ನಡಾಂಬೆಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ನಮ್ಮ ಕರವೇ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ರಾಜ್ಯೋತ್ಸವದ ನಿಮಿತ್ತ ಯಾದವಾಡ ಗ್ರಾಮದಲ್ಲಿ ‘ಯಾದವಾಡ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮ ನಡೆಸುವ ಮೂಲಕ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಈ ಸಲ ಸ್ಥಳೀಯ ಗ್ರಾಮ ಪಂಚಾಯತ ಉಪ ಚುನಾವಣೆ ಹಾಗೂ ದೀಪಾವಳಿ ಹಬ್ಬ ಇರುವುದರಿಂದ ನ. ೧ ರಂದು ಮೆರವಣಿಗೆ ಹಮ್ಮಿಕೊಂಡು ‘ ಸಾಂಸ್ಕೃತಿಕ ಉತ್ಸವ’ ವನ್ನು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ಕರವೇ ಅಧ್ಯಕ್ಷ ಅಜಯ ಜಾಧವ ಮಾತನಾಡಿ, ಕಳೆದ ೧೫ ವರ್ಷಗಳಿಂದ ರಾಜ್ಯೋತ್ಸವವನ್ನು ಯಾದವಾಡ ಗ್ರಾಮದಲ್ಲಿ ನಮ್ಮ ಕರವೇ ಸಂಘದಿಂದ ಅದ್ದೂರಿಯಾಗಿ ಆಚರಿಸುತ್ತ ಬರಲಾಗುತ್ತಿದೆ. ಈ ಸಲವೂ ಗ್ರಾಮದ ಪೇಟೆಯ ಮಧ್ಯೆ ಇರುವ ಧ್ವಜಸ್ಥಂಭಕ್ಕೆ ಪೂಜೆ ನಂತರ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಯುವಘಟಕದ ಮುಖಂಡರು ವೆಂಕಟೇಶ ಇಟ್ಟನ್ನವರ ಹಾಗೂ ಪದಾಧಿಕಾರಿ ಮಲಿಕಜಾನ್ ಝಾರೆ ಉಪಸ್ಥಿತರಿದ್ದರು.