- Advertisement -
ಚಿಂಚಣಿಯ ಚಿಜ್ಯೋತಿ
ಗದುಗಿನ ಗುರುಗಳ
ಪಡಿನೆರಳಾಗಿ
ಕನ್ನಡ -ಕನ್ನಡಿಗ-ಕರ್ನಾಟಕ
ಕೈಂಕರ್ಯಕ್ಕೆ ಕಟಿಬದ್ಧರಾಗಿ
ಸಮಾಜ ಸೇವಾ ದೀಕ್ಷೆಗೆ
ಕಂಕಣಬದ್ಧರಾದ
ತಾವು-
ಎರಡೂವರೆ ದಶಕಗಳ ಕಾಲ
ಗಡಿನಾಡಿನ ಗಡಿಗೆಯಲ್ಲಿ
ಕನ್ನಡದ ಅಡುಗೆ ಮಾಡಿ
ಪ್ರೀತಿಯಿಂದ ಉಣಬಡಿಸಿ
ಕನ್ನಡಿಗರಂತರಂಗದಲಿ
ಅಂತಃಕರಣದ
ಭಾಗವಾದಿರಿ.
ನಡೆಯೊಳಗೆ ನುಡಿ
ನುಡಿಯೊಳಗೆ ನಡೆ
ಈ ಉಭಯಗಳಲಿ
ಕನ್ನಡವನೆ ತುಂಬಿ
ಗಡಿಯ ಅಡಿಅಡಿಗಳಲಿ
ಕನ್ನಡ ಡಿಂಡಿಮವ
ಮೊಳಗಿಸುತ
ಅನ್ನ ಭಾಷಿಕರೆದೆಗಳಲಿ
ಕನ್ನಡವ ಬಿತ್ತಿ ಬೆಳೆದು
ಸಂಭ್ರಮಿಸಿದ
ತಾವು
ಚಿಂಚಣಿಯ ಚಿಜ್ಯೋತಿಯಾಗಿ
ಕನ್ನಡಿಗರ ಕಣ್ಮಣಿಯಾಗಿ
ಕಂಗೊಳಿಸಿದಿರಿ.
- Advertisement -
‘ಬಸವ ಕನ್ನಡ ‘ವೆಂಬ
ಷಡಕ್ಷರಿ ಮಂತ್ರವನು
ಜಪಿಸುತ್ತ, ಅವುಗಳನೆ
ಶ್ರೀ ಮಠದ
ಕಾಯಕವಾಗಿರಿಸಿಕೊಂಡ
ತಾವು
ಕನ್ನಡ ಮಠದ
ಕನ್ನಡದ ಸ್ವಾಮೀಜಿಯಾಗಿ
ಕನ್ನಡ ಸಾರಸ್ವತ
ಲೋಕದಲಿ
ಕನ್ನಡ ಸುವರ್ಣ
ಪುಷ್ಪಗಳನ್ನರಳಿಸಿ
ಧ್ರುವತಾರೆಯಂದದಿ
ಮಿನುಗುತಿರುವಿರಿ.
ಶ್ರೀಪಾದ ಕುಂಬಾರ, ಚಿಕ್ಕೋಡಿ.