ಕರ್ಮಚಾಟಿಯ ಸುತ್ತಿ ಧರೆಗೆ ಬೀಸಿದರೆ ವಿಧಿ
ಗರಗರನೆ ತಿರುಗುತಿಹ ಬುಗುರಿ ನೀನು
ರಿಣಬಲವು ತೀರಿದರೆ ಧರೆಗುರುಳಿ ಪವಡಿಸುವೆ
ಸ್ವಾತಂತ್ರ್ಯ ನಿನಗಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಚಾಟಿ = ಬುಗುರಿಯ ದಾರ. ಧರೆ = ಭೂಮಿ. ವಿಧಿ = ಬ್ರಹ್ಮ
ರಿಣ = ಋಣ .ಪವಡಿಸು = ಮಲಗು
ತಾತ್ಪರ್ಯ
ಪೂರ್ವ ಜನ್ಮದಲ್ಲಿ ಮಾಡಿದ ಕರ್ಮವೆಂಬ ಚಾಟಿಯನ್ನು
ನಿನ್ನ ದೇಹವೆಂಬ ಬುಗುರಿಗೆ ಸುತ್ತಿ ಸೃಷ್ಟಿಕರ್ತ ಭೂಮಿಗೆ ಬೀಸಿ
ಒಗೆಯುತ್ತಾನೆ. ಭೂಮಿಯ ಋಣ ಇರುವವರೆಗೆ ಗರಗರನೆ
ತಿರುಗುತ್ತದೆ. ಅನ್ನ ಋಣ, ನೀರ ಋಣ,ಗಾಳಿ ಋಣ ಮುಂತಾದ
ಋಣಗಳು ತೀರಿದಾಕ್ಷಣ ತಿರುಗುವುದು ನಿಲ್ಲಿಸಿ ನೆಲದ ಮೇಲೆ
ಉರುಳಿ ಬೀಳುತ್ತದೆ. ಈ ದೇಹ ಬಣ್ಣದ ಬುಗುರಿಯಂತೆ
ತನ್ನ ಶಕ್ತಿಯಿರುವವರೆಗೆ ಹರಿದಾಡುತ್ತದೆ. ತನ್ನಷ್ಟಕ್ಕೆ ತಾನು
ತಿರುಗುವ ಅಥವಾ ಒರಗುವ ಸ್ವಾತಂತ್ರವಿಲ್ಲ. ಅವನು
ಕರ್ಮಾನುಸಾರ ನಿರ್ಧರಿಸಿದ ತೆರದಿ ಸುತ್ತಬೇಕು ಇಲ್ಲ
ಸತ್ತುಹೋಗಬೇಕು. ಒಂದು ಅಗುಳು ಹೆಚ್ಚಿಲ್ಲ ಮತ್ತು ಒಂದು
ಅಗುಳು ಕಡಿಮೆಯಿಲ್ಲ.ಒಂದು ನಿಮಿಷ ಹೆಚ್ಚಿಲ್ಲ ಮತ್ತು ಒಂದು ನಿಮಿಷ ಕಡಿಮೆಯಿಲ್ಲ. ಋಣ ತೀರಿದಾಕ್ಷಣ ಹೊರಟು ಹೋಗಲೇಬೇಕು. “ಒಂದಗುಳು ಹೆಚ್ಚಿರದು ಒಂದಗುಳು ಕೊರೆಯಿರದು |ತಿಂದು ನಿನ್ನನ್ನ ಋಣ ತೀರುತಲೆ ಪಯಣ||
ಹಿಂದಾಗದೊಂದು ಚಣ ಮುಂದಕುಂ ಕಾದಿರದು |ಸಂದ
ಲೆಕ್ಕವದೆಲ್ಲ – ಮಂಕುತಿಮ್ಮ|| ಎಂದು ಡಿವಿಜಿಯವರು
ಹೇಳಿದ್ದಾರೆ. ಅನ್ನ ಋಣ ಮತ್ತು ಆಯುಷ್ಯ ತೀರಿದಾಕ್ಷಣ
ಪರಲೋಕಕ್ಕೆ ಪ್ರಯಾಣ ಮಾಡಲೇಬೇಕು ಎಂಬುದು
ಗುಂಡಪ್ಪನವರ ಕಗ್ಗದ ಸಾರಾಂಶ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990