ಭ್ರೂಣವು
.ಹೊಸ ಬಸುರಿನ
ಒಡಲೊಳಗೆ
ಚಿಗುರೊಡೆದ
ಭ್ರೂಣವು
ಒಡಲಾಚೆ ವಿಶ್ವದಿ
ಮೊಟ್ಟೆಯೊಡೆದು
ಹುಟ್ಟ ಬಯಸುವ
ಪಕ್ಷಿಯು
ಕಡಲೊಳಗೆ
ಕಣ್ಣ್ತೆರೆದು
ಕನಸು ಕಾಣುವ
ಪುಟ್ಟ ಮೀನು
ಜೀವಜಾಲದ ಮಧ್ಯೆ
ನಗೆಯ ಪರಿಮಳ
ಕಂಪು ಸೂಸುವದು
ಮುಗ್ಧ ಭಾವ
ಮೊಳಕೆಯೊಡೆವ
ಜೀವಕೆ ಗೊತ್ತಿಲ್ಲ
ಹೆಣ್ಣೋ ಗಂಡೋ?
ಸಮಕಳೆ ಶಾಂತಿ ಮಂತ್ರ
________________________
ನೆಲವನಾಳುವ
ನೆಲವನಾಳುವ
ನೀಚ ಮನುಜರೆ
ಏಕೆ ಕಾಡು
ಕೊಲ್ಲುತಿರಿ
ಮರದ ಪೊದರಲಿ
ಪುಟ್ಟ ಪಕ್ಷಿ
ನಗುವ ಕಲೆಗೆ
ಏಕೆ ಕಲ್ಲು
ಹೊಡೆಯುವಿರಿ
ನದಿಯೊಳಗೆ
ಕನಸು ಬಯಕೆ
ಜೀವ ಜಾಲದ
ಜಲಚರಗಳಿಗೆ
ವಿಷವನೇಕೆ
ಉಣಿಸುವಿರಿ
ಹಸಿರು ಮೇಯುವ
ಹಸು ಕರುಗಳು
ಜಿಂಕೆ ಆನೆ ಒಂಟೆ
ಅಡವಿಯ ಹುಲ್ಲು ಹಾಸಿಗೆ
ಏಕೆ ಬೆಂಕಿ ಹಚ್ಚುವಿರಿ
ನೆಲವ ಅಗಿದು
ಗಣಿಯ ಬಗೆದು
ಅದಿರು ಮಾರುವ
ಲೂಟಿ ಕೋರರೆ
ಮುಗಿಲು ಮುಟ್ಟುವ
ಫೋನ್ ಟವರ್
ಹದ್ದು ಗುಬ್ಬಿ
ಸಾಯುತಿವೆ
ಅಣು ಪರೀಕ್ಷೆ
ಬಾಂಬ್ ಗುಂಡು
ಯುದ್ಧ ಕದನ ನಿಲ್ಲವು
ಶುದ್ಧ ಗಾಳಿ ನಲುಗಿದೆ
ಪ್ರಳಯ ಘಂಟೆ ಮೊಳಗಿದೆ
ಜೀವಧಾತೆ ಮರುಗಿದೆ
ಜಗವ ನಾವು ಉಳಿಸಬೇಕು
ಎಲ್ಲ ಮರೆತು ನಗುತ ಬನ್ನಿ
________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ