Homeಲೇಖನಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..!

ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..!

ಹಾಸ್ಯ ಬರಹಗಳಿಗೆ ಹೆಸರಾದ ಎಸ್. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರು ಹಾಸ್ಯ ದರ್ಶನ ಮಾಸಪತ್ರಿಕೆ ಸಂಪಾದಕರು ಆಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರಿನಲ್ಲಿ ಕೆಲವು ಹಾಸ್ಯ ಕಾರ‍್ಯಕ್ರಮ ನೀಡಿದ್ದಾರೆ. ರಾವ್ ಗೊರೂರಿನಲ್ಲಿ ಬಹಳ ವಷ೯ ಆಡಿಟರ್ ಆಗಿದ್ದರು. ಆಗ ನಾನು ರಾವ್ ಜೊತೆಗೂಡಿ ಶಾಲಾ ಕಾಲೇಜುಗಳಲ್ಲಿ ಒಂದು ಗಂಟೆ ಹಾಸ್ಯ ಕಾರ‍್ಯಕ್ರಮ ನೀಡುತ್ತಿದ್ದೆವು. ಅವರು ಬೆಂಗಳೂರಿಗೆ ಹೋದ ನಂತರ ನಮ್ಮ ಜೊತೆಯ ಹಾಸ್ಯ ಕಾರ‍್ಯಕ್ರಮ ನಿಂತು ಹೋಯಿತು. ಬೆಂಗಳೂರಿನಲ್ಲಿ ಪಡಶೆಟ್ಟರೊಂದಿಗೆ ಹಾಸ್ಯ ಕಾರ್ಯಕ್ರಮ ಮುಂದುವರಿಸಿದ್ದಾಗಿ ಹೇಳಿದ್ದರು. ಇಲ್ಲಿ ಲೇಖಕರು ತಮ್ಮ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ಕೃತಿಗೆ ಇಳಿಸಿದ್ದಾರೆ.

ಲೇಖಕರು ೨ನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ ಊರಿನ ಗೌಡರ ತಂದೆಗೆ ೧೦೬ ವರ್ಷ ಆಗಿದ್ದು ತೀರಿಕೊಂಡರು. ಸುತ್ತಲ ಹಳ್ಳಿಗೆಲ್ಲಾ ಪ್ರಸಿದ್ಧರು. ಸಾವಿರಾರು ಜನ ಸೇರಿದ್ದಾರೆ. ಲೇಖಕರ ತಾಯಿ ಗೌಡರ ಸಾವನ್ನು ನೋಡಲು ಹೊರಟು ಬಾಲಕ ಹಿಂಬಾಲಿಸುತ್ತಾನೆ. ಅಲ್ಲಿ ತೀರಿಕೊಂಡ ಗೌಡರ ಶವದ ಮುಂದೆ ಕರೆಸಿಕೊಂಡ ಬಾಡಿಗೆ ಹೆಂಗಸರು ಅತ್ತು ಕರೆದು ಈ ಗೌಡರು ಹೇಗಿದ್ರು? ಹಾಗಿದ್ರು..ಹೀಗೆಲ್ಲಾ ಹಾಡಾಡಿ ಹೊಗಳಿ ಕೂಗಿ ಆ ಕೃತಕ ನಟನೆಗೆ ಬಾಲಕ ನಗುತ್ತಾನೆ. ಆಗ ತಾಯಿ ಹೊಡೆಯಲು ಬಾಲಕ ಅಳತೊಡಗುತ್ತಾನೆ. ಆಗ ಒಂದು ಹೆಂಗಸು ಬಾಲಕನ ಕಡೆ ಬಂದು ‘ ಏ ಕೂಸಾ ನೀನ್ಯಾಕೆ ಅಳ್ತೀಯಪ್ಪ, ಗೌಡರಂತು ಹೋಗಿಬಿಟ್ಟರು ಅಳಬೇಡ ಕಂದಾ.. ಎಂದು ಕೆನ್ನೆ ಸವರುತ್ತಾಳೆ.

ಲೇಖಕರು ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ೩೨ ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೖತ್ತರು. ನೆನ್ನೆ ಬೆಂಗಳೂರಿನಲ್ಲಿದ್ದೆ. ಅವರ ಪುಸ್ತಕ ಓದುತ್ತಾ ಮಧ್ಯೆ ಅವರಿಗೆ ಫೋನ್ ಮಾಡಿ ಎಲ್ಲಿದ್ದಿರಾ ಸಾರ್ ಎಂದೆ. ಗ್ರಂಥಾಲಯದಲ್ಲಿ ಇರುವುದಾಗಿ ಪಿಸುಧ್ವನಿಯಲ್ಲಿ ಹೇಳಿದರು. ಸೈಲೆಂಟ್ ಅದೆ. ಆನಂತರ ಅವರೇ ಪೋನ್ ಮಾಡಿದರು.

ಈಗೆಲ್ಲೂ ಹಾಸ್ಯ ಕಾರ‍್ಯಕ್ರಮ ನೀಡುತ್ತಿಲ್ಲವೇ? ಕೇಳಿದೆ. ನನಗೆ ಈಗ ವಯಸ್ಸು ೮೦ ಎಂದರು. ನಾನು ಈ ಹಿಂದೆ ಹಾಸನದಲ್ಲಿ ಶಾರದ ಕಲಾಸಂಘದ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ನಿರೂಪಕನಾಗಿ ಇವರ ಹಾಸ್ಯ ಭಾಷಣಕ್ಕೆ ಅವಕಾಶ ಒದಗಿಸಿದ್ದೆ. ಜನರಿಗೆ  ಶ್ರೀ ಕೃಷ್ಣ ಸಂಧಾನ ನಾಟಕ ನೋಡುವ ತರಾತುರಿ. ಹಾಗಾಗಿ ಇವರಿಗೆ ಹೆಚ್ಚು ಸಮಯಾವಕಾಶ ಸಿಗಲಿಲ್ಲ. ಪಾಪ, ಅಷ್ಟು ದೂರ (ಬೆಂಗಳೂರು) ಉತ್ಸಾಹದಿಂದ ಬಂದವರಿಗೆ ನಿರುತ್ಸಾಹ ಮಾಡಿಬಿಟ್ಟೆನಲ್ಲ ಎಂದು ಪೇಚಾಡಿಕೊಂಡೆ. ಸಾರ್, ನಿಮ್ಮ ಹಾಸ್ಯ ಕಾರ‍್ಯಕ್ರಮ ಬೇರೆಯೇ ಏರ್ಪಡಿಸಬೇಕು. ಹಾಡು. ಡ್ಯಾನ್ಸ್ ನಾಟಕ ನಡುವೆ ನಿಮ್ಮ ಹಾಸ್ಯ ಪ್ರೇಕ್ಷಕರಿಗೆ ತಲುಪಲಿಲ್ಲ ಎಂದೆ. ಛೇ ಛೇ ಹಾಗೆಂದುಕೊಳ್ಳಬೇಡಿ ಗೊರೂರು ಅನಂತರಾಜು. ನನಗೆ ಇಂತಹ ಭವ್ಯ ವೇದಿಕೆ ಒದಗಿಸಿಕೊಟ್ಟರಲ್ಲಾ ಅದೇ ದೊಡ್ಡದು ಎಂದರು. ಅದು ಅವರ ದೊಡ್ಡ ಗುಣ. ಅವರು ಅಂದು ಕೊಟ್ಟ ಪುಸ್ತಕ ಇಂದು ಓದಿದೆ. ಇದರಲ್ಲಿನ ಮೊದಲ ಲೇಖನ ನಮ್ಮೂರಿನ ಎರಡು ನಾಟಕಗಳು.

ನಮ್ಮೂರಿನಲ್ಲಿ ರೈತರು ಬಿಡುವಾಗಿರುವ ಸಮಯ ಬೇಸಿಗೆಯ ಕಾಲದಲ್ಲಿ ಬಹಳ ಉತ್ಸಾಹದಿಂದ ನಾಟಕ ಮಾಡಿ ರೈತ ಬಾಂಧವರು ಸಾಕಷ್ಟು ಸಂತೋಷಪಟ್ಟಿದ್ದಾರೆ. ನಾಟಕ ದ್ರೌಪದಿ ವಸ್ತ್ರಾಭರಣ. ನಮ್ಮೂರಿನ ಗಿರಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತ ಒಪ್ಪಿ ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ. ನಾಟಿಕಾರ ನಿಂಗಣ್ಣ ದುಶ್ಯಾಸನ ಪಾತ್ರ ವಹಿಸಿದ್ದ. ಪರಮಾನಂದೇಶ್ವರ ಯುವಕ ನಾಟಕ ಮಂಡಳಿ ಎಂದು ಹೆಸರನ್ನಿಟ್ಟು ಸುತ್ತಲ ಹಳ್ಳಿಗಳಿಗೆಲ್ಲ ಪ್ರಚಾರ ಮಾಡಲಾಯಿತು. ನಾಟಕ ರಾತ್ರಿ ೧೦.೩೦ಕ್ಕೆ ಪ್ರಾರಂಭವಾಯಿತು. ಊರ ಹೊರಗೆ ಹನುಮದೇವರ ದೇವಸ್ಥಾನ ಮುಂಭಾಗ ನಾಟಕದ ಸ್ಟೇಜ್ ಹಾಕಲಾಯಿತು.

ಸ್ಟೇಜ್ ಒಳಗೆ ಮೇಲೆ ಶ್ರೀಕೖಷ್ಣ ಕುಳಿತು ಅಲ್ಲಿಂದಲೇ ಸೀರೆ ಬಿಡುವ ವ್ಮವಸ್ಥೆ ಮಾಡಲಾಗಿತ್ತು. ಕಾಶಿರಾಯ ತೆಳ್ಳನೆಯ ಏಳು ಸೀರೆಗಳನ್ನು ಉಟ್ಟಿದ್ದ. ಪಾತ್ರದಾರಿಗಳ ನಟನೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ಒನ್ಸ್ ಮೋರ್ ಬದಲು ಮನಸ್ ಮೋರ್ ಎನ್ನುತ್ತಾರೆ. ಈಗ ದ್ರೌಪದಿ ವಸ್ತ್ರಾಭರಣ ಪ್ರಸಂಗ. ದುಃಖತಪ್ತಳಾದ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಶಾಸನ ನಾಟಿಕಾರ ನಿಂಗಣ್ಣ ನಿಧಾನವಾಗಿ ಸೀರೆ ಸೆಳೆಯುವುದನ್ನು ಬಿಟ್ಟು ತುಂಬಾ ಜೋರಾಗಿ ಸೆಳೆಯುಲು ಪ್ರಾರಂಭಿಸಿದ. ಆಗ ಕಾಶಿರಾಯ ‘ಏ ನಿಂಗಣ್ಣ ನಿಧಾನವಾಗಿ ನನ್ನ ಸೀರೆ ಸೆಳೆ ಎನ್ನಬೇಕೆ? ಅವನು ಸಣ್ಣ ದನಿಯಲ್ಲಿ ಹೇಳಿದ್ದು ನಿಂಗಣ್ಣನಿಗೆ ಕೇಳಿಸಲಿಲ್ಲ. ಅದು ಯಾವ ಸ್ಫಿರಿಟ್ ಬಂದಿತ್ತೊ ನಿಂಗಣ್ಣ ಆರು ಸೀರೆ ಸೆಳೆದ. ಕೊನೆಯ ಸೀರೆ ಉಳಿದುಕೊಂಡಿದೆ. ಜೋರಾಗಿ ಎಳೆಯುತ್ತಿದ್ದಾನೆ. ಕಾಶಿರಾಯ ಸೀರೆಯ ಕೊನೆಯ ತುದಿ ಬಿಗಿಯಾಗಿ ಹಿಡಿದುಕೊಂಡು ಮೇಲಕ್ಕೆ ನೋಡಿ ಅಣ್ಣ ಕೖಷ್ಣ ನನ್ನ ಮಾನ ಕಾಪಾಡು.. ಆದರೆ ಅಷ್ಟರಲ್ಲಿ ನಿಂಗಣ್ಣ ಪೂರ್ತಿ ಸೀರೆ ಸೆಳೆದು ದ್ರೌಪದಿ ಅಂಡರ್ ವೇರ್ ಬನಿಯನ್ ಮೇಲೆ ನಿಂತ ದೃಶ್ಯ!

ಸದ್ಯ ಪ್ರೇಕ್ಷಕರು ಒನ್ಸ್ ಮೋರ್ ಎನ್ನಲಿಲ್ಲ ಅಷ್ಟೇ. ಕನ್ನಡ ಅಧ್ಯಾಪಕರಾಗಿದ್ದ ಲೇಖಕರು ಹತ್ತನೇ ತರಗತಿ ಮಕ್ಕಳಿಗೆ ರನ್ನನ ಗದಾಯುದ್ದ ಪಾಠ ಮಾಡಬೇಕಿತ್ತು. ವೈಶಂಪಾಯನ ಸನ್ನಿವೇಶ. ಭೀಮ ಅಲ್ಲಿಗೆ ಬಂದು ಅವಿತು ಕುಳಿತುಕೊಂಡ ದುರ್ಯೋಧನನ್ನು ಸರೋವರದಿಂದ ಹೊರಗೆ ಬರಲು ‘ಈ ಭೂತು ಎನ್ನ ಸರಂಗೇಳ್ದೊಲ್ಲದೆ ಪೊರ ಮಡುವನಲ್ಲಂ.. ಎಂದು ಗಡುಸಾಗಿ ಹೇಳುವುದನ್ನು ಹತ್ತಾರು ಸಲ ಓದಿ ಮನನ ಮಾಡಿಕೊಂಡು ರಾತ್ರಿ ನಿದ್ರೆಯಲ್ಲಿ ಪುನರುಚ್ಚರಿಸಿ ಪಕ್ಕದಲ್ಲಿ ಮಲಗಿದ್ದ ಹೆಂಡತಿ ಬೆನ್ನಿಗೆ ಗುದ್ದುತ್ತಾರೆ. ‘ಅಯ್ಯೋಯ್ಯಪ್ಪೊ..ಎಂದು ಹೆಂಡತಿ ಚೀರಿ ನಿದ್ರೆಯಿಂದ ಎಚ್ಚರವಾಗಿ ಸಾರಿ ಮಿಸ್..ಎನ್ನುತ್ತಾರೆ.

ಇನ್ನೊಂದು ಸಲ ರಾಘವಾಂಕನ ಹರಿಶ್ಚಂದ್ರ ಕಾವ್ಯ ಪಾಠ ಮಾಡಬೇಕಾಗಿತ್ತು. ಅದು ಚಂದ್ರಮತಿಯ ಪ್ರಲಾಪ. ಲೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸಾವಿಗೀಡಾದ ಸನ್ನಿವೇಶ. ಚಂದ್ರಮತಿ ಮಗುವಿನ ಬಳಿಯಲ್ಲಿ ಬಂದು ‘ಏವನೇವಲೆ ಮಗನೆ ಸಾವೇಕಾಯಿತ್ತಲೆ ಚೆನ್ನಿಗನೆ..ಎಂದು ರೋಧಿಸಿ ಅಳುವ ಪ್ರಸಂಗ. ಮಕ್ಕಳಿಗೆ ನೈಜ ಪಾಠ ಮಾಡಲು ರಾತ್ರಿಯೇ ತಾಲೀಮು ಮಾಡಿ ಮಲಗಿ ರಾತ್ರಿ ನಿದ್ರೆಯಲ್ಲಿ ರೋಧಿಸಿ ಅಳಲು ಗಾಬರಿಯಿಂದ ಎಚ್ಚರಗೊಂಡ ಮಡದಿ ಇಂಥ ಸರಿರಾತ್ರಿ ಏಕೆ ಅಳುತ್ತಿರುವಿರಿ ಡಿಯರ್..ಎನ್ನಲು ‘ಸಾರಿ ಚಂದ್ರಮತಿ.. ಎಂದು ಕನಸಿನಲ್ಲಿ ಕನವರಿಸುತ್ತಾರೆ.

ಮತ್ತೊಮ್ಮೆ ಹಾಸ್ಯ ಸಾಹಿತಿ ಬೀಚಿಯವರ ತಿಮ್ಮನ ತಲೆ ಪುಸ್ತಕ ಓದಿ ತಲೆಗೆ ತುಂಬಿಕೊಳ್ಳುತ್ತಾರೆ. ರಾತ್ರಿ ಮಲಗಿ ಪುಸ್ತಕದ ನಗೆ ಪ್ರಸಂಗ ನೆನೆದು ಜೋರಾಗಿ ನಗುತ್ತಾರೆ. ನಗುವಿನ ಧ್ವನಿಗೆ ಎಚ್ಚರವಾಗಿ ಹೆಂಡತಿ ‘ಏನ್ರೀ ನಿಮಗೆ ಬುದ್ಧಿಗಿದ್ಧಿ ಇದೆಯೇ. ಸುಮ್ಮಸುಮ್ಮನೆ ನನಗೆ ರಾತ್ರಿ ಹೊಡೆಯುತ್ತೀರಿ, ಅಳುತ್ತೀರಿ, ನಡುರಾತ್ರಿ ನಗುತ್ತೀರಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದಾಗ ಪಡಶೆಟ್ಟರು ಬೆಪ್ಪುತಕ್ಕಡಿ!

ಭಾನುವಾರ ಸಂಜೆ ಅಕ್ಕಪಕ್ಕದ ಮನೆಯ ಹೆಂಗಸರು ಶೆಟ್ಟರ ಮನೆಯಲ್ಲಿ ಒಟ್ಟಿಗೆ ಸೇರಿ ತಮ್ಮ ಗಂಡಂದಿರ ಬಗೆಗೆ ಹಾಸ್ಯವಾಗಿ ಮಾತನಾಡುತ್ತಿರಲು ಹೆಂಡತಿ ಮಾತು ಬೆಡ್ ರೂಂನಲ್ಲಿ ಮಲಗಿದ್ದ ಶೆಟ್ಟರ ಕಿವಿಗೆ ಬಿದ್ದು ತಲೆ ನೆಟ್ಟಗಾಗುತ್ತದೆ. ‘ನಮ್ಮನೆ ಯಜಮಾನರು ರಾತ್ರಿ ಹೊತ್ತು ಸುಮ್ಮಸುಮ್ಮನೆ ನನ್ನ ಬೆನ್ನಿಗೆ ಗುದ್ದುತ್ತಾರೆ, ಅಳುತ್ತಾರೆ, ಜೋರಾಗಿ ನಗುತ್ತಾರೆ ಹುಚ್ಚರಂತೆ ಆಡುತ್ತಾರೆ.. ಎನ್ನಲು ‘ಹಾಗಾದರೆ ನಿಮ್ಮ ಯಜಮಾನರಿಗೆ ಹುಚ್ಚು ಹಿಡಿದಿರುವುದು ಖರೆ ಎಂದು ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಲು ಸಲಹೆ ನೀಡುತ್ತಾರೆ. ಇದಕ್ಕೆ ಹೆಂಡತಿ ಸಮ್ಮತಿಸಿ ಮಗನಿಗೂ ಗುಟ್ಟಾಗಿ ಹೇಳಿ ನೆಟ್ಟಗೆ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಲೇಖಕರಿಗೆ ಪರಿಚಯವಿರುವ ಡಾ.ಸಿ.ಚಂದ್ರಶೇಖರ್ ಇರುತ್ತಾರೆ. ಲೇಖಕರು ಆಗಲೇ ಹಾಸ್ಯದರ್ಶನ ಮಾಸಪತ್ರಿಕೆ ತರುತ್ತಿದ್ದು ಪತ್ರಿಕೆಗೆ ಡಾಕ್ಟರ್ ಲೇಖನ ಬರೆದು ಪರಿಚಿತರಾಗಿದ್ದಾರೆ. ‘ಪಡಶೆಟ್ಟಿರೇ ನಿಮ್ಮ ಹಾಸ್ಯ ದರ್ಶನ ಪತ್ರಿಕೆಯಲ್ಲಿ ಬರುವ ಲೇಖನ ಚೆನ್ನಾಗಿವೆ. ನಿಮ್ಮ ಬುದ್ದಿಪೂರ್ವಕ ಸಂಪಾದಕೀಯ ತುಂಬಾ ಸ್ವಾರಸ್ಯಕರ.. ಎಂದು ಎಲ್ಲರಿಗೂ ಚಹ ತರಿಸಿ ಕಳಿಸುತ್ತಾರೆ.

ಪಡಶೆಟ್ಟರು ನಡೆಸುತ್ತಿದ್ದ ಹಾಸ್ಯ ದರ್ಶನ ಮಾಸಪತ್ರಿಕೆ ೧೫ ವರ್ಷಕ್ಕೆ ನಿಂತುಹೋಯಿತು. ಹಾಸ್ಯದರ್ಶನದಲ್ಲಿ ನನ್ನ ಹಾಸ್ಯ ಲೇಖನ ಪ್ರಕಟಿಸಿ ಅದಕ್ಕೊಂದು ಕಾಮಿಡಿ ಕಾರ್ಟೂನ್ ಬರೆಸಿ ಚೆನ್ನಾಗಿ ಪತ್ರಿಕೆ ತರುತ್ತಿದ್ದರು. ಲೇಖಕರು ಕನ್ನಡ ಪುಸ್ತಕ ಮಾರಾಟ ಮಾಡುವ ಜೊತೆಗೆ ಹಾಸ್ಯ ದರ್ಶನ ಮಾರುತ್ತಾ ಬರೆದ ಈ ಪ್ರಸಂಗ ತಮಾಷೆಯಾದರೂ ವಾಸ್ತವತೆ ಚಿತ್ರಿಸಿದೆ.
ವಿಜಾಪುರದೊಬ್ಬರು ಟ್ರಾನ್ಸ್ಫರಾಗಿ ತೋಟಗಾರಿಕೆ ಇಲಾಖೆಗೆ ಬಂದಿದ್ದರು. ಕರಿಕೋಟು ಕಚ್ಚೆಪಂಚೆ ಕರಿಟೋಪಿ ಹಾಕಿಕೊಂಡು ಇಲಾಖೆಯ ಫೈಲ್ಸ್ಗಳನ್ನು ಗಮನಿಸುತ್ತಿದ್ದರು. ನಾನು ಹೋಗಿ ಅವರಿಗೆ ನಮಸ್ಕರಿಸಿದೆ. ಅವರದು ಹೆಣ್ಣು ಧ್ವನಿ. ನನ್ನ ಹೆಗಲಲಿದ್ದ ಪುಸ್ತಕ ಬ್ಯಾಗ್ ನೋಡಿ ‘ಏನಿದು ಗಂಟು.. ಎಂದರು.
‘ಸರ್ ಇದು ಪುಸ್ತಕಗಳ ಗಂಟು.. ಒಂದೊಂದಾಗಿ ಪುಸ್ತಕಗಳನ್ನು ಅವರೆದುರಿಗಿಟ್ಟೆ.
‘ನಿಮ್ಮದೂ ಬರೀ ಪುಸ್ತಕ ಮಾರಾಟ ಮಾಡುವುದೇ ಕಸುಬೆ. ಮತ್ತೇನಾದರೂ ಉದ್ಯೋಗ ಮಾಡ್ತೀರಾ..
‘ಸರ್ ನಾನೊಂದು ಶಾಲೆಯಲ್ಲಿ ಕನ್ನಡ ಅಧ್ಯಾಪಕ. ಸುಮ್ಮನೆ ಬಿಡುವಿನ ವೇಳೆ ಪುಸ್ತಕ ಮಾರಾಟ ಮಾಡುತ್ತೇನೆ.

‘ವ್ಹಾ..ಶಹಬ್ಬಾಸ್.. ಅಲ್ರೀ ಮಾಸ್ತರ, ಸಾಲಿ ಮಾಸ್ತರಕಿ ಮಾಡ್ತೀರಾ. ಪುಸ್ತಕನು ಮಾರ‍್ತೀರಾ ವ್ಹಾ ತುಂಬಾ ಸಂತೋಷ..ಎಂದರು. ಅವರಿಗೆ ನಾನು ಹಾಸ್ಯ ದರ್ಶನ ಪತ್ರಿಕೆ ತೋರಿಸಿದೆ.
‘ಅಲ್ರೀ ಮಾಸ್ತರ, ಮಾಸ್ತರಿಕೀನು ಮಾಡ್ತೀರಾ, ಪುಸ್ತಕನೂ ಮಾರ್ತಿರಾ, ಪತ್ರಿಕೆನು ತರ್ತೀರಾ ಶಹಬ್ಬಾಸ್! ನಿಮಗೆ ಮಕ್ಕಳೆಷ್ಟು..?
ನನಗೆ ೪ ಜನ ಮಕ್ಕಳೆಂದೆ.
‘ಹೆಣ್ಣೇಸು ಗಂಡೇಸು..?
ಮೂರು ಹೆಣ್ಣು ಒಬ್ಬನೇ ಗಂಡು..
‘ನೀವು ಪುಸ್ತಕ ಮಾರ‍್ತೀರಾ. ೩ ಜನ ಹೆಣ್ಣು ಮಕ್ಕಳಿದ್ದಾರೆಂದರೆ ವರದಕ್ಷಿಣಿ ಕೊಡಲಿಕ್ಕೆ ರೊಕ್ಕ ಬೇಕಲ್ರ‍್ರೀ.. ಎಂದು ನಾನು ಕೊಟ್ಟ ಹಾಸ್ಯದರ್ಶನ ಓದಲಿಕ್ಕೆ ಪ್ರಾರಂಭಿಸಿದರು. ೫-೧೦ ನಿಮಿಷ ಮೌನ. ‘ಅಲ್ರೀ ಮಾಸ್ತಾರ ಹಾಸ್ಯದರ್ಶನ ಅಂತೀರಿ, ಒಂದು ನಗುವೇ ಬರಲಿಲ್ಲವಲ್ಲರೀ. ಇಂಥವೆಲ್ಲ ನನಗಿಷ್ಟವಿಲ್ಲ್ರೀ..
ಒಂದಾದರೂ ಪುಸ್ತಕ ತೆಗೆದುಕೊಳ್ರೀ ಎಂದೆ.

‘ಏನ್ರೀ ಮಾಸ್ತಾರ ಒಂದು ನಗುವೇ ಬರಲಿಲ್ಲವಲ್ಲರ‍್ರೀ. ನಮ್ಮ ಮನ್ಯಾಗ ಒಂದು ಕ್ವಾಡಗ ಅದ. ನಾನು ಯಾವಾಗ ತಾಳಿ ಕಟ್ಟಿದಾಗಿನಿಂದ ಒಂದು ದಿವಸನೂ ನಕ್ಕಿಲ್ಲರ‍್ರೀ. ನೀವು ಅವಳಿಗೆ ನಗುವ ಪುಸ್ತಕ ತಗೊಂಬರ‍್ರೀ ನಾನು ರೊಕ್ಕ ಕೊಟ್ಟು ತೆಗೆದುಕೊಳ್ಳುತ್ತೇನೆ. ಮತ್ತೆ ಮಾಸ್ತರ ಈ ಕನ್ನಡ ಪುಸ್ತಕ ಯಾರು ತಗೊಳ್ಳುತ್ತಾರೆ. ಯಾರು ತೊಗಳಲ್ರ‍್ರೀ. ಜೋಳದ ರೊಟ್ಟಿ ತಗೊರ‍್ರೀ ದುಮ್ಮಾ ಹಾರಿ ಹೋಗ್ತಾವ್. ನಾನು ಬಿಜಾಪುರದಿಂದ ಬಂದು ನಾಲ್ಕು ತಿಂಗಳಾತು. ರೊಟ್ಟಿ ಮಾರೀನೆ ನೋಡಿಲ್ಲ. ಜೋಳದ ಸಜ್ಜಿ ರೊಟ್ಟಿ ತೆಗೆದುಕೊಂಡು ಬರ‍್ರಿ. ನಿಮಗೆ ಒಳ್ಳೆಯ ವ್ಯಾಪಾರ ಆಗುತ್ತೆ. ಮಾಸ್ತಾರ ಒಂದು ವಿಷಯ ಹೇಳ್ತಿನಿ ಕೇಳ್ರೀ.. ಒಂದು ಹಾಸ್ಯ ದರ್ಶನ ಪ್ರತಿ ಕೊಂಡರೆ ಒಂದು ರೊಟ್ಟಿ ಫ್ರೀ ಎನ್ನಿರಿ. ಆಗ ನೋಡಿ ನಿಮ್ಮ ವ್ಯಾಪಾರ ದುಮ್ಮಾಹಾರಿ (ಸಿಕ್ಕಾಪಟ್ಟೆ) ನಿಮ್ಮೆಲ್ಲ ಪುಸ್ತಕ ಹೋಗುತ್ತವೆ… ಎಂದ ಆ ಮಹಾಶಯ ಕೊನೆಗೂ ಒಂದು ಪುಸ್ತಕ ತೆಗೆದುಕೊಳ್ಳುವುದಿಲ್ಲ.

ಪಡಶೆಟ್ಟರು ತರುತ್ತಿದ್ದ ಹಾಸ್ಯದರ್ಶನದಲ್ಲಿ ವೈವಿಧ್ಯ ಹಾಸ್ಯ ಬರಹ ಇರುತ್ತಿದ್ದವು. ಅಂತೆಯೇ ಇಲ್ಲಿಯೂ ಇವೆ.
ಗಿರಾಕಿ: ಸೆಲೂನಿನ ತುಂಬೆಲ್ಲ ಬರೀ ಪತ್ತೆದಾರಿ ಪುಸ್ತಕಗಳನ್ನಿಟ್ಟಿರುವಿರಲ್ಲ.. ಏನಾದರೂ ಪತ್ರಿಕೆ ಇಡಬಾರದೇ?
ಮಾಲೀಕ: ಸ್ವಾಮಿ, ಈ ಪತ್ತೆದಾರಿ ಕಾದಂಬರಿ ಓದುತ್ತಿರುವಂತೆ ಗಿರಾಕಿಗಳಿಗೆ ರೋಮಾಂಚನವಾಗಿ ಅವರ ಕೂದಲು ಸೆಟೆದು ನಿಲ್ಲುತ್ತೆ. ಆಗ ಅದನ್ನು ಕತ್ತರಿಸಲು ನನಗೆ ಸುಲಭ..!
ಶಿಕ್ಷಕ: ಸುರೇಶ, ಘಜನಿ ಮೊಹಮ್ಮದ್ ಭಾರತಕ್ಕೆ ಮೊದಲನೇ ಹೆಜ್ಜೆ ಇಟ್ಟ ಕೂಡಲೇ ಏನು ಮಾಡಿದ?
ಸುರೇಶ: ಎರಡನೇ ಹೆಜ್ಜೆ ಇಟ್ಟ.
ಆತ: ಯಾಕಿಷ್ಟು ನಗ್ತಿದಾನೆ ಆತ. ಈತ: ಅವನಿಗೆ ನಗಲಿಕ್ಕೆ ಇವತ್ತು ಕೊನೆ ದಿನ
ಆತ: ಅಂದ್ರೇ?
ಈತ: ನಾಳೆ ಆತನ ಮದುವೆ..!

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group