Homeಕವನಕವನ : ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ ನಮ್ಮಪ್ಪ

ಕವನ : ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ ನಮ್ಮಪ್ಪ

ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ ನಮ್ಮಪ್ಪ

ಸರಳ ವ್ಯಕ್ತಿತ್ವದ ಸೇವಾ ಪೂರ್ಣ
ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ
ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರ ನರ್ತನ
ಊರು ತೊರೆದು ತೋಟ ಸೇರಿದ ಕುಟುಂಬ
ಸುಂದರ ಪರಿಸರದಲ್ಲಿ
ಅಪ್ಪನ ಜನನ..

ಗದ್ದೆ ,ತೋಟ,ಸಹೋದರರೆಂದರೆ
ಅಪರಿಮಿತ ಪ್ರೀತಿ ,
ವೃತ್ತಿಯಲ್ಲಿ ಶಿಕ್ಷಕ , ಪ್ರವೃತ್ತಿಯಲ್ಲಿ ಕೃಷಿಕ
ಹಸು ಕಟ್ಟಿ ,ಸೆಗಣಿ ಬಾಚಿ ,ತೋಟ ಬಳಸಿ
ಸೈಕಲ್ಲು ಏರಿ ಶಾಲೆಗೆ ಹೊರಡುತ್ತಿದ್ದ
ಸಮಯ ಪಾಲಕ ,
ಅಪರೂಪದ ಶಿಕ್ಷಕ ನಮ್ಮಪ್ಪ..

ಹುಟ್ಟಿದೂರಿಗೆ. ಬದುಕಿನ ಪಾಠ ಹೇಳುವ ಐನೋರಾಗಿ ,
ಯುವ ಜನರಿಗೆ ತಿಳಿಹೇಳುವ
ಮಾರ್ಗದರ್ಶಕರಾಗಿ
ವ್ಯಾಜ್ಯ ಬಗೆಹರಿಸುವ ನ್ಯಾಯಸ್ಥರಾಗಿ
ಜಮೀನು ಅಳೆಯುವ ಮೋಜಿನಿ ದಾರರಾಗಿ
ಬೆಳೆಯುತ್ತಿದ್ದ ಪುಟ್ಟ ಮನಗಳಿಗೆ
ಆದರ್ಶ ಪುರುಷರಾದಿರಿ

ಮನೆ ತುಂಬ ನೆರೆ ಹೊರೆಯ ಮಕ್ಕಳು
ನಿಮ್ಮಿಂದ ಮಗ್ಗಿ ಕಾಗುಣಿತದ ಜೊತೆಗೆ
ಜೀವನದ ಪಾಠ ಕಲಿತರು..
ಜೀವನದಲ್ಲಿ ಎತ್ತರಕ್ಕೇರಿ ಸಾಧಕರಾದರು..
ಮನೆಯನ್ನೇ ಭೋಧನೆಯ
ಮಂತ್ರಾಲಯ ಮಾಡಿ ಬಿಟ್ಟಿರಿ ನೀವು..

ಅವಕಾಶಗಳೇ ಇಲ್ಲದ ಆ ದಿನಗಳಲ್ಲಿ
ಸಂಸ್ಕೃತ,ಉರ್ದು,ಇಂಗ್ಲೀಷ್ ಕಲಿತು
ಉರ್ದು ಸುಲಲಿತವಾಗಿ ಮಾತನಾಡುತ್ತಿದ್ದ ಸರ್ವ ಭಾಷಾ ವಿಜ್ಞಾನಿ ,
ಕೆಲಸ ಮಾಡಿದ ಶಾಲೆಗಳಲ್ಲಿ ಎಲ್ಲೆಡೆ
ತೆಂಗಿನ ಸಸಿಗಳ ನೆಟ್ಟು ಕಾಪಾಡಿದ
ಅಪೂರ್ವ ಪರಿಸರ ಸಂರಕ್ಷಕ,
ಗಣಿತದ ಕ್ಲಿಷ್ಟ ಸಮಸ್ಯೆಗಳ ಸರಳವಾಗಿ ಬಗೆಹರಿಸ್ತ್ತಿದ್ದ
ಅಪರೂಪದ ಗಣಿತಜ್ಞ ನಮ್ಮಪ್ಪ
ಎಲ್ಲ ಶಿಕ್ಷಕರಿಗೂ ಮಾದರಿ..

ಮಕ್ಕಳಿಗೆ ವಿದ್ಯೆ , ಸರಳ ಬದುಕಿನ ನೀತಿ
ಕಳಿಸಿ ಕೊಟ್ಟಿರಿ ನೀವು..
ನಿಮ್ಮೊಳಗಿನ ಸೋದರಿ ,ಸೋದರನ ಮರಣ,
ರೆಕ್ಕೆ ಬಿಚ್ಚಿ ಹಾರದ ಬೇಕಿದ್ದ ಮೊಮ್ಮಗನ ಸಾವು ,
ಬಾಳ ಕಣ್ಣಾಗಿದ್ದ ಪ್ರೀತಿಯ ಮಗಳ ಅಗಲಿಕೆ..
ದೇವ ಕೊಟ್ಟ ನೋವ ನಲಿವೆಲ್ಲವನೂ
ಸಮಾನ ಚಿತ್ರದಲ್ಲಿ ಸ್ವೀಕರಿಸಿದಿರಿ ನೀವು…

ನಿಮ್ಮ ಆದರ್ಶ ವ್ಯಕ್ತಿತ್ವ
ಜಾತ್ಯತೀತ ಚಿಂತನೆ ,
ಸರಳ ಜೀವನ , ಬದುಕು ಎದುರಿಸುವ ಪರಿ
ಇಂದಿನ ಯುವ ಜನಾಂಗಕ್ಕೆ ಆದರ್ಶ
ನಿಮ್ಮ ಬದುಕು ನಮಗೆ ದಾರಿದೀಪ..

ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು
ಸಾಹಿತಿಗಳು
ಮೈಸೂರು

RELATED ARTICLES

Most Popular

error: Content is protected !!
Join WhatsApp Group