Homeಲೇಖನಸಾರ್, ನನ್ನ ಕ್ಯಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು, ನಾನು ಸ್ನೇಹ ತೀರ್ಥಹಳ್ಳಿ

ಸಾರ್, ನನ್ನ ಕ್ಯಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು, ನಾನು ಸ್ನೇಹ ತೀರ್ಥಹಳ್ಳಿ

ಸಾರ್, ನಮಸ್ಕಾರ ನನ್ನ ಹೆಸರು ಸ್ನೇಹ ಅಂತ ಊರು ತೀರ್ಥಹಳ್ಳಿ. ಸಂಗೀತವನ್ನೇ ಕನಸು ಮನಸಲ್ಲೂ ಉಸಿರಲ್ಲೂ ನೋವು ಸಂತೋಷದಲ್ಲೂ ನನಗೆ ಮನಸ್ಸಿಗೆ ಬಂದಾಗೆಲ್ಲ ಹಾಡುವ ಒಂದು ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ನಾಲ್ಕನೇ ವರ್ಷದಿಂದ ನಾನು ವೇದಿಕೆಯಲ್ಲಿ ಹಾಡುತ್ತಿದ್ದೆ. ಪಿಯುಸಿವರೆಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಡಿ ಪ್ರಥಮ ಬಹುಮಾನವನ್ನೇ ಪಡೆಯುತ್ತಿದ್ದೆ. ಮದುವೆಯಾಗುವರೆಗೂ ಎಲ್ಲಾ ಕಡೆ ಸಂಗೀತ ಕಾರ್ಯಕ್ರಮಗಳನ್ನು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕೊಡ್ತಾ ಇದ್ದೆ. ಮದುವೆಯ ನಂತರ ನಮ್ಮೂರನ್ನು ಬಿಟ್ಟು ಬೇರೆ ಊರಿಗೆ ಹೋಗಬೇಕಾಗಿ ಅಲ್ಲಿ ನನ್ನನ್ನು ಗುರುತಿಸಿಕೊಳ್ಳುವುದು ಸ್ವಲ್ಪ ತಡ ಆಯಿತು. ಆದ್ರೂ ಒಮ್ಮೆ ಮನಸ್ಸು ಮಾಡಿ ಒಂದು ವೇದಿಕೆಗೆ ಹೋದೆ. ಅಲ್ಲಿ ಭಾವಗೀತೆ, ಜನಪದ ಗೀತೆ ಎರಡು ಸ್ಫಧೆ೯ ಇತ್ತು. 125 ಜನ ಇದ್ರು.ಎಲ್ಲರೂ ಚೆನ್ನಾಗಿ ಹಾಡುವವರರೇ. ನಾನು ಭಾವಗೀತೆ ಹಾಡಿದೆ.

ಈ ಆಗಸ ಇದ್ದರೆ ಜುಳು ಜುಳು ಹರಿಯುವ ಜಲಧಾರೆ…ಈ ಹಾಡಿಗೆ ನನಗೆ ಪ್ರಥಮ ಸ್ಥಾನ ಬಂತು. ಅಂದಿನಿಂದ ನಾನು ಈ ಊರಲ್ಲಿ ಎಲ್ಲಾ ಕಡೆ ಕಾರ್ಯಕ್ರಮಗಳಲ್ಲಿ ಪ್ರಾರ್ಥನ ಗೀತೆ ಹಾಡೋದಕ್ಕೆ ಮುಂದಾದೆ. ಎಲ್ಲಾ ಕಡೆ ಗುರ್ತಿಸಿ ಕರಿತಾ ಇದ್ರು. ಇಂದಿಗೂ ಸಹ ಕರಿತಾರೆ. ಭಜನಾ ಕಾರ್ಯಕ್ರಮಗಳಿಗೆ ಅಲ್ಲಿ ಇಲ್ಲಿ ಹೊರಗಡೆ ಎಲ್ಲಾ ಕಡೆ ಹೋಗ್ತಾ ಇದ್ದೆ. ಸರಿಯಾದ ವೇದಿಕೆಗೆ ಕಾಯ್ತಾ ಇದ್ದೆ ಆಗ ಸ್ನೇಹಿತರು ಕರೋಕೆ ಬಗ್ಗೆ ಹೇಳಿದರು. ಮೊದಲೇ ನನಗೆ ಮ್ಯೂಸಿಕ್ ಗೊತ್ತಿರೋದ್ರಿಂದ ಕರೋಕೆಲಿ ಹಾಡೋದು ಕಷ್ಟ ಆಗಲಿಲ್ಲ.

ಮೊದಲಿಗೆ ನಾನು ಪ್ರಯತ್ನ ಪಟ್ಟ ಹಾಡು ಈ ಹಸಿರು ಸಿರಿಯಲಿ ನವಿಲೆ…ಈ ಹಾಡು ತುಂಬಾ ಫೇಮಸ್ ಆಗಿ ಇವತ್ತಿಗೂ ನಾನು ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಮರೆಯದೆ ಹಾಡ್ತೀನಿ. ಹೀಗೆ ನನ್ನ ಸಂಗೀತ ಪಯಣ ಮುಂದುವರಿತಾ ಇತ್ತು. ಗಂಡ ಎರಡು ಮಕ್ಕಳು ನಾನು ತುಂಬಾ ಖುಷಿಯಾಗಿದ್ದೆವು. ಒಂದಿನ ಇದ್ದಕ್ಕಿದ್ದಂಗೆ ಬರ ಸಿಡಿಲು ಬಡಿದಂತೆ ನನ್ನ ಜೀವನದಲ್ಲಿ ನಡೆಯಿತು, ನನಗೆ ಕ್ಯಾನ್ಸರ್ ಕಾಯಿಲೆ ಎಂದು ಡಾಕ್ಟರ್ ರಿಪೋರ್ಟ್ ಕೊಟ್ರು. ಸಿಕ್ಕಾಪಟ್ಟೆ ಡಿಸ್ಟರ್ಬ್ ಆದೆ. ಮಕ್ಕಳಿನ್ನು ಚಿಕ್ಕವರಿದ್ರು. ಆಗ ನನಗೆ 38 ವರ್ಷ. ಏನ್ ಮಾಡಬೇಕು ಮುಂದೆ ಏನು ದಾರಿ ಅನ್ನೋದು ತುಂಬಾ ಭಯ ಶುರುವಾಯಿತು ಸಾವು ಕಣ್ಮುಂದೆ ಕುಣಿತ ಇತ್ತು. ಆ ಕಾಯಿಲೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ನನಗಿರಲಿಲ್ಲ. ಜ್ಯೋತಿಷ್ಯ ನಂಬಿ ಸುಮ್ನೆ ಇರೋಕೆ ಮನಸ್ಸು ಬರಲಿಲ್ಲ. ಸರಿ ಟ್ರೀಟ್ಮೆಂಟ್ ತಗೊಳೋಣ ಅಂತ ಹಾಸ್ಪಿಟಲ್ಗೆ ಹೋದರೆ ಅಲ್ಲಿ ಅನುಭವಿಸಿದ ನರಕ ಯಾತನೆ ಯಾರಿಗೂ ಬೇಡ.

ಕ್ಯಾನ್ಸರ್ ಕಾಯಿಲೆನ ಗೆಲ್ಲೋದು ಸುಲಭದ ಮಾತಲ್ಲ. ಹೇಗೆ ಏನ್ ಮಾಡೋದು. ಟ್ರೀಟ್ಮೆಂಟ್ ನಂತರ ಏನ್ ಮಾಡೋದು. ಟ್ರೀಟ್ಮೆಂಟ್ ಹೋಗಿದ್ದ ನಂತರ ಫ್ರೀ ಆಗ್ತಿದೆ. ಯಾರ್ಗೆ ಹೇಳ್ಕೊದು ಮನಸ್ಸು ಬರ್ಲಿಲ್ಲ. ಅದಕ್ಕಾಗಿ ಹಾಡೋದನ್ನ ಶುರು ಮಾಡಿದೆ. ಭಾವಗೀತೆಗಳನ್ನು ಜಾನಪದ ಗೀತೆಗಳನ್ನು ಹಾಡ್ತಾನೆ ಇರ್ತಿದ್ದೆ. ಕರೋಕೆನಲ್ಲೂ ಹಾಡ್ತಾ ಇದ್ದೆ. ನನಗೆ ಇಷ್ಟದ ಹಾಡುಗಳನ್ನು ಆಡ್ತಾನೆ ಕೇಳ್ತಾನೆ ಇದ್ದೆ.ಹಾಡಿ ಹಾಡಿ ಅದು ಚೆನ್ನಾಗಿ ಅಭ್ಯಾಸ ಆಯ್ತು. ಅಷ್ಟೊತ್ತಿಗೆ ನನ್ ಟ್ರೀಟ್ಮೆಂಟ್ ಮುಗೀತು. ನಾರ್ಮಲ್ ಅಂತ ರಿಪೋರ್ಟ್ ಬಂತು. ಹಾಗಂತ ಮಾತ್ರೆಗಳನ್ನು ನಿಲ್ಲಿಸಿಲ್ಲ. ತಗೊಳ್ಳೇಬೇಕು. ಒಂದು ಕಾಯಿಲೆ ಜೊತೆಗೆ ಹಲವಾರು ಕಾಯಿಲೆಗಳು ನನ್ನ ಜೊತೆಗೆ ಬಂದವು.

ಈ ಸಂಕಷ್ಟಗಳನ್ನು ಮರೆಯಬೇಕೆಂದರೆ ನಾನು ಹಾಡ್ಲೇಬೇಕಿತ್ತು. ನನಗೆ ಯಾರದೋ ಮನೆಗೆ ಹೋಗಿ ಸುಮ್ನೆ ಹರಟೇ ಹೊಡೆಯೋದು ಇಷ್ಟ ಇರಲಿಲ್ಲ. ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದರೆ ಅವರು ಸತ್ತೇ ಹೋಗ್ತಾರೆ ಅನ್ನೋ ಜನಗಳ ಭಾವನೆ. ಅದನ್ನು ಸಮರ್ಥನೆ ಮಾಡ್ಕೊಳಕ್ಕೂ ನನಗೆ ಇಷ್ಟ ಇರಲಿಲ್ಲ. ದೇವರು ನನಗೆ ಆತ್ಮ ಬಲ ಚೆನ್ನಾಗಿ ಕೊಟ್ಟಿದ್ದಾನೆ. ಒಮ್ಮೆ ನನಗೆ ಏನು ಆಗಲ್ಲ ನಾನು ಚೆನ್ನಾಗಿರ್ತೀನಿ ಅಂತ ಮನಸ್ಸು ಮಾಡಿದ ನಾನು ಇವತ್ತಿನವರೆಗೂ ಚೆನ್ನಾಗಿದ್ದೀನಿ. ಸಂಗೀತ ಅನ್ನೋದು ನನ್ನ ಜೀವನಕ್ಕೆ ಒಂದು ಅದ್ಭುತ ಬಹುಶ: ನನಗೆ ಈ ಕಂಠ ಸಿರಿ ಇಲ್ದೆ ಇದ್ದಿದ್ರೆ ನಾನಿವತ್ತು ಬದುಕಿರುತ್ತಾನೆ ಇರಲಿಲ್ಲ. ನನಗೆ ಇಷ್ಟದ ಹಾಡುಗಳನ್ನು ಹೇಳುತ್ತಾ ಕೂತ್ಕೊಂಡ್ರೆ ನನಗೆ ನಾನೇ ಎಲ್ಲಾ ಮರಿತೀನಿ. ನನಗಿಂತ ಒಂದು ಕಾಯಿಲೆ ಬಂದಿದೆ. ನಾನಿವತ್ತು ಎಷ್ಟು ಕಷ್ಟ ಪಡ್ತಾ ಇದೀನಿ. ಇದನ್ನ ನಾನು ನೆನಪು ಮಾಡಿಕೊಳ್ಳಲ್ಲ.

ಇರಲಿ ನಂತರ ನಾನು ವೇದಿಕೆ ಕಾರ್ಯಕ್ರಮಗಳನ್ನು ಯಾಕೆ ಕೊಡಬಾರದು ಅಂತ ಯೋಚನೆ ಮಾಡಿದೆ. ಎಲ್ಲಾ ಕಡೆ ಗ್ರೂಪ್ ಸಾಂಗ್ಸ್ ಗಳಲ್ಲಿ ನನ್ನ ಪ್ರತಿಭೆ ಎಲ್ಲೂ ಬೆಳಕಿಗೆ ಬರಲೇ ಇಲ್ಲ. ಗುಂಪಲ್ಲಿ ಗೋವಿಂದ ಅನ್ನೋತರಹ ಆಯ್ತು. ಸರಿ ನಾನು ಸಿಂಗಲ್ ಆಗಿ ಆಡ್ತೀನಿ ಅಂತ ಅವಕಾಶ ತಗೊಂಡೆ. ನನ್ನ ಮೇಲೆ ಭರವಸೆ ಇಟ್ಟು ನನ್ನ ಸ್ನೇಹಿತರು ನನಗೆ ಅವಕಾಶ ಕೊಟ್ಟು ಅವತ್ತು ವೇದಿಕೆಲ್ಲಿ ಐದು ಹಾಡುಗಳನ್ನು ಹಾಡಿದೆ. ಎಲ್ಲರೂ ಯಾಕೆ ಮೇಡಂ, ಮನೇಲೆ ಇದ್ದೀರಾ ಹೊರಗೆ ಬನ್ನಿ ಹಾಡಿ ಎಂದು ಹೇಳಿ ಅಲ್ಲಿಂದ ಶುರುವಾದ ನನ್ನ ಪಯಣ ಇಂದಿಗೂ ಮುಂದುವರಿದಿದೆ. ನನ್ನ ಜೀವನ ಇರೋವರೆಗೂ ನಾನು ಸಂಗೀತನ್ನು ಮರೆಯಲ್ಲ ಎಂದರು. ಹೀಗಿರುವಾಗ ಕರ್ನಾಟಕ ರಾಜ್ಯ ಬರಹಗಾರರ ಸಂಘ ಆನ್ಲೈನಲ್ಲಿ ಹಾಡುವಂತ ಒಂದು ಅದ್ಭುತ ಅವಕಾಶವನ್ನು ಒದಗಿಸಿ ಅಲ್ಲೂ ಅನೇಕ ಅದ್ಭುತ ಗಾಯಕರ ಇದ್ದಾರೆ ಇರ್ಲಿ ನೋಡೋಣ ಟ್ರೈ ಮಾಡೋಣ ಅಂತ ಒಂದು ಸಾಂಗ್ ಹಾಡಿದೆ. ಅದರಲ್ಲಿ ಆಯ್ಕೆಯಾದೆ.

ಇದರ ರೂವಾರಿಗಳು ಮಧು ನಾಯ್ಕ ಲಂಬಾಣಿ ಅವರು. ನನ್ನ ಅನಿಸಿಕೆ ಹೇಳುವಾಗ ಮಧುರವರಿಗೆ ನನ್ನ ವೈಯಕ್ತಿಕ ವಿಚಾರ ಹೇಳಿದೆ. ಅವರು ನನಗೆ ತುಂಬಾನೇ ಪ್ರೋತ್ಸಾಹ ಕೊಟ್ರು. ನಿಜಕ್ಕೂ ಮಧು ನಾಯಕ್ ಲಂಬಾಣಿ ಒಬ್ಬ ಅದ್ಭುತ ಸಂಘಟಕ. ನಮ್ಮಂತ ಕಲಾವಿದರಿಗೆ ಒಂದು ಅದ್ಭುತ ವೇದಿಕೆ ಕಲ್ಪಿಸಿಕೊಟ್ಟು ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ನಾನು ಇದುವರೆಗೂ ಸುಮಾರು 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟಿದ್ದೀನಿ. ಮದುವೆ ಶುಭ ಸಮಾರಂಭ ಹಬ್ಬ..ಹೀಗೆ ಎಲ್ಲಾ ಕಡೆ ನನ್ನನ್ನು ಗುರುತಿಸಿ ಕಾರ್ಯಕ್ರಮ ಕೊಡ್ತಾ ಇದ್ದಾರೆ. ನಾನೊಬ್ಬಳೆ ಹೋಗೋದು ಸರಿಯಾಗಲ್ಲ ಅಂತ ನನ್ನ ಮಗಳಿಗೂ ಸಂಗೀತ ಕಲಿಸಿ ಅವಳು ನನ್ನ ಜೊತೆ ಹಾಡುತ್ತಾಳೆ. 6ನೇ ವರ್ಷದಿಂದ ಅವಳು ನನ್ನ ಜೊತೆಯಾಗಿದ್ದಾಳೆ. ನನ್ನ ಹಾಡಿಗೆ ಇಡೀ ನನ್ನ ಕುಟುಂಬ ಬೆಂಬಲವಾಗಿ ನಿಂತಿದೆ.

ನಂದೇ ಸ್ನೇಹ ತೀರ್ಥಳ್ಳಿ ಅಂತ ಯೂಟ್ಯೂಬ್ ಇದೆ. ಅಲ್ಲಿ ತುಂಬಾ ಜನ ಹಾಡುಗಳನ್ನು ನೋಡ್ತಾರೆ. ಇದು ಇನ್ನು ಹೆಚ್ಚು ಹೆಚ್ಚು ಹಾಡುಗಳನ್ನು ಕಲಿಯೋಕೆ ನನಗೆ ಸಹಕಾರಿ ಆಯ್ತು. ಈಗ ಎಲ್ಲಿ ಹೋದರೂ ನೀವು ಯೂ ಟ್ಯೂಬ್ ಸಿಂಗರ್ ಸ್ನೇಹ ಅಲ್ವಾ ಅಂತಾರೆ. ನೀವುಹಾಡುಗಳನ್ನು ತುಂಬಾ ಚೆನ್ನಾಗಿ ಹಾಡ್ತೀರಾ ಅಂತಾರೆ. ಎಷ್ಟು ಸಂತೋಷ ಆಗುತ್ತೆಮನಸ್ಸಿಗೆ. ಮೊನ್ನೆ 27 ನೇ ತಾ. ಚಿಕ್ಕಮಗಳೂರಿನಲ್ಲಿ ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದ ಕ್ಷಣ ನನ್ನ ಜೀವನದುದ್ದಕ್ಕೂ ಮರೆಯಲಾರೆ. ಹಾಗೆಯೇ ಗೊರೂರು ಅನಂತರಾಜು ಸರ್ ನಿಮಗೂ ತುಂಬು ಹೃದಯದ ಧನ್ಯವಾದಗಳು.

ನನ್ನ ಕಷ್ಟ ತಾಳ್ಮೆಯಿಂದ ಕೇಳಿದಿರಿ. ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಪ್ರೀತಿಯ ಸ್ನೇಹ ತೀರ್ಥಹಳ್ಳಿ..

ನಿರೂಪಣೆ ;
ಗೊರೂರು ಅನಂತರಾಜು, ಹಾಸನ
9449462879
ಹುಣಸಿನಕೆರೆ ಬಡಾವಣೆ, 29ನೇ ವಾಡ್೯,
3 ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group