ಶೈಕ್ಷಣಿಕ ಕ್ಷೇತ್ರದಲ್ಲಿ ಬಹುಶಃ ರಾಜ್ಯದಲ್ಲಿಯೇ ಅತ್ಯಂತ ಭ್ರಷ್ಟ ಕ್ಷೇತ್ರವೆಂದರೆ ಬೆಳಗಾವಿ ಜಿಲ್ಲೆಯ ಮೂಡಲಗಿ ಶಿಕ್ಷಣ ಕ್ಷೇತ್ರವೆನ್ನಬಹುದು. ಇದು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಹಿಡಿದು ಅನೇಕ ಅಧಿಕಾರಿಗಳು ಅಷ್ಟೇ ಯಾಕೆ ಚಿಕ್ಕೋಡಿ ಜಿಲ್ಲೆಯ ಉಪ ನಿರ್ದೇಶಕರನ್ನು ಕೂಡ ಸಾಕಿಕೊಂಡಿದೆ.
ಇಲ್ಲಿನ ಬಿಇಓ ಅಜಿತ ಮನ್ನಿಕೇರಿ ಎಂಬ ಪಕ್ಕಾ ಗೋವಿನ ಮುಖದ ಅಧಿಕಾರಿಯ ಎದುರು ತಾವು ಕುಳಿತರೆ ಸಾಕು ಅವರ ಮಾತಿಗೆ ಕರಗಿ ನೀರಾಗಿ ಕೆಳಗೆ ಇಳಿದು ಬಿಡುತ್ತೀರಿ. ತಮ್ಮ ವಲಯದಲ್ಲಿ ಯಾವುದೆ ಶಾಲೆ ನಿಯಮ ಉಲ್ಲಂಘಿಸಿರಲಿ, ಮಕ್ಕಳ ಜೀವಕ್ಕೆ ಅಪಾಯವೇ ಇರಲಿ, ಯಾವುದೇ ಶಿಕ್ಷಕ ಶಾಲೆಗೆ ಹೋಗದೇ ಇರಲಿ, ಯಾವನೇ ಶಿಕ್ಷಕ ಮಕ್ಕಳ ಬಿಸಿಯೂಟದ ಆಹಾರ ಕದಿಯಲಿ, ಡೆಪ್ಯುಟೇಶನ್ ನೆಪದ ಮೇಲೆ ತಮ್ಮ ಸ್ವಂತ ಊರಿಗೇ ಹೋಗಿ ಎಂಜಾಯ್ ಮಾಡಲಿ ಸರ್ಕಾರಿ ಸಂಬಳ ತೆಗೆದುಕೊಂಡರೂ ಇವರ ಚೇಲಾಗಿರಿ ಮಾಡುತ್ತ ತಿರುಗಾಡಿದರೂ ಮನ್ನಿಕೇರಿಯವರ ಆಶೀರ್ವಾದ ಇದ್ದೇ ಇರುತ್ತದೆ. ಅದರ ಬಗ್ಗೆ ಕೇಳಿದರೆ ಇವರು ಪಕ್ಕಾ ಸಮಾಜ ಸೇವಕನ ಪೋಜು ಕೊಡುತ್ತ ಮಕ್ಕಳಿಗೆಲ್ಲ ತಾನೇ ಶಿಕ್ಷಣ ನೀಡಿ ಅವರ ಪಾಲಕರ ಬಾಳು ಬಂಗಾರ ಮಾಡುತ್ತಿರುವ ಬಿಲ್ಡಪ್ ಕೊಡುತ್ತಾರೆ. ಯಾವುದೇ ಶಾಲೆಯ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹಿರೇತನ ಮಾಡಿ ಭ್ರಷ್ಟ ಶಾಲೆಯ ರಕ್ಷಣೆ ಮಾಡಿ ಹೀರೋ ಅನಿಸಿಕೊಳ್ಳುತ್ತಾರೆ.
ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಭ್ರಷ್ಟಾಚಾರವೆಂದರೆ ಈ ಬಿಇಓ, ಈ ಬಿಇಓ ಎಂದರೆ ಪಕ್ಕಾ ಭ್ರಷ್ಟಾಚಾರ ಎಂಬುದು ಇತ್ತೀಚೆಗಷ್ಟೇ ನಾನು ಇಲ್ಲಿನ ಶಿಕ್ಷಣ ಇಲಾಖೆಯ ಹುಳಕು ಹೊರತೆಗೆಯಲು ಕ್ಷೇತ್ರಕ್ಕೆ ಧುಮುಕಿದಾಗ ಗೊತ್ತಾಯಿತು.
ಇಲ್ಲಿ ದುಡ್ಡು ಕೊಟ್ಟರೆ ದನದ ಕೊಟ್ಟಿಗೆಯೂ ಶಾಲೆಯಾಗಿ ಮಾರ್ಪಾಡಾಗುತ್ತದೆ. ಮಕ್ಕಳ ಸುರಕ್ಷತೆಯನ್ನು ಕವಡೆ ಕಾಸಿನ ಕಿಮ್ಮತ್ತಿಗೆ ಅಡವು ಇಟ್ಟಿರುವ ಈ ಕ್ಷೇತ್ರ ಶಿಕ್ಷಣಾಧಿಕಾರಿಯ ಜೊತೆ ಡಿಡಿಪಿಐ ಎಂಬ ಇನ್ನೊಬ್ಬ ಕೇರ್ ಲೆಸ್ ಅಧಿಕಾರಿ ಸೇರಿಕೊಂಡು ಇಲ್ಲಿ ಮಕ್ಕಳ ಹಾಜರಾತಿ, ಅಸುರಕ್ಷಿತ ಶಾಲಾ ಬಸ್ಸು, ಅಸುರಕ್ಷಿತ ಪ್ರದೇಶ, ಗಬ್ಬೆದ್ದು ಹೋಗಿರುವ ಶಾಲಾ ಶೌಚಾಲಯಗಳು, ರಾಜಕೀಯ ಅಡ್ಡಾ ಆಗಿರುವ ಸಮರ್ಥ ಶಾಲೆ ಎಂಬ ಬಿಇಓ ಗೆ ಬೂಸಾ ಹಾಕುವ ಶಾಲೆ, ( ಈ ಶಾಲೆಯ ನಿಯಮ ಉಲ್ಲಂಘನೆಯ ಬಗ್ಗೆ ಎಳೆ ಎಳೆಯಾಗಿ ಇವರ ಕಿವಿಗೆ ಇಳಿಸಿದರೂ ಕಿವಿ ಕಣ್ಣು ಎರಡೂ ಮುಚ್ಚಿಕೊಂಡು ಕುಳಿತಿರುವ ಈ ಇಬ್ಬರೂ ಅಧಿಕಾರಿಗಳು ಒಂದೊಂದೇ ಕೆಲಸಗಳನ್ನು ಮಾಡಿಕೊಳ್ಳುವಂತೆ ತಮ್ಮ ಧರ್ಮದ ಶಾಲೆಗೆ ಸಹಾಯ ಮಾಡುತ್ತಿದ್ದಾರೆ ಹೊರತು ಕ್ರಮ ಕೈಗೊಳ್ಳುತ್ತಿಲ್ಲ. ಅದೇ ಬೇರೆ ಶಾಲೆಯಾದರೆ, ಕಡಿಮೆ ಹಾಜರಾತಿ ಇದೆ ಎಂಬ ಕಾರಣಕ್ಕೆ ಶಾಲೆಯನ್ನು ಬಂದ್ ಮಾಡುತ್ತಿದ್ದರು. ಆದರೆ ಈ ಸಮರ್ಥ ಶಾಲೆಯ ಮೇಲೆ ಸೋ ಕಾಲ್ಡ್ ಸಮಾಜ ಸೇವಕ ಭೀಮಪ್ಪ ಗಡಾದ ಅವರ ನೆರಳಿದೆ. ಮೊದಲೇ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಈತ. ಇವರ ಜೊತೆಗೂಡಿ ಭ್ರಷ್ಟಾಚಾರವನ್ನೇ ಮಾಡಬೇಕೇ ಹೊರತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಈ ಅಧಿಕಾರಿಗಳಿಗೆ ಎಲ್ಲಿಂದ ಬರಬೇಕು !?)
ಶಿಕ್ಷಣದ ಹಕ್ಕು (ಆರ್ ಟಿ ಐ) ನಿಯಮ ಉಲ್ಲಂಘನೆ, ಹಣದಲ್ಲಿ ಗಂಡಾಗುಂಡಿ, ಅನಧಿಕೃತ ನಿಯೋಜನೆಯ ಕರ್ಮಕಾಂಡಗಳು… ಇಂಥವನ್ನೆಲ್ಲ ಮಾಡಿಯೂ ಈ ಶಿಕ್ಷಣಾಧಿಕಾರಿ ಕಳೆದ ಹದಿನೈದು ವರ್ಷಗಳಿಂದ ಮೂಡಲಗಿಯಲ್ಲಿಯೇ ಇದ್ದಾರೆ. ಅಲ್ಲಿ ಚಿಕ್ಕೋಡಿಯಲ್ಲಿ ಯಾವುದೇ ಡಿಡಿಪಿಐ ಬಂದರೂ ಅವರನ್ನು ಬುಟ್ಟಿಗೆ ಹಾಕಿಕೊಂಡು ಹೊರಟಿದ್ದಾರೆ.
ನಾವು ಎಷ್ಟೇ ಪತ್ರ ಬರೆದರೂ ಡಿಡಿಪಿಐ ಸಾಹೇಬರು ಈ ಬಿಇಓ ಗೆ ಪತ್ರ ಬರೆದು ಕೈತೊಳೆದುಕೊಳ್ಳುತ್ತಾರೆ. ತನಗೇನೂ ಗೊತ್ತಿಲ್ಲ ಎಂಬಂತೆ ! ತಾವೇ ಸ್ವತಃ ಶಾಲೆಗೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ವರದಿ ಮಾಡಬೇಕು ಎಂದು ಸ್ವತಃ ಅಪರ ಆಯುಕ್ತರೇ ಆದೇಶ ನೀಡಿದ್ದರೂ ಇತ್ತ ತಲೆ ಹಾಕಿಲ್ಲ ಈ ಡಿಡಿಪಿಐ ಸಾಹೇಬರು ! ಅಲ್ಲೇ ಕುಳಿತು ಬಿಇಓ ಸಹಿತ ತಿಪ್ಪೆ ಸಾರಿಸುತ್ತಾರೆ ! ಒಂದು ಉದಾಹರಣೆ ; ಸಮರ್ಥ ಶಾಲೆಯ ನಿವೇಶನ ಆಡಳಿತ ಮಂಡಳಿಯ ಹೆಸರಿನಲ್ಲಿ ಇದೆ ಎಂದು ಬಿಇಓ ವರದಿ ಕೊಟ್ಟಿದ್ದಾರೆ ಅಂತ ಡಿಡಿಪಿಐ ಹೇಳುತ್ತಾರೆ, ನಾನು ಹಾಗೆ ವರದಿ ಕೊಟ್ಟಿಲ್ಲ ಅಂತ ಬಿಇಓ ನಮ್ಮ ಮುಂದೆ ಭೋಂಗು ಬಿಡುತ್ತಾರೆ ಈ ಪ್ರಕರಣದಲ್ಲಿ ಮೂರ್ಖರು ಯಾರು ?
ಅನಧಿಕೃತ ನಿಯೋಜನೆ ಮಾಡಿರುವ ಬಗ್ಗೆ ಈ ಬಿಇಓ ಅವರನ್ನು ಕೇಳಿದರೆ, ಶಿಕ್ಷಕರ ವೈಯಕ್ತಿಕ ಹಿತಾದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಯಾವುದೇ ಶಿಕ್ಷಕರನ್ನು ನಿಯೋಜನೆ ಮಾಡಿರುವುದಿಲ್ಲ ಎಂದು ಓಪನ್ನಾಗಿಯೇ ಪತ್ರ ಕೊಡುವ ಇವರು ಶಿವಾಪೂರ ಗ್ರಾಮದ ಪ್ರೌಢ ಶಾಲೆಯ ಭ್ರಷ್ಟ ಶಿಕ್ಷಕನೊಬ್ಬನನ್ನು ಇತ್ತೀಚೆಗೆ ಮೂಡಲಗಿ ಶಾಲೆಗೆ ನಿಯೋಜನೆಯ ಮೇಲೆ ಕರೆಸಿಕೊಂಡಿದ್ದರು. ಯಾಕೆಂದರೆ, ಶಿವಾಪೂರದಲ್ಲಿ ಮಕ್ಕಳ ಬಿಸಿಯೂಟದ ಆಹಾರ ಪದಾರ್ಥಗಳನ್ನೇ ಆ ಶಿಕ್ಷಕ ಕದಿಯುತ್ತಿರುವ ಆರೋಪ ಗ್ರಾಮಸ್ಥರಿಂದ ಬಂದಿದ್ದರಿಂದ ಆತನನ್ನು ರಕ್ಷಿಸಲಿಕ್ಕೆ ನಿಯೋಜನೆಯ ಮೇರೆಗೆ ಕರೆಸಿಕೊಂಡಿದ್ದರು. ಈ ಕ್ರಮದಲ್ಲಿ ಎಷ್ಟೊಂದು ಅಧ್ವಾನ ಇದೆಯೆಂದರೆ, ಆ ಶಿಕ್ಷಕ ಯಾವುದೇ ಆದೇಶ ಇಲ್ಲದೆ ನಿಯೋಜನೆಯ ಮೇಲೆ ಬಂದಿದ್ದ, ಆಮೇಲೆ ನಮ್ಮ ಪತ್ರಿಕೆಯ ಮೂಲಕ ಪ್ರಶ್ನೆ ಮಾಡಿದಾಗ ಶಿವಾಪೂರ ಶಾಲೆಯ ರಜಿಸ್ಟರ್ ನಲ್ಲಿ ನಮೂದು ಮಾಡಲಾಗಿದೆ ; “ಮಾನ್ಯ ಬಿಇಓ ಅವರ ಆದೇಶದಂತೆ ಈ ಮಹಾಶಯನನ್ನು ನಿಯೋಜನೆಯ ಮೇರೆಗೆ ಕಳಿಸಲಾಗಿದೆ” ಎಂದು ! ಅಲ್ಲದೆ ಯಾವುದೇ ನಿಯೋಜಿತ ಶಿಕ್ಷಕನನ್ನು ಜುಲೈ ೫ ರೊಳಗೆ ಮೂಲ ಶಾಲೆಗೆ ಕಳಿಸಬೇಕು ಎಂಬ ಮುಖ್ಯ ಕಾರ್ಯದರ್ಶಿ ಯವರ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಡದ ಬಿಇಓ ಆ ಶಿಕ್ಷಕನನ್ನು ಮೂಲ ಶಾಲೆಗೆ ಕಳಿಸಿದ್ದು ಜುಲೈ ೧೦ ರ ನಂತರ !
ಅಂದರೆ, ದುರಾಡಳಿತದ ಪರಮಾವಧಿ ಇದು.
ಇಂಥ ಅನೇಕ ಉದಾಹರಣೆಗಳಿವೆ. ಸಮರ್ಥ ಶಾಲೆಯಲ್ಲಂತೂ ನಿಯಮ ಉಲ್ಲಂಘನೆಯ ಮಹಾಪೂರವೇ ಇದ್ದರೂ ಆಡಳಿತ ಮಂಡಳಿಯ ಎದುರು ಈ ಶಿಕ್ಷಣಾಧಿಕಾರಿ ಕೈಕಟ್ಟಿ ನಿಲ್ಲುತ್ತಾರೆಯೆಂಬುದು
ನಮಗಂತೂ ಸಾಬೀತಾಗಿದೆ. ಯಾವ ಪುಣ್ಯಕ್ಕೆ ಈ ಭ್ರಷ್ಟ ಬದುಕು ಬೇಕು ಎಂಬುದು ನಮ್ಮ ಪ್ರಶ್ನೆ.
ಅಲ್ಲಿ ಮಕ್ಕಳ ಜೀವ ಪಣಕ್ಕೆ ಇಡಲಾಗಿದೆ. ಕೆನಾಲ್ ಪಕ್ಕದ ರಸ್ತೆಯಲ್ಲಿ ಶಾಲಾ ವಾಹನ ಹೋಗಬೇಕಾದರೆ ಸಾರಾಯಿ ಕುಡಿದಂತೆ ಹೊಯ್ದಾಡುತ್ತದೆ ! ಈ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ !
ಶಾಸಕರಿಗೂ ಇವರೇ ಬೇಕು !
ಹಲವು ವರ್ಷಗಳಿಂದ ಇಲ್ಲೇ ಝಾಂಡಾ ಹೂಡಿರುವ ಈ ಕ್ಷೇತ್ರ ಶಿಕ್ಷಣಾಧಿಕಾರಿಯ ನಿಷ್ಕ್ರಿಯತೆಯ ಬಗ್ಗೆ ಸ್ವತಃ ಅರಭಾವಿ ಶಾಸಕರಿಗೇ ಎರಡು ಸಲ ಪತ್ರ ಬರೆದರೂ ಅವರೂ ಮೌನವಹಿಸಿದ್ದಾರೆ ! ಎಂದರೆ ಊಹಿಸಬಹುದು ಇವರು ಭ್ರಷ್ಟರಾಗಿದ್ದರೂ ಶಾಸಕರಿಗೆ ಎಷ್ಟೊಂದು ಬೇಕಾಗಿದ್ದಾರೆ ಅಂತ !
ನಮ್ಮ ಕ್ಷೇತ್ರದ ಶೈಕ್ಷಣಿಕ ಪಾವಿತ್ರ್ಯವನ್ನು ಹಾಳು ಮಾಡಿರುವ ಬಿಇಓ ಹಾಗೂ ಡಿಡಿಪಿಐಗಳನ್ನು ಕೆಂಪು ಮಾರ್ಕ್ ನೊಂದಿಗೆ ಬೇರೆ ಕಡೆ ವರ್ಗಾಯಿಸಬೇಕು ಅಥವಾ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಒಂದು ಅಭಿಯಾನ ಶುರುವಾಗಲಿದೆ…
ಈ ಬಗ್ಗೆ ನಾವು ಪತ್ರಿಕೆಯಲ್ಲಿ ಬರೆಯುವುದಾಗಿ ಹೇಳಿದಾಗ, ಬಿಇಓ ಸಾಹೇಬರು ಹೇಳಿದರು. ಪತ್ರಿಕೆಯಲ್ಲಿ ಬರೆದರೆ ಅವರ ಅಣ್ಣಾವರು ಯಾರೋ ಬಂದು ನಮ್ಮನ್ನು ಕೇಳುತ್ತಾರಂತೆ !
ಅವರು ಬಂದು ಇವರ ಭ್ರಷ್ಟಾಚಾರವನ್ನು ಬೆಂಬಲಿಸಿ ಮಾತನಾಡುತ್ತಾರೋ ಅಥವಾ ಇವರ ನಿಜಬಣ್ಣ ಬಯಲು ಮಾಡಿದ ನಮಗೇ ಬುದ್ಧಿ ಕಲಿಸುತ್ತಾರೋ ನೋಡಬೇಕು. ಏನೇ ಆಗಲಿ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ ಮಾತ್ರ ನಿಲ್ಲುವುದಿಲ್ಲವಲ್ಲ !
ಉಮೇಶ ಬೆಳಕೂಡ, ಮೂಡಲಗಿ