spot_img
spot_img

ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೊಬ್ಬ ಕನ್ನಡ ಸೇವಕ

Must Read

spot_img
- Advertisement -

ಮೂಡಲಗಿ – ನಗರದಲ್ಲಿ ನಡೆಯುತ್ತಿರುವ ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಕನ್ನಡ ಕೈಂಕರ್ಯಗಳು, ಉಪನ್ಯಾಸಗಳು ನಡೆಯುತ್ತಿದ್ದರೆ ಇತ್ತ ಕಡೆ ಒಬ್ಬರು ಭಿತ್ತಿಪತ್ರವೊಂದನ್ನು ಹಂಚುತ್ತ ಸದ್ದಿಲ್ಲದೆ ಕನ್ನಡದ ಸೇವೆ ಮಾಡುತ್ತಿದ್ದರು.
ಅವರೇ ಸುರೇಶ ಗೋ. ದೇಸಾಯಿಯವರು. ಕನ್ನಡ ಅಂಕಿಗಳು ಮಾಯವಾಗಿಯೇ ಹೋಗಿರುವ ಈ ಸಮಯದಲ್ಲಿ ಕನ್ನಡ ರತ್ನ ಪ್ರಕಾಶನ ಸಾಲಹಳ್ಳಿ ಹಾಗೂ ಸಿರಿಗನ್ನಡ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ‘ ಕನ್ನಡ ಅಂಕಿಗಳೇ ಕನ್ನಡ ತಾಯಿಯ ಕಣ್ಣುಗಳು ‘  ಎಂಬ ತಲೆಬರಹದ ಭಿತ್ತಿಪತ್ರವೊಂದನ್ನು ಅವರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕನ್ನಡಾಭಿಮಾನಿಗಳಿಗೆ ಹಂಚುತ್ತಿದ್ದರು.

ಪ್ರಪಂಚದ ಮೂರು ಸಾವಿರ ಲಿಪಿಗಳಲ್ಲಿ ಕನ್ನಡ ಲಿಪಿಗಳೇ ಅತ್ಯಂತ ಸುಂದರ ಲಿಪಿಗಳ ರಾಣಿಯಾಗಿದೆ.  ಮಧುರ ಮುದ್ದಾದ ಭಾಷೆ  ಕನ್ನಡ ಭಾಷೆ. ಈ ಶಾಸ್ತ್ರೀಯ ಭಾಷೆಗೆ ೨೦೦೦ ಕ್ಕಿಂತ ಹೆಚ್ಚು ವರ್ಷಗಳ ಅಪೂರ್ವ ಇತಿಹಾಸ ಮತ್ತು ಪರಂಪರೆ ಇದೆ. ಇಂದು ನಮ್ಮ ಭಾಷೆ ಕನ್ನಡ, ಆಡಳಿತವೂ ಕನ್ನಡ, ನಾವು ಕನ್ನಡಿಗರು ನಮ್ಮ ಶಿಕ್ಷಣ ಕನ್ನಡವಾಗಿರಲಿ ಎಂದು ಸಾರುತ್ತಿರುವುದು ಬರೀ ಬಾಯಿ ಮಾತಿನಿಂದ ಮಾತ್ರ ವಾಸ್ತವದಲ್ಲಿ ಇದು ಬೇರೆಯೆ ಆಗಿದೆ. ಮಮ್ಮಿ, ಡ್ಯಾಡಿ, ಆಂಟಿ, ಅಂಕಲ್ ಪ್ರೀತಿ ಹೆಚ್ಚಾಗಿ ಇಂದು ಅಡುಗೆ ಮನೆಗಳಲ್ಲಿಯೂ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗಿ ಕನ್ನಡದ ಕೊಲೆಗೆ ಇಂಗ್ಲೀಷ ತುದಿಗಾಲಲ್ಲಿ ನಿಂತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

`ನಮ್ಮನ್ನಾಳುವವರೂ ಕೂಡಾ ಕನ್ನಡವನ್ನು ಹತ್ತಿಕ್ಕಲು ನಿರಂತರ ಪ್ರಯತ್ನದಲ್ಲಿರುತ್ತಾರೆ. ಇತ್ತೀಚೆಗೆ ಒಬ್ಬ ಮುಖ್ಯಮಂತ್ರಿ ರಾಜ್ಯದಲ್ಲಿರುವ ಒಂದು ಸಾವಿರ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿದರು. ಅದಾಗಿ ಅವರಿಗಿಂತ ನಾವೇನು ಕಮ್ಮಿ ಎನ್ನುವಂತೆ ಮತ್ತೊಬ್ಬ ಮುಖ್ಯಮಂತ್ರಿ ಬಂದು ಅವರೂ ಮತ್ತೆ ೧೦೦೦ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿದರು. ಹೀಗೆ ಬರುವ ಎಲ್ಲ ಮುಖ್ಯಮಂತ್ರಿಗಳು ಒಂದೊಂದು ಸಾವಿರ ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಮಾಡಿದರೆ ಕನ್ನಡವೆಲ್ಲಿ ಉಳಿದೀತು ? ಹೀಗೆ ಮಾಡದೇ ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ನೌಕರಿ ಎಂದು ಕಾನೂನು ಮಾಡಿ, ಖಾಲಿ ಹುದ್ದೆಗಳನ್ನು ತುಂಬಿದರೆ ಕನ್ನಡ ಅನ್ನದ ಭಾಷೆಯಾಗುವುದರಲ್ಲಿ ಸಂಶಯವೇ ಇಲ್ಲ. ಕನ್ನಡ ಶಾಲೆಗಳೂ ಉಳಿಯುತ್ತವೆ. ಕನ್ನಡ ಭಾಷೆಯೂ ಉಳಿದು ಬೆಳೆಯುತ್ತದೆ.

- Advertisement -

ಕನ್ನಡದ ರಾಜ ರಾಜೇಶ್ವರಿ ಶ್ರೀ ಭುವನೇಶ್ವರಿ ಇಂದು ಕುರುಡಿಯಾಗಿದ್ದಾಳೆ. ನೇತ್ರದಾನ ಮಹಾದಾನ ಎಂದು ಹೇಳುತ್ತಿದ್ದರೂ ಇಂದು ನಮ್ಮ ತಾಯಿಗೆ ಕಣ್ಣು ದಾನ ಮಾಡುವವರು ಯಾರು ಇಲ್ಲದಾಗಿದ್ದಾರೆ. “ಕನ್ನಡ ಅಂಕಿಗಳೇ ಕನ್ನಡ ತಾಯಿಯ ಕಣ್ಣುಗಳು” ಆ ಕನ್ನಡ ಅಂಕಿಗಳೇ ಇಂದು ನಮ್ಮ ಕನ್ನಡ ನಾಡಿನಿಂದ ಮರೆಯಾಗಿ ಹೋಗಿವೆ.

೭೦ ರ ದಶಕದಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕಗಳಲ್ಲಿ ಕನ್ನಡ ಅಂಕಿಗಳೇ ಇರುತ್ತಿದ್ದವು. ವ್ಯಾಪಾರಸ್ಥರು ಲೆಕ್ಕ ಪತ್ರಗಳನ್ನು ಮುದ್ದಾದ ಕನ್ನಡ ಅಂಕಿಗಳಲ್ಲಿ ಇಡುತ್ತಿದ್ದರು. ಎಲ್ಲರ ಮನೆಗಳಲ್ಲಿ, ಮನಗಳಲ್ಲಿ ಕನ್ನಡ ಅಂಕಿಗಳೇ ತುಂಬಿ ತುಳುಕುತ್ತಿದ್ದವು. ಆದರೆ ಇಂದು ವಿಜ್ಞಾನ ಯುಗದ ಜಾಗತೀಕರಣ ನೆಪದಲ್ಲಿ ಇಂಗ್ಲೀಷ್ ವ್ಯಾಮೋಹದಲ್ಲಿ ದೂರದರ್ಶನದ ಹಾಗೂ ದೂರವಾಣಿ ಮತ್ತು ಕರವಾಣಿಗಳ ಅಲೆಯಲ್ಲಿ ಕನ್ನಡದ ಅಂಕಿಗಳು ಕೊಚ್ಚಿಕೊಂಡು ಹೋಗಿರುತ್ತವೆ. ಅವು ಮರಳಿ ಬಾರದ ಹಾದಿಯಲ್ಲಿ ಬಹುದೂರ ಕಾಣದಂತೆ ಮಾಯವಾಗಿವೆ. ಅವುಗಳನ್ನು ಹುಡುಕಿ ತರುವ ಕಾರ್ಯದಲ್ಲಿ ಯಾರಿಗೂ ಆಸಕ್ತಿ ಇಲ್ಲದಂತಾಗಿದೆ.

ಪ್ರಥಮದಲ್ಲಿ ಶಿಕ್ಷಣ ಇಲಾಖೆ ಈ ಸಾಹಸಕ್ಕೆ ಕೈ ಹಾಕಬೇಕಾಗಿದೆ. ಶಾಲೆಗಳಲ್ಲಿಯೇ ಕನ್ನಡ ಅಂಕಿಗಳು ಕಾಣುವುದಿಲ್ಲ. ಬುನಾದಿ ಹಾಕುವವರು ಶಿಕ್ಷಕರು ಅವರು ಮನಸ್ಸು ಮಾಡಬೇಕು ಮತ್ತು ಪ್ರಾಥಮಿಕ ಶಿಕ್ಷಣದ ಐದನೇ ತರಗತಿಯವರೆಗಿನ ಎಲ್ಲ ಪಠ್ಯ ಪುಸ್ತಕಗಳಲ್ಲಿ ಹಾಗೂ ಗಣಿತ ಪಠ್ಯದಲ್ಲಿ ಕಡ್ಡಾಯವಾಗಿ ಕನ್ನಡ ಅಂಕಿಗಳನ್ನೇ ಬಳಸಬೇಕು. ಸಾರಿಗೆ ಸಂಸ್ಥೆಯವರು, ದಿನದರ್ಶಿಕೆ ತಯಾರಕರು ಕನ್ನಡ ಅಂಕಿಗಳನ್ನು ಬಳಸಬೇಕು. ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಲ್ಲಿ ಕಟ್ಟುನಿಟ್ಟಾಗಿ ಕನ್ನಡ ಅಂಕಿಗಳನ್ನು ಜೊತೆಗೆ ಕನ್ನಡ ಭಾಷೆಗಳಲ್ಲಿಯೇ ವ್ಯವಹರಿಸುವಂತಾಗಬೇಕು.

- Advertisement -

ಕನ್ನಡಿಗರಲ್ಲಿಯೇ ಇಚ್ಚಾಶಕ್ತಿಯ ಕೊರತೆಯಿಂದ ಕನ್ನಡ ಮೂಲೆ ಗುಂಪಾಗಿ ಹೋಗಿದೆ. ಕನ್ನಡ ಭಾಷೆಯ ಬಗ್ಗೆ ಹಾಗೂ ಕನ್ನಡ ಅಂಕಿಗಳ ಬಗ್ಗೆ ಅತೀವ ಕಳಕಳಿ ಇಟ್ಟುಕೊಂಡು ಕನ್ನಡವೇ ಬದುಕು, ಕನ್ನಡವೇ ದೈವ, ಕನ್ನಡವೇ ದೇವರು ಎಂಬ ಅತೀಶಯವಾದ ನಂಬಿಕೆಯೊಂದಿಗೆ ನಾವೆಲ್ಲರೂ ಮುನ್ನಡೆದದ್ದೇ ಆದರೆ ಕನ್ನಡ ತಾಯಿಗೆ ನೇತ್ರದಾನ ಮಾಡಿದಂತೆ ಸರಿ

ಎಲ್ಲಾದರು ಇರು ; ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು, ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ನಮಗೆ ಕಲ್ಪತರು!

ಪ್ರಪಂಚದ ಮೂರು ಸಾವಿರ ಲಿಪಿಗಳಲ್ಲಿ ಕನ್ನಡ ಲಿಪಿಗಳೇ ಅತ್ಯಂತ ಸುಂದರ ಲಿಪಿಗಳ ರಾಣಿಯಾಗಿದೆ. ಮಧುರ ಮತ್ತು ಮುದ್ದಾದ ಭಾಷೆ ಕನ್ನಡ ಭಾಷೆ. ಈ ವಿಶ್ವ ವೈಭವದ ಶಾಸ್ತ್ರೀಯ ಭಾಷೆಗೆ ೨೦೦೦ ಕ್ಕಿಂತ ಹೆಚ್ಚು ವರ್ಷಗಳ ಅಪೂರ್ವ ಇತಿಹಾಸ ಮತ್ತು ಪರಂಪರೆ ಇದೆ. ಕನ್ನಡ ನಾಡಿನ ಹಲವೆಡೆ ದೊರೆತಿರುವ ಕ್ರಿ. ಪೂ. ೩ ನೇ ಶತಮಾನದ ಪ್ರಾಕೃತ ಭಾಷೆ ಮತ್ತು ಬ್ರಾಹೀ ಲಿಪಿಯಲ್ಲಿರುವ ಅಶೋಕ ಚಕ್ರವರ್ತಿಯ ಶಾಸನಗಳಲ್ಲಿ ಮೊದಲಿಗೆ ಕನ್ನಡದ ಅಂಕಿಗಳು ಕಾಣಿಸುತ್ತದೆ. ಬ್ರಹ್ಮಗಿರಿಯ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦,೫೦,೬ ಎಂಬ ೩ ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಕದಂಬರ ರವಿವರ್ಮನ ಶಾಸನದಲ್ಲಿ ಎಲ್ಲ ೯ ಅಂಕಿಗಳು ಇವೆ. ದಕ್ಷಿಣ ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳು ಇವೆ. ದಕ್ಷಿಣ ಭಾರತಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ.

ಬ್ರಿಟಿಷರು ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ (೧೮೪೨) ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು.

ಇನ್ನೂ ಹಲವಾರು ಉದಾಹರಣೆಗಳಿದ್ದು ಇಷ್ಟೆಲ್ಲಾ ಅಪೂರ್ವ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕನ್ನಡ ಅಂಕಿಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಈ ಕೆಳಗಿನ ಅಂಶಗಳನ್ನು ಹೆಮ್ಮೆಯಿಂದ ಕಾರ್ಯ ರೂಪದಲ್ಲಿ ತಂದು ವಿಶ್ವ ಕನ್ನಡ ಮೆರೆಸೋಣ. ಕನ್ನಡದಲ್ಲೇ ಮಾತನಾಡುವುದು ಮತ್ತು ಕನ್ನಡದಲ್ಲೇ ಬರೆಯುವುದು. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುವುದು. * ಕನ್ನಡದಲ್ಲೇ ರುಜು (ಸಹಿ) ಮಾಡುವುದು. ಕನ್ನಡ ಚಲನಚಿತ್ರಗಳನ್ನೇ ನೋಡುವುದು. * ಇಂಗ್ಲೀಷ ಹೆಸರುಗಳಿದ್ದ ಕನ್ನಡ ಚಲನಚಿತ್ರಗಳನ್ನು ಬಹಿಷ್ಕರಿಸುವುದು. * ಅಂಗಡಿಗಳ, ಕಾರ್ಯಾಲಯಗಳ ಹಾಗೂ ಸಂಘ ಸಂಸ್ಥೆಗಳ ನಾಮಫಲಕಗಳನ್ನು ಕನ್ನಡದಲ್ಲೇ ಕನ್ನಡ ಅರ್ಥ ಬರುವ ಹಾಗೆ ಬರೆಯಿಸುವುದು. ವಾಹನಗಳ ಸಂಖ್ಯಾ ಫಲಕಗಳಲ್ಲಿ ಕನ್ನಡ ಅಂಕಿಗಳನ್ನು ಬಳಸುವುದು. ಪತ್ರಗಳನ್ನು ಹಾಗೂ ಅಂಚೆ ವಿಳಾಸಗಳನ್ನು ಕನ್ನಡದಲ್ಲೇ ಬರೆಯುವುದು. ನಗರಗಳ ಗ್ರಾಮಗಳ ಹೆಸರನ್ನು ಕನ್ನಡದಲ್ಲೇ ಬರೆಯುವುದು. ಕರುನಾಡಿನ ಸಾಂಸ್ಕೃತಿಕ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು. ಕನ್ನಡ ಪುಸ್ತಕ, ಕನ್ನಡ ಪತ್ರಿಕೆಗಳನ್ನೇ ಕೊಂಡು ಓದುವುದು. * ಕನ್ನಡ ಕಲಿಯುವುದು, ಕನ್ನಡ ಕಲಿಸುವುದು, ಬೆಳೆಸುವುದು ಕನ್ನಡ ನಾಡಿನಲ್ಲಿರುವ ನಮ್ಮೆಲ್ಲರ ಆದ್ಯ ಕರ್ತವ್ಯವೆಂಬುದನ್ನು ಅರಿತು ಅದರಂತೆ ನಡೆದುಕೊಳ್ಳುವುದು. * ಕನ್ನಡಕ್ಕಾಗಿ ಎಂದೆಂದೂ ದುಡಿಯಿರಿ, ಕನ್ನಡಕ್ಕಾಗಿಯೇ ಹೋರಾಡಿರಿ.
ಪಠ್ಯ ಪುಸ್ತಕಗಳಲ್ಲಿ, ದಿನದರ್ಶಿಕೆಗಳಲ್ಲಿ, ಸುದ್ದಿ ಪತ್ರಿಕೆಗಳಲ್ಲಿ, ಬಸ್ ಚೀಟಿಗಳಲ್ಲಿ ಕಡ್ಡಾಯವಾಗಿ ಕನ್ನಡ ಅಂಕಿಗಳನ್ನು ಬಳಸುವುದು.  ವ್ಯಾಪಾರಸ್ಥರು, ಸರ್ಕಾರಿ ಗುಮಾಸ್ತರು, ಮುದ್ರಣ ಮಾಧ್ಯಮದವರು, ಶಿಕ್ಷಕರು ಕಡ್ಡಾಯವಾಗಿ ಕನ್ನಡ ಅಂಕಿಗಳನ್ನು ಬಳಸುವುದು. ಒಟ್ಟಾರೆಯಾಗಿ ಮನೆ ಮನೆಗಳಲ್ಲಿ, ಎಲ್ಲರ ಮನಗಳಲ್ಲಿ ಕನ್ನಡ ಅಂಕಿಗಳು ಹಾಗೂ ಕನ್ನಡಾಭಿಮಾನ ನಿರಂತರ ಉಕ್ಕಿ ಹರಿಯಲಿ !

ತಮ್ಮ ಸಂಪ್ರೀತಿಯ

ಸುರೇಶ ಗೋವಿಂದರಾವ್ ದೇಸಾಯಿ

ಗೌರವಾಧ್ಯಕ್ಷರು ಸಿರಿಗನ್ನಡ ವೇದಿಕೆ ಬೆಳಗಾವಿ

ಸಾಲಹಳ್ಳಿ ತಾ: ರಾಮದುರ್ಗ ಜಿ: ಬೆಳಗಾವಿ
ಎಂಬ ಭಿತ್ತಿಪತ್ರದೊಂದಿಗೆ ದೇಸಾಯಿಯವರು ತಮ್ಮ ಕನ್ನಡ ಕೈಂಕರ್ಯ ಕೈಗೊಂಡಿದ್ದು ಅವರ ಈ ಕೈಂಕರ್ಯ ಯಶಸ್ವಿಯಾಗಲಿ, ಎಲ್ಲರೂ ಕನ್ನಡ ಅಂಕಿಗಳನ್ನು ಬಳಸುವಂತಾಗಲಿ ಎಂದು Times of ಕರ್ನಾಟಕ ಹಾರೈಸುತ್ತದೆ.

ಉಮೇಶ ಬೆಳಕೂಡ
ಮೂಡಲಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group