spot_img
spot_img

ಕೆಆರ್‍ಎಸ್ ಹಿನ್ನೀರಿನ ಭವ್ಯ ನವ್ಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದರ್ಶನ

Must Read

- Advertisement -

ನಾವು ಮೈಸೂರಿನ ಹೂಟಗಳ್ಳಿಯಿಂದ 12 ಗಂಟೆಗೆ ಹೊರಟು ಬೆಳಗೊಳ ಮಾರ್ಗ ಸಾಗಿ ಕೆ.ಆರ್.ಎಸ್. ತಲುಪಿದಾಗ 1 ಗಂಟೆ ಆಗಿತ್ತು. ಬೃಂದಾವನ ಉದ್ಯಾವನದಿಂದ ರಸ್ತೆಯ ಮೂಲಕ 9 ಕಿ.ಮೀ.ದೂರದ ಹೊಸ ಕನ್ನಂಬಾಡಿಯನ್ನು ತಲುಪಿದೆವು. ಮುಖ್ಯ ರಸ್ತೆಯಿಂದ ಒಳ ಹಾದಿಯಲ್ಲಿ ಸುಮಾರು 2 ಕಿ.ಮೀ. ಕಚ್ಚಾ ಕಲ್ಲು ಮಣ್ಣು ರಸ್ತೆಯಲ್ಲಿ ಸಾಗಿ ನೂತನ ವೇಣುಗೋಪಾಲಸ್ವಾಮಿ ದೇವಾಲಯ ಸಮೀಪಿಸಿದೆವು. ದೇವಾಲಯದ ಮುಂಭಾಗ  ವಿಶಾಲ ಬಯಲು ಪ್ರದೇಶದಲ್ಲಿ ಬಸ್ಸು ಕಾರು ಬೈಕುಗಳ ನಿಲ್ಲಿಸಲು ಸ್ಥಳಾವಕಾಶ ಚೆನ್ನಾಗಿದೆ.  ಆದರೆ ಮುಖ್ಯ ರಸ್ತೆಯಿಂದ ದೇವಸ್ಥಾನದವರೆಗೆ ಟಾರ್ ರಸ್ತೆ ಆಗಿಲ್ಲದಿರುವುದು ಕಾರು ಓಡಿಸುವ ಮಾಲೀಕರಿಗೆ ಟೈರ್ ಪಂಕ್ಚರ್ ಆದರೆ ಎಂಬ ಭಯ ಕಾಡುವುದು ಖರೆ.  ಇಲ್ಲಿಗೆ ಬಂದು ಹೋಗಬೇಕಾದರೆ  ಸಾಮಾನ್ಯ ಪ್ರವಾಸಿಗರು ಮುಖ್ಯ ರಸ್ತೆಯಿಂದ ಪಾದಯಾತ್ರೆ ಮಾಡಬೇಕಿದೆ. ನಾನು 15 ವರ್ಷಗಳ ಹಿಂದೆ ಪ್ರಕಟಿಸಿದ ‘ಕಾವೇರಿ ನದಿಯ ದಡದಲಿ’ ಎಂಬ ಕೃತಿಯಲ್ಲಿ ಕೆಆರ್‍ಎಸ್ ಜಲಾಶಯದಲ್ಲಿ ಮುಳುಗಡೆಯಾದ ಕನ್ನಂಬಾಡಿ ಊರು ಮತ್ತು ದೇವಾಲಯಗಳ ಕುರಿತ್ತಾಗಿ ಒಂದಿಷ್ಟು ಮಾಹಿತಿ ಸಂಗ್ರಹಿಸಿ ಬರೆದಿದ್ದೆನು.

ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರು ಅತ್ಯಂತ ಕಡಿಮೆಯಾದಾಗ ಕಂಡುಬರುತ್ತಿದ್ದ ಶ್ರೀ ವೇಣು ಗೋಪಾಲಸ್ವಾಮಿ ದೇವಸ್ಥಾನ ಹೊಯ್ಸಳ ವಾಸ್ತುಶಿಲ್ಪವನ್ನು ಒಳಗೊಂಡಿದ್ದು ವಿಜಯನಗರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ.  ಕನ್ನಂಬಾಡಿ ಗ್ರಾಮದಲ್ಲಿ ಮಹಾಲಕ್ಷ್ಮಿ ಮತ್ತು ಹಿರಿದೇವಿ ಎಂಬ ದೇವಾಲಯಗಳು ಇದ್ದವು. ಈ ಮೂರು ದೇವಾಲಯಗಳಲ್ಲೂ ಶಾಸನಗಳಿವೆ. ಮಹಾಲಕ್ಷ್ಮಿ ದೇವಾಲಯದ ಧ್ವಜಸ್ತಂಭದ ಮೇಲೆ ಇರುವ ಶಾಸನದಲ್ಲಿ ಮಹಾಲಕ್ಷ್ಮಿಯ ಭಕ್ತ ಅಣ್ಣಯ್ಯನ ಮಗ ಶಿವನಂಜಯ್ಯ ಕನ್ನಂಬಾಡಿಯ ದೇವಾಲಯ ಧ್ವಜಸ್ತಂಭಕ್ಕೆ 8 ಮಣ ತೂಕದ ಹಿತ್ತಾಳೆ ಕವಚವನ್ನು ದಾನವಾಗಿ ನೀಡಿರುವುದಾಗಿ ಹೇಳಲಾಗಿದೆ. ಯಾಗ ಶಾಲೆ ಮಂಟಪದ ದಕ್ಷಿಣದಲ್ಲಿ ಇರುವ ಮತ್ತೊಂದು ಶಾಸನದಲ್ಲಿ ದೇವಾಲಯದ ಮಹಾಮಂಟಪ ಮತ್ತು ರಂಗಮಂಟಪವನ್ನು ಹೆಂಗಸೊಬ್ಬಳು ಜೀರ್ಣೋದ್ಧಾರ ಮಾಡಿಸಿರುವುದು ತಿಳಿಯುತ್ತದೆ. ಕನ್ನಂಬಾಡಿಯು ಮುಳಗುಡೆಯಾಗುವುದಕ್ಕೆ ಮುಂಚೆ 6 ಅಡಿ ಎತ್ತರದ ಗೋಪಾಲಕೃಷ್ಣಸ್ವಾಮಿ ವಿಗ್ರಹ, ಅಳ್ವಾರ್‍ಗಳು, ಸರಸ್ವತಿ, ಗಣಪತಿ, ಉಮಾಮಹೇಶ್ವರಿ, ಮಹಿಷಾಸುರ ಮರ್ಧಿನಿ ಮೊದಲಾದ ವಿಗ್ರಹಗಳನ್ನು ಸ್ಥಳಾಂತರಿಸಿ ನಾರ್ತ್ ಬ್ಯಾಂಕ್ ಸ್ಥಳದಲ್ಲಿ ಸ್ಥಾಪಿಸಿರುವ ನೂತನ ಗೋಪಾಲಸ್ವಾಮಿ ದೇವಾಲಯದಲ್ಲಿರಿಸಲಾಗಿದೆ.

- Advertisement -

ಇಲ್ಲಿ ಕಣ್ವ ಋಷಿಗಳು ತಪಸ್ಸು ಮಾಡಿದ ಪ್ರತೀತಿ ಇದೆ. ಅವರ ತಪೋಶಕ್ತಿಯಿಂದ ಕಣ್ಣೇಶ್ವರ ದೇವಸ್ಥಾನ ಉಗಮವಾಯಿತೆಂದು ಹೇಳಲಾಗಿದೆ. ಕನ್ನಂಬಾಡಿಯ ಈಶ್ವರ ದೇವಸ್ಥಾನವನ್ನು ಗಂಗರ ಕಾಲದಲ್ಲಿಯೂ, ವೇಣುಗೋಪಾಲಸ್ವಾಮಿ ದೇವಾಲಯವನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಲಾಯಿತೆಂದು ಶಾಸನಗಳಿಂದ ತಿಳಿಯುತ್ತದೆ. ಇಲ್ಲಿನ ದೇವಸ್ಥಾನಗಳನ್ನು ಪ್ರಸಿದ್ಧಿಗೆ ತಂದವರೆಂದರೆ ಹೊಯ್ಸಳ ದೊರೆ ವಿಷ್ಣುವರ್ಧನ ನಂತರ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಾಗ ಏಳೆಂಟು ಕಲ್ಯಾಣಿಗಳನ್ನು ಕಟ್ಟಿಸಿ ಬ್ರಾಹ್ಮಣರಿಗೆ ಅಗ್ರಹಾರಗಳನ್ನು ನಿರ್ಮಾಣ ಮಾಡಲಾಯಿತು. ಈ ಕಲ್ಯಾಣಿಗಳು ಕನ್ನಂಬಾಡಿ ಗ್ರಾಮದ ಈಶಾನ್ಯ ದಿಕ್ಕಿನಲ್ಲಿವೆ. 40 ಅಡಿ ಚೌಕಾಕಾರದ ಕಲ್ಯಾಣಿಗಳಿಗೆ ಇಳಿಯಲು ಎಲ್ಲಾ ದಿಕ್ಕಿನಿಂದಲೂ ಸಾಧ್ಯವಿದೆ. ಊರ ದೇವಾಲಯವೊಂದರ ಅವಶೇಷ ದಕ್ಷಿಣ ದಿಕ್ಕಿನಲ್ಲಿದೆ. ಅದರ ಕುರುಹು ಅಲ್ಲಿ ಉಳಿದಿಲ್ಲ. ಅಲ್ಲಿಂದ ನೂರು ಅಡಿ ಮುಂದೆ ತಗ್ಗಿನಲ್ಲಿರುವುದೇ ಗೋಪಾಲಕೃಷ್ಣ ದೇವಾಲಯ. ದೇವಾಲಯ ಹಿಂಭಾಗ ಮತ್ತು ಎಡಭಾಗಗಳ ಪಾಳಿಯ ಮುಂಭಾಗದಲ್ಲಿ ಮುಖಮಂಟಪ ಆಕರ್ಷಿಸುತ್ತದೆ. ದೇವಾಲಯದ ಪ್ರವೇಶದ್ವಾರದ ಮುಂಭಾಗದಲ್ಲಿ ಇನ್ನೊಂದು ಮಂಟಪವಿದೆ. ಗೋಪಾಲಸ್ವಾಮಿ ದೇವಸ್ಥಾನ 2 ಎಕರೆ ಜಾಗದಲ್ಲಿ ವಿಶಾಲವಾಗಿ ಕಟ್ಟಲ್ಪಟ್ಟಿದೆ. ನಾಲ್ಕು ಕಡೆ ಉದ್ಧನೆಯ ಪಡಸಾಲೆಯಿಂದ ಕೂಡಿದೆ. ಈ ಪಡಸಾಲೆಯಲ್ಲಿಯೂ 101 ಶಿವಲಿಂಗಗಳನ್ನು ಸ್ಥಾಪಿಸಿ ಮಂಟಪದ ಮಧ್ಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿರುವುದು ಕಂಡುಬಂದರೂ ಕೂಡ ಅಲ್ಲಿ ಈಗಿರುವುದು ಕೇವಲ ಬೋಳು ಗುಡಿಗಳು. ನಾರಾಯಣನ ಅವತಾರಗಳನ್ನು ಇಲ್ಲಿ ಚಿತ್ರಿಸಿ ದೇವಸ್ಥಾನದ ಅಂದಕ್ಕೆ ಮೆರಗು ಕೊಟ್ಟಿದ್ದು ಇತಿಹಾಸ.

1909ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಕೃಷ್ಣರಾಜಸಾಗರ ಅಣೆಕಟ್ಟು ಯೋಜನೆ ರೂಪಿಸುವ ಮೊದಲು ಈ ದೇವಸ್ಥಾನವು ಮುಳುಗಡೆಯಾದ ಹಳೇ ಕನ್ನಂಬಾಡಿ ಗ್ರಾಮದಲ್ಲಿತ್ತು. ಕೆ.ಆರ್.ಎಸ್. ಅಣೆಕಟ್ಟು ಯೋಜನೆಯಿಂದ ಕನ್ನಂಬಾಡಿ ನಿವಾಸಿಗಳಿಗೆ ಹೊಸ ಗ್ರಾಮವನ್ನು ನಿರ್ಮಿಸಿ ಅದಕ್ಕೆ ಹೊಸ ಕನ್ನಂಬಾಡಿ ಎಂದು ಹೆಸರಿಡಲಾಗಿದೆ. ವೇಣುಗೋಪಾಲಸ್ವಾಮಿ ದೇವಾಲಯದ ಸಂಕೀರ್ಣ ಕನ್ನೇಶ್ವರ (ಈಶ್ವರ) ದೇವಾಲಯ ಮತ್ತು ಕಾಳಮ್ಮ ದೇವಾಲಯಗಳನ್ನು ಸ್ಥಳಾಂತರಿಸದೇ ಹಾಗೆಯೇ ಬಿಡಲಾಗಿತು. 1930ರ ಹೊತ್ತಿಗೆ ಅಣೆಕಟ್ಟೆಯ ಮೊದಲ ಹಂತ ಪೂರ್ಣವಾಗಿ ಈ ಮೂರೂ ದೇವಾಲಯಗಳು ಮುಳುಗಿದವು. ವೇಣುಗೋಪಾಲಸ್ವಾಮಿಯ ಪ್ರಮುಖ ವಿಗ್ರಹ ಕೊಳಲು ನುಡಿಸುತ್ತಿರುವ ಶ್ರೀ ಕೃಷ್ಣನ ವಿಗ್ರಹವನ್ನು ಮುಳುಗಡೆಗೆ ಮುನ್ನ ಪುನರ್ವಸತಿ ಗ್ರಾಮದ ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ದೇವಾಲಯ ಸಂಕೀರ್ಣವು 2 ಪ್ರಕಾರಗಳಿಂದ ಸುತ್ತುವರಿದ ಸಮ್ಮಿತಿಯ ಕಟ್ಟಡವಾಗಿತ್ತು. ಮಹಾದ್ವಾರದ ಎರಡೂ ಬದಿಗಳಲ್ಲಿ ಜಗುಲಿಗಳನ್ನು ಹೊಂದಿತ್ತು. ಯಾಗ ಶಾಲೆ ಅಡುಗೆ ಮನೆ ಒಳಗೊಂಡಿತ್ತು. ಇದು 2 ಮಹಾದ್ವಾರದಿಂದ ಸುತ್ತುವರಿದಿತ್ತು. ಇದು ಸೋಮನಾಥಪುರ ದೇವಸ್ಥಾನಕ್ಕೆ ಹೋಲುವ ಹೊಯ್ಸಳ ವಾಸ್ತು ಶಿಲ್ಪಕ್ಕೆ ಉದಾಹರಣೆಯಾಗಿದೆ. ಈ ದೇವಾಲಯವನ್ನು ಕ್ರಿ.ಶ.12ನೇ ಶತಮಾನದಲ್ಲಿ ಸೋಮನಾಥಪುರದ ಚನ್ನಕೇಶವ ದೇವಸ್ಥಾನ ನಿರ್ಮಾಣ ಕಾಲದಲ್ಲಿ ನಿರ್ಮಿಸಲಾಗಿತ್ತು. 

1909ರಲ್ಲಿ ಕೆ.ಆರ್.ಎಸ್. ಅಣೆಕಟ್ಟು ನಿರ್ಮಾಣ ಪ್ರಾರಂಭವಾಗಿ 1930ರ ಹೊತ್ತಿಗೆ ಕನ್ನಂಬಾಡಿ ಗ್ರಾಮವು ಸಂಪೂರ್ಣ ಮುಳುಗಡೆ ಆಯಿತು. ಜಲಾಶಯದಲ್ಲಿ ನೀರಿನ ಮಟ್ಟವು ಕಡಿಮೆ ಆದಾಗ ದೇವಾಲಯ ಕಾಣಿಸುತ್ತಿತ್ತು. 2000ರಲಿ ್ಲ ತೀರಾ ನೀರು ಕಡಿಮೆಯಾಗಿ ಇದು ಸ್ಪಷ್ಟವಾಗಿ ಗೋಚರಿಸಿತು. ಆಗ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿ ಓದಿದ್ದು ನೆನಪಾಯಿತು. ಈ ಕಲಾ ದೇವಾಲಯವು 70 ವರ್ಷಗಳಿಗೂ ಹೆಚ್ಚು ಕಲಾ ನೀರಿನ ಅಡಿಯಲ್ಲಿತ್ತು.

- Advertisement -

ಉದ್ಯಮಿ ಶ್ರೀ ಹರಿಖೋಡೆ ಅವರ ಮಾರ್ಗದರ್ಶನದಲ್ಲಿ ಖೋಡೆ ಪ್ರತಿಷ್ಠಾನವು ದೇವಾಲಯವನ್ನು ಸ್ಥಳಾಂತರಿಸುವ ಮತ್ತು ಪುನ: ಸ್ಥಾಪಿಸುವ ಕಾರ್ಯ ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಯೋಜನೆಯ ವೆಚ್ಚ 2.50 ಕೋಟಿ ಎಂದು ಅಂದಾಜು. ಹೊಸ ನಿವೇಶನವು ಮೂಲ ನಿವೇಶನದ ಉತ್ತರಕ್ಕೆ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಕೆ.ಆರ್.ಎಸ್.ನ ನೀರಿನ ಗರಿಷ್ಠ ಮಟ್ಟ 124.80 ಅಡಿ ತಲುಪಿದರೆ ಹಿನ್ನೀರು ದೇವಾಲಯದ ಹೊರಗೋಡೆಯನ್ನು ಸ್ಪರ್ಶಿಸುತ್ತದೆ. ವಾಸ್ತು ಶಿಲ್ಪಿಗಳು ಮೂಲ ದೇವಾಲಯವನ್ನು ವಿಡಿಯೋದಲ್ಲಿ ಚಿತ್ರೀಕರಿಸಿ 16000 ಪೋಟೋ ತೆಗೆದು ಮೂಲ ದೇವಾಲಯದ ನಿರ್ಮಾಣದಲ್ಲಿ ಬಳಸಲಾದ ಪ್ರತಿಯೊಂದು ಚಪ್ಪಡಿಯನ್ನು ಗುರುತಿಸಿ ನಂಬರ್ ಮಾರ್ಕ್ ಮಾಡಲಾಯಿತು. ತರಬೇತಿ ಪಡೆದ ಕುಶಲಕರ್ಮಿಗಳು ಮತ್ತು ಶಿಲ್ಪಿಗಳೊಂದಿಗೆ ಹೊಸ ಕನ್ನಂಬಾಡಿಯಲ್ಲಿ ಪ್ರತಿಯೊಂದು ಹಳೆಯ ದೇವಾಲಯದ ಕಲ್ಲುಗಳನ್ನು ತೆಗೆದು ಪಾಲಿಶ್ ಮಾಡಿ ಹೊಸ ಪಾಲಿಶ್ ಕಲ್ಲುಗಳನ್ನು ಒಳಗೊಂಡು ನೂತನ ದೇವಾಲಯವನ್ನು ಭವ್ಯವಾಗಿ ನಿರ್ಮಿಸಲಾಗಿದೆ. ತಮಿಳುನಾಡಿನ ಅರ್ಧ ಡಜನ್ ತಜ್ಞರು 200ಕ್ಕೂ ಹೆಚ್ಚು ಮಂದಿ ಕೆಲಸಗಾರರು ಈ ಪುನ: ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾಗಿ ಹೇಳಲಾಗಿದೆ.  2011ರ ಡಿಸೆಂಬರ್‍ನಲ್ಲಿ  ದೇವಾಲಯದ ಜೀರ್ಣೋದ್ಧಾರ ಪೂರ್ಣವಾಗಿದೆ. ಪೂರ್ವದಿಂದ ದೇವಾಲಯ ಸಂಕೀರ್ಣಕ್ಕೆ  ಪ್ರವೇಶ ದ್ವಾರವಿದೆ. ಕೆಆರ್‍ಎಸ್ ಜಲಾಶಯದಲ್ಲಿ ನೀರು ಪೂರ್ಣ ತುಂಬಿದಾಗ ದೇವಾಲಯದ ಸುತ್ತಾ ನೀರು ಆವರಿಸಿ ನೋಡಲು ಇನ್ನೂ ಬಲು ಚೆಂದ ಅನಂತ ಎಂದು ನನ್ನ ಪತ್ನಿ ಶಕುಂತಲರ ಭಾವ ವೆಂಕಟರಮಣ್ಣಶೆಟ್ಟರು ತಿಳಿಸಿದÀರು. ದೇವಸ್ಥಾನದ ಒಳಗಡೆ ಎಲ್ಲೂ ಪೋಟೋ ತೆಗೆಯುವಂತಿಲ್ಲ. ದೇವರಿಗೆ ಹಣ್ಣುಕಾಯಿ ಹೂವು ಅರ್ಪಿಸುವಂತಿಲ್ಲ. ಹೀಗಾಗಿ ಇಲ್ಲಿ ಹಣ್ಣು  ಕಾಯಿ ಹೂವಿನ ವ್ಯಾಪಾರಿಗಳಿಲ್ಲ. ಕೇವಲ ಜ್ಯೂಸ್, ಕಾಫಿ ತಿಂಡಿ ಹೋಟೆಲ್‍ಗಳು ಅಷ್ಟೇ. ದೇವಾಲಯದ ಅರ್ಚಕರು ಬೆಳಿಗ್ಗೆ ಇಲ್ಲಿನ ದೇವಾಲಯದ ಸಮುಚ್ಚಯದಲ್ಲಿರುವ ನೂರಾರು ದೇವರಿಗೆ ಪೂಜೆ ಸಲ್ಲಿಸಿ ಹೂವು ಹಾಕಿ ಕುಂಕುಮ ಹಚ್ಚಿ ಹೋಗಿರುವುದು ಗೋಚರಿಸಿತು ಸಮುಚ್ಚಯದಲ್ಲಿನ ನೂರಾರು ದೇವರ ಮೂರ್ತಿಗಳನ್ನು ನೋಡುತ್ತಾ ಕೈ ಮುಗಿಯುತ್ತ ಮುಂದೆ ಸಾಗಿದೆವು. ದೇವರಿಗೆ ಕಾಣಿಕೆ ನೀಡುವಂತಿಲ್ಲ ಎಂಬ ಫಲಕ ಹಾಕಿದ್ದು ದೇವರುಗಳ ಮ್ಯೂಸಿಯಂ ನೋಡಲಷ್ಟೇ ಸೌಭಾಗ್ಯ. ಸೆಕ್ಯೂರಿಟಿ ಕಣ್ಗಾವಲಿನಲ್ಲಿ ದೇವಸ್ಥಾನ ಸ್ವಚ್ಛತೆಯಿಂದ ಕೂಡಿದೆ.   ದೇವಾಲಯದ ಹೊರಭಾಗ ಚಪ್ಪಡಿ ಕಲ್ಲಿನ ನೆಲಹಾಸಿನ ಮೇಲೆ ಚಪ್ಪಲಿ ಇಲ್ಲದೇ ನಡೆವಾಗ ಒಲೆಯಲ್ಲಿ ರೊಟ್ಟಿ ಸುಟ್ಟಂತೆ ನಮ್ಮ ಪಾದಗಳು ಸುಟ್ಟವು.  ಹುಲ್ಲುಹಾಸಿನ ಮೇಲೆ ನಡೆಯಬಾರದೆಂಬ ಕಟ್ಟಪ್ಪಣೆ ವಿಧಿಸಿದ ಕಾರಣ  ವಿದಿಯಿಲ್ಲದೇ ಕಾದÀ ಕಲ್ಲಿನ ಮೇಲೆ ನಮ್ಮ ಪಾದಗಳು ಸುಡುಸುಡು  ಓಡಾಡಿದವು. ದೇವಾಲಯದ ಪೂರ್ವ ದಿಕ್ಕಿನಲ್ಲಿ ಕೆಆರ್‍ಎಸ್ ಅಣೆಕಟ್ಟೆ ಸ್ಫಷ್ಟವಾಗಿ ಕಾಣಿಸುತ್ತಿತ್ತು.  ದೇವಸ್ಥಾನದ ಹೊರ ಆವರಣದ ಉದ್ದಕ್ಕೂ ಪ್ರವೇಶ ಭಾಗ ಹೊರತುಪಡಿಸಿ ಮೂರೂ ಸುತ್ತೂ ಕಬ್ಬಿಣದ ಬೇಲಿ ಹಾಕಿ ಬಂದುಬಸ್ತು ಮಾಡಲಾಗಿದೆ. ದೇವಾಲಯದ ಮುಂದೆ ಒಂದು ಎತ್ತರದ ದಿಣ್ಣೆ ನೀರಿನಲ್ಲಿ ಮುಳುಗದೆ ಇದ್ದು ಅದರ ಮೇಲೆ ಮರಗಿಡಗಳು ಬೆಳೆದಿವೆ. ದೇವಾಲಯದ ವಿಶಾಲ ಹೊರ ಆವರಣದ ಮುಂಭಾಗ ನಿರ್ಮಿಸಿರುವ ಕಲ್ಲಿನ ರಥ ಹಂಪಿಯ ರಥವನ್ನು ಹೋಲುತ್ತದೆ. ಮುಂಭಾಗ ಕಟ್ಟಿರುವ ಕಲ್ಲು ಮಂಟಪದಲ್ಲಿ ಕುಳಿತು ಕೊಂಚ ಹೊತ್ತು ವಿಶ್ರಮಿಸಿದೆವು. ದಣಿವಾಗಿ ಬಾಯಾರಿದ ಗಂಟಲಿಗೆ ನೀರು ಬಿಟ್ಟುಕೊಂಡೆವು. ಹೊರಾಂಗಣದಲ್ಲಿ ಸಾಕಷ್ಟು ಹುಲ್ಲುಗಾವಲು ಬೆಳೆಸಿದ್ದರೂ ಮನುಷ್ಯ ಪಾದಗಳು ಅಲ್ಲಿ ಹರಿದಾಡದಂತೆ ನೋಡಿಕೊಳ್ಳುತ್ತಿದ್ದ ನೀಲಿ ಸಮವಸ್ತ್ರದಾರಿ ವಾಚ್ ಮ್ಯಾನ್ ನಾವು ಅಲ್ಲಿ ನಿಂತು ಶೆಲ್ಪಿ ತೆಗೆಯಲು ಹೊರಟಾಗ ನೋ ಎಂದರು. ಅತ್ತ  ಕಾವೇರಿ ನದಿಯ ಕಡೆ ಎರಡು ಹುಡುಗಿಯರು ಮಂಟಪವೊಂದರಲ್ಲಿ ನಿಂತು ನೃತ್ಯ ಭಂಗಿಯ  ಪೋಟೋ ತೆಗೆದುಕೊಳ್ಳುತ್ತಿದ್ದರು.   ನಾವು ಸುಡುಕಲ್ಲಿನ ಮೇಲೇ ನಿಂತೇ ಮೂರ್ನಾಲ್ಕು ಪೋಟೋ ತೆಗೆದುಕೊಂಡೆವು.  ನಂತರ ಹೊರಟು ಅಲ್ಲಿಂದ  ಕಾರಿನಲ್ಲ್ದಿ ಸೌತೆಕಾಯಿ ತಿನ್ನುತ್ತಾ ಕಲ್ಲಹಳ್ಳಿ ಭೂವರಾಹಸ್ವಾಮಿ ದೇವಾಲಯ ದರ್ಶಿಸಲು ಹೊರಟೆವು.


-ಗೊರೂರು ಅನಂತರಾಜು, ಹಾಸನ. 

ಮೊ: 9449462879.

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group