spot_img
spot_img

ಹೊಸಪುಸ್ತಕ ಓದು: ನೆಲಮೂಲ ಸಂಸ್ಕೃತಿಯ ಜನಾಂಗದ ಸಮಗ್ರ ಇತಿಹಾಸದ ಮಹಾಸಂಪುಟ

Must Read

- Advertisement -
  • ಪುಸ್ತಕದ ಹೆಸರು: ವಾಲ್ಮೀಕಿ ವಿಜಯ
  • ಸಂಪಾದಕರು: ಡಾ. ಅಮರೇಶ ಯತಗಲ್
  • ಪ್ರಕಾಶಕರು: ಆದಿಕವಿ ಮಹರ್ಷಿ ವಾಲ್ಮೀಕಿ ಪ್ರಕಾಶನ, ಶ್ರೀ ವಾಲ್ಮೀಕಿ ಗುರುಪೀಠ ರಾಜನಹಳ್ಳಿ, ತಾ: ಹರಿಹರ, 2024
  • ಪುಟ: ೧೦೩೨ ಬೆಲೆ: ರೂ. ೨೦೦೦
  • ಸಂಪಾದಕರ ಸಂಪರ್ಕವಾಣಿ: ೯೯೭೨೮೪೧೨೫

ಕರ್ನಾಟಕದ ಅತ್ಯಂತ ಪ್ರಾಚೀನ ಬುಡಕಟ್ಟು ಸಮುದಾಯಗಳಲ್ಲಿ ವಾಲ್ಮೀಕಿ ಸಮುದಾಯವೂ ಒಂದು. ಸಾವಿರ ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಈ ಸಮುದಾಯ ಇಂದು ಜಾಗೃತಿಯತ್ತ ಸಾಗುತ್ತಿದೆ. ಆಧುನಿಕ ಶಿಕ್ಷಣ ಕಾರಣವಾಗಿ ಈ ಜನಾಂಗ ಮೈಕೊಡವಿಕೊಂಡು ಮೇಲೇಳುತ್ತಿದೆ. ವಾಲ್ಮೀಕಿ ಮಹರ್ಷಿಯು ರಾಮಾಯಣ ಬರೆದ ಮಹಾಕವಿ; ಆದಿಕವಿ. ಐದು ಸಾವಿರ ವರ್ಷಗಳ ಹಿಂದೆ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯವನ್ನು ಬರೆದರು ಎಂದು ಇಂದು ಬಹುತೇಕರು ಒಪ್ಪಿಕೊಂಡಿದ್ದಾರೆ. ಇಂದು ಇರುವ ಎಲ್ಲ ರಾಮಾಯಣಗಳಿಗೆ ಮೂಲಪಠ್ಯವಾಗಿರುವುದು ವಾಲ್ಮೀಕಿ ಮಹರ್ಷಿಗಳು ಬರೆದ ಮೂಲ ರಾಮಾಯಣವೇ ಎಂಬುದು ಸರ್ವರಿಗೂ ವೇದ್ಯವಾದುದು. ಈ ವಾಲ್ಮೀಕಿ ಮಹರ್ಷಿಗಳ ಪರಂಪರೆಯಲ್ಲಿ ಬಂದ ಸಮುದಾಯವನ್ನು ಇಂದು ವಾಲ್ಮೀಕಿ ಜನಾಂಗವೆಂದು ಹೆಮ್ಮೆ ಮತ್ತು ಅಭಿಮಾನದಿಂದ ಕರೆಯಲಾಗುತ್ತಿದೆ. ಈ ವಾಲ್ಮೀಕಿ ಜನಾಂಗದ ಇತಿಹಾಸ -ಸಂಸ್ಕೃತಿ- ಸಾಹಿತ್ಯ- ರಾಜಕೀಯ- ಶೈಕ್ಷಣಿಕ ಪ್ರಗತಿ-ವರ್ತಮಾನದ ಸಮಸ್ಯೆ-ಸವಾಲು ಪರಿಹಾರೋಪಾಯಗಳನ್ನು ಹುಡುಕುವ ನಿಟ್ಟಿನಲ್ಲಿ ಒಂದು ದೊಡ್ಡ ಪ್ರಯತ್ನವನ್ನು ಡಾ. ಅಮರೇಶ ಯತಗಲ್ ಅವರು ಮಾಡಿದ್ದಾರೆ. ಅವರು ಅತ್ಯಂತ ಶ್ರಮ ಶ್ರದ್ಧೆಯಿಂದ ಸಂಪಾದಿಸಿದ ‘ವಾಲ್ಮೀಕಿ ವಿಜಯ’ ಸಂಪುಟ ೬ ಈ ವರ್ಷದ ಪುಸ್ತಕ ಪ್ರಕಟಣಾ ಜಗತ್ತಿನಲ್ಲಿ ಒಂದು ಸೋಜಿಗವೆಂದೇ ಹೇಳಬೇಕು. ಅಷ್ಟೊಂದು ಬೃಹತ್ ಪ್ರಮಾಣದ-ನೂರಾರು ಲೇಖನಗಳ ಸಂಪುಟವಿದು.

      ಡಾ. ಅಮರೇಶ ಯತಗಲ್ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು. ಅವರು ಏನೇ ಮಾಡಲಿ ಬೃಹತ್ತಾದದ್ದನ್ನೇ ಮಾಡುತ್ತಾರೆ. ೨೦೨೦ರಲ್ಲಿ ಇಡೀ ಜಗತ್ತು ಕರೋನಾ ಮಹಾಮಾರಿಗೆ ಹೆದರಿ ಕಂಗಾಲಾಗಿ ಹೋದ ಸಂದರ್ಭದಲ್ಲಿ ಡಾ. ಅಮರೇಶ ಯತಗಲ್ ಅವರು ವಚನ ಸಾಹಿತ್ಯವನ್ನು ಕುರಿತು ೧೭೭ ಲೇಖನಗಳನ್ನು ವಿದ್ವಾಂಸರಿಂದ ಬರೆಯಿಸಿ, ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಎಂಬತ್ತರ ಸಂಭ್ರಮದ ನೆನಪಿನ ಅಭಿನಂದನ ಗ್ರಂಥ ‘ಸಾರ್ಥಕ ಬದುಕು’ (ವಚನಗಳು-ವಚನಕಾರರು: ಸಂಶೋಧನಾತ್ಮಕ-ದೃಷ್ಟಿಕೋನ) ಎಂಬ ಎರಡು ಬೃಹತ್ ಮೌಲಿಕ ಸಂಪುಟಗಳನ್ನು ಪ್ರಕಟಿಸಿ, ಇಡೀ ಅಭಿನಂದನ ಸಂಪುಟ ಪರಂಪರೆಯಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದ್ದರು. ಕನ್ನಡದಲ್ಲಿ ಈವರೆಗೆ ಬಂದ ಅಭಿನಂದನ ಸಂಪುಟಗಳಲ್ಲಿ ಡಾ. ಅಮರೇಶ ಯತಗಲ್ ಅವರು ಸಂಪಾದಿಸಿದ ‘ಸಾರ್ಥಕ ಬದುಕು’ ಸಂಪುಟಕ್ಕೆ ಅದರದೇ ಆದ ಒಂದು ಗೌರವ ಘನತೆ ಇದೆ. ಅಷ್ಟೊಂದು ವ್ಯಾಪಕವಾದ, ವಿಸ್ತಾರವಾದ ಸಂಪುಟವನ್ನು ಅವರು ಸಂಪಾದಿಸಿದ ರೀತಿ ಅನನ್ಯವಾದುದು. ಈಗ ಅಂತಹದೇ ಮತ್ತೊಂದು ಯಶಸ್ವಿ ಪ್ರಯತ್ನವನ್ನು ಮಾಡಿ ಸಮಸ್ತ ಕನ್ನಡಿಗರ ಗಮನ ಸೆಳೆದಿದ್ದಾರೆ.  ೨೦೨೪ರ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಿಮಿತ್ಯ ‘ವಾಲ್ಮೀಕಿ ವಿಜಯ’ ಸಂಪುಟವನ್ನು ಸಂಪಾದಿಸಿ ಓದುಗ ಲೋಕಕ್ಕೆ ಅರ್ಪಿಸಿದ್ದಾರೆ. ಈವರೆಗೆ ಐದು ಸಂಪುಟಗಳು ಪ್ರಕಟವಾಗಿದ್ದವು. ಈಗ ಆರನೆಯ ಸಂಪುಟವನ್ನು ಡಾ. ಅಮರೇಶ ಯತಗಲ್ ಅವರು ಸಂಪಾದಿಸುವ ಮೂಲಕ ವಾಲ್ಮೀಕಿ ಜನಾಂಗದ ಸಮಗ್ರ ಇತಿಹಾಸ ಮತ್ತು ಸಂಸ್ಕೃತಿಯನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ.

       ಪ್ರಸ್ತುತ ಕೃತಿಯಲ್ಲಿ ಐದು ಭಾಗಗಳಲ್ಲಿ ಒಟ್ಟು ೧೩೫ ಲೇಖನಗಳಿವೆ. ಪ್ರತಿಯೊಂದು ಲೇಖನವೂ ಅಧ್ಯಯನ ಯೋಗ್ಯವಾಗಿವೆ. ಕೆಲವು ಹಿರಿಯ ವಿದ್ವಾಂಸರು ಈ ಹಿಂದೆ ಬರೆದ ಎಂಟತ್ತು ಲೇಖನಗಳನ್ನೂ ಇಲ್ಲಿ ಬಳಸಿಕೊಂಡಿರುವುದರಿಂದ ವಾಲ್ಮೀಕಿ ಸಮುದಾಯದ ಕುರಿತು ಯಾರೇ ಅಧ್ಯಯನ ಮಾಡಲಿ, ಅವರಿಗೆ ಇದೊಂದು ಕಾಮಧೇನು-ಕಲ್ಪವೃಕ್ಷವಾಗಿದೆ. ಈ ಬೃಹತ್ ಗ್ರಂಥದ ಒಂದೊಂದು ಲೇಖನವನ್ನು ಪರಾಮರ್ಶಿಸಿ ಬರೆದರೆ, ಅದೇ ಬೇರೊಂದು ಕೃತಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೋಲಂಬಸ್ ಸಾಗರಗಾಮಿಯಾಗಿ ಅನೇಕ ದೇಶಗಳನ್ನು ಕಂಡು ಹಿಡಿದಂತೆ, ಡಾ. ಅಮರೇಶ ಯತಗಲ್ ಅವರು ವಾಲ್ಮೀಕಿ ಜನಾಂಗದ ಸಮಗ್ರ ಇತಿಹಾಸ ಮತ್ತು ಸಂಸ್ಕೃತಿಯನ್ನು ಶೋಧಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರೆ, ಕೃತಿ ಪರಿಚಯ ಆದಂತಾಗುತ್ತದೆ ಎಂದು ಭಾವಿಸಿದ್ದೇನೆ. 

- Advertisement -

    ಒಂದೊಂದೂ ಲೇಖನದ ಶೀರ್ಷಿಕೆ, ವಿಷಯ ವಿಸ್ತಾರ, ವೈವಿಧ್ಯ ಒಳಗೊಂಡು ಪುಟ್ಟ ವಿಶ್ವಕೋಶವಾಗಿ ಮೂಡಿ ಬಂದಿರುವ ಈ ವಿಶಿಷ್ಟ ಸಂಕಲನದ ಮಹತ್ವನ್ನು ಉತ್ಪ್ರೇಕ್ಷಿಸಿ ಹೇಳಬೇಕಾದ ಅಗತ್ಯವಿಲ್ಲ. ಇದು ಸ್ವಯಂಪ್ರಕಾಶದಿಂದ ಬೆಳಗುತ್ತಿರುವ ಗ್ರಂಥರಾಜ. ಗಾತ್ರದಲ್ಲೂ ಪಾತ್ರದಲ್ಲೂ ಮಾತ್ರವಲ್ಲದೆ, ಸತ್ವದಲ್ಲೂ ಮಹತ್ವದಲ್ಲೂ ಈ ಬೃಹತ್ ಸಂಪುಟದ ಹರಹು ಹಾಸು ಬೀಸು ದೊಡ್ಡದು. ಇದರಲ್ಲಿ ಸಮಾವೇಶವಾಗಿರುವ ಲೇಖನಗಳ ಶೀರ್ಷಿಕೆಯನ್ನಷ್ಟೇ ನೋಡಿದರೂ ಬೆರಗಾಗುತ್ತೇವೆ. ಇದನ್ನು ಆಮೂಲಾಗ್ರವಾಗಿ ಓದಿದವರು ಬಲ್ಲಿದರಾಗುವರು, ಮತ್ತೆ ಮತ್ತೆ ಮನನ ಮಾಡಿದವರು ಪ್ರಬುದ್ಧರಾಗುವರು. ಏಕೆಂದರೆ ಇದು ಅಮೂಲ್ಯ ಬರೆಹಗಳ ತವನಿಧಿ” ಎಂದು ಈ ಸಂಪುಟಕ್ಕೆ ಮುನ್ನುಡಿ ತೋರಣ ಕಟ್ಟಿದ ನಮ್ಮ ನಾಡಿನ ಬಹುಶ್ರುತ ವಿದ್ವಾಂಸರಾದ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಅವರು ಹೇಳುವ ಮಾತುಗಳು ಕೃತಿಯ ಮೌಲಿಕತೆಗೆ ಮೆರಗು ತಂದಿವೆ.

 ಸಂಪುಟದ ಮೊದಲ ಭಾಗ-      

        ‘ವಾಲ್ಮೀಕಿ-ರಾಮಾಯಣ ದರ್ಶನ’ದಲ್ಲಿ ಒಟ್ಟು ೩೭ ಲೇಖನಗಳಿವೆ. ವಾಲ್ಮೀಕಿ ಮಹರ್ಷಿಗಳ ಬಗ್ಗೆ ಈ ವರೆಗೆ ಇರುವ ತಥಾಕಥಿತ ಸ್ವಕಪೋಲಕಲ್ಪಿತ ಸುಳ್ಳು ವಿಚಾರಗಳಿಗೆ ತಿಲಾಂಜಲಿ ನೀಡುವ ಪ್ರಯತ್ನ ಇಲ್ಲಿದೆ. ಕೆ. ಎಸ್. ನಾರಾಯಣಾಚಾರ್ಯ ಎಂಬುವರು ‘ವಾಲ್ಮೀಕಿ ಯಾರು?’ ಎಂಬ ಕೃತಿಯೊಂದನ್ನು ಬರೆದು ವಿವಾದಕ್ಕೆ ನಾಂದಿ ಹಾಡಿದ್ದರು. ಶ್ರೇಷ್ಠವಾದ ಸಾಹಿತ್ಯವನ್ನು ಬರೆದವರೆಲ್ಲ ಬ್ರಾಹ್ಮಣರೇ ಆಗಿರಬೇಕೆಂಬ ಅವರ (ಮೂಢ)ನಂಬಿಕೆ ಕಾರಣವಾಗಿ ವಾಲ್ಮೀಕಿ ಬೇಡ ಜನಾಂಗದವರಲ್ಲ, ಅವರು ಬ್ರಾಹ್ಮಣರು ಎಂಬ ಅತಾರ್ಕಿಕ ವಾದವನ್ನು ಮುಂದು ಮಾಡಿದ್ದರು. ಈ ವಿಷಯವಾಗಿ ಕರ್ನಾಟಕದಲ್ಲಿ ಬಹಳಷ್ಟು ಚರ್ಚೆ-ವಾದಗಳು ನಡೆದವು.

- Advertisement -

ಯಾವುದೇ ಆಧಾರಗಳಿಲ್ಲದ ಅವರ ಕೃತಿಯನ್ನು ಸಂಶೋಧಕರು ಯಾರೂ ಒಪ್ಪಿಕೊಳ್ಳಲಿಲ್ಲ.  ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಮಹರ್ಷಿಗಳು ಒಬ್ಬ ಸುಸಂಸ್ಕೃತ ವ್ಯಕ್ತಿ, ಆದಿಕವಿಯ ಘನ ವ್ಯಕ್ತಿತ್ವ ಅತ್ಯಂತ ಪರಿಶುದ್ಧವಾಗಿತ್ತು ಎಂಬುದರತ್ತ ಇಲ್ಲಿಯ ಲೇಖನಗಳು ನಮ್ಮ ಗಮನ ಸೆಳೆಯುತ್ತವೆ. ಡಾ. ಎಂ. ಎಂ. ಕಲಬುರ್ಗಿ, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಅರ್ಜುನ ಯ. ಪಂಗಣ್ಣವರ, ಸೀತಾರಾಮ್ ಜಾಗೀರ್ದಾರ್, ಡಾ. ಶಿವಾನಂದ ಕೆಳಗಿನಮನಿ, ಡಾ. ಜಿ. ಪ್ರಶಾಂತ ನಾಯಕ ಡಾ. ನಟರಾಜ ಬೂದಾಳು, ಪ್ರೊ. ಸುಕನ್ಯಾ ಮಾರುತಿ, ಡಾ. ಗುರುಪಾದ ಮರಿಗುದ್ದಿ, ಡಾ. ಸುಂಕಂ ಗೋವರ್ಧನ, ಡಾ. ಗಂಗಾಬಿಕೆ ಗೋವರ್ಧನ, ಡಾ ರಾಜಶೇಖರ ಜಮದಂಡಿ, ಡಾ. ಅನುಸೂಯ, ಎಸ್. ಕೆಂಪನಹಳ್ಳಿ, ಡಿ. ವೀರೇಶ ಮೊದಲಾದ ವಿದ್ವಾಂಸರ ಲೇಖನಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಎಚ್.ಡಿ. ಸಂಕಾಲಿಯಾ ಬರೆದ ‘ರಾಮಾಯಣದ ಯುಗ’ ಎಂಬ ಇಂಗ್ಲಿಷ್ ಲೇಖನದ ಕನ್ನಡ ಅನುವಾದ ರಾಮಾಯಣದ ಬಗೆಗಿನ ನಮ್ಮ ದೃಷ್ಟಿಕೋನವನ್ನು ಖಂಡಿತ ಬದಲಾಯಿಸುತ್ತದೆ. 

     ಎರಡನೆಯ ಭಾಗ- ‘ಚಾರಿತ್ರಿಕ ದರ್ಶನ’ದಲ್ಲಿ ೩೩ ಲೇಖನಗಳಿವೆ. ವಾಲ್ಮೀಕಿ ಸಮುದಾಯದ ನೂರಾರು ವರ್ಷಗಳ ರಾಜಕೀಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಭಾಗವಿದು. ಅದರಲ್ಲೂ ವಿಜಯನಗರದ ಪೂರ್ವದಲ್ಲಿದ್ದ ಕುಮ್ಮಟದುರ್ಗದ ಅರಸ ಕುಮಾರರಾಮ ಬೇಡ ಜನಾಂಗದ ಒಬ್ಬ ಮಹಾಶೂರ. ಕುಮಾರರಾಮನ ಕುರಿತು ಕನ್ನಡದಲ್ಲಿ ಅನೇಕ ಸಾಂಗತ್ಯಗಳು-ಕಾವ್ಯಗಳು-ಕಾದಂಬರಿಗಳು ರಚನೆಗೊಂಡಿವೆ. ಕುಮಾರರಾಮನ ಬದುಕು-ಸಾಧನೆಗಳನ್ನು ಚಾರಿತ್ರಿಕ ನೆಲೆಯಲ್ಲಿ ಗುರುತಿಸುವ ಸಂಶೋಧನಾತ್ಮಕ ಬೆಲೆಯುಳ್ಳ ಲೇಖನಗಳು ಇಲ್ಲಿವೆ. ಚಿತ್ರದುರ್ಗದ ಪಾಳೆಯಗಾರರು, ಹರಪನಹಳ್ಳಿಯ ಪಾಳೆಯಗಾರರು, ಜರಿಮಲೆ ಪಾಳೆಯಗಾರರು, ಸುರಪುರ ಅರಸರು ಮೊದಲಾದ ಪಾಳೆಯಗಾರ ಮನೆತನಗಳ ಕುರಿತಾದ ಶೋಧಲೇಖನಗಳು ಓದುಗರಲ್ಲಿ ಈ ಜನಾಂಗದ ಬಗ್ಗೆ ಹೆಮ್ಮೆ ಮತ್ತು ಅಭಿಮಾನವನ್ನು ಮೂಡಿಸುತ್ತವೆ. ಸಂಗೊಳ್ಳಿ ರಾಯಣ್ಣನ ಹೋರಾಟದಲ್ಲಿ ಬೇಡರ ಪಡೆ, ಹಲಗಲಿ ಬೇಡರ ಕುರಿತಾದ ಲೇಖನಗಳೂ ಚಾರಿತ್ರಿಕ ಅಧ್ಯಯನಕ್ಕೆ ಮಾರ್ಗದರ್ಶಿಯಾಗಿವೆ. ಡಾ. ಸೂರ್ಯನಾಥ ಕಾಮತ್,  ಡಾ. ಎಂ. ಚಿದಾನಂದಮೂರ್ತಿ,  ಡಾ. ಕೆ. ಅಭಿಶಂಕರ್, ಡಾ. ಜಿ. ವರದರಾಜರಾವ್, ಡಾ. ಬಿ.ಎಲ್. ವೇಣು, ಡಾ. ರು.ಮ.ಷಡಕ್ಷರಯ್ಯ, ಡಾ. ನೀಲಗಿರಿ ತಳವಾರ, ಡಾ. ಬಿ. ರಾಜಶೇಖರಪ್ಪ, ಡಾ. ಯೋಗೀಶ್ವರಪ್ಪ ಡಿ.ಎನ್., ಡಾ. ಬಿ. ನಂಜುಂಡಸ್ವಾಮಿ ಮೊದಲಾದ ಇತಿಹಾಸ-ಸಂಸ್ಕೃತಿ ಚಿಂತಕರು ಬರೆದ ಲೇಖನಗಳು ಈ ಭಾಗದಲ್ಲಿವೆ.

    ಮೂರನೆಯ ಭಾಗ-        

         ‘ಸಾಹಿತ್ಯ-ಸಂಸ್ಕೃತಿ-ದರ್ಶನ’ದಲ್ಲಿ ೪೦ ಲೇಖನಗಳಿವೆ. ಕನ್ನಡ ಸಾಹಿತ್ಯದಲ್ಲಿ ವಾಲ್ಮೀಕಿ ಜನಾಂಗದ ಕುರುಹುಗಳ ಕುರಿತ ಶೋಧ ಲೇಖನಗಳಿವೆ. ಡಾ. ಎಂ.ಬಿ. ನೇಗಿನಹಾಳ ಅವರ ‘ಕನ್ನಡ ಸಾಹಿತ್ಯ ಕೃತಿಗಳಲ್ಲಿ ಬೇಡ ಜನಾಂಗ’, ಡಾ. ಜೆ.ಎಂ. ನಾಗಯ್ಯ ಅವರ ‘ಕರ್ನಾಟಕ ಸಂಸ್ಕೃತಿಯಲ್ಲಿ ಬೇಡರು’ ಅಲ್ಲದೆ ಪ್ರೊ ಲಕ್ಷ್ಮಣ್ ತೆಲಗಾವಿ, ಡಾ. ಲಿಂಗಪ್ಪ ಗೋನಾಳ, ಡಾ. ಶರಣಬಸಪ್ಪ ಕೋಲ್ಕಾರ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಎಸ್.ಸಿ. ಪಾಟೀಲ, ಡಾ. ಡಿ.ಕೆ. ಚಿತ್ತಯ್ಯ ಪೂಜಾರ್, ಜಿ.ಕೆ. ತಳವಾರ ಮೊದಲಾದವರ ಲೇಖನಗಳು ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಸುತ್ತವೆ. ಹರಿಹರ ರಾಘವಾಂಕರ ಕಾವ್ಯಗಳಲ್ಲಿ ಬೇಡ ಜನಾಂಗದ ಚಿತ್ರಣ, ಸರಜಾ ಹನುಮೇಂದ್ರ ಚರಿತೆ ಒಂದು ಪರಿಚಯ, ಸುರಪುರ ನಾಯಕರ ಕಾಲದ ಐತಿಹಾಸಿಕ ಸ್ಮಾರಕಗಳು, ಕೋಟೆ ಕೊತ್ತಲಗಳು, ಮಠಮಾನ್ಯಗಳು, ವರ್ಣಚಿತ್ರಕಲೆ ಮೊದಲಾದ ಕಲೆ ಸಂಸ್ಕೃತಿ ಕುರಿತಾದ ಲೇಖನಗಳು ಈ ಸಮುದಾಯದ ಭವ್ಯ ಪರಂಪರೆಯ ದಿವ್ಯನೋಟವನ್ನು ತಿಳಿಸುತ್ತವೆ. 

     ‘ಸಮಸ್ಯೆ-ಪರಿಹಾರ ದರ್ಶನ’ ಎಂಬ ನಾಲ್ಕನೆಯ ಭಾಗದಲ್ಲಿ ೧೬ ಲೇಖನಗಳಿವೆ. ಈ ಸಮಾಜದ ಇತ್ತೀಚಿನ ಬೆಳವಣಿಗೆಗಳು, ಈ ಸಮುದಾಯದ ಯುವಕರಿಗೆ ಉದ್ಯಮಶೀಲತೆಯ ಅವಶ್ಯಕತೆ, ನಾಯಕ ಜನಾಂಗದ ಸಮಸ್ಯೆ-ಸವಾಲುಗಳು, ರಾಜಕೀಯ ಸಬಲೀಕರಣ, ಈ ಜನಾಂಗದ ಮಹಿಳೆಯರ ಸ್ಥಿತಿಗತಿ ಮೊದಲಾದ ಸಮಸ್ಯೆ-ಸವಾಲುಗಳ ಕುರಿತು ಡಾ. ಹನುಮ ನಾಯಕ, ಜಿ. ನಾಗರಾಜ ಗಾಣದಹುಣಸೆ, ತಿಮ್ಮೇಶ ಓ., ಟಿ. ಓಂಕಾರಪ್ಪ, ಡಾ. ಎಮ್.ಎಚ್. ಪ್ರಹ್ಲಾದಪ್ಪ ಅವರ ಲೇಖನಗಳ ಮೂಲಕ ಪರಿಹಾರೋಪಾಯಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.  

      ಐದನೆಯ ಭಾಗ- ‘ಸೇವಾ-ಪ್ರತಿಭಾಚೇತನ ದರ್ಶನ’ ಎಂಬ ವಿಭಾಗದಲ್ಲಿ ಭೀಮರಾಯ ಹದ್ದಿನಾಳ, ಹರ್ತಿಕೋಟೆ ವೀರೆಂದ್ರಸಿಂಹ, ಡಾ ಸರಜೂ ಕಾಟ್ಕರ್, ಎಂ.ಎಂ. ಶಿವಪ್ರಕಾಶ, ಡಾ. ಗುಡ್ಡದೇಶ್ವರಪ್ಪ ಹೆಚ್. ಮುಂತಾದವರು ಬರೆದ ೯ ಲೇಖನಗಳಿವೆ. ವಾಲ್ಮೀಕಿ ಸಮಾಜದಲ್ಲಿ ಹುಟ್ಟಿ ಬೆಳೆದು ನಾಡಿಗೆ ಬೆಳಕು ನೀಡಿದ ೯ ಜನ ಪ್ರಾತಃಸ್ಮರಣೀಯರ ಜೀವನದ ಯಶೋಗಾಥೆಗಳನ್ನು ತಿಳಿಸುವ ಲೇಖನಗಳು ಇಲ್ಲಿವೆ. ದಣಿವರಿಯದ ಜೀವ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಅಂತಾರಾಷ್ಟ್ರೀಯ ವಿಜ್ಞಾನಿ ಪ್ರೊ. ಎಸ್.ಆರ್. ನಿರಂಜನ್, ಡಾ. ಭೀಮರಾವ ಗಸ್ತಿ, ಕೋಗಳಿ ಪಂಪಣ್ಣ, ಹುಡೇಜಾಲಿ ಮಹಾದೇವಗೌಡ, ಟಿ. ಮಾರಪ್ಪ, ಅಮ್ಮಾಪುರ ಹನುಮಂತಪ್ಪ, ಟಿ. ಓಬಳಪ್ಪ ಇವರ ಜೀವನ ಸಾಧನೆಗಳ ಸಮಗ್ರ ಚಿತ್ರಣ ಇಲ್ಲಿದೆ.   

     ಈ ಸಂಪುಟಕ್ಕೆ ಬೆನ್ನುಡಿ ಬರೆದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಹಾಗೂ ಶ್ರೇಷ್ಠ ವಿದ್ವಾಂಸರೂ ಆದ ಡಾ. ಡಿ.ವಿ. ಪರಮಶಿವಮೂರ್ತಿ ಅವರು-“ಪ್ರಸ್ತುತ ಸಂಪುಟದ ವೈಶಿಷ್ಟ್ಯವೇನೆಂದರೆ ವಾಲ್ಮೀಕಿ ಸಮುದಾಯದ ಚರಿತ್ರೆ, ಸಂಸ್ಕೃತಿ, ಸಾಹಿತ್ಯ ಮತ್ತು ವೈಭವವನ್ನಷ್ಟೇ ದರ್ಶಿಸದೆ, ಈ ಸಮುದಾಯ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳು ಮತ್ತು ಅವುಗಳಿಗೆ ಕಂಡುಕೊಂಡ ಪರಿಹಾರ ಸೂತ್ರಗಳನ್ನೊಳಗೊಂಡ ಮೌಲಿಕವಾದ ಬರಹಗಳು ಇಲ್ಲಿರುವುದು ಗ್ರಂಥದ ಮಹತ್ವವನ್ನು ಹೆಚ್ಚಿಸಿದೆ. ಪೂರ್ವದ ಸ್ಮರಣೆಯಷ್ಟೇ ಸಾಲದು, ಭವಿಷ್ಯದ ಬಗ್ಗೆಯೂ ಚಿಂತಿಸಬೇಕೆಂಬ ಸಮಕಾಲೀನ ಸಾಮಾಜಿಕ ಕಳಕಳಿಯನ್ನು ಇಲ್ಲಿಯ ಬರಹಗಳು ಒಳಗೊಂಡಿರುವುದು ಎಲ್ಲರೂ ಮೆಚ್ಚತಕ್ಕ ಸಂಗತಿಯಾಗಿದೆ” ಎಂಬ ಮಾತುಗಳು ಒಟ್ಟು ಸಂಪುಟದ ಸಾರವನ್ನು ತಿಳಿಸುತ್ತವೆ.

 ಡಾ. ಅಮರೇಶ ಯತಗಲ್ ಅವರು ವಾಲ್ಮೀಕಿ ಸಮಾಜದ ಕಣ್ಣು ತೆರೆಸುವ ಈ ಆಕರರೂಪಿ ಬೃಹತ್ ಸಂಪುಟವನ್ನು ಕೇವಲ ಒಂದು ತಿಂಗಳ ಕ್ಲುಪ್ತ ಅವಧಿಯಲ್ಲಿ ಸಿದ್ಧಪಡಿಸಿರುವುದು ಇನ್ನೂ ಸೋಜಿಗದ ಸಂಗತಿಯಾಗಿದೆ. ಅವರ ಆತ್ಮೀಯ ಲೇಖಕ-ವಿದ್ವಾಂಸರ ಬಳಗ ನಾಡಿನ ತುಂಬ ಇರುವುದರಿಂದ, ಅವರ ಪ್ರೀತಿ ಹಾಗೂ ವಿಶ್ವಾಸದ ಒತ್ತಾಸೆಗೆ ಎಲ್ಲ ಲೇಖಕರು ತಮ್ಮ ವಿದ್ವತ್ಪೂರ್ಣ ಲೇಖನಗಳನ್ನು ಕಳುಹಿಸಿದ್ದಾರೆ. ಆ ಎಲ್ಲ ಲೇಖನಗಳನ್ನು ಅಕ್ಷರ ಸಂಯೋಜನೆಗೆ ಒಳಪಡಿಸಿ, ಒಂದೂ ತಪ್ಪಿಲ್ಲದಂತೆ ಕಾಗುಣಿತಗಳನ್ನು ತಿದ್ದಿ, ಈ ವಿರಾಡ್ರೂಪಿ ಮೌಲಿಕ ಗ್ರಂಥವನ್ನು ಪ್ರಕಟಿಸಿದ ಡಾ. ಯತಗಲ್ ಅವರ ದೈತ್ಯಪ್ರತಿಭೆಯನ್ನು ಮೆಚ್ಚಲೇಬೇಕು. ತಮ್ಮ ಸಮಾಜದ ಮೇಲಿನ ಋಣವನ್ನು ಸಂದಾಯ ಮಾಡುವ ರೀತಿಯಲ್ಲಿ ಈ ಕೃತಿಯನ್ನು ಅವರು ಸಮರ್ಪಣಾಭಾವದಿಂದ, ನಿರಪೇಕ್ಷ ಪ್ರಜ್ಞೆಯಿಂದ ಸಂಪಾದಿಸಿದ್ದಾರೆ. ಇಂತಹ ದಣಿವರಿಯದ ದುಡಿಮೆಗಾರರು ದೊರೆಯುವುದು ವಿರಳ. ‘ಯೋಜಕಸ್ತತ್ರ ದುರ್ಲಭ’ ಎಂಬ ಮಾತೊಂದಿದೆ. ಈ ಮಾತಿಗೆ ಅಪವಾದವೆನ್ನುವಂತೆ ಡಾ. ಅಮರೇಶ ಯತಗಲ್ ಅವರು ಈ ಸಂಪುಟದ ಯೋಜನೆಯನ್ನು ರೂಪಿಸಿ, ಅಲ್ಪಾವಧಿಯಲ್ಲಿ ಸಿದ್ಧಗೊಳಿಸಿ ಸಮಾಜಕ್ಕೆ ಅರ್ಪಣೆ ಮಾಡಿರುವುದು ಅವರ ಕ್ರಿಯಾಶೀಲ ಘನವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

      ಕಳೆದ ವರ್ಷ ವೀರಶೈವರದೊಂದು, ಲಿಂಗಾಯತರದೊಂದು ಎರಡು ಬೃಹತ್ ಸಮಾವೇಶಗಳು ಜರುಗಿದವು. ಆದರೆ ಅವರು ಪ್ರಕಟಿಸಿದ ಸ್ಮರಣ ಗ್ರಂಥಗಳನ್ನು ಈ ‘ವಾಲ್ಮೀಕಿ ವಿಜಯ’ದೊಂದಿಗೆ ತೂಕ ಮಾಡಿ ನೋಡಿದಾಗ, ಅವೆರಡೂ ಅತ್ಯಂತ ಕಳಪೆ ಮಟ್ಟದ ಗ್ರಂಥಗಳೆಂದು ಯಾರಿಗಾದರೂ ಅನ್ನಿಸುತ್ತದೆ. ಉಳಿದ ಸಮಾಜದವರಿಗೂ ಇದೊಂದು ಅತ್ಯಂತ ಮಾದರಿಯಾದ ಕೃತಿಯಾಗಿದೆ. ತಮ್ಮ ತಮ್ಮ ಸಮಾಜಗಳ ಬಗ್ಗೆ ಅಧ್ಯಯನಪೂರ್ಣ ಪೂರ್ವಾಗ್ರಹ ಪೀಡಿತ ಮನಸ್ಸಿಲ್ಲದ, ವಾಸ್ತವ ಸತ್ಯವನ್ನು ಹೇಳುವ ಗ್ರಂಥಗಳನ್ನು ಪ್ರಕಟಿಸುವವರಿಗೆ ಈ ಗ್ರಂಥ ದಾರಿದೀಪವೂ ತೋರುಬೆರಳೂ ಆಗಿದೆ. 

    ಇಂತಹ ಬೃಹತ್ ಸಂಪುಟದಲ್ಲಿ ನಾನು ಬರೆದ ‘ವಾಲ್ಮೀಕಿ ವಿಜಯ: ಒಂದು ಅವಲೋಕನ’ ಎಂಬ ಲೇಖನವೊಂದನ್ನು ಡಾ. ಅಮರೇಶ ಯತಗಲ್ ಅವರು ಪ್ರಕಟಿಸಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ. ಕರ್ನಾಟಕದ ಬಹುದೊಡ್ಡ ವಿದ್ವಜ್ಜನರ ಲೇಖನಗಳ ನಡುವೆ, ನನ್ನ ಲೇಖನವೂ ಪ್ರಕಟಣೆಯ ಭಾಗ್ಯ ಕಂಡಿದ್ದು ನಿಜಕ್ಕೂ ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ.

     ಡಾ. ಅಮರೇಶ ಯತಗಲ್ ಅವರು ಲಿಂಗಾಯತರು ಈವರೆಗೂ ಯಾರೂ ಮಾಡದ ರೀತಿಯಲ್ಲಿ ವಚನ ಸಾಹಿತ್ಯ ಅಧ್ಯಯನಕ್ಕೆ ಅನುಕೂಲವಾಗುವ ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ ಪಾಟೀಲರ ‘ಸಾರ್ಥಕ ಬದುಕು’ ಎರಡು ಸಂಪುಟಗಳನ್ನು ಪ್ರಕಟಿಸಿದಂತೆ, ಈಗ ವಾಲ್ಮೀಕಿ ಸಮುದಾಯದ ಇತಿಹಾಸ-ಚರಿತ್ರೆ-ಸಂಸ್ಕೃತಿಗಳ ಅಧ್ಯಯನಕ್ಕೆ ಅನುಕೂಲವಾಗುವ ಪ್ರಸ್ತುತ ‘ವಾಲ್ಮೀಕಿ ವಿಜಯ’ ಬೃಹತ್ ಸಂಪುಟವನ್ನು ಪ್ರಕಟಿಸಿ ಎರಡೂ ಸಮಾಜಕ್ಕೂ ಬಹುದೊಡ್ಡ ಗೌರವವನ್ನು ತಂದುಕೊಟ್ಟಿದ್ದಾರೆ. ಇಂತಹ ಸರ್ವಧರ್ಮ ಸಮನ್ವಯದ ಸೌಹಾರ್ದ ಬೆಳಕನ್ನು ಪಸರಿಸುವ ವಿದ್ವಾಂಸರ ಸಂತತಿ ಹೆಚ್ಚಾಗಲಿ, ಡಾ. ಅಮರೇಶ ಯತಗಲ್ ಅವರ ಈ ಮಾದರಿ ಎಲ್ಲರಿಗೂ ಆದರ್ಶವಾಗಲಿ ಎಂದು ಹೃದಯತುಂಬಿ ಆಶಿಸುವೆ.


ಪ್ರಕಾಶ ಗಿರಿಮಲ್ಲನವರ 

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಈದ್- ಮಿಲಾದ್ ; ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ನಾಡಿನ ಮುಸ್ಲಿಂ ಜನತೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈದ್- ಮಿಲಾದ್ ಹಬ್ಬದ ಶುಭ ಕೋರಿದ್ದಾರೆ. ಈ ದಿನ ಸಮಾಜದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group