ಬೆಳಗಾವಿ: ಕರ್ನಾಟಕವನ್ನಾಳಿದ ಪ್ರತಿ ರಾಣಿಯರ ಪ್ರತ್ಯೇಕ ಅಧ್ಯಯನವು ಸ್ತ್ರೀಸಂವೇದನೆಗಳ ನೆಲೆಯಿಂದ ಆಗಬೇಕಾಗಿದೆ. ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ನೊಗವನ್ನು ಹೊತ್ತು ಕನ್ನಡ ನೆಲದಲ್ಲಿ ಹತ್ತಾರು ರಾಣಿಯರು ಸಾಮ್ರಾಜ್ಯಗಳನ್ನು ಮುನ್ನಡೆಸಿರುವರು. ರಾಜತಾಂತ್ರಿಕ ವ್ಯವಹಾರಗಳಲ್ಲಿ ಪುರುಷರನ್ನು ಮೀರಿಸಿ ತಮ್ಮ ಸಾಮ್ರಾಜ್ಯವನ್ನು ಕಾಪಾಡಿಕೊಂಡಿರುವರು. ಅಂತಹ ರಾಣಿಯರಿಗೆ ಸಂಶೋಧನೆಗಳು ನ್ಯಾಯ ಒದಗಿಸಬೇಕಾಗಿದೆ ಎಂದು ಪ್ರೊ. ಡಿ. ಎನ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠವು ಕಿತ್ತೂರು ಉತ್ಸವ-೨೦೨೨ರ ಸಂದರ್ಭದಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ದಿನಾಂಕ ೨೭.೧೦.೨೦೨೨ ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ನಾಡಿನ ರಾಣಿಯರ ಕುರಿತು ಮಾಹಿತಿಗಳನ್ನು ಒಂದೆಡೆ ಸೇರಿಸಿ ಸಂಪುಟ ಸಿದ್ಧಪಡಿಸಬೇಕಾದ ಅಗತ್ಯವು ಎದ್ದು ಕಾಣುತ್ತಿದೆ. ಈವರೆಗೆ ಕೇವಲ ರಾಜರ ಚರಿತ್ರೆಯನ್ನು ಕಟ್ಟಿಕೊಟ್ಟ ನಾವು ರಾಣಿಯರ ಚರಿತ್ರೆಯನ್ನು ಕಟ್ಟಿಕೊಡುವುದರ ಮೂಲಕ ಸ್ತ್ರೀ-ಸಬಲೀಕರಣದ ಪ್ರಯತ್ನವನ್ನು ಮಾಡಬಹುದಾಗಿದೆ ಎಂದರು.
ಕರ್ನಾಟಕವನ್ನಾಳಿದ ರಾಣಿಯರುಗಳಾದ ಕಿತ್ತೂರು ರಾಣಿ ಚನ್ನಮ್ಮನ ಕುರಿತು ಡಾ. ಗುರುದೇವಿ ಹುಲೆಪ್ಪನವರಮಠ, ಸುರಪುರದ ರಾಣಿ ಈಶ್ವರಮ್ಮನನ್ನು ಕುರಿತು ಡಾ. ಅಮರೇಶ ಯಾತಗಲ್, ರಾಣಿ ಕೆಳದಿ ಚನ್ನಮ್ಮನನ್ನು ಕುರಿತು ಡಾ. ಸುಮಂಗಲಾ ಮೇಟಿ, ರಾಣಿ ಬೆಳವಡಿ ಮಲ್ಲಮ್ಮನನ್ನು ಕುರಿತು ಶ್ರೀ. ಯ. ರು. ಪಾಟೀಲ, ರಾಣಿ ವಂಟಮುರಿ ನಾಗಮ್ಮನನ್ನು ಕುರಿತು ಡಾ. ರತ್ನಾ ಬಾಳಪ್ಪನವರ, ರಾಣಿ ಅಬ್ಬಕ್ಕದೇವಿಯನ್ನು ಕುರಿತು ಡಾ. ಪ್ರಜ್ಞಾ ಮತ್ತಿಹಳ್ಳಿ, ರಾಣಿ ಶಿರಸಂಗಿ ಚನ್ನಮ್ಮನನ್ನು ಕುರಿತು ಜಿ. ಎ. ತಿಗಡಿ, ರಾಣಿ ಚಾಂದಬೀಬಿಯನ್ನು ಕುರಿತು ಡಾ. ಸರಸ್ವತಿ ಭಗವತಿ, ಮೈಸೂರಿನ ರಾಣಿ ಲಕ್ಷ್ಮಮ್ಮಣ್ಣಿಯವರನ್ನು ಕುರಿತು ಡಾ. ಬಿ. ಆರ್. ರಾಧಾ ಪ್ರಬಂಧಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳ ಸಂಪುಟವನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ. ಶಂಕರ ತೇರದಾಳ, ಅಧ್ಯಯನ ಪೀಠದ ಸಂಯೋಜಕರಾದ ಡಾ. ಶೋಭಾ ನಾಯಕ, ಹಿರಿಯ ಸಾಹಿತಿಗಳಾದ ಡಾ. ಸಿ. ಕೆ. ನಾವಲಗಿ, ಡಾ. ವೈ. ಬಿ. ಹಿಮ್ಮಡಿ, ಶ್ರೀಮತಿ. ಸುನಂದಾ ಎಮ್ಮಿ, ಶ್ರೀಮತಿ. ರಜನಿ ಜೀರಗಿಹಾಳ ಮುಂತಾದವರು ಉಪಸ್ಥಿತರಿದ್ದರು.
ಡಾ. ಪಿ. ನಾಗರಾಜ ಸ್ವಾಗತಿಸಿದರು, ಡಾ. ಗಜಾನನ ನಾಯ್ಕ ಕಾರ್ಯಕ್ರಮ ನಿರೂಪಿಸಿದರು, ಡಾ. ಮಹೇಶ ಗಾಜಪ್ಪನವರ ವಂದಿಸಿದರು, ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ಕಾಂಬಳೆ ಸ್ವಾಗತಿ ಗೀತೆಯನ್ನು ಹಾಡಿದರು. ಬೆಳಗಾವಿಯ ಸಾಹಿತಿಗಳು, ಸಂಶೋಧನಾ ವಿದ್ಯಾರ್ಥಿಗಳು, ಕಾಲೇಜಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.