spot_img
spot_img

ವೈಕುಂಠ ಏಕಾದಶಿ ಸರ್ವ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನ…

Must Read

- Advertisement -

🕉️ ಓಂ ಶ್ರೀ ಗುರುಭ್ಯೋ ನಮಃ 🕉️

ಧನುರ್ ಮಾಸದಲ್ಲಿ ಬರುವಂತಹ ವೈಕುಂಠ ಏಕಾದಶಿ ಬಹಳ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ, ವಿಷ್ಣು ದೇವಾಲಯಗಳಲ್ಲಿ ಉತ್ತರ ಭಾಗದಲ್ಲಿರುವ ವಿಶೇಷ ದ್ವಾರ ವೈಕುಂಠದ್ವಾರವನ್ನು ಈ ದಿನ ತೆರೆದಿರುತ್ತಾರೆ. ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಸೂರ್ಯನು ಧನುಸ್ಸು ರಾಶಿಯನ್ನು ಪ್ರವೇಶಿಸಿದ ನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮದ್ಯದಲ್ಲಿ ಮುಕ್ಕೋಟಿ ಏಕಾದಶಿ ಬರುತ್ತದೆ. ಈ ದಿನ ಉಪವಾಸವಿದ್ದು ವೈಕುಂಠ ದ್ವಾರವನ್ನು ಪ್ರವೇಶಿಸಿ ವಿಷ್ಣುವಿನ ದರ್ಶನವನ್ನು ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.

ಈ ದಿನ ಮಹಾವಿಷ್ಣು ಗರುಡವಾಹನದ ಮೇಲೆ ಕುಳಿತು ಮೂರುಕೋಟಿ ದೇವತೆಗಳೊಂದಿಗೆ ಭೂಲೋಕಕ್ಕೆ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಹೀಗಾಗಿ ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶೀ ಎನ್ನುವರು. ಈ ಒಂದು ಏಕಾದಶಿಯು ಮೂರು ಕೋಟಿ ಏಕಾದಶಿಗಳಿಗೆ ಸಮನಾದ ಪವಿತ್ರತೆಯನ್ನು ಹೊಂದಿರುವ ಕಾರಣ ಇದನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಏಕ ಎಂದರೆ ಒಂದು, ದಶ ಎಂದರೆ ಹತ್ತು, ಏಕಾದಶಿ ಎಂದರೆ ಹನೊಂದನೆಯ ದಿನ. ಪುಷ್ಯಮಾಸದಲ್ಲಿ ಬರುವ ಶುಕ್ಲಪಕ್ಷದ ವೈಕುಂಠ ಏಕಾದಶಿಯನ್ನು ಪುತ್ರದಾ ಏಕಾದಶಿ ಎಂದು ಕರೆಯುತ್ತಾರೆ.

ಪುತ್ರದ ಏಕಾದಶಿ ಎಂದರೆ ಹಿಂದೆ ಭವಿಷ್ಯೋತ್ತರ ಪುರಾಣದಲ್ಲಿ ಕಥೆಯೊಂದಿದೆ.

- Advertisement -

ಹಿಂದೆ ಭದ್ರಾವತಿ ಎಂಬ ಪಟ್ಟಣದಲ್ಲಿ ಸುಕೇತಮಾನ್ ಎಂಬ ರಾಜನಿದ್ದನು ಅವನ ಪತ್ನಿ ಶೈಭ್ಯಾ ಇವರಿಗೆ ಸಂತಾನ ಭಾಗ್ಯವಿಲ್ಲದೆ ತುಂಬಾ ದುಃಖಿತರಾಗಿ ಕಾಲ ಕಳೆಯುತ್ತಿದ್ದರು. ಎಲ್ಲಾ ಪೂಜೆ ಪುನಸ್ಕಾರ ವ್ರತಗಳನ್ನು ಮಾಡಿದರೂ ಸಂತಾನ ಯೋಗ ಪ್ರಾಪ್ತಿಯಾಗಲಿಲ್ಲ. ಇದೇ ಕೊರಗಿನಿಂದ ರಾಜ ಹಾಗೂ ಪತ್ನಿಯು ರಾಜ್ಯವನ್ನು ತ್ಯಾಗಮಾಡಿ ಕಾಡಿಗೆ ಹೋದರು.

ಕಾಡಿನಲ್ಲಿ ಒಂದು ಆಶ್ರಮ ಕಂಡರು. ದಂಪತಿಗಳು ಆಶ್ರಮದತ್ತ ಹೆಜ್ಜೆ ಹಾಕಿದರು. ಇಲ್ಲಿ 11 ಜನ ಋಷಿಗಳನ್ನು ಕಂಡು ನಮಸ್ಕಾರವನ್ನು ಸಲ್ಲಿಸಿದರು. ನೀವೆಲ್ಲಾ ಯಾರು ? ಏಕೆ ಕಾಡಿಗೆ ಬಂದಿದ್ದೀರಿ ? ಎಂದು ರಾಜನು ಋಷಿಗಳನ್ನು ಪ್ರಶ್ನಿಸಿದನು.

ಆಗ ನಾವೇ ವಿಶ್ವದೇವತೆಗಳು ಪುಷ್ಯಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯನ್ನು ಭೂಲೋಕದಲ್ಲಿ ಆಚರಿಸುವುದರಿಂದ ಒಳ್ಳೆಯ ಸಂತಾನವನ್ನು ಭಗವಂತನು ದಯಪಾಲಿಸುತ್ತಾನೆ, ಎಂದು ಆ ಆಚರಣೆಯ ಉದ್ದೇಶವನ್ನು ರಾಜನಿಗೆ ತಿಳಿಸಿದನು.

- Advertisement -

ಆಗ ರಾಜನು ಪುತ್ರದಾ ಏಕಾದಶಿಯ ಆಚರಣೆಯನ್ನು ನಿಮ್ಮ ಸನ್ನಿಧಾನದಲ್ಲಿ ಮಾಡುತ್ತೇವೆ, ಎಂದು ಋಷಿಮುನಿಗಳನ್ನು ಪ್ರಾರ್ಥಿಸುತ್ತಾನೆ. ಮುಂದೆ ಇದೆ ಮಗು ದೊಡ್ಡವನಾಗಿ ತಂದೆ ತಾಯಿ ಹಿರಿಯರಿಗೆ ಹಾಗೂ ಭಗವಂತನಲ್ಲಿ ಭಕ್ತಿ ಗೌರವವನ್ನು ಇರಿಸಿಕೊಂಡು ರಾಜ್ಯವನ್ನು ಆಳಿದನು. ಈ ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣನು ಧರ್ಮರಾಜನಿಗೆ ಹೇಳುತ್ತಾನೆ. ವೈಕುಂಠ ಏಕಾದಶಿಯ ಬಗ್ಗೆ ಇರುವ ಇನ್ನೂ ಒಂದು ಕಥೆಯ ಪ್ರಕಾರ…

ಭಾಗವೋತ್ತಮನಾದ ನಂದಗೋಪನು ಶ್ರೀಕೃಷ್ಣ ಸನ್ನಿಧಾನದಲ್ಲಿ ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೇ ಆಚರಿಸುತ್ತಿದ್ದನು. ಒಮ್ಮೆ ಏಕಾದಶಿ ವ್ರತ ಆಚರಿಸಿ ಮರುದಿನ ದ್ವಾದಶೀ ಸ್ವಲ್ಪ ಕಾಲ ಮಾತ್ರ ಇತ್ತು. ಬೆಳಗಿನ ಜಾವಕ್ಕಿಂತ ಮೊದಲು ಯಮುನಾ ನದಿಯಲ್ಲಿ ಸ್ನಾನಕ್ಕಿಳಿಯುತ್ತಾನೆ. ಅದು ರಾಕ್ಷಸ ಸಂಚಾರ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ ನಂದಗೋಪನನ್ನು ವರುಣನ ಬಳಿ ಎಳೆದೊಯ್ದನು. ನಂದಗೋಪನು ಸಮಯ ಕಳೆದರೂ ಬಾರದೇ ಇದ್ದಾಗ ಗೋಪಾಲಕರೆಲ್ಲಾ ಬಲರಾಮನಿಗೆ ಸುದ್ದಿಯನ್ನು ಮುಟ್ಟಿಸುತ್ತಾರೆ. ಶ್ರೀಕೃಷ್ಣನು ಅವರಿಗೆಲ್ಲಾ ಅಭಯವಿತ್ತು, ನಂದಗೋಪನನ್ನು ಕರೆತರುವುದಾಗಿ ಹೇಳಿ ವರುಣ ಲೋಕಕ್ಕೆ ಬರುತ್ತಾನೆ.

ಶ್ರೀಕೃಷ್ಣನನ್ನು ನೋಡಿದ ವರುಣನು ತನ್ನಸೇವಕನಿಂದ ಅದ ಅಪರಾಧವನ್ನು ಮನ್ನಿಸೆಂದು ಪ್ರಾರ್ಥಿಸಿದನು. ವರುಣನಿಗೆ ಆಶೀರ್ವಾದ ಮಾಡಿದ ಶ್ರೀಕೃಷ್ಣನು ತನ್ನ ತಂದೆಯೊಂದಿಗೆ ಹಿಂದಿರುಗುತ್ತಾನೆ. ವರುಣಲೋಕದಲ್ಲಿ ಶ್ರೀಕೃಷ್ಣನಿಗೆ ದೊರೆತ ಭವ್ಯ ಸ್ವಾಗತವನ್ನು ಎಳೆಎಳೆಯಾಗಿ ನಂದಗೋಪನು ವರ್ಣಿಸುತ್ತಿದ್ದರೆ ಉಳಿದ ಗೋಪಾಲಕರಿಗೆ ಹೆಮ್ಮೆಯೆನಿಸಿ ಕೃಷ್ಣನ ನಿಜರೂಪವನ್ನು ನೋಡುವ ಭಾಗ್ಯ ಇಲ್ಲವಾಯಿತು ಎಂದು ಪರಿತಪಿಸಿದರು. ಇದನ್ನರಿತ ಶ್ರೀಕೃಷ್ಣನು ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ.

ಹೀಗೆ ಕೃಷ್ಣನ ಮಾತನ್ನು ಪಾಲಿಸಿದ ಗೋಪಾಲಕರ ಕಣ್ಣಿಗೆ ವೈಕುಂಠವು ಕಾಣಿಸಿ ತೃಪ್ತಿ ನೀಡಿತು. ಶ್ರೀಕೃಷ್ಣನೇ ಪರದೈವವೆಂದು ನಂಬಿಕೆ ಅವರಲ್ಲಿ ಸ್ಥಿರವಾಯಿತು. ಹಾಗಾಗಿ ಈ ಕಾರಣಕ್ಕೆ ವೈಕುಂಠ ಏಕಾದಶಿಯೆಂದು ಕರೆಯಲಾಯಿತು.

ಪುಷ್ಯ ಶುಕ್ಲ ಏಕಾದಶಿಯಾದ ಇಂದು, ಏಕಾದಶೀ ವ್ರತವನ್ನು ಆಚರಿಸಲಾಗುತ್ತದೆ, ಅದನ್ನು ಪುತ್ರದಾ ಅಥವಾ ವೈಕುಂಠೈಕಾದಶೀ ಎಂದು ಕರೆಯಲಾಗಿದೆ. ಈ ಪವಿತ್ರ ದಿನದಂದು ಶ್ರಿಮನ್ನಾರಾಯಣನು ಉತ್ತರ ದ್ವಾರದ ಮೂಲಕ ದೇವತೆಗಳಿಗೆ ದರ್ಶನವನ್ನು ನೀಡಿದನೆಂಬುದಾಗಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಹಾಗಾಗಿ ಅಂದು ಭಕ್ತರು ಉಪವಾಸದಿಂದಿದ್ದು ಮಹಾವಿಷ್ಣುವಿನ ಆಲಯಗಳಲ್ಲಿ ಉತ್ತರ ದಿಕ್ಕಿಗೆ ನಿರ್ಮಿಸಲ್ಪಟ್ಟ ವೈಕುಂಠ ದ್ವಾರ ಅರ್ಥಾತ್ ಸ್ವರ್ಗದ ಬಾಗಿಲ ಮೂಲಕ ದೇವರ ದರ್ಶನವನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ಸಾಕ್ಷಾತ್ ಮಹಾವಿಷ್ಣುವು ಸ್ವರ್ಗದಿಂದ ಭಕ್ತರನ್ನು ಹರಸುತ್ತಾನೆಂಬ ನಂಬಿಕೆ ಇದೆ.

ಏಕಾದಶೇಂದ್ರಿಯೈಃ ಪಾಪಂ ಯತ್ಕೃತಂ ಭವತಿ ಪ್ರಭೋ |
ಏಕಾದಶ್ಯುಪವಾಸೇನ ತತ್ಸರ್ವಂ ವಿಲಯಂ ವ್ರಜೇತ್ ||
ಈ ವ್ರತವನ್ನು ಕೈಗೊಳ್ಳುವುದರಿಂದ ಮನುಷ್ಯನು ತಮ್ಮ ಏಕಾದಶ ಇಂದ್ರಿಯಗಳಿಂದ ಮಾಡಿದ ಎಲ್ಲಾ ಪಾಪಗಳಿಂದ ಮುಕ್ತರಾಗಿ ಸರ್ವಯಜ್ಞಗಳ ಫಲವನ್ನು ಪಡೆದು ವಿಷ್ಣುಸಾಯುಜ್ಯವನ್ನು ಹೊಂದಿವುದಾಗಿ ಭಕ್ತರ ನಂಬಿಕೆ.

ಪ್ರತಿ ಏಕಾದಶಿಗಳಿಗಿಂತಲೂ ವೈಕುಂಠ ಏಕಾದಶಿ ವಿಶೇಷವಾದದ್ದು.

ಸಾಮಾನ್ಯವಾಗಿ ವೈಕುಂಠ ಏಕಾದಶಿ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳಿನಲ್ಲಿ ಬರುವ ಮಿಕ್ಕಿದ 23 ಏಕಾದಶಿ ಉಪವಾಸ ಕೈಗೊಂಡಂತೆ. ಈ ದಿನದಂದು ವಿಷ್ಣುವಿನ ಆರಾಧನೆ ಮಾಡುವುದರಿಂದ ಜನನ ಮತ್ತು ಮರಣದ ಚಕ್ರದಿಂದ ಮುಕ್ತಿ ಸಿಗುತ್ತದೆ ಎನ್ನಲಾಗಿದೆ.

ಈ ದಿನದಂದು ವೈಕುಂಠ (ವಿಷ್ಣುಲೋಕ, ಸ್ವರ್ಗದ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಅಂದು ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯ ದರ್ಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ದಿನ ವಿಷ್ಣು ದೇವಾಲಯಳಲ್ಲಿ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಭಕ್ತಿ, ಆತ್ಮ ಹಾಗೂ ಪರಮಾತ್ಮನ ನಡುವಿನ ಶಾಶ್ವತವಾದ ಪ್ರೇಮ. ಒಬ್ಬ ವ್ಯಕ್ತಿಯ ಪರಮಾತ್ಮನೊಡನೆ ಇರುವ ವಿಶಿಷ್ಟವಾದ ಪ್ರೇಮ, ಭಕ್ತಿ. ಪರಮಾತ್ಮನಿಗೆ ಏನಾದರೂ ಸೇವೆ ಮಾಡಬೇಕೆಂಬ ಉತ್ಸಾಹ, ಭಕ್ತಿ. ಈ ಪ್ರೇಮವನ್ನು ನಮ್ಮಲ್ಲಿ ಜಾಗೃತಗೊಳಿಸುವ ಪ್ರಕ್ರಿಯೆ ಭಕ್ತಿಯೋಗ.

ಭಗವದ್ಗೀತೆಯ ಒಂಬತ್ತನೇ ಅಧ್ಯಾಯ ಭಕ್ತಿಯೋಗ. ಈ ಅಧ್ಯಾಯವನ್ನು ಶ್ರೀಕೃಷ್ಣ ರಾಜವಿದ್ಯೆಯೆಂದು ಕರೆಯುತ್ತಾನೆ.

ಭಕ್ತಿ ಇಂತಹದ್ದೇ ರೀತಿಯಲ್ಲಿ ಇರಬೇಕು, ಹೀಗೆ ಇರಬೇಕು ಎಂದೇನಿಲ್ಲ. ಭಕ್ತಿ ಯಾವ ಪ್ರಕಾರವಾಗಿಯೂ ಇರಬಹುದು. ಕೆಲವರು ನರ್ತನೆಯ ಮೂಲಕ ಭಕ್ತಿಯನ್ನು ತೋರುತ್ತಾರೆ, ಕೆಲವರು ಗಾಯನದ ಮೂಲಕ, ಕೆಲವರು ಚಿತ್ರಕಲೆ ಅಥವಾ ಭೋಗವನ್ನು ಮಾಡಿ ಅರ್ಪಿಸುವುದರ ಮೂಲಕ. ಆದರೆ ಎಲ್ಲರ ಅಂತಿಮ ಉದ್ದೇಶ ಭಕ್ತಿ.

ಕರ್ಮವನ್ನು ಅತಿವೇಗವಾಗಿ ಸುಡುವುದು ಭಕ್ತಿ. ಜ್ಞಾನೋದಯವಾಗುವುದಕ್ಕೆ ಶೀಘ್ರ ದಾರಿ ಭಕ್ತಿ. ಹಾಗೆಯೇ ಮುಕ್ತಿ ಪಡೆಯಲು ಅತಿಶೀಘ್ರವಾದ ಹಾದಿ ಭಕ್ತಿ.

ಶ್ರವಣಂ ಕೀರ್ತನಂ ವಿಷ್ಣೋಃ
ಸ್ಮರಣಂ ಪಾದಸೇವನಂ |
ಅರ್ಚನಂ ವಂದನಂ ದಾಸ್ಯಂ
ಸಖ್ಯಮಾತ್ಮನಿವೇದನಂ ||

ಇವು ಭಕ್ತಿಯ ನವವಿಧಗಳು:

  • ಶ್ರವಣಂ: ಭಗವಂತನ ಮಹಿಮೆಗಳನ್ನು ಧ್ಯಾನ ಮತ್ತು ಭಕ್ತಿಯಿಂದ ಕೇಳಿ ಮನನ ಮಾಡಿಕೊಳ್ಳುವುದು. (ಪರೀಕ್ಷಿತ ಮಹಾರಾಜರು ತಮ್ಮ ಜೀವನದ ಕೊನೆಯ ಏಳು ದಿನಗಳು ನಿರಂತರ ಭಾಗವತಮ್ ಕೇಳುತಿದ್ದರು.)
  • ಕೀರ್ತನಂ: ಭಗವಂತನ ಕೀರ್ತನೆ, ಭಜನೆ, ಗುಣಗಾನ, ಮಹಿಮೆಗಳನ್ನು ಕೊಂಡಾಡುವುದು. (ಸಂತ ತುಕಾರಾಮರು ತಮ್ಮ ಅಭಂಗಗಳ ಮೂಲಕ ವಿಠ್ಠಲನ ಗುಣಗಾನ ಮಾಡಿ ಭಜಿಸುತಿದ್ದರು.)
  • ಸ್ಮರಣಂ: ಶ್ರೀಹರಿಯ ನಾಮಸ್ಮರಣೆಯನ್ನು ನಿರಂತರ ಮಾಡುವುದು. (ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶಿಪುವಿನ ಹಿಂಸೆಗಳ ಮಧ್ಯೆಯೂ ಸದಾ ಶ್ರೀಹರಿಯನ್ನು ಸ್ಮರಿಸುತ್ತಿದ್ದನು.)
  • ಪಾದ ಸೇವನಂ: ಶ್ರೀಹರಿಯ ಚರಣ ಸೇವೆ ಮಾಡುವುದು. (ಲಕ್ಷ್ಮಿ, ಅದೃಷ್ಟದ ದೇವತೆಯು ಯಾವಾಗಲೂ ಶ್ರೀಹರಿಯ ಚರಣ ಸೇವೆ ಮಾಡುವುದು ಕಂಡುಬರುತ್ತದೆ.)
  • ಅರ್ಚನಂ: ಭಗವಂತನ ಅರ್ಚನೆ, ಪೂಜೆಯನ್ನು ಮಾಡುವುದು.
  • ವಂದನಂ: ಭಗವಂತನಿಗೆ ಪ್ರಣಾಮಗಳನ್ನು ಮಾಡುವುದು.
  • ದಾಸ್ಯಂ: ಮಾಡುವ ಎಲ್ಲಾ ಕಾರ್ಯಗಳನ್ನು ತಾನು ಹರಿಯ ದಾಸನೆಂದು ತಿಳಿದು ಮಾಡುವುದು. (ರಾಮಭಕ್ತ ಹನುಮಂತ, ಯಾವಾಗಲೂ ತಾನು ರಾಮಚಂದ್ರನ ದಾಸನೆಂದು ತಿಳಿದು ನಿಷ್ಠೆಯಿಂದ ಅವರ ಸೇವೆ ಮಾಡುತಿದ್ದರು.)
  • ಸಖ್ಯಂ: ಭಗವಂತನ ಮೇಲೆ ವಿಶೇಷ ಪ್ರೀತಿ ಹಾಗೂ ಸಖನೆನ್ನುವ ಭಾವನೆ ಇರಿಸಿಕೊಳ್ಳುವುದು. (ಅರ್ಜುನ ಕೃಷ್ಣನಿಗೆ ಎಷ್ಟು ಹತ್ತಿರವಾದನೆಂದರೆ, ಕೃಷ್ಣನು ಸ್ವತಃ ಅರ್ಜುನನ ಸಾರಥಿಯಾಗುವುದಕ್ಕೆ ಒಪ್ಪಿಕೊಂಡನು.)
  • ಆತ್ಮ ನಿವೇದನಂ: ತಮ್ಮನ್ನು ತಾವು ಭಗವಂತನಿಗೆ ಸಮರ್ಪಿಸುವುದು. (ಬಲಿ ಮಹಾರಾಜನು ತನ್ನ ಇಡೀ ರಾಜ್ಯ ಹಾಗೂ ಸಂಪತ್ತಿನ ಜೊತೆಗೆ ತನ್ನನ್ನು ತಾನು ವಾಮನದೇವನಿಗೆ ಸಮರ್ಪಿಸಿದನು.)
  • ಭಕ್ತಿ: ಭಕ್ತಿಯಿಂದ ಮಾತ್ರ ಹರಿಯನ್ನು ಒಲಿಸಲು ಸಾಧ್ಯ. ನಮ್ಮ ಕೆಲಸಗಳಲ್ಲೂ ಭಕ್ತಿಯನ್ನು ಕಾಣಬಹುದು. ನಾವು ಮಾಡುವ ಯಾವ ಕಾರ್ಯವಾದರೂ ಅದನ್ನು ಭಕ್ತಿಯಿಂದ ಮಾಡಿ ಭಗವಂತನಿಗೆ ಅರ್ಪಿಸಬಹುದು.

ಪತ್ರಂ ಪುಷ್ಪಂ ಫಲಂ ತೋಯಂ
ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮ್
ಅಶ್ನಾಮಿ ಪ್ರಯತಾತ್ಮನಃ
(ಭಗವದ್ಗೀತೆ)

ನನಗೆ ಯಾರಾದರೂ ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಬೊಗಸೆ ನೀರನ್ನೂ ಸಮರ್ಪಿಸುವರೋ ಅದನ್ನು ನಾನು ಸಂತೋಷದಿಂದ ಸ್ವೀಕರಿಸುವೆನು.

ಭಕ್ತಿಗೆ ಮಣಿದು ಪರಮಾತ್ಮ ತನ್ನ ಭಕ್ತರಿಗೋಸ್ಕರ ಏನು ಮಾಡಬೇಕಾದರೂ ಸಿದ್ಧ.

ಪುಂಡಲೀಕನ ಭಕ್ತಿಗೆ ಮೆಚ್ಚಿ, ಅವನಿಗೋಸ್ಕರ ಕಾಯುತ್ತಾ ಹರಿ, ವಿಠ್ಠಲನಾಗಿ ಪಂಢರಾಪುರದಲ್ಲಿ ನೆಲೆಸಿದನು.

ಕನಕದಾಸನ ಭಕ್ತಿಗೆ ಒಲಿದು ಕೃಷ್ಣನು ಉಡುಪಿಯಲ್ಲಿ ತನ್ನ ದಿಕ್ಕನ್ನೇ ಬದಲಾಯಿಸಿದನು.

ಅರ್ಜುನನ ಭಕ್ತಿಗೆ ಮೆಚ್ಚಿ ಅವನ ಸಾರಥಿಯಾಗಲೂ ಸಿದ್ಧನಾದ.

ಒಬ್ಬ ವೃದ್ಧ ಬ್ರಾಹ್ಮಣ ತನ್ನ ಜೊತೆಲಿದ್ದು ಸೇವೆ ಮಾಡಿದ ಯುವ ಬ್ರಾಹ್ಮಣನಿಗೆ ತನ್ನ ಮಗಳನ್ನು ಕೊಡುವೆಯೆಂದು ಮಾತು ಕೊಟ್ಟು ತದನಂತರ ಮನೆಯವರ ಒತ್ತಾಯದ ಮೇರೆಗೆ ಮಾತು ತಪ್ಪಿಸಿದಾಗ, ಸಾಕ್ಷಿಯಾಗಿದ್ದ ಪರಮಾತ್ಮನು, ವೃಂದಾವನದಿಂದ ಒಡಿಶಾದವರೆಗೆ ನಡೆದುಕೊಂಡು ಬಂದು ಸಾಕ್ಷಿಗೋಪಾಲನಾಗಿ ನೆಲೆಸಿದನು.

ತನ್ನ ಪ್ರೀತಿಯ ಭಕ್ತ ಪ್ರಹ್ಲಾದನಿಗೋಸ್ಕರ ಲಕ್ಷ್ಮೀದೇವಿಯೂ ಎಂದೂ ಕಾಣದ, ಯಾರಿಂದಲೂ ಸಮಾಧಾನಗೊಳ್ಳದ ಉಗ್ರ ರೂಪ ತಾಳಿದನು.

ಹರೇರ್ ನಾಮ ಹರೇರ್ ನಾಮ
ಹರೇರ್ ನಾಮೈವ ಕೇವಲಂ
ಕಲೌ ನಾಸ್ತೆವ ನಾಸ್ತೇವ
ನಾಸ್ತೇವ ಗತಿರ್ ಅನ್ಯತಾಃ

ಹಿಂದೂ ಸಂಸ್ಕೃತಿಯು ಈ ಕಲಿಯುಗದಲ್ಲಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಹರಿನಾಮ ಸಂಕೀರ್ತನೆಯೊಂದೇ ಮಾರ್ಗ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group