ಎಷ್ಟು ಗರ್ವದಿಂದ ಹೇಳಿಕೊಳ್ಳಬಹುದಾದ ಅವ್ವನ ಬಗೆಗಿನ ಸಂಗತಿ ಇದು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಅವ್ವ ಅನ್ನಕ್ಕಾಗಿ ಹೋರಾಟ ಮಾಡಿದಳು, ಕಾಸಿಗಾಗಿ ಹೋರಾಟ ಮಾಡಿದಳು, ಕೂಲಿಗಾಗಿ ಹೋರಾಟ ಮಾಡಿದಳು, ನಮ್ಮ ಇಂಚಿಂಚು ಕಾಯವನ್ನು ಕಾಯಲು ಹೋರಾಟ ಮಾಡಿಯೇ ಸುಸ್ತಾದಳು. ಅವ್ವ, ಅಪ್ಪ ಇಬ್ಬರೂ ಒಂದೇ ಊರಿನವರು. ಅಪ್ಪನ ಹೊಲದ ಬಳಿ ಅವ್ವನ ಮನೆ ಇತ್ತು. ಹಾಗಂತ ಅಪ್ಪ ಹೊಲಕ್ಕೆ ಕೆಲಸಕ್ಕೆ ಹೋದಾಗ ಈಗಿನಂತೆ ಅವ್ವನಿಗೆ ಲೈನ್ ಹೊಡೆದು ಲವ್ ಮಾಡಿ ಮದುವೆಯಾದವರಲ್ಲ!
ಇಬ್ಬರೂ ದಿನಕ್ಕೆ ನಾಲ್ಕು ಬಾರಿ ಸಿಗಬಹುದಾಗಿದ್ದ ಎಷ್ಟೋ ಸಂದರ್ಭಗಳನ್ನು ಪರಿಗಣಿಸದೆ, ಒಬ್ಬರಿಗೊಬ್ಬರು ಮುಖ ನೋಡದೆ, ಇಬ್ಬರ ತಂದೆ ತಾಯಿಗಳು ಮಾತನಾಡಿದ ನಂತರವೇ ತಾಳಿ ಕಟ್ಟುವಾಗ ಅವ್ವ ಅಪ್ಪನ ಮುಖವನ್ನು ನೋಡಿದ್ದಿರಬಹುದು. ಅಪ್ಪ ಅನಕ್ಷರಸ್ಥ. ಅವ್ವನೂ ಕೂಡ. ಅಪ್ಪ ಅದಾಗಲೇ ಏನೇನೋ ಕಾರಣಗಳಿಂದ ಕುಡಿಯುವುದು ಕಲಿತಿದ್ದ. ಅವ್ವನಿಗೆ ಅಕ್ಷರಗಳ ಬಗ್ಗೆ ವ್ಯಾಮೋಹ ಇತ್ತು. ಆದರೆ ಕಲಿಯಲು ಆಗಲಿಲ್ಲ. ಆದ್ದರಿಂದಲೇ ಮಕ್ಕಳಾದ ನಮಗೆ ಕಲಿಸುವ ಪಣತೊಟ್ಟಳು. ತಾನು ಸವೆದು ನಮ್ಮನ್ನು ಶಾಲೆಗೆ ಸೇರಿಸಿದಳು.
ನಾನಂತೂ ತುಂಬಾ ಕಿತಾಪತಿ ಹುಡುಗ. ಅದನ್ನು ಸರಿದೂಗಿಸಲೆಂದೇ ನನಗಿಂತ ಮೊದಲು ಅಣ್ಣ ಹುಟ್ಟಿದನೇನೋ.. ನಾನು ಮಾಡಿದ ತಪ್ಪುಗಳನ್ನು ಆತನ ಒಳ್ಳೆಯ ನಡತೆಗಳು ಎಲ್ಲರ ಬಾಯಿ ಮುಚ್ಚಿಸಿಬಿಡುತ್ತಿದ್ದವು. ಇಬ್ಬರ ಬಗ್ಗೆ ಊರವರು ಒಳ್ಳೆಯ ಮಾತುಗಳನ್ನಾಡಿದಾಗ ಅವ್ವನ ಮುಖದಲ್ಲಿ ಬೆವರು ಸುರಿಯುತ್ತಿದ್ದರೂ, ತುಟಿ ಅಂಚಲ್ಲಿ ಸಣ್ಣಗೆ ನಗುತ್ತಿದ್ದಳು. ಅದು ಮನಸಾರೆ ಉಕ್ಕಿ ಬಂದ ಸಂತೋಷವಾಗಿರುತ್ತಿತ್ತು. ಅವ್ವನಿಗೆ ಬೆವರು ಮತ್ತು ಕಣ್ಣೀರು ಎರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಅವೆರಡರ ನಂಟು ಬಹಳ ಇತ್ತು. ನಮ್ಮನ್ನು ರಕ್ಷಿಸುವ ಸಲುವಾಗಿ ಬೆವರುತ್ತಿದ್ದಳು. ಹಸಿದಾಗ, ಅಪ್ಪ ಹೊಡೆದಾಗ ಅಳುತ್ತಿದ್ದಳು ಅಷ್ಟೇ! ಅದರಿಂದಾಚೆಗೆ ಖುಷಿಯನ್ನು ಕಂಡ ದಿನಗಳೇ ವಿರಳ. ಆಗಿನ ಕಾಲದ ಆಸುಪಾಸಿನಲ್ಲಿ ನಮ್ಮ ಬದುಕು ಹಾಗಿತ್ತು. ಮೊದಲಿನಿಂದಲೂ ಅವ್ವ ಎಲ್ಲದಕ್ಕೂ ಹೋರಾಟ ಮಾಡಿಕೊಂಡೇ ಬಂದಳು.
ನಾನು 6 ನೇ ತರಗತಿಯಲ್ಲಿದ್ದೆ. ಅಣ್ಣ 8 ನೇ ತರಗತಿಯಲ್ಲಿ ಓದುತ್ತಿದ್ದ. ಇಬ್ಬರದು ಒಂದೇ ಶಾಲೆ. ಅದು ನಮ್ಮೂರಿನಲ್ಲೇ ಇದ್ದ ಸರ್ಕಾರಿ ಶಾಲೆ. ಆಗೆಲ್ಲ ನಮ್ಮ ಶಾಲೆಯ ಶಿಕ್ಷಕರು ವಾರಕ್ಕೊಂದು ಪರೀಕ್ಷೆ ನಡೆಸುತ್ತಿದ್ದರು. ಕರೆಕ್ಷನ್ ಮಾಡಿದ ಹಾಳೆಗಳನ್ನು ಅಪ್ಪ-ಅಮ್ಮನ ಕೈಯಲ್ಲಿ ಸಹಿ ಹಾಕಿಸಿಕೊಂಡು ಬರಲು ಹೇಳುತ್ತಿದ್ದರು. ನಮ್ಮ ಮನೆಯಲ್ಲಿ ಅವ್ವ, ಅಪ್ಪ ಇಬ್ಬರಿಗೂ ಸಹಿ ಹಾಕಲು ಬರುತ್ತಿರಲಿಲ್ಲ. ನಾನು ಮತ್ತು ಅಣ್ಣ ಇಬ್ಬರು ನಮ್ಮಿಬ್ಬರ ಹೆಬ್ಬೆಟ್ಟುಗಳಿಗೆ ಪೆನ್ನಿನಲ್ಲಿ ಇಂಕು ಗೀಚಿಕೊಂಡು ಹಾಳೆ ಮೇಲೆ ಹೆಬ್ಬೆಟ್ಟು ಒತ್ತಿ ಅದನ್ನೇ ತೆಗೆದುಕೊಂಡು ಹೋಗಿ ಶಿಕ್ಷಕರಿಗೆ ಕೊಡುತ್ತಿದ್ದೆವು. ಹೀಗಿರುವಾಗ ಅಣ್ಣ ಅವ್ವನನ್ನು ಒಂದು ದಿವಸ ಕೂರಿಸಿಕೊಂಡು “ನಿನಗೆ ಸಹಿ ಹಾಕುವುದನ್ನು ಕಲಿಸುತ್ತೇನೆ ಬಾ..” ಎಂದಾಗ, ಅವ್ವ ಬಾಯಿ ತುಂಬಾ ನಕ್ಕಿದ್ದಳು. “ಗೌರಮ್ಮ ಎಂದು ಬರೆಯುವುದು ಕಷ್ಟವೇನಲ್ಲ.. ಇರೋದೇ ಮೂರು ಅಕ್ಷರ. ದಿನವೂ ಒಂದೊಂದು ಅಕ್ಷರ ಬರೆಸುವೆ” ಎಂದು ಹಠ ತೊಟ್ಟು ಅಣ್ಣ, ಅವ್ವನ ಕೈಯಲ್ಲಿ ಸ್ಲೇಟಿನ ಮೇಲೆ ಬಳಪದಿಂದ ಒಂದೊಂದೇ ಅಕ್ಷರಗಳನ್ನು ತಿದ್ದಿಸಿ ಕೊನೆಗೂ ಅವ್ವ ಓದು ಬರಹ ಇಲ್ಲದೆ ತನ್ನ ಹೆಸರನ್ನು ಬರೆಯುವಷ್ಟನ್ನು ಕಲಿತುಬಿಟ್ಟಳು. ಆಕೆಗೆ ಅದು ಬದುಕಿನ ದೊಡ್ಡ ಸಂಭ್ರಮ.
ದಿನಗಳು ಕಳೆದಂತೆ ಅವ್ವನಿಗೆ ಸಹಿ ಮಾಡಲು ಬರುತ್ತೆ ಅಂತ ಅಣ್ಣ ಎಲ್ಲ ಕಡೆ ಹೇಳಿಕೊಂಡು ತಿರುಗುತ್ತಿದ್ದ. ನನಗೂ ಅಪ್ಪನಿಗೆ ಏನಾದರೂ ಕಲಿಸಬೇಕಲ್ಲ ಅಂತ ಅನಿಸಿತು. ಆದರೆ ಅಪ್ಪನಿಗೆ ಈ ರಾತ್ರಿ ಕಲಿಸಿದ್ದು ಮಾರನೆಯ ದಿನಕ್ಕೆ ನೆನಪಿರುವುದಿಲ್ಲ ಅಂತ ನನಗೆ ಗೊತ್ತಿತ್ತು. ಆತನ ಕುಡಿತ ಆತನಿಗೆ ಕಲಿಸುವ ಧೈರ್ಯವನ್ನು ಹೆಚ್ಚು ದಿನಗಳ ಕಾಲ ಉಳಿಸಿಕೊಳ್ಳಲು ಬಿಡಲಿಲ್ಲ. ಅವ್ವನಿಗೇ ಏನಾದರೂ ಕಲಿಸಬೇಕು ಅಂದುಕೊಳ್ಳುವಾಗ ನನಗೆ 16 ದಾಟಿ ಕಾಲೇಜಿಗೆ ಹೋಗುವಾಗ ನಮ್ಮ ಮನೆಗೆ ಒಂದು ಮೊಬೈಲ್ ಬಂತು. ತದನಂತರದಲ್ಲಿ ಅಣ್ಣನ ಕೈಗೆ, ಆನಂತರದಲ್ಲಿ ನನ್ನ ಕೈಯಿಗೂ ಮೊಬೈಲ್ ಬಂತು. ಅವ್ವನ ಮೊಬೈಲ್ ನಿಂದ ನಮ್ಮ ಮೊಬೈಲಿಗೆ ಫೋನ್ ಮಾಡುವುದನ್ನು ನಾನು ಅವ್ವನಿಗೆ ಕಲಿಸಿಕೊಟ್ಟೆ. ಅವ್ವ ಕಲಿತಳು. ಬದುಕಿನ ಸಂಭ್ರಮ ಹೆಚ್ಚಿತು. ನಾವು ಹಾಸ್ಟೆಲ್ ನಲ್ಲಿ ಓದುತ್ತಿದ್ದರಿಂದ ಯಾವ ಸಮಯದಲ್ಲಾದರೂ ಫೋನ್ ಮಾಡಿ ಮಕ್ಕಳ ಜೊತೆ ಮಾತನಾಡಬಹುದಲ್ಲಾ ಎಂದು ಸಂತೋಷಪಟ್ಟಳು.
ಓದು ಮುಗಿಯಲಿಲ್ಲ. ಬದುಕಿನಲ್ಲಿ ಅನಿವಾರ್ಯವಾಗಿ ಅಣ್ಣ ಓದು ನಿಲ್ಲಿಸಬೇಕಾಗಿ ಬಂತು. ತನ್ನ ಓದು ನಿಲ್ಲಿಸಿ, ನನ್ನ ಓದಿಗೆ ಬೆನ್ನೆಲುಬಾಗಿ ನಿಂತ. ಆದರೆ ಜವಾಬ್ದಾರಿ ಬಿಡಬೇಕಲ್ಲಾ.. ಬೆಂಗಳೂರು ಕೈಬೀಸಿ ಕರೆಯುತ್ತಿತ್ತು. ಈಗ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳಾಯಿತು. ಹವ್ಯಾಸಗಳು ಊರಿಗೆ ಹೋಗುವ ಸಂದರ್ಭಗಳನ್ನು ತಡೆಯುತ್ತಿದ್ದವು. ಆಗ ಅವ್ವನಿಂದ ಕರೆಗಳು ಬರಲು ಹೆಚ್ಚಾದವು. ಮಗ ದೊಡ್ಡೋನಾಗ್ಬುಟ್ಟ, ಫೋನೇ ಮಾಡಲ್ಲ ಅಂತ ಕಂಪ್ಲೇಟ್ ಹೇಳಲು ಶುರುಮಾಡಿದಳು. ಅವ್ವನನ್ನು ಒಳಗಿನಿಂದ ಪ್ರೀತಿಸಿ ಗೊತ್ತೇ ವಿನಃ, ಫೋನು ಮಾಡಿ ಸಮಾಚಾರ ವಿಚಾರಿಸಿಕೊಳ್ಳುವ ಸಂಸ್ಕೃತಿ ನನಗೆ ಮೊದಲಿನಿಂದಲೂ ಅಂಟಲಿಲ್ಲ. ಸ್ವತಃ ಅವ್ವನೇ ಕರೆ ಮಾಡಿದರೂ ಹೆಚ್ಚು ಮಾತನಾಡಬೇಕು ಅನ್ನಿಸೋದಿಲ್ಲ. ಫೋನು ಮಾಡಿದಾಗೆಲ್ಲ “ನಿನಗೆ ಅವ್ವ ಬ್ಯಾಡವಾಗಿಬಿಟ್ಲ?” ಅಂತ ಕೇಳುವಾಗ, ಅವ್ವನಿಗೆ ಫೋನ್ ಮಾಡೋದು ಕಲಿಸಿದ್ದು ನಾನೇನಾ? ಅನ್ನೋ ಪ್ರಶ್ನೆ ಮೂಡುತ್ತದೆ! ಹಾಗಾಗಿ ಇತ್ತೀಚೆಗೆ ನಾನು ಮೌನದಿಂದಿರುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಅವ್ವನಿಗೆ ನನ್ನ ಪ್ರೀತಿ ತಿಳಿಯುವುದೇ ಬೇಡ. ಆಕೆಯ ಪ್ರೀತಿಯ ಮುಂದೆ ನನ್ನದೆಲ್ಲ ಯಾವ ಪ್ರೀತಿ? ಅಲ್ಲವೇ??
ಹೇಮಂತ್ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ