spot_img
spot_img

ಬೆಂಕಿಯಲ್ಲಿ ಅರಳಿದ ಹೂ ಡಾ. ಜ್ಯೋತಿ

Must Read

- Advertisement -

ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದೊಂದು ಘಟನೆಗಳು ಜರಗುವ ಮೂಲಕ ಜೀವನಕ್ಕೊಂದು ತಿರುವು ನೀಡಿರುತ್ತವೆ.ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಸಂಗತಿಗಳು ನಮ್ಮ ಜೀವನಕ್ಕೆ ತಿರುವು ನೀಡುತ್ತವೆ. ಇಂತಹ ತಿರುವುಗಳು ಜೀವನದಲ್ಲಿ ಪರಿಶ್ರಮದ ಮೂಲಕ ಮುಂದೆ ಬಂದು ಸಮಾಜದಲ್ಲಿ ನಾವು ತಲೆ ಎತ್ತಿ ನಿಲ್ಲುವಂತೆ ಮಾಡುತ್ತವೆ. ಅಂತಹ ನೋವು ನಲಿವುಗಳ ನಡುವೆ ಬದುಕಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಯುವತಿ ಡಾ. ಜ್ಯೋತಿ.

ನಮ್ಮ ಜೀವನದಲ್ಲಿ ನಮಗೆ ಆದ ಅವಮಾನ ನೋವುಗಳನ್ನು ನಮ್ಮ ಪರಿಶ್ರಮದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಮೂಲಕ ಬದುಕನ್ನು ಕಟ್ಟಿಕೊಂಡ ಯುವತಿ ಡಾ. ಜ್ಯೋತಿ. ತನ್ನ ತಂದೆಯ ನಿಧನ. ಆ ಸಂದರ್ಭದಲ್ಲಿ ಅವರು ಅನುಭವಿಸಿದ ನೋವು ಬದುಕಿನ ಯಾತನೆಗಳು.ಕಂಕುಳಲ್ಲಿ ಪುಟ್ಟ ಮಕ್ಕಳ ಹೊಂದಿದ ತಾಯಿ.ಹೊಸಿಲು ದಾಟಿ ಹೊರ ಬರದ ರೀತಿಯಲ್ಲಿ ಇರುವ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಜ್ಯೋತಿ ಮನೆಗೆಲಸ ಮಾಡುವ ಮೂಲಕ ಶಿಕ್ಷಣ ಪಡೆದು ಸಮಾಜದಲ್ಲಿ ತಲೆ ಎತ್ತಿ ನಿಂತು ಇಂದು ಕರ್ನಾಟಕದ ಸ್ಪರ್ಧಾ ಲೋಕದ ಸಾಧನಾ ಕೋಚಿಂಗ್ ಕೇಂದ್ರವನ್ನು ತೆರೆದ ಮೊಟ್ಟ ಮೊದಲ ಮಹಿಳೆಯಾಗಿ ಬೆಳೆದ ರೀತಿಯ ಹಿಂದೆ ತನ್ನದೇ ಆದ ಕಥೆಯಿದೆ. ವ್ಯಥೆಯಿದೆ.ನೋವಿದೆ.ನೋವಲ್ಲೂ ನಲಿವನ್ನು ಕಾಣುತ್ತಿರುವ ಘಟನೆಗಳಿವೆ.ಇವೆಲ್ಲವುಗಳ ನಡುವೆ ಕತ್ತಲೆಯ ಬದುಕಿಗೆ ಬೆಳಕನ್ನು ಅನೇಕ ಯುವಕ ಯುವತಿಯರಿಗೆ ನೀಡುವ ಪ್ರಜ್ವಲಿಸುವ ಜ್ಯೋತಿಯಂತೆ ಕಂಗೊಳಿಸುತ್ತಿರುವವರು ಸಾಧನಾ ಐಎಎಸ್.ಕೆಎಎಸ್ ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆಯ ನಿರ್ದೇಶಕಿಯಾಗಿ ಡಾ. ಜ್ಯೋತಿ ನಮ್ಮ ಕಣ್ಣ ಮುಂದಿನ ಬೆಂಕಿಯಲ್ಲಿ ಅರಳಿದ ಹೂ ಎಂದರೆ ಅತಿಶಯೋಕ್ತಿಯಾಗಲಾರದು.

- Advertisement -

ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯ ಉರ್ದು ಶಾಲೆಯ ಕನ್ನಡ ಶಿಕ್ಷಕ ಎಲ್.ಐ.ಲಕ್ಕಮ್ಮನವರ ಅವರು ನನಗೆ ಡಾ. ಜ್ಯೋತಿ ಅವರ ಕುರಿತು ಹೇಳಿದರು.

ಅವರ ಪರಿಚಯದ ಎಳೆಯನ್ನು ಕೇಳಿದಾಗ ಇವರನ್ನು ಕಾಣಬೇಕು ಎಂದು ನಾನು ಬೆಂಗಳೂರಿಗೆ ಸ್ನೇಹಿತನ ನೂತನ ಮನೆಗೆ ವಾಸ್ತುಶಾಂತಿಗೋಸ್ಕರ ಹೋಗುವ ಸಂದರ್ಭ ಬಂತು.ಬೆಂಗಳೂರಿಗೆ ಬಂದು ಅಲ್ಲಿಂದ ನೇರವಾಗಿ ಕರೆ ಮಾಡಿದ್ದು ಡಾ. ಜ್ಯೋತಿಯವರಿಗೆ. ಅವರು ಮಂಗಳೂರಿನಲ್ಲಿದ್ದೇನೆ ಸರ್ ಎರಡು ದಿನಗಳ ನಂತರ ಬರುತ್ತೇನೆ ಎಂದರು.ನಾನು ನನ್ನ ಎರಡು ದಿನಗಳ ರಜೆಯ ಸಮಯದಲ್ಲಿ ಬೆಂಗಳೂರಿಗೆ ಹೋಗಿದ್ದು. ಇವರ ಪರಿಚಯದ ಬರಹ ರೂಪಿಸುವ ಸಲುವಾಗಿ ಒಂದು ದಿನ ರಜೆ ಹಾಕಿದರಾಯಿತು ಎಂದುಕೊಂಡು ಮತ್ತೊಂದು ದಿನಕ್ಕೆ ನನ್ನ ಪ್ರವಾಸದ ದಿನಚರಿಯನ್ನು ವಿಸ್ತರಿಸಿಕೊಂಡು ನನ್ನ ಮೇಲಾಧಿಕಾರಿಗಳಿಂದ ಒಂದು ದಿನದ ರಜೆ ಅನುಮತಿ ಪಡೆದುಕೊಂಡೆನು.

ಸೋಮವಾರ ಡಾ. ಜ್ಯೋತಿ ಮೇಡಂ ಮನೆಗೆ ಹೋಗಬೇಕು ಎಂದುಕೊಂಡು ರವಿವಾರ ರಾತ್ರಿ ನಾನು ಕರೆ ಮಾಡಿದಾಗ ಅವರು ಮಂಗಳೂರಿನಿಂದ ತಮ್ಮ ಊರು ಚಿತ್ರದುರ್ಗಕ್ಕೆ ಬಂದಿರುವ ಸಂಗತಿ ತಿಳಿಸಿದರು.ಅವರು ಸೋಮವಾರ ಚಿತ್ರ ದುರ್ಗದಿಂದ ಹೊಸದುರ್ಗದಲ್ಲಿ ಒಂದು ಕಾರ್ಯಕ್ರಮ ಸೋಮವಾರ ಮದ್ಯಾಹ್ನ ೨.೩೦ ಕ್ಕೆ. ಪಾಲ್ಗೊಂಡು ನಂತರ ಮಂಗಳವಾರ ಬೆಂಗಳೂರು ಪ್ರಯಾಣ ಎಂಬ ಸಂಗತಿಯನ್ನು ನನಗೆ ತಿಳಿಸಿದರು.

- Advertisement -

ನಾನು ನೇರವಾಗಿ ಪ್ರಯಾಣ ಬೆಳೆಸಿದ್ದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ. ತುಮಕೂರಿಗೆ ಬರುವಷ್ಟರಲ್ಲಿ ನಾನು ಮತ್ತೆ ಕರೆ ಮಾಡಿ ನಾನು ಚಿತ್ರದುರ್ಗದಲ್ಲಿ ಯಾವ ಸ್ಥಳದಲ್ಲಿ ಬಂದರೆ ತಮ್ಮ ಭೇಟಿ ಸಾಧ್ಯ. ? ಎಂದಾಗ. ಮೊದಲು ನೀವು ಚಿತ್ರದುರ್ಗಕ್ಕೆ ಬನ್ನಿ ಸರ್ ಅಲ್ಲಿ ಅಟೋದವರ ಬಳಿ ಪೋನ್ ಕೊಡಿ ನೀವು ಎಲ್ಲಿ ಬರಬೇಕು ಎಂಬುದನ್ನು ನಾನು ಅವರಿಗೆ ತಿಳಿಸ್ತೀನಿ ಎಂಬ ಅವರ ಉತ್ತರ ನನಗೆ ಸಂತಸ ತಂದಿತು.

ಜೀವನದ ಪ್ರತಿ ಕ್ಷಣವೂ ಒಂದೊಂದು ರೀತಿಯ ತಮ್ಮದೇ ವೇಳಾಪಟ್ಟಿಯೊಂದಿಗೆ ಬದುಕನ್ನು ಕಳೆಯುತ್ತಿರುವ ಪ್ರತಿಭೆ ಡಾ. ಜ್ಯೋತಿ.ಅವರ ಪರಿಚಯಾತ್ಮಕ ಬರಹ ರೂಪಿಸಲು ಅವರು ತಮ್ಮ ಆ ದಿನದ ಕಾರ್ಯಕ್ರಮವನ್ನು ಮುಂದೂಡಿದ ಸಂಗತಿ ನನಗೆ ಅವರ ಮನೆಗೆ ನಾನು ಹೋದಾಗ ತಿಳಿಯಿತು. ಸ್ವಲ್ಪ ಸಮಯ ನನಗೆ ಅವರು ಪರಿಚಯಾತ್ಮಕ ಬರಹಕ್ಕೆ ಕೊಟ್ಟಿದ್ದರೆ ಸಾಕು ಎಂದು ನಾನು ಅನುಮತಿ ಪಡೆದಿದ್ದೆ.ನನಗೆ ಅವರು ತಮ್ಮ ಕಾರ್ಯಕ್ರಮ ಮರುದಿನಕ್ಕೆ ನಿಗದಿಗೊಳಿಸಿ ಸಮಯ ನೀಡಿದ್ದು ಸಂತಸ ತಂದಿತ್ತು.

ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ಇಳಿದು ಡಾ. ಜ್ಯೋತಿಯವರಿಗೆ ಕರೆ ಮಾಡಿದೆ.ಆಟೋದವರಿಗೆ ಪೋನ್ ಕೊಟ್ಟೆ ಅವರ ಮನೆಗೆ ಬರುವ ಮಾರ್ಗ ತಿಳಿಸಿದರು.ಆಟೋದವರು ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದರು.ಅದು ಗಣಪತಿ ದೇವಾಲಯ ಅಲ್ಲಿ ಪಕ್ಕಕ್ಕೆ ಇವರ ಮನೆ.ಅಟೋ ಇಳಿದು ಕರೆ ಮಾಡಿದೆ.ಸ್ವತಃ ಮೇಡಂ ತಮ್ಮ ಮನೆಯಿಂದ ಬಂದು ನನ್ನನ್ನು ಸ್ವಾಗತಿಸಿದರು. ಅವರೊಡನೆ ಅವರ ಸಹೋದರ ಕೂಡ ಇದ್ದರು. ಅಪರಿಚಿತನಾದ ನಾನು ರಾಜ್ಯದ ಉನ್ನತ ಸಂಸ್ಥೆಯ ನಿರ್ದೇಶಕಿಯೊಬ್ಬರ ಮನೆಗೆ ಲಕ್ಕಮ್ಮನವರ ಗುರುಗಳ ಮೂಲಕ ಪರಿಚಿತನಾಗಿ ಹೋದಾಗ ಅವರು ತಮ್ಮ ಮನೆಯ ಓರ್ವ ಸಹೋದರನ ರೀತಿಯಲ್ಲಿ ನನ್ನನ್ನು ಸ್ವಾಗತಿಸಿದ್ದು ನಮ್ಮ ಸಂಸ್ಕೃತಿಯ ಪ್ರತೀಕ.

ಮನೆಯೊಳಗೆ ಹೋಗುವಷ್ಟರಲ್ಲಿ ಅವರ ತಾಯಿ ಮತ್ತೊಬ್ಬ ಸಹೋದರ ಅವರ ಪತ್ನಿ ಹೀಗೆ ಎಲ್ಲರನ್ನೂ ಪರಿಚಯಿಸುವ ಮೂಲಕ ತಮ್ಮನ್ನು ಪರಿಚಯಿಸಿಕೊಂಡು ಆದರಾತಿಥ್ಯ ನೀಡಿ ಮಾತಿಗೆ ತೊಡಗಿದರು.

ಕಷ್ಟಗಳ ನಡುವೆ ಬದುಕು:

ಇವರ ಮೂಲ ಸ್ಥಳ ಚಿತ್ರದುರ್ಗ ಜಿಲ್ಲೆಯ ಹತ್ತಿರ ಕೆರೆಗನಹಳ್ಳಿ. ತಂದೆ ಲಾರಿ ಚಾಲಕರಾಗಿ ಚಿತ್ರದುರ್ಗದಲ್ಲಿ ತಮ್ಮ ಬದುಕನ್ನು ಕಂಡುಕೊಂಡವರು. ಇವರ ತಂದೆಗೆ 4 ಜನ ಸಹೋದರರು ಇಬ್ಬರು ಸಹೋದರಿಯರು ಮನೆಗೆ ಹಿರಿಯವರೇ ಇವರ ತಂದೆ. 

ಲಾರಿ ಚಾಲನೆಯ ಮೂಲಕ ಬದುಕು ಕಟ್ಟಿಕೊಂಡವರು. ಚಂದ್ರಾನಾಯ್ಕ ಕೈ ಹಿಡಿದದ್ದು ಜಯಮ್ಮ ಅವರನ್ನು. ಚಂದ್ರಾನಾಯ್ಕ ಜಯಮ್ಮ ದಂಪತಿಗಳ ಹಿರಿಯ ಪುತ್ರಿ ಜ್ಯೋತಿ. ಹೆಸರಿಗೆ ತಕ್ಕಂತೆ ಕತ್ತಲೆಯಲ್ಲಿ ಪ್ರಜ್ವಲಿಸುವ ಪ್ರಭೆಯಾಗಿ ಜ್ಯೋತಿ ಕಂಗೊಳಿಸುತ್ತಿರುವ ಮಗಳಾಗಿ ಬೆಳೆಯುವ ಹಂತದಲ್ಲಿ ಈ ದಂಪತಿಗಳಿಗೆ ಇಬ್ಬರು ಗಂಡು ಓರ್ವ ಹೆಣ್ಣು ಮಗಳ ಜನನ. ನಾಲ್ಕು ಮಕ್ಕಳ ಸಂಸಾರ ರಥ ಸಾಗುತ್ತಿತ್ತು. ಚಂದ್ರಾನಾಯ್ಕ ಅವರಿಗೆ ಹೃದಯಾಘಾತದ ಮರಣ ಈ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿತು. ಜ್ಯೋತಿ ಆಗ ಒಂಭತ್ತನೇ ತರಗತಿ ವಿದ್ಯಾರ್ಥಿನಿ.

ಮನೆಯ ಹೊಸಿಲಿನಿಂದ ಆಚೆ ಬರದ ತಾಯಿ ತನ್ನ 4 ಮಕ್ಕಳ ಜೊತೆ ಸಂಸಾರ ನಿಭಾಯಿಸುವ ಹೊಣೆ. ಶಿಕ್ಷಣ ಪಡೆಯುತ್ತಿದ್ದ ಮಗಳು ಕೂಡ ತಾಯಿಯ ಜೊತೆ ಕೆಲಸ ಮಾಡುವ ವಾತಾವರಣ. ಆಟವಾಡುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೊತ್ತುಕೊಂಡರು. ಕುಟುಂಬ ನಿರ್ವಹಣೆಗೆ ಜ್ಯೋತಿ ತನ್ನ ತಾಯಿಯ ಜೊತೆ ಅಕ್ಕಪಕ್ಕದ ಮನೆಗಳಲ್ಲಿ ಪಾತ್ರೆ ತೊಳೆಯುವ ಬಟ್ಟೆ ತೊಳೆಯುವ ಸಣ್ಣ ಪುಟ್ಟ ಕಾರ್ಯ ಗಳನ್ನು ಮಾಡುತ್ತಾ ಪುಟ್ಟ ತಮ್ಮ ತಂಗಿಯನ್ನು ನೋಡಿಕೊಂಡು ತನ್ನ ಶಿಕ್ಷಣ ಪಡೆದು ಸಮಾಜದಲ್ಲಿ ತಲೆ ಎತ್ತಿ ನಿಂತು ಇಂದು ಕರ್ನಾಟಕದ ಸ್ಪರ್ಧಾಲೋಕದ ಕ್ರಾಂತಿಕಾರಿ ಮಹಿಳೆ ಎಂದು ಹೆಸರುವಾಸಿಯಾಗಿದ್ದಾರೆ. 

ಬಾಲ್ಯದಲ್ಲಿ ಕಷ್ಟ ಗಳ ಸರಮಾಲೆ. ಅನೇಕ ರೀತಿಯ ಚುಚ್ಚು ಮಾತು.ತಾವು ಕೆಲಸಕ್ಕೆ ಹೋಗಿ ಅಲ್ಲಿ ಅವರು ನೀಡುವ ತುತ್ತು ಅನ್ನವನ್ನು ಮನೆಗೆ ತಂದು ಸಹೋದರ ಸಹೋದರಿಗೆ ನೀಡುವ ಮೂಲಕ ಅವರನ್ನು ಸಾಕಿ ಸಲುಹಿರುವರು. ಇವರಿಗೆ ಹಲವರು ಅನೇಕ ರೀತಿಯ ಚುಚ್ಚು ಮಾತುಗಳನ್ನು ಹೇಳಿದಾಗಲೂ ಅವುಗಳನ್ನು ಪಕ್ಕಕ್ಕಿಟ್ಟು ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಎದೆಗುಂದದೆ ಸಾಗಿದ ಜ್ಯೋತಿ ಯವರಿಗೆ ಇವರ ತಾಯಿ  ನೀಡಿದ್ದು ಮಾತೆಯ ಹೃದಯದ ಜೊತೆ ಏನೇ ಬರಲಿ ಎದೆಗುಂದದೆ ಬದುಕು ನಡೆಸುವ ಛಲಗಾರಿಕೆ ಇರಲಿ ಎಂದು ಹೇಳಿದ್ದು. ದೈನಂದಿನ ಜೀವನದಲ್ಲಿ ಇವರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ಕೂಡ ನಡೆದದ್ದುಂಟು ಅವುಗಳ ಮಧ್ಯದಲ್ಲಿ ಆ ವ್ಯವಸ್ಥೆಯನ್ನು ಎದುರಿಸಿ ತಮ್ಮ ಜೀವನ ಕಟ್ಟಿಕೊಂಡು ಇಂದು ತುಳಿಯುವ ಪ್ರಯತ್ನ ಮಾಡಿದವರ ಮುಂದೆ ತಲೆ ಎತ್ತಿ ನಿಂತ ಇವರ ರೀತಿ ನಿಜಕ್ಕೂ ಮಾದರಿ. ಕಷ್ಟ ಬಂದಾಗ ಕುಗ್ಗದೇ ಸುಖ ಬಂದಾಗ ಹಿಗ್ಗದೇ ತಮಗಾದ ಅವಮಾನ ನೋವು ಮೆಟ್ಟಿ ನಿಂತವರು.

ವಿದ್ಯಾಭ್ಯಾಸ:

ತಾಯಿಯ ಜೊತೆ ಮನೆಗೆಲಸ ಮಾಡುತ್ತಾ ಸಿಗುವ ಪುಟ್ಟ ಸಂಬಳವನ್ನು ಮನೆಗೆ ಮತ್ತು ತನ್ನ ಶಾಲೆಯ ಫೀ ಹಣ ನಿರ್ವಹಣೆಗೆ ಬಳಕೆ ಮಾಡುತ್ತಾ ಜ್ಯೋತಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಪೂರೈಸಿದ್ದು ಚಿತ್ರದುರ್ಗದಲ್ಲಿ ಶ್ರೀ ಸಂಪಿಗೆ ಸಿದ್ದೇಶ್ವರ ಶಾಲೆಯಲ್ಲಿ ಈ ನಡುವೆ ತಮ್ಮ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯರನ್ನು ಕೂಡ ಶಾಲೆಗೆ ಹೆಸರು ದಾಖಲಿಸುವ ದಾಖಲಿಸುವ ಮೂಲಕ ತಮ್ಮ ಓದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. 

ಪಿ. ಯು.ಸಿಯನ್ನು ಹಾಗೂ ಪದವಿ ಶಿಕ್ಷಣ ಜಗದ್ಗುರು ಶ್ರೀ ಮುರುಘರಾಜೇಂದ್ರ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯ ಚಿತ್ರದುರ್ಗದಲ್ಲಿ ಪೂರೈಸಿದರು. ಸ್ನಾತಕೋತ್ತರ ಪದವಿ ಎಂ.ಎ ಕುವೆಂಪು ವಿಶ್ವವಿದ್ಯಾಲಯದಲ್ಲಿ ಮುಗಿಸಿ ನಂತರ ಕೃಷಿ ಅಭಿವೃದ್ಧಿಯಲ್ಲಿ ಮಹಿಳಾ ಉದ್ಯೋಗ ಮತ್ತು ವೇತನ ವ್ಯತ್ಯಾಸಗಳ ಕುರಿತು ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ. ಫಿಲ್ ಹಾಗೂ ಪಿಎಚ್ ಡಿ ಸಂಶೋಧನೆ ಕೈಗೊಂಡ ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಪ್ರಕರಣ ಅಧ್ಯಯನ.ಪ್ರೊ.ಎಸ್.ಎನ್ ಯೋಗೇಶ್ ರವರ ಮಾರ್ಗದರ್ಶನದಲ್ಲಿ ಕೈಗೊಳ್ಳುವ ಮೂಲಕ ಡಾಕ್ಟರೇಟ್ ಪಡೆದರು. 

ನೋವುಗಳ ಮಧ್ಯೆ ಸಾಧನೆ:

ಒಳ್ಳೆಯ ಶಿಕ್ಷಣ ಪಡೆದದ್ದಾಯಿತು. ನೌಕರಿಗೆ ಅರ್ಜಿ ಸಲ್ಲಿಸಿದ್ದರೆ ನೌಕರಿ ಪಡೆಯಬಹುದು. ಆದರೆ ಅನೇಕ ಪ್ರತಿಭೆಗಳಿಗೆ ಪ್ರೇರಕ ಶಕ್ತಿಯಾದರೆ ತಾನು ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಈ ದಿಸೆಯಲ್ಲಿ ಮುನ್ನಡೆಯಬೇಕು ಎಂದುಕೊಂಡು ಬೆಂಗಳೂರಿನ ಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ನಡೆಯುತ್ತಿದ್ದ ಸಾಧನಾ ಕೋಚಿಂಗ್ ಸೆಂಟರ್ ಮುಚ್ಚುವ ಸ್ಥಿತಿಯಲ್ಲಿ ಇದ್ದುದನ್ನು ತಮ್ಮ ಕೈಗೆ ತಗೆದುಕೊಂಡು ಕೋಚಿಂಗ್ ಸೆಂಟರ್ ಒಡತಿಯಾದರು. 

ಜೀವನ ಸಂಜೀವನ:

ಎಲ್ಲಾ ಪ್ರಸ್ತುತ ಆರ್ಥಿಕ, ಸಾಮಾಜಿಕ ಮತ್ತು ನಿಯಂತ್ರಕ ಸಮಸ್ಯೆಗಳ ವ್ಯಾಪಕ ಜ್ಞಾನದೊಂದಿಗೆ ಪ್ರಥಮ ದರ್ಜೆಯ ಸಂವಹನ ಕೌಶಲ್ಯವನ್ನು ಬೆಳೆಸುವ ಇವರ ನಿರ್ಧಾರ ಕೋಚಿಂಗ್ ಸೆಂಟರ್ ಮೂಲಕ ಪ್ರಾರಂಭವಾಯಿತು. ಮನೆಯಲ್ಲಿ ಸಹೋದರ ಸಹೋದರಿಯ ಶಿಕ್ಷಣ ಜೊತೆ ಸಮಾಜದಲ್ಲಿ ತನ್ನಂತೆ ಅನೇಕ ಬಡ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗತೊಡಗಿತು.

ಇವರ ತುಡಿತ ಯಶಸ್ವಿ ನಿರ್ವಹಣೆಯ ಸುದೀರ್ಘ ದಾಖಲೆಯೊಂದಿಗೆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು.

ಕಲಬುರಗಿ ಕರ್ಮಭೂಮಿಯಾಗಿ:

ಸರಕಾರ ರಾಜ್ಯದ ವಿವಿಧೆಡೆ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಹೆಸರಾಂತ ಕೋಚಿಂಗ್ ಸೆಂಟರ್ ಗಳ ಮೂಲಕ ತರಬೇತಿ ಸೌಲಭ್ಯ ನೀಡುತ್ತಿದೆ. ಅಂತಹ ಕೋಚಿಂಗ್ ಸೌಲಭ್ಯಕ್ಕೆ ಸಾಧನಾ ಕೋಚಿಂಗ್ ಸೆಂಟರ್ ಗೆ ಕೂಡ ಸರಕಾರ ಅವಕಾಶ ನೀಡಿದ್ದು. ಅನೇಕ ಬಡ ಪ್ರತಿಭೆಗಳು ಈ  ಸಂಸ್ಥೆಯಡಿಯಲ್ಲಿ ತರಬೇತಿ ಪಡೆದಿರುವರು.

ವಿಶೇಷವಾಗಿ ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿ ಇವರ ಸಂಸ್ಥೆಗೆ ಸರಕಾರ ಈ ಅವಕಾಶವನ್ನು ಕಲ್ಪಿಸಿದ್ದು ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಅನೇಕ ಪ್ರತಿಭೆಗಳು ಇಂದು ನಾಡಿನಾದ್ಯಂತ ಉನ್ನತ ಹುದ್ದೆ ಹೊಂದಲು ಇವರ ತರಬೇತಿ ಕೂಡ ಕಾರಣ ಎಂದರೆ ಅತಿಶಯೋಕ್ತಿ ಆಗಲಾರದು. ಹೀಗಾಗಿ ಕಲಬುರಗಿ ಇವರ ಕರ್ಮಭೂಮಿ ಎಂದು ಪರಿಗಣಿಸಲಾಗುತ್ತದೆ. ಸಾಧನಾ ಕೋಚಿಂಗ್ ಸೆಂಟರ್ ಕಲಬುರಗಿ ಹಾಗೂ ಯಾದಗಿರಿ ಯಲ್ಲಿ ಕೂಡ ಸ್ಥಾಪಿಸುವ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು ಈಗ ಇತಿಹಾಸ.

ಇವರು ಕಲಬುರಗಿ ಕುರಿತು ಹೇಳುವುದು ” ಹೆಸರು ಉಸಿರು ಕೊಟ್ಟ ಊರು ಕಲಬುರಗಿ. ನನ್ನ ಯಾವುದೇ ರಕ್ತ ಸಂಬಂಧಿಕರು ಅಲ್ಲಿ ಇಲ್ಲದೇ ಇದ್ದರೂ ಕೂಡ ನನ್ನ ಸಂಬಂಧ ಗಳೆಲ್ಲವೂ ಹುಟ್ಟಿರುವುದು ಅದೇ ಊರಿನಲ್ಲಿ. ಆದುದರಿಂದ ನಾನು ಯಾವಾಗಲೂ ಹೇಳುತ್ತೇನೆ. ನನ್ನ ಸಾವಾದರೆ ಅಂತಿಮ ಸಂಸ್ಕಾರಕ್ಕೆ ಕಲಬುರಗಿಯಿಂದ ಮಣ್ಣು ಬರಬೇಕೆಂದು. ಅಷ್ಟು ನನಗೂ ಕಲಬುರಗಿಗೂ ಇರುವ ಅವಿನಾಭಾವ ಸಂಬಂಧ. ಹಾಗೆ ಸನ್ಮಾನ್ಯ ಶ್ರೀ ಮಾಲಿಕಯ್ಯ ಗುತ್ತೇದಾರ ಅವರು ನನ್ನನ್ನು ಕಲಬುರಗಿ ಗೆ ಪರಿಚಯ ಮಾಡಿದವರು. ಏನಾದರೂ ಸಂಸ್ಥೆ ಕಲಬುರಗಿ ಯಲ್ಲಿ ಬೆಳವಣಿಗೆ ಈ ಮಟ್ಟಕ್ಕೆ ಹೊಂದಿದೆ ಅಂದರೆ ಅದಕ್ಕೆ ಶ್ರೀ ಮಾಲಿಕಯ್ಯ ಗುತ್ತೇದಾರ ಅವರೇ ಕಾರಣ. ಕಲಬುರಗಿ ಜನತೆ ಕೊಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸದಾ ನಾನು ಚಿರಋಣಿ. ನನ್ನ ಶಕ್ತಿ ಮತ್ತು ಉಸಿರು ಎರಡೂ ಕೂಡ ಕಲಬುರಗಿಯಲ್ಲಿವೆ. ಕಲಬುರಗಿಯಲ್ಲಿ ಹಲವಾರು ವಿದ್ಯಾಸಂಸ್ಥೆಗಳೊಂದಿಗೆ ಸಾಧನಾ ಸಂಸ್ಥೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.

ಅದರಲ್ಲಿ ಮುಖ್ಯವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಜೊತೆಗೆ ಒಡಂಬಡಿಕೆಯ ಮಾಡಿಕೊಂಡಿರುವಂತಹದ್ದು. ಇದಕ್ಕೆ ನಾನು ಶ್ರೀ ಶರಣಬಸವೇಶ್ವರ ಅಪ್ಪಾಜಿ ಹಾಗೂ ದ್ರಾಕ್ಷಾಯಣಿ ಅಮ್ಮನವರಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಈ ಅವಕಾಶವನ್ನು ನೀಡಿದ್ದಕ್ಕೆ ” ಎಂದು ವಿನಮ್ರವಾಗಿ ನುಡಿಯುವರು.

ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ ಕ್ಷೇತ್ರದಲ್ಲಿ ಪ್ರಥಮ ಮಹಿಳಾ ನಿರ್ದೇಶಕಿ:

5 ಜನ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಆರಂಭವಾದ ಸಾಧನಾ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳು ದಾಖಲಾಗುವ ಮೂಲಕ ತನ್ನದೇ ಖ್ಯಾತಿ ಗಳಿಸಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಇಂದು ಕರ್ನಾಟಕದಾದ್ಯಂತ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂಸ್ಥೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಭಾರತದಲ್ಲಿ ಮೊದಲ ಬಾರಿಗೆ) ಮೂಲಕ ಕರ್ನಾಟಕದ ವಿವಿಧ ಕೊಳೆಗೇರಿಗಳಲ್ಲಿ ನಿರುದ್ಯೋಗಿ ಯುವಕರಿಗೆ ಐಎಎಸ್ ಫೌಂಡೇಶನ್ ಕೋರ್ಸ್ ಅನ್ನು ಯಶಸ್ವಿಯಾಗಿ ನಡೆಸಿದರು.

ಕಲ್ಬುರ್ಗಿಯ ಶರಣ ಬಸಪ್ಪ ಅಪ್ಪ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಯುಪಿಎಸ್ ಸಿ/ಕೆಪಿಎಸ್ ಸಿ ಕೋಚಿಂಗ್ ನಡೆಸಿದ್ದು ಕೂಡ ಇವರ ಜೀವನದಲ್ಲಿ ಮರೆಯಲಾಗದ ಅನುಭವ. 

ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಸಂಬಂಧಿತ ಸೇವೆಗಳ ಗುಣಮಟ್ಟವನ್ನು ಪುಷ್ಟೀಕರಿಸುವಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಲು ಶರಣಬಸವ ಅಪ್ಪ ಅವರು ನೀಡಿದ ಪ್ರೋತ್ಸಾಹ ಮರೆಯಲಾಗದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇವರು ಬಡ ಪ್ರತಿಭೆಗಳಿಗೆ ತಮ್ಮದೇ ಆದ ಪ್ರೋತ್ಸಾಹ ನೀಡುತ್ತಿರುವುದು ಕೂಡ ಇವರ ಮಾನವೀಯ ಕಳಕಳಿಗೆ ಒಂದು ನಿದರ್ಶನ. ಇವರು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಪರೀಕ್ಷಾ ತರಬೇತಿ ನೀಡುವ ಜೊತೆಗೆ ನಾಡಿನ ಹಲವಾರು ಜನಪ್ರತಿನಿಧಿಗಳು ತಮ್ಮ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಆಯೋಜಿಸಿದ್ದು ಅವುಗಳ ಜವಾಬ್ದಾರಿ ಡಾ. ಜ್ಯೋತಿ ಯವರಿಗೆ ನೀಡುವ ಮೂಲಕ ಇವರಲ್ಲಿನ ಪ್ರತಿಭೆಗೆ ಸಕಾರಾತ್ಮಕ ಸ್ಪಂದನೆ ನೀಡಿ ಪ್ರೋತ್ಸಾಹ ನೀಡುತ್ತಿರುವುದರಿಂದ ಈ ಎಲ್ಲಾ ಮಹನೀಯರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಡಾ. ಜ್ಯೋತಿ ಯವರು. 

ಮಹಿಳೆಯರು ಮತ್ತು ವಿದ್ಯಾರ್ಥಿಗಳ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚು ದೃಢವಾಗಿ ಮತ್ತು ಮನೆಯಲ್ಲಿ ಮತ್ತು ಕೆಲಸದಲ್ಲಿ ತಮ್ಮ ಸ್ವಂತ ಹಕ್ಕಿನ ಬಗ್ಗೆ ಜಾಗೃತರಾಗಿ ಕೆಲಸ ಮಾಡಬೇಕು ಮತ್ತು ಉದ್ಯಮಶೀಲತೆಯೊಂದಿಗೆ ಸಂಪರ್ಕಿಸುವ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಮೂಲಕ ತಾವು ಪ್ರಮುಖ ಪಾತ್ರವನ್ನು ವಹಿಸುವ ಮೂಲಕ ನಾಲ್ಕು ಜನರಿಗೆ ತಮ್ಮಿಂದ ಸಹಾಯ ಸಹಕಾರ ದೊರೆತರೆ ಅದರಿಂದ ಸಮಾಜಕ್ಕೆ ತಮ್ಮ ಕೊಡುಗೆ ದೊರೆಯಬೇಕು ಎಂಬುದು ಇವರ ಧ್ಯೇಯ

ಕುಟುಂಬದ ನಿರ್ವಹಣೆ:

ಬೆಂಗಳೂರು ಕಲಬುರಗಿ ಯಾದಗಿರಿ ಯಲ್ಲಿ ತಮ್ಮ ಸಾಧನಾ ಕೋಚಿಂಗ್ ಸೆಂಟರ್ ಶಾಖೆಗಳನ್ನು ವಿಸ್ತರಿಸಿದ ಇವರು ಪ್ರೇರಣಾದಾಯಕ ಉಪನ್ಯಾಸ ನೀಡತೊಡಗಿದರು. ಹೀಗಾಗಿ ಇವರಿಗೆ ವಿಶ್ರಾಂತಿ ರಹಿತ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ತಮ್ನದೇ ಆದ ಭದ್ರವಾದ ನೆಲೆ ಈ ಕೋಚಿಂಗ್ ಸೆಂಟರ್ ಮೂಲಕ ದೊರೆಯಿತು. ಇಂದು ನಾಡಿನಾದ್ಯಂತ ಸಾಧನಾ ಕೋಚಿಂಗ್ ಸೆಂಟರ್ ಡಾ. ಜ್ಯೋತಿ ಎಂದೇ ಖ್ಯಾತಿ ಪಡೆದಿರುವ ಇವರು ತಮ್ಮ ಕುಟುಂಬದ ನಿರ್ವಹಣೆ ಯಲ್ಲಿ ಕೂಡ ಬಹಳ ಕಾಳಜಿ ಹೊಂದಿದ್ದು ವಯಸ್ಸಾದ ತಾಯಿಯ ಆರೈಕೆ ಸಹೋದರರ ಶಿಕ್ಷಣ ಅವರಿಗೆ ವಿವಾಹ ಕಾರ್ಯ ಕೂಡ ಮನೆಯ ಹಿರಿಯ ಮಗನಂತೆ ಮುತುವರ್ಜಿ ವಹಿಸಿ ಮಾಡಿರುವರು. ಸಹೋದರಿಯ ವಿವಾಹ ಕೂಡ ಅದ್ದೂರಿಯಾಗಿ  ನೆರವೇರಿಸಿರುವರು. ಇವರದು ತುಂಬಿದ ಕೂಡು ಕುಟುಂಬ. ಜೇನಿನ ಗೂಡು ನಾವೆಲ್ಲ ಎಂಬ ಸಂದೇಶ ಸಮಾಜಕ್ಕೆ ನೀಡುತ್ತಿರುವ ಡಾ. ಜ್ಯೋತಿ ಇಂದು ಮಹಿಳಾ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಯುವತಿ. ಇವರ ಈ ಕಾರ್ಯವನ್ನು ಗುರುತಿಸಿ ಸಮಾಜದ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ಗೌರವ ನೀಡಿವೆ. ಇಂದು ಸಾಧನಾ ಸಂಸ್ಥೆಯ ವಿದ್ಯಾರ್ಥಿಗಳು ಕರ್ನಾಟಕದಾದ್ಯಂತ ವಿವಿಧ ಉನ್ನತ ಹುದ್ದೆಗೆ ಆಯ್ಕೆ ಆಗುವ ಮೂಲಕ ಸಾಧನಾ ಸಂಸ್ಥೆಯ ಹೆಸರು ತಂದಿರುವರು.ಇವರ ಪ್ರಶಸ್ತಿ ಗಳನ್ನು ಹೆಸರಿಸುತ್ತಾ ಹೊರಟರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಅವುಗಳಲ್ಲಿ ಹಲವು ಹೆಸರಿಸುವೆನು

ಪ್ರಶಸ್ತಿಗಳು:

 • ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಡಾ.ರಾಜ್‌ಕುಮಾರ್ ಸದ್ಭಾವನಾ ಪ್ರಶಸ್ತಿ 2022
 • ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಿಂದ 2021 ರ ರಾಷ್ಟ್ರೀಯ ಮಹಿಳಾ ಸಾಧಕರ ಪ್ರಶಸ್ತಿ.
 • ಚೇತನಾ ಫೌಂಡೇಶನ್, ಹುಬ್ಬಳ್ಳಿಯಿಂದ ಬಸವ ಕಾಯಕ ರತ್ನ ರಾಷ್ಟ್ರೀಯ ಪ್ರಶಸ್ತಿ 2021.
 • ಕನ್ನಡ ಮತ್ತು ಸಾಂಸ್ಕೃತಿಕ ಸಂಘಟನೆಯವರು ಕೂಡ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ 2021 ರಲ್ಲಿ ನೀಡಿ ಗೌರವಿಸಿರುವರು.
 • ಚೇತನ ಪ್ರಕಾಶನ ಮತ್ತು ಕನ್ನಡ ಪ್ರತಿಷ್ಠಾನ ಹುಬ್ಬಳ್ಳಿಯಿಂದ ವನಿತಾ ಪ್ರಶಸ್ತಿ
 • ವಿಶ್ವ ಮಾನವ ಕುವೆಂಪು ಪ್ರಶಸ್ತಿ. (2021)ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಿಂದ.
 • ಕೇಂದ್ರ ಸರಕಾರದ ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯಾ ಪ್ರಶಸ್ತಿ
 • ರಾಷ್ಟ್ರೀಯ ಮಹಿಳಾ ಸಾಧಕಿ
 • ಸುವರ್ಣ ಶ್ರೀ ರಾಜ್ಯ ಪ್ರಶಸ್ತಿ 2019-20
 • ಚನ್ನಮ್ಮಶ್ರೀ ಪ್ರಶಸ್ತಿ 2023
 • ಬಂಜಾರ ರತ್ನ ಪ್ರಶಸ್ತಿ 2021
 • ಕಳ್ಳಿಮಠದ ಕಲ್ಪವೃಕ್ಷ ಪ್ರಶಸ್ತಿ  2019
 • ವನಿತಾ ಪ್ರಶಸ್ತಿ 2021
 • ಮಾತೃ ಹೃದಯದ ಡಾ. ಜ್ಯೋತಿ

ನಾನು ಡಾ. ಜ್ಯೋತಿಯವರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಗಮನಿಸಿದ ಪ್ರಮುಖ ಅಂಶ ಅವರ ಸಹೃದಯತೆ. ಮತ್ತು ಮಾತೃ ಹೃದಯ. ಅವರ ತಾಯಿ ತಮ್ಮಂದಿರು. ಸೊಸೆ ಇವರೊಂದಿಗೆ ಮಾತನಾಡುವ ರೀತಿ. ಇವರ ಸಂತೋಷ ಹಾಗೂ ಅವರ ಪತ್ನಿ ಐಶ್ವರ್ಯ. ಸಹೋದರಿ ದೀಪಾ ಹಾಗೂ ಅವರ ಪತಿ ಸೋಮಶೇಖರ. ಕಿರಿಯ ಸಹೋದರ ಸಂಪತ್ ಹಾಗೂ ಅವರ ಪತ್ನಿ ವೈಭವಿ ಇವರನ್ನು ಅಮ್ಮ ಎಂದು ಕಾಣುತ್ತಿರುವುದು. ಅಂದರೆ ಎಲ್ಲರ ವಿವಾಹ ನೆರವೇರಿಸಿ ತಾವು ವಿವಾಹಿತರಾಗದೇ ತಮ್ಮ ಸಹೋದರ ಸಹೋದರಿಯರಿಗೆ ತಾವು ತಾಯಿಯ ಸ್ಥಾನದಲ್ಲಿ ನಿಂತು ಅವರ ಶಿಕ್ಷಣ ಹಾಗೂ ಜೀವನ ನಿರ್ವಹಿಸಲು ನೀಡಿದ ಪ್ರೋತ್ಸಾಹ ನಿಜಕ್ಕೂ ಅಭಿನಂದನಾರ್ಹ. ಯಾವ ಸ್ತ್ರೀ ಈ ರೀತಿಯ ತ್ಯಾಗ ಮಾಡಲು ಸಾಧ್ಯವಿಲ್ಲ.

ಅಂತಹ ತ್ಯಾಗಮಯ ಬದುಕಿನ ಡಾ. ಜ್ಯೋತಿ ತಮ್ಮ ತಾಯಿಯನ್ನು ಕೂಡ ಅವರ ಈ ಇಳಿ ವಯಸ್ಸಿನಲ್ಲಿ ತಾವು ಅವರಿಗೆ ತಾಯಿ ಸ್ವರೂಪದಲ್ಲಿ ಕಾಣುತ್ತಿರುವುದು ಬಹಳ ಅಪರೂಪದ ಹೃದಯವಂತಿಕೆ. ಇವರ ದೈನಂದಿನ ಜೀವನ ವೇಳೆಗೆ ನೀಡುವ ಮಹತ್ವ ಮೂರು ಜಿಲ್ಲಾ ಕೇಂದ್ರ ದಲ್ಲಿ ಸಾಧನಾ ಕೋಚಿಂಗ್ ಸೆಂಟರ್ ನಿರ್ವಹಣೆ. ಅಲ್ಲಲ್ಲಿ ಉಪನ್ಯಾಸ ನೀಡುವ ಹಾಗೂ ತಮ್ಮ ಸಾಧನಾ ಕೋಚಿಂಗ್ ಸೆಂಟರ್ ನಲ್ಲಿ ತರಗತಿ ತಗೆದುಕೊಂಡು ವಿದ್ಯಾರ್ಥಿಗಳಿಗೆ ಬೋಧಿಸುವ ಬದುಕು ನಿಜಕ್ಕೂ ವಿಶ್ರಾಂತಿ ರಹಿತವಾದದ್ದು. ಕರ್ನಾಟಕದಾದ್ಯಂತ ಇಂದು ಸಾವಿರಾರು ವಿದ್ಯಾರ್ಥಿಗಳು ಇವರ ಸಾಧನಾ ಕೋಚಿಂಗ್ ಸೆಂಟರ್ ಮೂಲಕ ತರಬೇತಿ ಹೊಂದಿ ಉನ್ನತ ಹುದ್ದೆ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ದನ್ನು ಕಂಡಾಗ ಇದಕ್ಕಿಂತ ನಮಗೇನು ಬೇಕು ಸರ್. ಎಂದು ವಿನಮ್ರವಾಗಿ ನುಡಿಯುವ ಅವರ ಮಾತುಗಳು. ಅವಮಾನ. ನೋವು. ಚುಚ್ಚು ಮಾತುಗಳನ್ನು ತಲೆ ಮೇಲೆ ಹೊತ್ತುಕೊಂಡು ಸಾಧನಾ ಪಥದಲ್ಲಿ ತಮಗೆ ಬಂದಿರುವ ಪ್ರಶಸ್ತಿ ಗೌರವಗಳನ್ನು ಪಕ್ಕಕ್ಕಿಟ್ಟು ಜೀವನದಲ್ಲಿ ಇನ್ನೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ತಮ್ಮ ಬದುಕನ್ನು ಸಾಗಿಸುತ್ತಿರುವ ಕರ್ನಾಟಕದಲ್ಲಿ ಉನ್ನತ ಹುದ್ದೆಗಳ ಮಾರ್ಗದರ್ಶನಕ್ಕಾಗಿ ತರಬೇತಿ ಕೇಂದ್ರ ಹುಟ್ಟು ಹಾಕುವ ಮೂಲಕ ತಮ್ಮನ್ನು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಂಡಿರುವ ಏಕೈಕ ಮಹಿಳೆ ಡಾ. ಜ್ಯೋತಿ. ಮಾತೃ ಹೃದಯದ ಇವರ ಸಾಧನೆಯ ಜೊತೆಗೆ ತನ್ನ ತಾಯಿಯನ್ನು ತಾವು ತಾಯಿಯ ಸ್ಥಾನದಲ್ಲಿ ನಿಂತು ಅವರನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಇಂದಿನ ಸಮಾಜದಲ್ಲಿ ಅಪರೂಪ. ಶೀಘ್ರದಲ್ಲೇ ಮಂಗಳೂರಿನಲ್ಲಿ ತಮ್ಮ ಸಾಧನಾ ಕೋಚಿಂಗ್ ಸೆಂಟರ್ ನಾಲ್ಕನೇ ಶಾಖೆ ತೆರೆಯಲಿರುವ ಡಾ. ಜ್ಯೋತಿ ಬೆಂಕಿಯಲ್ಲಿ ಅರಳಿದ ಹೂವು. ಸುಖ ಬಂದಾಗ ಹಿಗ್ಗಿಲ್ಲ.ದು:ಖ ಬಂದಾಗ ಕುಗ್ಗಿಲ್ಲ.ಏನಾದರೂ ಕೂಡ ನಿಭಾಯಿಸ್ತೀನಿ ಸರ್ ಎನ್ನುವ ಅವರ ಧ್ವನಿಯಲ್ಲಿ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಿರುವೆ ಎಂದು ಹೇಳುವಾಗ ಜೀವನದಲ್ಲಿ ಅನುಭವಿಸಿರುವ ನೋವುಗಳ ಆರ್ದ್ರತೆ ಅದನ್ನು ಎದುರಿಸಿ ನಿಂತ ಛಲಗಾರಿಕೆಯ ಮಾತು ಕಂಡುಬರುತ್ತದೆ.ಮನೆಯ ಜವಾಬ್ದಾರಿ ಬಂದಾಗ ತಮಗೂ ಒಂದು ಜೀವ ಜೀವನ ಇದೆ ಎಂಬುದೇ ಮರೆತು ಹೋಗಿ ಬದುಕಿನಲ್ಲಿ ಏನಾದರೂ ಸಾಧನೆ ಗೈಯಬೇಕು ಎಂಬ ಛಲ ಇಂದು ಈ ಹಂತದಲ್ಲಿ ಇವರು ಬೆಳವಣಿಗೆ ಹೊಂದಿರುವುದಕ್ಕೆ ಕಾರಣ.ದೇವರು ಇವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ. ಸಾಧನಾಪಥ ನಿರಂತರವಾಗಿ ಸಾಗಿ ಹೆಮ್ಮರವಾಗಿ ಸಾಗಲಿ ಎಂದು ಆಶಿಸುವೆ. ಸಪ್ಟೆಂಬರ್ 5 ಶಿಕ್ಷಕರ ದಿನಾಚರಣೆ ಅಂಗವಾಗಿ ಸವದತ್ತಿ ತಾಲೂಕಿಗೆ ಆಗಮಿಸುತ್ತಿರುವ ಇವರಿಗೆ ಇಲಾಖೆಯ ಪರವಾಗಿ ದತ್ತಿದಾನಿ ಲೂಸಿ ಸಾಲ್ಡಾನಾ ಅವರ ಅಡುಗೆ ವೈವಿಧ್ಯ ಕೃತಿ ನೀಡುವ ಮೂಲಕ ಆಮಂತ್ರಣ ನೀಡಿ ಬರುವಾಗ ಇಂತಹ ಮಹಿಳೆಯ ಪರಿಚಯಕ್ಕೆ ಕಾರಣವಾದ ಎಲ್. ಐ. ಲಕ್ಕಮ್ಮನವರ ಗುರುಗಳಿಗೆ ಧನ್ಯತೆ ಅರ್ಪಿಸಿ ಮುಂದಿನ ದಿನಗಳಲ್ಲಿ ಡಾ. ಜ್ಯೋತಿ ಮಹಿಳಾ ಲೋಕದ ನಕ್ಷತ್ರ ಆಗಲಿ ಎಂದು ಆಶಿಸುವೆ.


ವೈ.ಬಿ.ಕಡಕೋಳ

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group