spot_img
spot_img

ಲೇಖನ : ಅಡಿಗಡಿಗೆ ನೆನಪಾಗುವ ಅಡಿಗರು

Must Read

spot_img
- Advertisement -

ದಿ.೧೮ ಅಡಿಗರ ಜನ್ಮದಿನ

ಬಾಲ್ಯದಲ್ಲಿ ಭಾವಗೀತೆಗಳನ್ನು ಹಾಡುತ್ತಿದ್ದ ಕಾಲದಲ್ಲಿ ನನಗೆ ಅತ್ಯಂತ ಪ್ರಿಯವಾದ ಎರಡು ಹಾಡುಗಳು –
” ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ” ಮತ್ತು “ಯಾವ ಮೋಹನ ಮುರಲಿ ಕರೆಯಿತೊ ದೂರತೀರಕೆ ನಿನ್ನನು.”
ಗೋಪಾಲಕೃಷ್ಣ ಅಡಿಗರತ್ತ ನಾನು ಆಕರ್ಷಿತನಾದದ್ದೇ ಅವರ ಈ ಹಾಡುಗಳಿಂದ. ನಂತರ ಅದೇ ಅವರ ಕಾವ್ಯದ ಅಭ್ಯಾಸಕ್ಕೂ ಕಾರಣವಾಯಿತು. ಅಂತಹ ಒಬ್ಬ ಕವಿಯ ಒಡನಾಟವೂ ನನಗೆ ಸಿಗುವಂತಾದದ್ದು‌ ನನ್ನ ಭಾಗ್ಯ.
ಉತ್ತರ ಕನ್ನಡ ಜಿಲ್ಲಾ ಕಸಾಪ ಗೌ. ಕಾರ್ಯದರ್ಶಿಯಾಗಿರುವಾಗ ಬೆಂಗಳೂರಿಗೆ ಆಗಾಗ ಹೋಗುತ್ತಿದ್ದುದರಿಂದ ಅಡಿಗರ ಪರಿಚಯವಾಗಿ ಅವರ ಜಯನಗರದಲ್ಲಿದ್ದ ಮನೆಗೂ ಹೋಗುತ್ತಿದ್ದೆ. ಮೂರನೇ ಕ್ರಾಸಿನಲ್ಲಿ ನಟ ಶ್ರೀನಾಥ್ ಅವರ ಮನೆಯಿತ್ತು ಮತ್ತು ನಾಲ್ಕರಲ್ಲಿ ಅಡಿಗರ ಮನೆ ಇತ್ತು. ಶ್ರೀನಾಥ್ ಅವರೂ ನನಗೆ ಪರಿಚಿತರಾದುದರಿಂದ ಅವರನ್ನೂ ಭೆಟ್ಟಿಯಾಗುತ್ತಿದ್ದೆ.

೧೯೭೫ ರಲ್ಲಿ ಇಂದಿರಾ ಗಾಂಧಿ ಎಮರ್ಜೆನ್ಸಿ ತಂದ ಸಮಯ. ಅಡಿಗರು ಕಾಂಗ್ರೆಸ್ ವಿರೋಧಿ. ನಾನು ಅದೇ ಸಮಯದಲ್ಲಿ ಅಡಿಗರನ್ನು ಉತ್ತರ ಕನ್ನಡಕ್ಕೆ ಬರಲು ಆಮಂತ್ರಿಸಿದೆ. ಹೊನ್ನಾವರ , ಕುಮಟಾ ,ಅಂಕೋಲಾ ಗಳಲ್ಲಿ ಅವರ ಭಾಷಣ ಫಿಕ್ಸ ಮಾಡಿದ್ದೆ. ಅಡಿಗರು ಕಟುವಾಗಿಯೇ ಇಂದಿರಾರನ್ನೂ ಎಮರ್ಜನ್ಸಿಯನ್ನೂ ಟೀಕಿಸಿ ಮಾತಾಡಿದ್ದರು. ಕೆಲವರು ನನಗೆ ಎಚ್ಚರಿಸಿದ್ದರು. ಮಫ್ತಿಯಲ್ಲಿ ಸಿಐಡಿಗಳು ಬಂದಿರುತ್ತಾರೆ. ತೊಂದರೆಯಾಗಬಹುದು ಎಂದು. ಬಹಳ ಕಡೆ ಹಾಗೆ ನಡೆದಿದ್ದೂ ಇತ್ತು. ಎಲ್ಲರ ಸ್ವಾತಂತ್ರ್ಯ ಅಪಹರಣವಾಗಿತ್ತು. ಅಡಿಗರು ಅದಕ್ಕೆಲ್ಲ ಸೊಪ್ಪು ಹಾಕದೇ ನಿರ್ಭೀತವಾಗಿಯೇ ಮಾತನಾಡಿದ್ದರು. ನಾನೂ ಆದದ್ದಾಗಲಿ ಎಂದು ಮುಂದುವರಿದಿದ್ದೆ.

- Advertisement -

ಅಡಿಗರು ರಾಜಕೀಯಕ್ಕೂ ಪ್ರವೇಶಿಸಿ ಕೆ. ಹನುಮಂತಯ್ಯನವರೆದುರು ಚುನಾವಣೆಯಲ್ಲಿ ಸ್ಪರ್ಧಿಸಿದರು. ಡಾ. ಶಿವರಾಮ ಕಾರಂತ, ತರಾಸು, ಲಂಕೇಶ ಮೊದಲಾದವರೆಲ್ಲ ಅಡಿಗರನ್ನು ಬೆಂಬಲಿಸಿದ್ದರು. ಸ್ಪರ್ಧೆ ತುರುಸಿನದಾಗಿಯೇ ಇತ್ತು. ಆದರೂ ಅಡಿಗರು ಸೋತರು. ಅದರಿಂದೇನೂ ಅವರು ಕುಗ್ಗಲಿಲ್ಲ. ಆದರೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯಗಿರಿ ಬಿಡಬೇಕಾಯಿತು.
ವಾಸ್ತವವಾಗಿ ಅಡಿಗರು ಯಾವ ಒಂದು ರಾಜಕೀಯ ಪಕ್ಷದ ಪರ ಒಲವು ನಿಲುವು ಹೊಂದಿರಲಿಲ್ಲ. ಎಲ್ಲ ವಿಷಯಗಳಲ್ಲೂ ಅವರು ಸ್ವತಂತ್ರ ವಿಚಾರಧಾರೆ ಹೊಂದಿದವರಾಗಿದ್ದರು. ಅವರಿಗೆ ಸಮಾಜ ಹಿತ, ರಾಷ್ಟ್ರಹಿತ ಮತ್ತು ಜಾತ್ಯತೀತ ಮಾನವೀಯತೆಗಳು ಮುಖ್ಯವಾಗಿದ್ದವು. ಅವರ ಕವನಗಳಲ್ಲೂ ಆ ಭಾವನೆಗಳು ಪ್ರತಿಬಿಂಬಿತವಾಗಿವೆ.

ಅಡಿಗರು ೧೮-೨-೧೯೧೮ ರಂದು ದಕ್ಷಿಣ ಕನ್ನಡದ ಮೊಗೇರಿಯಲ್ಲಿ ಜನಿಸಿದರು. ಮನೆಯ ವಾತಾವರಣ ಸಾಹಿತ್ಯ ಕಲೆ ಸಂಸ್ಕ್ರತಿಗಳಿಗೆ ಪೋಷಕವಾಗಿತ್ತು. ತಂದೆ ರಾಮಪ್ಪ ಅಡಿಗರು ವಿದ್ವಾಂಸರು, ಯಕ್ಷಗಾನ ಅರ್ಥಧಾರಿ. ಅದೇ ಮನೆತನದ ಮೊಗೇರಿ‌ಪಂಚಾಂಗ ಬಹಳ ಪ್ರಸಿದ್ಧ. ಸಹಜವಾಗಿಯೇ ಯಕ್ಷಗಾನ ಮತ್ತು ನಿಸರ್ಗ‌ ಅವರ ಮೇಲೆ ಪ್ರಭಾವ ಬೀರಿತ್ತು. ಹವ್ಯಾಸಿ ಅರ್ಥಧಾರಿಯಾಗಿ ಅರ್ಥ ಹೇಳಿದ್ದೂ ಇದೆ.

ಆರಂಭದಲ್ಲಿ ಮೈಸೂರಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಅಡಿಗರು ೬೪-೬೮ ರತನಕ ಸಾಗರದ ಕಾಲೇಜಿನ ಪ್ರಾಚಾರ್ಯರಾಗಿ , ನಂತರ ಉಡುಪಿ ಪೂರ್ಣಪ್ರಜ್ಞ ದ ಪ್ರಾಚಾರ್ಯರಾಗಿ ಕೆಲಸ ಮಾಡಿದರು. ೧೯೪೪ ರಲ್ಲಿ ಲಲಿತಾರನ್ನು ಕೈಹಿಡಿದರು. ಎರಡು ಗಂಡು ಮೂರು ಹೆಣ್ಣು.
ನವೋದಯ‌ಕಾವ್ಯದ ಭರಭರಾಟೆಯ ಕಾಲದಲ್ಲಿ ಅಡಿಗರೂ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟರು. ಬರೆದರು. ಕಡೆಂಗೋಡ್ಲು ಶಮಕರ ಭಟ್ಟರು ಬೇಂದ್ರೆಯವರು ಅವರ ಮೇಲೆ ಪ್ರಭಾವ ಬೀರಿದ ಹಿರಿಯರು. ಅದರೆ ಒಂದಿಷ್ಟು ಕಾಲ ಬರೆದುದನ್ನೇ ಬರೆದು ತಮ್ಮಷ್ಟಕ್ಕೆ ತಾವೇ ಬೇಸರಗೊಂಡ ಅಡಿಗರು ಹೊಸದೇನನ್ನಾದರೂ ಸೃಷ್ಟಿಸುವ ದಾರಿ ಹುಡುಕತೊಡಗಿದರು. ಅವರೇ ಬರೆಯುತ್ತಾರೆ –
“ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆ
ಬಿನ್ನಗಾಗಿದೆ ಮನವು…..
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ…”
ಅಡಿಗರು ತಮ್ಮದೇ ಆದ ದಾರಿ ಕಂಡುಕೊಂಡರಷ್ಟೇ ಅಲ್ಲ, ಹೊಸ ತಲೆಮಾರಿನ ಕವಿಗಳ ಕಣ್ಣು ತೆರೆಸಿದ ಕವಿಸೃಷ್ಟಿಕರ್ತರೂ ಆದರು. ನವ್ಯ ಕಾವ್ಯಮಾರ್ಗದಲ್ಲಿ ನವೋದಯದ ಪ್ರಸಿದ್ಧ ಕವಿಗಳೂ ಕಾಣಿಸಿಕೊಂಡರು.

- Advertisement -

ಕಣವಿ, ಜಿಎಸ್ ಎಸ್, ಕೆ. ಎಸ್ ನರಸಿಂಹಸ್ವಾಮಿ ಮೊದಲಾದವರನ್ನು ಇದಕ್ಕೆ ಉದಾಹರಿಸಬಹುದು. ಅಡಿಗರಿಗಿಂತ ಮೋದಲೇ ನವ್ಯಕಾವ್ಯದ ಕನಸು ಕಂಡವರು ಗೋಕಾಕರು. ಅದನ್ನು ವಾಸ್ತವಗೊಳಿಸಿ ನವ್ಯಕಾವ್ಯ ಪ್ರವರ್ತಕರೆನಿಸಿದವರು ಅಡಿಗರು. ಅಲ್ಲಿಂದ ಸುಮಾರು ೨೫-೩೦ ವರ್ಷಗಳ ಕಾಲ ಕನ್ನಡದಲ್ಲಿ ನವ್ಯದ್ದೇ ಪಾರುಪತ್ಯ.
ಅಡಿಗರ ಹನ್ನೆರಡು ಕವನ ಸಂಕಲನಗಳು , ಹದಿನೈದು ಆಂಗ್ಲ ಕೃತಿಗಳ ಅನುವಾದ, ಕತೆ ಕಾದಂಬರಿ, ವಿಚಾರ ವಿಮರ್ಶೆ , ಸಾಕ್ಷಿ ಪತ್ರಿಕೆ ಹೀಗೆ ಬಹಳ ವ್ಯಾಪಕವಾದ ಮತ್ತು ಅಷ್ಟೇ ಸತ್ವಪೂರ್ಣವಾದ ಸಾಹಿತ್ಯ ರಚನೆ ಅವರದು. ಒಂದು ಹೊಸ ಕಾವ್ಯಪಥವನ್ನೇ ಸೃಷ್ಟಿಸುವದು ಅಸಾಮಾನ್ಯ ಸಂಗತಿ. ಅಡಿಗರು ಆ ಮೂಲಕ ಕನ್ನಡ ಕಾವ್ಯಮಾರ್ಗವನ್ನೇ ಬದಲಿಸಿದ ಅಸಾಧಾರಣ ವ್ಯಕ್ತಿಯಾಗಿ ಕಾಣಿಸಿಕೊಂಡರು.

ಎಲ್. ಎಸ್. ಶಾಸ್ತ್ರಿ, ಬೆಳಗಾವಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತ ಯಲ್ಲಾಲಿಂಗ ವಾಳದಗೆ ಸತ್ಕಾರ

ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಯುವ ಮುಖಂಡ ಮತ್ತು ಸಮಾಜ ಸೇವಕ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group