ಬೀದರ: ಔರಾದ್ ಶಾಸಕ ಪ್ರಭು ಚವ್ಹಾಣ ಅವರು ನನ್ನ ವಿರುದ್ಧ ಕೊಲೆ ಸಂಚು ಸೇರಿದಂತೆ ಮಾಡಿರುವ ಎಲ್ಲಾ ಆರೋಪಗಳನ್ನು ಶ್ರೀ ಅಮರೇಶ್ವರನ ಉಡಿಗೆ ಹಾಕಿ ಹೋಗಲು ಬಂದಿದ್ದೇನೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಸ್ವ ಪಕ್ಷೀಯರೇ ಆದ ಶಾಸಕ ಪ್ರಭು ಚವ್ಹಾಣ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಔರಾದನ ಸುಕ್ಷೇತ್ರ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಪತ್ರಕರ್ತರೊಡನೆ ಮಾತನಾಡಿದರು.
ನನ್ನ ವಿರುದ್ಧ ತನಿಖೆಗೆ ಆದೇಶ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರಾದರೂ ವಿಚಾರ ಮಾಡಬೇಕಿತ್ತು. ತನಿಖೆ ಮಾಡಿಸಲಿ, ನಾನು ಬದುಕಿರುವಾಗಲೇ ತನಿಖೆ ಮಾಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಹತ್ತಿರ ನೈತಿಕತೆ ಇದೆ ಅಂದ ಮೇಲೆ ನಾನು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ನನ್ನ ನೈತಿಕತೆ ಕಳೆದುಕೊಂಡ ತಕ್ಷಣವೇ ನಾನು ಜನಪ್ರತಿನಿಧಿ ಆಗಿ ಇರಲು ಸಾಧ್ಯವಿಲ್ಲ. ನನ್ನ ಆತ್ಮಸಾಕ್ಷಿ ಹೇಳುತ್ತದೆ. ನಾನು ಕೊಲೆಗಡುಕನೋ ಅಥವಾ ಸಮಾಜ ಸೇವಕನೋ ಎಂಬುದನ್ನು. ಯಾರಿಂದಲೂ ನಾನು ಪ್ರಮಾಣ ಪತ್ರ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಕೆಂದ್ರ ಸಚಿವ ಕೋಪ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ನನಗೆ ಕೇಳಬಹುದಿತ್ತು. ನಾನು ಕೂಡ ಕೇಂದ್ರ ಸಚಿವ. ಆದರೆ ನನ್ನನ್ನು ಕೇಳಿಲ್ಲ. ಉಸ್ತುವಾರಿ ಸಚಿವ ಎಣ್ಣೆ ಹಚ್ಚುವ ಕೆಲಸ ಮಾಡುತ್ತಾರೆ. ಒಬ್ಬರಿಗೆ ಒಬ್ಬರು ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಇಲ್ಲಸಲ್ಲದ ಆರೋಪ ಮಾಡಿ ನನಗೆ ಲೋಕಸಭೆ ಟಿಕೆಟ್ ತಪ್ಪಿಸಲು ಚವ್ಹಾಣ್ ಕಸರತ್ತು ನಡೆಸಿದ್ದಾರೆ ಎಂದು ಖೂಬಾ ಆರೋಪ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ