ಅರಿವರಿತು ಕುರುಹಿಲ್ಲದಾತ ನೀನೆ ಬಿಡಾಡಿ
——————————————-
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರಿತು ಕುರುಹಿಲ್ಲದಾತ ನೀನೆ ಬಿಡಾಡಿ.
ಶರಣೆ ಬೊಂತಾದೇವಿ
ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಠುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತಿ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ ಕಾಶ್ಮೀರದ ಪಾಂಡವ್ಯಪುರದ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೋಳಿಗೆ ಮಾರಯ್ಯನ ಸಹೋದರಿ. ಮೂಲನಾಮವಾದ ನಿಜದೇವಿಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತಭಕ್ತಿಗೆ ಹೆಸರು ವಾಸಿಯಾದಳು.
“ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದ ಬೊಂತಾದೇವಿಯ ಮೊದಲಿನ ಹೆಸರು ‘ನಿಜದೇವಿ’. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ, ಕಲ್ಯಾಣಕ್ಕೆ ಬಂದು ನೆಲೆಸುತ್ತಾಳೆ
ಅರಿವೆಂಬುದು ಯಾವುದೇ ಬಂಧನಕ್ಕೊಳಪಡದ ಮುಕ್ತ ಸಂಚಾಲಿತ ಜ್ಞಾನವು. ಅರಿಯದೆ ಇರುವುದು ಕೂಡ ಅರಿವಿನ ನೆರಳಿನಂತಿರುವ ಅಜ್ಞಾನದ ಭಾವವು .ಮರವು ಒಂದು ಅರ್ಥದಲ್ಲಿ ಬಿಡಾಡಿ
ಕಾರಣ ಮರೆಯಬೇಕೆಂಬ ಉದ್ದೇಶ ಸದ್ಭಕ್ತನಿಗೆ ಇರುವದಿಲ್ಲ ಹೀಗಾಗಿ ಅದು ಕೂಡ ಮುಕ್ತವಾಗಿ ಸಂಚಲಿತಗೊಳ್ಳುವ ಭಾವವು.ಮರೆಯದೆ ಇರುವ ತೀವ್ರತೆಯು ಕೂಡಾ ಒಂದು ಅರ್ಥದಲ್ಲಿ ಜ್ಞಾನದ ನಿರಂತರ ಶೋಧನವಾಗಿರುವದರಿಂದ ಸ್ಥೂಲ ಸೂಕ್ಷ್ಮ ಕಾರಣ ಇವುಗಳ ಬಂಧನದಿಂದ ಹೊರವಿದ್ದು ಸತ್ಯಕ್ಕೆ ಪರಿತಪಿಸುವ ಜ್ಞಾನಾರ್ಜನೆಯ ಪ್ರಾಮಾಣಿಕ ಪ್ರಯತ್ನವು ಕೂಡ ಮುಕ್ತ ಸ್ವತಂತ್ರವಾದ ಬಿಡಾಡಿಯೇ ಎಂದೆನ್ನುತ್ತಾಳೆ ಬೊಂತಾದೇವಿ. ಮುಕ್ತಿಯ ಅರಿವನ್ನು ಪಡೆದು ಮತ್ತೆ ಕುರುಹಿನ ಸಂಕೋಲೆಗೆ ಬಂಧನಕ್ಕೆ ಸಿಲುಕದೆ ಇರುವವನೇ ನೀನೆ ದೇವರು ಬಿಡಾಡಿ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾಳೆ ಬೊಂತಾದೇವಿ.
———————————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ