ಧಾರವಾಡ: ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಸಂಘಟನೆ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಯುವ ಬರಹಗಾರ ಡಾ. ಬದರೀನಾಥ ಜಹಗೀರದಾರ ಅವರಿಗೆ “ರಾಜ್ಯೋತ್ಸವ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ನಾಡಿನ ಹೆಸರಾಂತ ಕವಿಗಳಾದ ಶ್ರೀ ಶಂಕರ ಹಲಗತ್ತಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ನಿರ್ದೇಶಕರಾದ ಶರಣು ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಬಹಳಷ್ಟು ಕನ್ನಡ ಪರ ಸಂಘ ಸಂಸ್ಥೆಗಳು ಕಲೆ, ಕಲಾವಿದರನ್ನು ಗುರುತಿಸಿ, ಗೌರವಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಈ ರೀತಿಯ ಬೆಳವಣಿಗೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾಂತ್ರಿಕ ಜೀವನದಲ್ಲಿ ಮುಳುಗಿ ಹೋಗಿರುವ ಇಂದಿನ ಯುವ ಜನತೆ ಸಂಸ್ಕೃತಿಯ ಬಗೆಗೆ ಹೆಚ್ಚಾಗಿ ಕಾಳಜಿ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ದೇಶಕ್ಕೆ ಹೆಮ್ಮೆ ಎನಿಸುವ ಕಾರ್ಯ ಮಾಡಿದಾಗ ಮಾತ್ರ ಬದುಕಿಗೊಂದು ಅರ್ಥ ಸಿಗುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ದೇಶವನ್ನು ಸಮೃದ್ಧಗೊಳಿಸಿವೆ. ಇಂದು ಸಂಸ್ಕೃತಿಯ ಮೇಲೆ ದಾಳಿಯ ನಡುವೆಯೂ ನಮ್ಮ ತನವನ್ನು ಕಾಪಾಡಿಕೊಂಡು ಮುನ್ನುಗುವ ಅನಿವಾರ್ಯತೆ ಇದೆ. ಇಂದಿನ ಕಾರ್ಯಕ್ರಮ ನೋಡಿದಾಗ ಮನಸ್ಸಿಗೆ ತುಂಬಾ ಸಂತೋಷವೆನಿಸುತ್ತಿದೆ. ಈ ವೇದಿಕೆಯಿಂದ ಕಾರ್ಯಕ್ರಮಗಳು ನಿರಂತರವಾಗಿ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಹೆಸ್ಕಾಂ ಪೊಲೀಸ್ ಇನ್ಸ್ಪೆಕ್ಟರ್ ಮರುಗೇಶ್ ಚನ್ನಣ್ಣವರ ಮಾತನಾಡಿ, ನಮ್ಮ ನಾಡಿನ ಭವ್ಯ ಪರಂಪರೆ ಅನನ್ಯವಾದುದು. ಈ ನಾಡಿನಲ್ಲಿ ಜನ್ಮ ತಾಳಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ. ಇರುವ ಜೀವನವನ್ನು ಸಾರ್ಥಕಗೊಳಿಸಿಕೊಂಡು ಮುಕ್ತಿ ಮಾರ್ಗದ ಕಡೆಗೆ ನಡೆಯಬೇಕಿದೆ. ಇರುವಷ್ಟು ದಿವಸ ಸಮಾಜಕ್ಕಾಗಿ ಒಂದಿಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ ಸಾರ್ಥಕತೆ ತಂದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಮನಸ್ಥಿತಿ ಹುರುಪುಗೊಳ್ಳಬೇಕಿದೆ. ನಮ್ಮ ಸಂಸ್ಕೃತಿ, ಭಾಷೆ ಉಳಿವಿಗಾಗಿ ಸದಾ ಜಾಗೃತರಾಗಿರಬೇಕಿದೆ. ವಿಶ್ವಮಾನವ ಸಂದೇಶ ಎಲ್ಲೆಡೆ ಹರಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ಸತೀಶ ಮಾಳಗೊಂಡ ವಹಿಸಿದ್ದರು. ಅತಿಥಿಗಳಾಗಿ , ಶ್ರೀ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ವೀಣಾ ಬಿರಾದಾರ, ಯಲಿಗಾರ ಸೇವಾ ಸಂಸ್ಥೆ ಶಿಗ್ಗಾವಿಯ ಅಧ್ಯಕ್ಷರಾದ ಶಶಿಧರ ಯಲಿಗಾರ, ಲೇಖಕಿ, ಗಾಯಕಿ ಶ್ರೀಮತಿ ಮೇಘಾ ಹುಕ್ಕೇರಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ (ರಿ )ಯ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಪಾಟೀಲ , ಗೌರವ ಕಾರ್ಯದರ್ಶಿ ರಾಜೇಂದ್ರಕುಮಾರ ಮಠದ, ಸಂತೋಷ ಭದ್ರಾಪೂರ, ಇನ್ನುಳಿದ ವೇದಿಕೆಯ ಸದಸ್ಯರುಗಳು ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು, ಸಾಹಿತಿಗಳು, ಸಾಹಿತ್ಯಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.