spot_img
spot_img

ನಾವೆಲ್ಲರೂ ಒಂದೇ ಅನ್ನುವ ಮಾತು ಎಲ್ಲರ ಮನದಾಳದಿಂದ ಹೊರಟರಷ್ಟೇ ನಮ್ಮದು ಭವ್ಯಭಾರತ

Must Read

- Advertisement -

ಹಮ್ ಸಬ್ ಭಾಯಿ ಭಾಯಿ ಅನ್ನುವದಷ್ಟೇ ಅಲ್ಲ

ನಿನ್ನೆಯಷ್ಟೆ ಮಾರುಕಟ್ಟೆಯಲ್ಲಿ ನಿಧಾನಕ್ಕೆ  ನಡೆದುಕೊಂಡು ಹೋಗುತ್ತಿದ್ದ ಅಂದಾಜು ಅರವತ್ತೈದು ಎಪ್ಪತ್ತು ವಯಸ್ಸಿನ ಅಜ್ಜಿಯೊಬ್ಬರು ಬಿಸಲಿನ ತಾಪಕ್ಕೆ ತಲೆ ಸುತ್ತು ಬಂದಂತಾಗಿ ಕುಸಿದು ಕೂಡುತ್ತಿದ್ದಂತೆಯೆ ಓಡಿ ಬಂದವರು ಯಾರೋ ಅವರ ಕೈ ಹಿಡಿದು ಎಬ್ಬಿಸಲು ಮುಂದಾದಾಗ ಅಯ್ಯೋ ಬೇಡಪ್ಪ ಅಂತ ಅಜ್ಜಿ ಕೈ ಮಾಡುತ್ತಿದ್ದರೆ ಮುಟ್ಟಬೇಡಿ ಅವರನ್ನ ಅವರಿಗೆ ಮೈಲಿಗೆ ಆಗುತ್ತೆ ಅಂತ ಆ ಗುಂಪಿನೊಳಗಿಂದ ಯಾರೋ ಒಬ್ಬರು ಹೇಳಿದರು ದಿಟ್ಟಿಸಿ  ನೋಡಿದರೆ ಆ ವಯಸ್ಸಾದ ಅಜ್ಜಿ ಬ್ರಾಹ್ಮಣರದ್ದು ಅಂತ ಗೊತ್ತಾಯಿತು…

ಮಠದ ಎದುರು ಮಟ-ಮಟ ಮಧ್ಯಾಹ್ನದ ಹೊತ್ತಿಗೆ ಯಾರೋ ತಿಂದು ಎಸೆದ ಬಾಳೆ ಸಿಪ್ಪೆಯ ಮೇಲೆ ಕಾಲಿಟ್ಟ ಹೆಂಗಸೊಬ್ಬಳು ಧೊಪ್ಪನೆ ಜಾರಿ ಬಿದ್ದಳು. ತೆಂಗಿನ ಕಾಯಿ ಊದು ಬತ್ತಿ ಕರ್ಪೂರ ಮಾರುತ್ತಿದ್ದ ಹುಡುಗಿಯೊಬ್ಬಳು ಓಡಿ ಬಂದು ಆ ಹೆಂಗಸನ್ನ ಎಬ್ಬಿಸಿ ಕೂಡಿಸಿದರೆ ಜನರ ಗುಂಪು ಮಠದ ಎದುರು ಸೇರಿದ್ದು ನೋಡಿ ಹೊರಗೆ ಬಂದ ಮಠಾಧೀಶರು ಅರೇ ಅವ್ವ ಏನೂ ಆಗಿಲ್ಲ ನಿಮಗ ಗಾಭರಿ ಆಗ್ ಬ್ಯಾಡ್ರಿ ಏನಿಲ್ಲ ಸಣ್ಣ ಗಾಯ ಅಷ್ಟ ಆಗೇತಿ… ಒಳಗ್ ಬರ್ರಿ ಬ್ಯಾಂಡೇಜ್ ಮಾಡೋಣ ಅಂತ…..

- Advertisement -

 ಏ ಈರಯ್ಯ ಫಸ್ಟ್ ಏಡ್ ಬಾಕ್ಸ್ ತಗೋ ಅಂತ ಕರೆದರೆ ಆ ಹೆಂಗಸು ಬ್ಯಾಡ್ರಿ ಅಪ್ಪಾರ ನಾ ಮನಿಗಿ ಹೋಗತೇನಿ ನಾವೆಲ್ಲ ಮಠದ ಒಳಗ್ ಬರಬಾರ್ದರಿ ಅಂತ ದೈನ್ಯದಿಂದ ಕೈ ಮುಗಿಯುವದು ನೋಡಿದರೆ ಅವಳು ಕೆಳ ವರ್ಗದವಳು ಅಂತ ಅರಿವಾದ ಸ್ವಾಮೀಜಿ ನಮ್ ಮಠದಾಗ ಜಾತಿ ಮತ ಧರ್ಮ ಅಂತದ್ದೆನೂ ನಾವ್  ನೋಡುದಿಲ್ಲವಾ …

ಇರ್ಲಿ ಬಾ ಒಳಗ್ ಅಂದರೂ ಆಕೆ ಕೇಳದೆ ಇದ್ದಾಗ ಎಲ್ಲವೂ ಶಿವನ ಇಚ್ಚೆ ಅಂತ ಸ್ವಾಮಿಗಳು ಮೌನಕ್ಕೆ ಶರಣಾದರು.

ಇನ್ನ್ಯಾವದೋ ಊರಿನಲ್ಲಿ ನಲ್ಲಿಯಿಂದ ನೀರು ಕುಡಿದ ಹುಡುಗಿಯೊಬ್ಬಳನ್ನ ಕಂಭಕ್ಕೆ ಕಟ್ಟಿ ಥಳಿಸಿ ಅವಳಿಗೆ ಮೇಲ್ವರ್ಗದ ಹುಡುಗರು ಮೂತ್ರ ಕುಡಿಸಿದರಂತೆ ಅನ್ನುವ ಸುದ್ದಿಯೊಂದನ್ನ ಪತ್ರಿಕೆಯಲ್ಲಿ ಓದಿದಾಗ ನನ್ನ ಮೈಯ್ಯೆಲ್ಲ ಉರಿದು ಹೋಯಿತು…

- Advertisement -

ನಿಮಗೆಲ್ಲ ನೆನಪಿರಬಹುದು ಈಗ ಕೆಲವು ವರ್ಷಗಳ ಹಿಂದಷ್ಟೆ ಅಲ್ ಖೈದಾ, ಐಸಿಸ್,ಹಮಾಸ್, ನ್ಯಾಷನಲ್ ಡೆಮಾಕ್ರಟಿಕ್ ಪ್ರಂಟ್ ಆಫ್ ಆಸ್ಸಾಂ,ತ್ರಿಪುರಾದ ಟೈಗರ್ ಫೋರ್ಸ,ಅಲ್ ಬದರ್ ಮತ್ತು ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದ್ದಿನ್,ಶ್ರೀಲಂಕಾದ ಎಲ್ ಟಿ ಟಿ‌ ಇ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಮತ್ತು ನಕ್ಸಲರು ಸಿಡಿಲಿನಂತೆ ಆರ್ಭಟಿಸಿದಾಲೋ, ಹಸಿದ ವ್ಯಾಘ್ರಗಳಂತೆ ಘರ್ಜಿಸಿದಾಗಲೋ ಅಕ್ಷರಶಃ ಆಗಿದ್ದು ರಕ್ತಪಾತ ಮತ್ತು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಇಡೀ ಮನುಷ್ಯ ಸಂಕುಲ….

ಗಾಜಿನ ಮನೆಯಲ್ಲಿ ಕುಳಿತ ಮನುಷ್ಯನೊಬ್ಬ ಮತ್ತೊಬ್ಬರತ್ತ ಕಲ್ಲು ಎಸೆಯುವದು ಅಕ್ಷಮ್ಯ ಅಪರಾಧ ಅನ್ನುವದನ್ನ ಕಲಿಸುವ ಬದಲು ನೀನು ಕೇಸರಿ, ಅವರು ಹಸಿರು,ಇವರು ನೀಲಿ  ಅಂತ ಪ್ರತಿಯೊಂದು ಬಣ್ಣವನ್ನು ಆಯಾ ಜಾತಿ, ಜನಾಂಗ ಮತ್ತು ಧರ್ಮಗಳ ಸಂಕೇತವಾಗಿ ಬಳಸಿ ಮತೀಯ ಗಲಭೆಗಳನ್ನು ಸೃಷ್ಟಿಲಾಗುತ್ತಿರುವದು ನೋಡಿದರೆ ಕೆ.ಜೆ ಹಳ್ಳಿ,ಡಿ.ಜೆ ಹಳ್ಳಿಯಿಂದ ಹಿಡಿದು ಹುಬ್ಬಳ್ಳಿಯ ಕೇಶ್ವಾಪೂರ,ಬೆಳಗಾವಿಯ ಚವ್ಹಾಟ್ ಗಲ್ಲಿ ಮತ್ತು ಮಂಗಳೂರಿನ ಹಾದಿ ಬೀದಿಗಳು ಸೇರಿದಂತೆ ದೂರದ ಮಣಿಪುರದಲ್ಲಿ  ಯಾರದೋ ಪ್ರಚೋದನೆಯ ಭಾಷಣ ಕೇಳಿ ಆವೇಶ ಭರಿತರಾಗಿ ಕಲ್ಲು ತೂರುವ ಟೈರಿಗೆ ಬೆಂಕಿ ಹಚ್ಚುವ, ಚೂರಿಯಿಂದ ಬರ್ಭರವಾಗಿ ಇರಿದು ಅಮಾಯಕರನ್ನ ಕೊಲ್ಲುವ ಹಾಗೂ ಟೆಂಪೋ ಒಂದರಲ್ಲಿ ದನಗಳನ್ನ ಸಾಗಿಸುತ್ತಿರುವದು ಅನ್ಯ ಕೋಮಿನ ಹುಡುಗ ಅನ್ನುವ ಕಾರಣಕ್ಕೆ ಕಲ್ಲಿನಿಂದ ಹೊಡೆದು ಕೊಲ್ಲುವ, ತುಂಬಿದ ಬಾಣಂತಿಯನ್ನೂ ಬಿಡದೆ ಅತ್ಯಾಚಾರ ಎಸಗಿ ಕೊಲೆ ಮಾಡುವಂತಹ ಘಟನೆಗಳು ನಡೆದದ್ದು ನೋಡಿದರೆ ಮನುಷ್ಯತ್ವ ಇರುವ ಎಂಥವರ ಮನಸ್ಸನ್ನು ಕೂಡ ಅದು ಆಘಾತಕ್ಕೆ ಈಡು ಮಾಡುತ್ತದೆ.

     ನಮ್ಮ ದೇಶದಲ್ಲಿ ಬಾಂಬ್ ಬ್ಲಾಸ್ಟ್ ನಂತಹ ಕೃತ್ಯಗಳು ನಡೆದಾಗಲೆಲ್ಲ ಮುಸ್ಲೀಂರನ್ನು ಭಯೋತ್ಪಾದಕರಂತೆ ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ ಅನ್ನುವದು ಒಂದು ಕಡೆಯಾದರೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾದವರು ಮುಸ್ಲೀಂರನ್ನ ಹೊರತುಪಡಿಸಿದ  ಅನ್ಯ ಧರ್ಮೀಯರು ಅನ್ನುವದು ಕೂಡ ಅಷ್ಟೇ ಸತ್ಯವಾಗಿದೆ.

ವಿಜಯಪುರದ ತಿಕೋಟಾದಲ್ಲಿ ಬಸವಣ್ಣನವರ ಪುತ್ಥಳಿಗೆ ಅವಮಾನ, ಬೆಳಗಾವಿಯಲ್ಲಿ ರಾಯಣ್ಣನ ಪ್ರತಿಮೆ ಭಗ್ನ ಮತ್ತು  ಕೋರ್ಟ್ ಆವರಣವೊಂದರಲ್ಲಿ ನಡೆದ ಹ್ಯಾಂಡ್ ಗ್ರೇನೆಡ್ ದಾಳಿ, ಮಂಗಳೂರಿನ ಏರಪೋರ್ಟ್ ನಲ್ಲಿ ಇಡಲಾದ ಹುಸಿಬಾಂಬ್  ಸೇರಿದಂತೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮೊನ್ನೆ ಮೊನ್ನೆಯಷ್ಟೇ ನಡೆದ ದಾಳಿಗಳ ತನಕ ದೇಶದಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಹಲವಾರು ಸ್ಲೀಪರ್ ಸೆಲ್ ಗಳು ಕೆಲಸ ಮಾಡುತ್ತಿದ್ದು ಅಂತಹ ಹೇಯ ಕೃತ್ಯದ ರೂವಾರಿಗಳೆಲ್ಲ ಹಲವಾರು ಉಗ್ರ ಸಂಘಟನೆಗಳ ಸಂಪರ್ಕದಲ್ಲಿ ಇರುವದು ಖಚಿತವಾಗಿದೆ.

ಇನ್ನೂ ಎಷ್ಟೋ ಸಲ ಪರೀಕ್ಷಾ ತಯಾರಿ ನಡೆಸದ ವಿದ್ಯಾರ್ಥಿಗಳು ಮತ್ತು ಏನಿಲ್ಲ ಸರ್ ಅಲ್ಲಿಂದ ಹೋಗ್ತಾ ಇದ್ದೆ ಅಲ್ಲಿ ಇರೋರನ್ನ ಹೆದರಸ್ಬೇಕು ಅನ್ನಸ್ತು ಅದಿಕ್ಕೆ ಗೂಗಲ್ ಅಲ್ಲಿ ನಂಬರ್ ಹುಡುಕಿ ಬಾಂಬ್ ಇಟ್ಟಿದಿವಿ ಅಂತ ಕಾಲ್ ಮಾಡಿದೆ ಅನ್ನುವದರ ತನಕ ಮನುಷ್ಯನ ವಿಕೃತಿಗಳು ನಡೆಯುತ್ತಿರುವದು ಮತ್ತು ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಸ್ಮೋಕ್ ಬಾಂಬ್ ದಾಳಿಯಂತಹ ರಕ್ಷಣಾ ವೈಫಲ್ಯದ ಘಟನೆಗಳನ್ನು ನೋಡಿದರೆ ಇಂತಹ ರಾಕ್ಷಸಿ ಸ್ವಭಾವದ ಕೃತ್ಯಗಳು ನಡೆದು ಬಂದ ಹಾದಿಯನ್ನು ಗಮನಿಸಿದಾಗೆಲ್ಲ ನನಗೆ ಅನ್ನಿಸಿದ್ದು ಎಷ್ಟು ಸುಲಭವಾಗಿ ಕೆಳವರ್ಗದವರು ಮತ್ತು ಮದ್ಯಮವರ್ಗದ ಯುವಕ ಯುವತಿಯರು ಇಂತಹ ಕೃತ್ಯಗಳಲ್ಲಿ ಕೋಮುವಾದಿಗಳು ಬಳಸುವ ದಾಳದ ಅಸ್ತ್ರವಾಗುತ್ತಿದ್ದಾರೆ ಅನ್ನುವದು.

ಅಸಲಿಗೆ ದೊಡ್ಡ ಮೀನೊಂದನ್ನ ಹಿಡಿಯುವದಕ್ಕೆ ಸಣ್ಣ ಮೀನುಗಳನ್ನ,ಮಳೆ ಹುಳುಗಳನ್ನ ಕೊಕ್ಕೆಗೆ ಸಿಕ್ಕಿಸುವ ವಿಕೃತಿ ಇರುವದು ಮನುಷ್ಯನಲ್ಲಿ ಮಾತ್ರ ಆದ್ದರಿಂದ ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿ 166 ಜನರ ಸಾವಿಗೆ ಮತ್ತು ಮೂರುನೂರಕ್ಕು ಹೆಚ್ಚು ಜನರನ್ನು ಗಾಯಗೊಳಿಸಿದ ಲಷ್ಕರ್ ಎ ತೊಯ್ಬಾ ಸಂಘಟನೆಯ ಹತ್ತು ಉಗ್ರರ ಪೈಕಿ ಜೀವಂತವಾಗಿ ಸೆರೆ ಸಿಕ್ಕ ಅಜ್ಮಲ್ ಕಸಬ್ ನಂತಹ ಉಗ್ರನ ಪರವೂ ವಕಾಲತ್ತು ನಡೆಸುವ ನ್ಯಾಯವಾದಿಗಳು,

ಸಾಮೂಹಿಕ ಅತ್ಯಾಚಾರಿಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವ ನ್ಯಾಯವಾದಿಗಳಿಂದ ಹಿಡಿದು ಕ್ರಿಮಿನಲ್ ಪ್ರಕರಣಗಳಲ್ಲಿ ಕೊಲೆಯಂತಹ ಹೇಯ ಕೃತ್ಯ ಮಾಡಿದ ಆರೋಪಿಗಳನ್ನು ಖುಲಾಸೆಗೊಳಿಸುವದನ್ನು ಮತ್ತು ಹೆಬಿಚುವಲ್ ಕಳ್ಳನೊಬ್ಬನಿಗೆ ಜಾಮೀನು ಕೊಡಿಸುವದನ್ನ  ನೋಡಿದಾಗೆಲ್ಲ ಬಿ. ಎ, ಎಲ್-ಎಲ್-ಬಿ. ಕಲಿತ ನನಗೆ ನಮ್ಮ ದೇಶದ ಯುವಕರಲ್ಲಿ ಉತ್ತಮ ಆದರ್ಶಗಳು ಯಾಕೆ ಸಾಯುತ್ತಿವೆ ಅನ್ನುವದು ಬಹಳ ಸುಲಭವಾಗಿ ಅರ್ಥವಾಗಿಬಿಡುತ್ತದೆ…

ತಪ್ಪು ಮಾಡಿದವರನ್ನೆಲ್ಲ ಶಿಕ್ಷೆಗೆ ಒಳಪಡಿಸುತ್ತ ಹೋದರೆ ನಮ್ಮ ದೇಶದ ಜೈಲುಗಳಲ್ಲಿ ಜಾಗ ಸಾಲುವದಿಲ್ಲ ಮಿಸ್ಟರ್ ಅನ್ನುವ ,ಅಯ್ಯೋ ಸರ್ ಅವರ ಹತ್ತಿರ ದುಡ್ಡಿಲ್ಲ ಅದಕ್ಕೆ ಅವ್ರಿಗೆ ಒಳ್ಳೆ ಲಾಯರನ್ನ ಹಿಡಿಯೋಕ್ ಆಗದೆ‌ ಈಗ ಜೈಲಲ್ಲಿ ಇದಾರೆ ಇನ್ನೆರಡು ತಿಂಗಳು ಆಮೇಲೆ ಹೊರಗೆ ಬರ್ತಾರೆ ಅನ್ನುವ ಕೆಲವರ ಮಾತುಗಳು ನನ್ನಂತಹವರ ಕಿವಿಗೆ ಬಿದ್ದಾಗಲೆಲ್ಲ ನ್ಯಾಯ ದೇವತೆಯ ಕಣ್ಣಿಗೆ ಕಪ್ಪು ಬಟ್ಟೆಯನ್ನಾದರೂ ಯಾಕೆ ಕಟ್ಟಿದ್ದಾರೆ ಅನ್ನುವ ಪ್ರಶ್ನೆ ನನ್ನೊಳಗೆ ಸುಳಿಯದೇ ಇರುವದಿಲ್ಲ.

ಇದೆಲ್ಲ ನ್ಯಾಯಾಂಗ ವ್ಯವಸ್ಥೆಯ ವಿಷಯವಾದರೆ ಸತ್ತು ಮಲಗುತ್ತಿರುವ ಮಾನವೀಯ ಆದರ್ಶಗಳ ವಿಷಯವಂತೂ ಮತ್ತಷ್ಟು ವಿಷಾದನೀಯವಾಗಿದೆ.

ಯೀಟ್ ಕಾ ಜವಾಬ್ ಫತ್ಥರ್ ಸೇ ದೇಂಗೆ ಅನ್ನುವದನ್ನೇ ಇಂದಿನ ಯುವಕರಿಗೆ ಕಲಿಸಲಾಗುತ್ತಿರುವದು ಅಂದ ಮೇಲೆ ಮತ್ತು ನಮ್ಮನ್ನು ಮುಂದೆ ನಿಲ್ಲಿಸಿ ನಮ್ಮ ಭುಜದ ಮೇಲೆ ಬಂದೂಕಿಟ್ಟು ಮತ್ತೊಬ್ಬರನ್ನು ಗುರಿಯಾಗಿಸುವ ಕೆಲವು ಸಂಘಟನೆಗಳ ನಾಯಕರು ಮತ್ತು ರಾಜಕಾರಣಿಗಳ ಹಾಗೂ ಕೆಲವು ಸಮಾಜದ ಮುಖಂಡರ ಭಾಷಣಗಳನ್ನು ನೋಡಿದರೆ ಇಂದಲ್ಲ ನಾಳೆಗೆ ಅತ್ತ ಕಡೆಯಿಂದ ಆಗುವ ಪ್ರತಿದಾಳಿಯ ಮೊದಲ ಬಲಿಪಶುಗಳು ನಾವಷ್ಟೇ ಅನ್ನುವದು ಸ್ಪಷ್ಟವಾಗದಷ್ಟು ನಮ್ ಯುವಕರ ಬುದ್ದಿಗೆ ಅದಾಗಲೇ ಅವರು ಲದ್ದಿಯನ್ನ ತುಂಬಿಯಾಗಿದೆ ಅನ್ನುವದು ದುರಂತವೇ ಸರಿ.

ದೇಶದಲ್ಲಿ ನಡೆಯುವ ಕೋಮು ಗಲಭೆಗಳಿಗೆ ಕಾರಣವಾಗುತ್ತಿರುವ ಮತ್ತು ಸಣ್ಣ ಪುಟ್ಟ ವಿಷಯಗಳಲ್ಲಿ ಇನ್ನೊಂದು ಗುಂಪಿನ ಮೇಲೆ ಹಲ್ಲೆ ಮಾಡಿ,ದಾಳಿ ನಡೆಸಿ,ಗುಂಪು ಘರ್ಷಣೆಗಳಲ್ಲಿ ಭಾಗಿಯಾಗಿ ಬಲಿಪಶುವಾಗುವ ಮತ್ತು ಜೈಲುಪಾಲಾಗುವ ಅದೆಷ್ಟೋ ಯುವಕ ಯುವತಿಯರು ಸರ್ವೇ ಸಾಮಾನ್ಯವಾಗಿ ಕೆಳ ಮತ್ತು ಹಿಂದುಳಿದ ವರ್ಗಗಳ ಜನರೇ ಆಗಿರುತ್ತಾರೆ ಅನ್ನುವದರಿಂದ ಹಿಡಿದು ಬಂದೂಕಿನಲ್ಲಿ ಗುಬ್ಬಿ ಗೂಡು ಕಟ್ಟುವ ಎಲ್ಲ ಭರವಸೆಗಳನ್ನು ಅದಾಗಲೇ ಗಾಳಿಗೆ ತೂರಲಾಗುತ್ತಿರುವದನ್ನ ನೋಡಿದರೆ ಮಾನವೀಯತೆ,ಮಮಕಾರ, ಮನುಷ್ಯ ಸಹಜ ಪ್ರೀತಿ ಮತ್ತು ಸಾಮರಸ್ಯ ಅನ್ನುವ ಪದಗಳು ನೆಲಕಚ್ಚುತ್ತಿರುವದು ಸದ್ಯದ ಮಟ್ಟಿಗೆ ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾಗ್ರಾಂ,ಫೆಸ್ಬುಕ್,ಟೆಲಿಗ್ರಾಮ್ ಸೇರಿದಂತೆ ಮಾನವೀಯ ಕಳಕಳಿಯ ಸಹೃದಯರ ಮತ್ತು ಸಮಾನ ಮನಸ್ಕರ ಗುಂಪುಗಳಲ್ಲಿ ಚರ್ಚೆಯಾಗಬೇಕಾದ ಮತ್ತು ಈ ತಲೆ ಮಾರಿಗೆ ಅಗತ್ಯವಾದ  mಹಾಗೂ ಮುಂದಿನ ಪೀಳಿಗೆಗೆ ನಾವು ಕಲಿಸಬೇಕಾದ ಮಾನವೀಯ ಮೌಲ್ಯಗಳು ಸದ್ಯದ ಪ್ರಮುಖ ಅಂಶಗಳಾಗಿವೆ.

ಅಧರ್ಮ ಅನ್ನುವದು ತಲೆ ಎತ್ತಿ ಕುಣಿದಾಗೆಲ್ಲ ಧರ್ಮದ ರಕ್ಷಣೆಗೆ ನಮ್ಮ ದೇವರು ಅವತಾರ ಎತ್ತಿ ಬರುತ್ತಾನೆ ಅನ್ನುವದನ್ನೇ ನಂಬಿಕೊಂಡಿರುವ ನಾವು ಸಬ್ ಕಾ ಮಾಲೀಕ್ ಏಕ್ ಹೈ ಅನ್ನುವದನ್ನು ಮಾತ್ರ ನಿರಾಕರಿಸುತ್ತಿರುವದು ನೋಡಿದರೆ ನಮ್ಮ ಯುವಕರು ಬಾಣಲೆಯಿಂದ ಬೆಂಕಿಗೆ ಬೀಳುವ ಕಾಲ ದೂರವಿಲ್ಲ ಆದ್ದರಿಂದ ಕನಿಷ್ಠ ಪಕ್ಷ ಸರ್ಕಾರದ ಜಯಂತಿಗಳಾದರೂ ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಿ ಅನ್ನುವ ಆಸೆಯೊಂದನ್ನ ಹೊತ್ತು ಇದನ್ನೆಲ್ಲ ಬರೆಯಬೇಕಾಯಿತು.

ಇಷ್ಟಕ್ಕೂ ಪ್ರಚೋದನಕಾರಿ ಭಾಷಣವನ್ನು ದೇಶದ್ರೋಹದ ಪಟ್ಟಿಗೆ ಸೇರಿಸುವದರ ಜೊತೆಗೆ ಕೋಮುಗಲಭೆಗೆ ಪ್ರೇರೇಪಿಸುವ ಮತ್ತು ಭಾಗಿಯಾದವರಿಗೆ ಸುಲಭವಾಗಿ ಜಾಮೀನು ಸಿಗದಂತೆ   ದೇಶದ ಶಾಂತಿ‌ ಮತ್ತು ಸೌಹಾರ್ದತೆ ಕದಡುವ ಕ್ಷುದ್ರಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗಟ್ಟುವ, ಕಾನೂನಿನ ಅವಶ್ಯಕತೆ ಇರುವದರಿಂದ ಅಂತಹದ್ದೊಂದು ತಿದ್ದುಪಡಿ ತರುವ ಜನನಾಯಕರು ನಮ್ಮ ದೇಶವನ್ನೋ ರಾಜ್ಯವನ್ನೋ ಆಳುವಂತಾಗಲಿ ಅನ್ನುವ ಮಾತಿನೊಂದಿಗೆ ಜಾತಿ ಮತ್ತು ಧರ್ಮದ ಅಮಲನ್ನು ನಮ್ಮ ತಲೆಗಳಿಗೆ ತುಂಬಲು ಹವಣಿಸುತ್ತಿರುವ ರಾಜಕಾರಣಿಗಳ ಸಂಪರ್ಕದಿಂದ ಮತ್ತು ಹೊಡೀರಿ, ಬಡೀರಿ, ಅನ್ನುವಂತಹ ಕೊಳಕು ಅಜೆಂಡಾಗಳಿರುವ ಸಂಘಟನೆಗಳಿಂದನಾವು ನೀವೆಲ್ಲ ದೂರವಿದ್ದಷ್ಟೂ ಒಳ್ಳೆಯದು ಅನ್ನುವ ಮಾತಿನೊಂದಿಗೆ ಇಂದಿನ ಲೇಖನಕ್ಕೆ ವಿರಾಮ ಹೇಳುತ್ತಿದ್ದೇನೆ.


ದೀಪಕ ಶಿಂಧೇ

9482766108

- Advertisement -
- Advertisement -

Latest News

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

ತಿರುವನಂತಪುರಂ - ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group