spot_img
spot_img

ಜುಲೈ 6 ಆಷಾಢ ಆರಂಭ – ಹೀಗೊಂದು ಚಿಂತನಾ ಲಹರಿ

Must Read

- Advertisement -

ಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲ

ಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲ. ಬಾಂಧವ್ಯಗಳ ಬುತ್ತಿಗೆ ಗಂಟು ಹಾಕುವ ಮಾಸ. ವಿರಹದ ವೇದನೆಯ ಕಹಿಯುಣಿಸುತ್ತಲೇ ಮುಂದಿನ ಸಿಹಿಯೂಟಕ್ಕೆ ಅಣಿಮಾಡುವ ವೇದಿಕೆಯೇ ಆಷಾಢ. ಹೀಗೆ ಬಾಂಧವ್ಯದ ಬೆಸುಗೆಯನ್ನು ಆಷಾಢ ಒಂದೆಡೆ ಬೆಸೆದರೆ ಮತ್ತೊಂದೆಡೆ ಸಂಕಲ್ಪ ಪರ್ವವಾಗಿಯೂ ಮೇಳೈಸುತ್ತದೆ. ಚಾತುರ್ಮಾಸ್ಯ ವ್ರತಕ್ಕೆ ಮುನ್ನುಡಿ ಬರೆಯುತ್ತದೆ.

ರೈತರು ನೆಲ ಉತ್ತು ಬಿತ್ತನೆ ಮಾಡಲು ಆಷಾಢದ ಮೃಗಶಿರಾದಿ ಮಳೆಗಾಗಿ ಹಂಬಲಿಸುತ್ತಾರೆ. ಆಷಾಢದ ಮಳೆ ನಕ್ಷತ್ರಗಳ ಅನುಗ್ರಹವೇ ಭೂಮಿ ಫಲವತ್ತಾಗಲು ಕಾರಣವೆಂಬುದು ಅವರ ಅಚಲ ನಂಬಿಕೆ.ಜೀವರಾಶಿಗಳಿಗೆ ದವಸಧಾನ್ಯಗಳ ಕರುಣೆಯಾಗಿ ಚೈತನ್ಯವೆಂದು ಧ್ಯಾನಿಸುತ್ತಾರೆ.ಮೇಘರಾಜ ನೀನು ಬರುವಾಗ ಸಿಡಿಮಿಡಿತಗೊಂಡು, ಸಿಡಿಲೆರಗಿ ಆಘಾತ ಮಾಡಬೇಡ.ಈ ನೆಲದ ಬದುಕನ್ನು ಹಸನುಗೊಳಿಸಲು ಚಡಪಡಿಸಿ ಬಾ ಎಂದು ಕೇಳಿಕೊಳ್ಳುತ್ತಾರೆ.

- Advertisement -

ಬಿರು ಬೇಸಿಗೆಯಲ್ಲಿ ಕಾದು ಬಾಯಾರಿದ ಭೂದೇವಿಯನ್ನು ತಣಿಸಲು ವರುಣ ತನ್ನ ಸೈನ್ಯವನ್ನೊಡಿಸುತ್ತಾನೆ. ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು ಪ್ರಾರ್ಥಿಸಿದೊಡನೆಯೇ ಗುಡುಗು ಸಿಡಿಲುಗಳ ಆರ್ಭಟದೊಂದಿಗೆ ಮುಂಗಾರು ಮಳೆ ಧಾವಿಸಿ ಬರುತ್ತದೆ. ಮುಗಿಲಿಗೆ ರೆಕ್ಕೆಗಳೊಡೆದು ಧಾರಾಕಾರವಾಗಿ ಮಳೆ ಸುರಿದು ನೆಲ ನೀರು ಕುಡಿಯುತ್ತದೆ.

ಮಳೆಯ ಆಗಮನದಿಂದ ಕರ್ತವ್ಯ ಕರ್ಮಗಳು ಕ್ರಿಯಾಶೀಲವಾಗಬೇಕು. ಮೈಮರೆತು ಕೂರುವಂತಿಲ್ಲ. ದವಸ ಧಾನ್ಯಕ್ಕಾಗಿ ದುಡಿದು ದಣಿಯಬೇಕು. ವಧುವಿನ ಕೈ ಹಿಡಿದು ಸಪ್ತಪದಿ ತುಳಿದು ಪ್ರತಿಜ್ಞೆ ಮಾಡಿದಂತೆ ಅನ್ನಕ್ಕಾಗಿ ಅನವರತ ಕೆಲಸ ಮಾಡಬೇಕು. ಈ ಕಾರಣಕ್ಕಾಗಿಯೇ ನವದಂಪತಿ ಸರಸ ಸಲ್ಲಾಪದಲ್ಲಿ ತೊಡಗದೇ ಕೃಷಿ ಕಾರ್ಯದಲ್ಲಿ ನಿರತರಾಗಬೇಕು. ಪತಿಪತ್ನಿಯರು ಬೇರೆಯಿದ್ದು ಕಾರ್ಯೋನ್ಮುಖರಾಗುವ ಹೊತ್ತು. ಆಷಾಢ ಮಾಸ ದಂಪತಿಗಳ ಸಮಾಗಮಕ್ಕೆ ಸೂಕ್ತವಲ್ಲವೆಂಬ ಸಂದೇಶ.

ನೈಋತ್ಯ ಮಾರುತಗಳಿಂದ ಬರುವ ಮುಂಗಾರು ಮಳೆ ಆರಂಭವಾಗುವುದು ತಡ ಕೃಷಿ ಕಾರ್ಯದ ಸಲಕರಣೆಗಳೆಲ್ಲ ಕೆಲಸಕ್ಕೆ ಸಿದ್ಧವಾಗುತ್ತವೆ.

- Advertisement -

ಹುಯ್ಯೋ ಹುಯ್ಯೋ ಮಳೆರಾಯ
ಬಾಳೆಯ ತೋಟಕ್ಕೆ ನೀರಿಲ್ಲ ಎನ್ನುತ್ತ
ಅಂಬು ಕೊಡುವವನೆ ಮುತ್ತಿನಚ್ಚಡದವನೇ
ರಂಭೆ ತೊಡಿಮ್ಯಾಲಿರುವ |
ರಂಭೆ ತೊಡಿಮ್ಯಾಲಿರುವ ಮಳೆದೇವ
ಅಂಬರದಿಂದ ಕರುಣಿಸು |

ಎಂದು ಮಳೆರಾಯನನ್ನು ಸ್ತುತಿಸುತ್ತಾನೆ. ಮುತ್ತಿನಚ್ಚಡ ಹೊದ್ದು ಮಳೆರಾಯ ರಂಭೆಯನ್ನು ಮರೆಯದೆ ಮಲಗಿಬಿಟ್ಟಿರೆ ಮುಂದೆ ಗತಿಯೇನು?ಮಣ್ಣಿನ ಮಕ್ಕಳ ಮುಗ್ಧ ಭಕ್ತಿಗೆ ಮಳೆರಾಯನೂ ಮರುಗುತ್ತಾನೆ.

ಆಷಾಢ ದಂಡ.                                                         ಆಷಾಢ ಮಾಸ ರೈತಾಪಿ ವರ್ಗದವರ ಜೀವನಾಡಿ. ಜ್ಯೇಷ್ಠ ಬಹುಳ ಅಮಾವಾಸ್ಯೆಯೇ ಆಷಾಢ ಮಾಸಕ್ಕೆ ಮುನ್ನುಡಿ ಬರೆಯುತ್ತದೆ .ಈ ಅಮಾವಾಸ್ಯೆಯನ್ನೇ ‘ಮಣ್ಣೆತ್ತಿನ ಅಮಾವಾಸ್ಯೆ’ ಎನ್ನುತ್ತಾರೆ. ಅಂದು ಮಣ್ಣಿನ ಜೋಡಿ ಎತ್ತುಗಳನ್ನು ಮಾಡಿ, ಅದಕ್ಕೆ ರೈತರು ಪೂಜೆ ಮಾಡುತ್ತಾರೆ. ಮಣ್ಣೆತ್ತನ್ನು ಪೂಜಿಸುವಾಗ ಮಳೆಯ ಮುನ್ಸೂಚನೆಯಿರದಿದ್ದರೆ ರೈತರು ಮನನೊಂದುಕೊಳ್ಳುತ್ತಾರೆ. ಮುಂದೆ ಆಷಾಢ ಮಾಸದಲ್ಲಿ ಅನಿಶ್ಚಿತವಾಗಿಬಿಟ್ಟರೆಂಬ ಆತಂಕ ಕಾಡುತ್ತದೆ. ಯಾಕೆಂದರೆ ಮಳೆಯ ನಕ್ಷತ್ರಗಳೆಲ್ಲ ಆಷಾಢದಲ್ಲಿಯೇ ಚೆನ್ನಾಗಿ ಸುರಿಯಬೇಕು. ಇದನ್ನೇ ವರಕವಿ ಬೇಂದ್ರೆಯವರು ‘ಒಕ್ಕಲಿಗನ ಕಣ್ಬಿಡಿಸ್ಯಾವ ಓ ಆಷಾಢ’ ಎಂದು ವಿಷಾದಿಸಿದ್ದಾರೆ.

ಆಷಾಢದಲ್ಲಿ ಮಳೆಬಾರದೇ ಇದ್ದರೆ ಬಿತ್ತುವ ಬೀಜ ಸತ್ತು ಹೋಗುತ್ತದೆ. ಹಾಗಾಗಿ ದಂಡವಾಗಿ ಬಿಡುವ ದುಡುಮೆಯನ್ನು ನೆನೆದು ರೈತರು ‘ಓ, ಆಷಾಢ! ಆಷಾಢಾ ತಡಮಾಡಬ್ಯಾಡಾ’ ಎಂದು ದೈನ್ಯರಾಗಿ ಬೇಡಿಕೊಳ್ಳುತ್ತಾರೆ.
ಮಳೆಯ ನಿರೀಕ್ಷೆಗಾಗಿ ಆಕಾಶವನ್ನು ನೋಡುತ್ತಾ ಇರುತ್ತಾರೆ. ರೈತರು ಮೊದಲ ಮಳೆಗೆ ನೆಲ ಉತ್ತು ಬಿತ್ತನೆ ಮಾಡಲು ಆಷಾಢದ ಮೃಗಶಿರಾದಿ ಮಳೆಗಾಗಿ ಹಂಬಲಿಸುತ್ತಾರೆ. ಆಷಾಢದ ಮಳೆ ನಕ್ಷತ್ರಗಳ ಅನುಗ್ರಹವೇ ಸ್ವಕ್ಷೇತ್ರ ಫಲವತ್ತಾಗಲು ಕಾರಣವೆಂಬುದು ರೈತರ ಅಚಲ ನಂಬಿಕೆ. ಜೀವರಾಶಿಗಳಿಗೆ ದವಸ ಧಾನ್ಯಗಳ ಕರುಣೆಯಾಗಿ ಚೈತನ್ಯವೆಂದು ಧ್ಯಾನಿಸುತ್ತಾರೆ.ಮೋಡರಾಯ ನೀನು ಬರುವಾಗ ಸಿಡಿಮಿಡಿಗೊಂಡು, ಸಿಡಿಲೆರಗಿ ಆಘಾತವನ್ನುಂಟು ಮಾಡಬೇಡ.ಈ ನೆಲದ ಬದುಕನ್ನು ಹಸನುಗೊಳಿಸಲು ಚಡಪಡಿಸಿ ಬಾ ಎಂದು ಕೇಳಿಕೊಳ್ಳುತ್ತಾರೆ.

ಆಷಾಢದಲ್ಲಿ ಹೊಂಗೆಮರದ ಹೊಂಗೆಕಾಯಿಯ (ಹುಲಗಲ) ಒಳಗಿನ ಬೀಜ ಒಣಗಿ ಅದು ಗಿಲಿಗಿಲಿ ಎಂದು ಶಬ್ದ ಮಾಡುತ್ತದೆ.ಇದೇ ಕಾಲದಲ್ಲಿ ಬಿತ್ತಿದ ಬೀಜ ಟೊಳ್ಳಾಗದಿರಲಿ ಎಂದು ಆಶಿಸುತ್ತಾನೆ. ಈ ಹಿನ್ನೆಲೆಯಲ್ಲಿಯೇ ಯಾವುದೇ ಕೆಲಸ ಸಫಲವಾಗದಿದ್ದಾಗ ಆಷಾಢದಂಡವೆಂಬ ರೂಪಾತ್ಮಕ ಮಾತು ಬಂದಿದೆ.

ಮಳೆ ನಕ್ಷತ್ರಗಳ ಮೋಹ

ಮಳೆರಾಯನ ಕರುಣೆ ಅಗತ್ಯವಾಗಿ ಬೇಕು. ಮಳೆರಾಯ ಕಣ್ಣು ಬಿಟ್ಟರೆ ಸಾಕು, ಲೋಕವೇ ತಣ್ಣಗಾದಂತೆ, ಮಳೆ ಇಳೆಗೆ ಹೊಸಕಳೆ ತರುವುದು. ಸತತ ನಾಲ್ಕು ತಿಂಗಳುಗಳ ಕಾಲ ಗುಡುಗು ಸಿಡಿಲು ಗಾಳಿ ಮಳೆಯದೇ ಆಡಳಿತ. ನಾಲ್ಕು ತಿಂಗಳಿಗೆ ಬೇಕಾಗುವ ದವಸ ಧಾನ್ಯ ದಾಸ್ತಾನು ಮಾಡುತ್ತಿದ್ದರು. ಸಂಚಾರ ಸಾಗಟವಿಲ್ಲದೇ ಬಂಧಿತರಾಗುತ್ತಿದ್ದರು.

ಕುರುಡು ನೊಣ, ಉಂಬಳದ ಕಾಟ, ಸಂಜೆ ಹೊತ್ತಿನಲ್ಲಿ ಹಲಸಿನ ಹಪ್ಪಳವನ್ನೋ, ಅದರ ಬೇಳೆಯನ್ನೋ ಬೇಯಿಸಿಕೊಂಡು ಬಾಯಿ ಚಪ್ಪರಿಸುವುದು.ಮನೆಯಂಗಳದಲ್ಲಿ ಬೆಳೆದ ತರಕಾರಿಗಳದ್ದೇ ಸಾರು ಸಾಂಬಾರು.

ಮಳೆಯ ಸ್ವಭಾವ ಸ್ವರೂಪಕ್ಕನುಗುಣವಾಗಿ ಮಣ್ಣಿನ ಮಕ್ಕಳಲ್ಲಿ ನಾನಾತರದ ವಿಚಾರಗಳು. ಚಿತ್ರಾ ನಕ್ಷತ್ರದ ಮಳೆಗೆ ಕುರುಡು ಚಿತ್ತ ಎಂದು ಹೆಸರು. ಅಂದರೆ ಇದು ವ್ಯಾಪಕವಾಗದೇ ಒಂದೇ ಕಡೆ ನಿಂತು ಬಿಡುತ್ತದೆ.ಅಂದರೆ ಜಿನುಗು ಮಳೆ ಎಂದರ್ಥ.ಅನುರಾಧಾ ಮಳೆ ಆರಂಭವಾದರೆ ಆನೆಗಳೂ ನಡುಗುತ್ತವೆ. ಆನೆಗಳನ್ನು ಕಂಪಿಸುವ ಅನುರಾಧಾ ಎಂದೇ ಅದಕ್ಕೆ ಹೆಸರು. ಅಂದರೆ ಅದು ದೊಡ್ಡ ಹನಿಗಳ ಭಾರೀ ಮಳೆ. ಹಸ್ತದ ಮಳೆ ಕೈ ನೀಡುವುದು. ಯಾವ ಮಳೆ ತಪ್ಪಿಸಿಕೊಳ್ಳುವುದಿಲ್ಲವೆಂದು ಭಾಷೆ ಕೊಟ್ಟಿದೆಯಂತೆ. ರೈತರಿಗೆ ಭರಣಿ ಮಳೆ ಮೇಲೆ ತುಂಬಾ ಅಭಿಮಾನ. ಸಾಮಾನ್ಯವಾಗಿ ಮುಂಗಾರು ಮಳೆಯಲ್ಲಿ ಬೆಳೆ ಬೆಳೆಯುವ ರೈತರು ರೇವತಿ, ಅಶ್ವಿನಿ ಮಳೆಗಳಲ್ಲಿ ಜೋಳದ ಬಿತ್ತನೆ ಕೆಲಸ ಮಾಡುತ್ತಾರೆ. ಭರಣಿಯಲ್ಲಿ ಧರಣಿಯೆಲ್ಲ ಯೋಯ್ಯುತ್ತದೆಂದು, ಆರಿದ್ರಾ ನಕ್ಷತ್ರ ಮಳೆ ಹೊಯ್ದರೆ ಆರು ನಕ್ಷತ್ರವೂ ಮಳೆ ಹೊಯ್ದಂತೆ ಎಂದು ಭಾವಿಸುತ್ತಾರೆ. ಮುಂಗಾರು ಮಳೆಯ ಆರಂಭದಲ್ಲೇ ಬರುವ ಆರಿದ್ರಾ ಮಳೆ ಬಿದ್ದರೆ ನೆಲದಲ್ಲಿ ನೀರು ಆರಿ ಹೋಗುವುದಿಲ್ಲ, ಸಂಗ್ರಹವಾಗುತ್ತದೆ.

ಮಣ್ಣಿನ ಮಕ್ಕಳ ಈ ಮಳೆ ಮೋಡದ ಅರಿವನ್ನೇ ವಿಜ್ಞಾನಿಗಳು ಬಿಳಿ ಮೋಡ, ಕರಿಮೋಡ, ಚದುರಿದ ಮೋಡ ಇವುಗಳ ಮಳೆ ಕುರಿತು ‘ಮೋಡ ವಿಜ್ಞಾನ’ ವೆಂದು ವಿವರಿಸಿದ್ದಾರೆ.

ನೀ ಬಲು ಗೂಢ

ಆಷಾಢ ಮಾಸ ರೈತರ ಪಾಲಿಗೆ ವರದಾನವಾಗಿರುವುದು, ಹಾಗೆಯೇ ನಿಗೂಢವೂ ಆಗಿರುವುದು. ಯಾಕೆಂದರೆ ಮೋಡಕಟ್ಟಿ ಮಳೆಯಾಗಬೇಕು. ಎಲ್ಲ ಮೋಡಗಳು ಮಳೆ ಸುರಿಸುವುದಿಲ್ಲ. ಹಳ್ಳಿಹೈದರು ಮೋಡವನ್ನು ‘ಮಾಡಾ’ ಎಂದು ಕರೆಯುತ್ತಾರೆ. ‘ಮಾಡಾ’ ಅವರ ಜೀವನದ ಫಲಶ್ರುತಿ. ಇದನ್ನೇ ಜನಪದ ಸತ್ವದ ಕವಿ ಬೇಂದ್ರೆಯವರು-

ಮಾಡಾ ಮಾಡಾ ಮಾಡಾ
ಮಾಡಾ ಅನಬ್ಯಾಡಾ
ಮಾಡಲೇಬೇಕು ನಿನ ಕೆಲಸ ಬಿಡಬ್ಯಾಡಾ,
ನಿನ್ನೊಳಗೇನಿದೆ ಏನಿದೆಯೋ ಗೂಢಾ
ಮಾಡಾ ಮಾಡಾ ದಯಮಾಡಾ..

ಎಂದು ಪ್ರಾರ್ಥಿಸಿದ್ದಲ್ಲದೇ, ಬರೀ ಮೋಡವಾಗಿ ಭ್ರಮೆ ಹುಟ್ಟಿಸಬೇಡಾ ಎಂದದ್ದಲ್ಲದೇ, ಜಲ ಮರೀಚಿಕೆಯ ಮೃಗಜಲವನ್ನಾಗಿಸಬೇಡ ಈ ಆಷಾಢಾ ಎಂದಿದ್ದಾರೆ. ‘ಏಳುವ ಬೆಳಿ ಬಾಳುವಿಗಾಗಿ ಕತ್ತ ಎತ್ತಿರಲಿ, ಓ ಆಷಾಢಾ’ ಎಂದು ಕಳಕಳಿಯಿಂದ ಕೋರಿಕೊಳ್ಳುತ್ತಾರೆ.

ಸಾಧನೆಯ ಮಾಸವಿದು ಆಷಾಢ

ಮಾನವನ ಅರ್ಥ ಮತ್ತು ಕಾಮಗಳಿಗೆ ಶಿಸ್ತುಬದ್ಧ ಚೌಕಟ್ಟನ್ನು ವಿಧಿಸುವುದೇ ಧರ್ಮ. ಆಷಾಢ ಮಾಸಕ್ಕೆ ಅತ್ಯಮೂಲ್ಯ ಪ್ರಾಶಸ್ತ್ತ್ಯವಿದೆ. ಮಾನವನ ಉದರ ಪೋಷಣೆಗೆ ಅತ್ಯಗತ್ಯವಾದ ಸೃಷ್ಟಿಕಾರ್ಯಗಳಿಗೆ ಆಷಾಢ ಮಾಸವು ದಿಕ್ಸೂಚಿಯೇ ಆಗಿದೆ.

ಪ್ರಪಂಚದ ವಿವಿಧ ಮಾನವ ಸಮುದಾಯಗಳಿಗೆ ತಮ್ಮದೇ ಆದ ಸಾಮಾಜಿಕ ಮತ್ತು ಸಾಂಸ್ಕøತಿಕವಾದ ಸ್ವರೂಪವಿದೆ. ಆದರೆ ಈ ಸಮುದಾಯಗಳ ಸ್ವರೂಪವನ್ನು ಪೋಷಿಸಿ ಸಂರಕ್ಷಿಸುವುದು ಅವುಗಳ ಮೂಲಭೂತವಾದ ಸಿದ್ಧಾಂತಗಳೇ! ಹಿಂದೂಗಳಾದ ನಾವು ಧರ್ಮವನ್ನೇ ನಮ್ಮಗಳ ಮೂಲ ನೆಲೆ ಆಗಿಸಿಕೊಂಡು ದೇವರನ್ನು ವಿಶ್ಲೇಷಿಸುತ್ತೇವೆ. ಮಾನವನೇಕೆ ಧರ್ಮಾವಲಂಬಿ ಆಗಬೇಕು? ಎಂಬ ಪ್ರಶ್ನೆಯು ಅನಾದಿಕಾಲದಿಂದ ಮೊದಲ್ಗೊಂಡು ಅನಂತಕಾಲದವರೆಗೆ ಚಲಾವಣೆಯಲ್ಲಿ ಇರುವಂಥದ್ದೇ ಆಗಿದೆ!

ಧರ್ಮದ ಸೆಲೆಗಳನ್ನು ಗಮನಿಸುವುದಾದರೆ ತತ್ತ್ವ ಸಿದ್ಧಾಂತಗಳ ನೆಲೆ, ಪೌರಾಣಿಕ ನೆಲೆ ಮತ್ತು ನಿತ್ಯ ನೈಮಿತ್ತಿಕ ಕರ್ಮಾಚರಣೆಯ ನೆಲೆ ಎಂದು ಪ್ರಧಾನವಾಗಿ ಮೂರು ವಿಚಾರಗಳಲ್ಲಿ ಗಮನಿಸಬಹುದು. ಮಾನವನ ಅರ್ಥ ಮತ್ತು ಕಾಮಗಳಿಗೆ ಶಿಸ್ತ್ತುಬದ್ಧ ಚೌಕಟ್ಟನ್ನು ವಿಧಿಸುವುದೇ ಧರ್ಮ. ಧರ್ಮ ಸೂಚಿಸಿದ ಮಾರ್ಗದಲ್ಲಿ ಮಾನವನಶ್ರದ್ಧೆ ಹಾಗೂ ನಿಷ್ಠಾಪೂರ್ವಕ ಜೀವನವು ಸಾಗಿದಾಗ ಅವುಗಳು ಮೋಕ್ಷ ಸಾಧನೆಗೆ ಪ್ರತಿಬಂಧಕವಾಗಲಾರವು.

ಪಾರಮಾರ್ಥಿಕ ಬದುಕು
ಧರ್ಮಾನುಷ್ಠಾನಕ್ಕೆ ವ್ರತಗಳು, ಜಯಂತಿಗಳು ಹಾಗೂ ಉತ್ಸವಗಳೇ ಮೊದಲಾದವು ನಮ್ಮ ನೆರವಿಗೆ ಬರುತ್ತವೆ. ಇಂತಹ ಆಚರಣೆಗಳು ಲೌಕಿಕ ಬದುಕಿನ ಅನಿತ್ಯತೆಯನ್ನು ಪರಿಚಯಿಸುವುದಷ್ಟೇ ಅಲ್ಲದೇ ನಮ್ಮನ್ನು ಪಾರಮಾರ್ಥಿಕ ಬದುಕಿನತ್ತ ಸಾಗಲು ಪ್ರಚೋದಿಸುತ್ತದೆ.

ಹಿಂದು ಧರ್ಮದಲ್ಲಿ ಭಗವಂತನ ಅವತಾರಗಳು ಜೈವಿಕ ವಿಜ್ಞಾನವು ಪ್ರತಪಾದಿಸುವ ವಿಕಾಸ ಪ್ರಕ್ರಿಯೆಯೊಂದಿಗೆ ತಾದಾತ್ಮ್ಯ ಹೊಂದಿದೆ! ಸಂವತ್ಸರದ ಪ್ರಾಕೃತಿಕ ವ್ಯವಸ್ಥೆಗೆ ಅನುಗುಣವಾಗಿ ಹಬ್ಬಗಳು ವಿಂಗಡಿಸಲ್ಪಟ್ಟಿವೆ. ಉದಾಹರಣೆಗೆ ಇಡೀ ಪ್ರಕೃತಿ, ಸಮೃದ್ಧಿಯಿಂದ ನಳನಳಿಸುವ ಪ್ರಕ್ರಿಯೆಯ ಪ್ರಾರಂಭವೇ ‘ಯುಗಾದಿ’.

ಅತ್ಯಮೂಲ್ಯ ಪ್ರಾಶಸ್ತ್ಯ

ಹಿಂದೂ ಸಂವತ್ಸರದಲ್ಲಿ ಆಷಾಢಮಾಸಕ್ಕೆ ಅತ್ಯಮೂಲ್ಯ ಪ್ರಾಶಸ್ತ್ಯವಿದೆ. ಮಾನವನ ಉದರ ಪೋಷಣೆಗೆ ಅತ್ಯಗತ್ಯವಾದ ಸೃಷ್ಟಿ ಕಾರ್ಯಗಳಿಗೆ ಆಷಾಢಮಾಸವು ದಿಕ್ಸೂಚಿಯೇ ಆಗಿದೆ. ಅಂತೆಯೇ ಅವನ ಬುದ್ಧಿ ಹೃದಯಗಳ ಸಂಸ್ಕರಣಕ್ಕೆ ಅತ್ಯುಪಯುಕ್ತವಾದ ಗುರುತತ್ವದ ಅನುಸರಣೆಗೆ ಈ ಮಾಸವು ಮೂಲವಾಗಿದೆ. ಕೈಯಲ್ಲಿ ಬಿಡಿಗಾಸಿಲ್ಲದವರನ್ನು ಹೊಟ್ಟೆಗೆ ಹಿಟ್ಟಿಲ್ಲದವರನ್ನು ‘ದೀನÀ’ ಎನ್ನುತ್ತದೆ ಜಗತ್ತು. ಆದರೆ ‘ಗುರುಕೃಪೆ ಇಲ್ಲದವನಿಗಿಂತ ದೀನ ಮತ್ತೊಬ್ಬನಿಲ್ಲ’ ಎಂಬ ಮಾತು ಸತ್ಯದ್ಯಸತ್ಯ.

ಗುರುವಿಗಿಂತಲೂ ಮಿಗಿಲಾದುದಿಲ್ಲ

ನ ಗುರೋರಧಿಕಂ ತತ್ತ್ವಂನ ಗುರುರೋಧಿಕಂ ತಪಃ |
ತತ್ತ್ವಜ್ಞಾನಾತ್ ಪರಂಪ್ರಾಪ್ತಿ ತಸ್ಮೈಶ್ರೀ ಗುರುವೇ ನಮಃ ||

ಅರ್ಥಾತ್ ಗುರುವಿಗಿಂತಲೂ ಅಧಿಕ ತತ್ತ್ವವಿಲ್ಲ, ಗುರುಗಿವಿಂತಲೂ ಅಧಿತಪಸ್ಸು ಇಲ್ಲ. ತತ್ತ್ವಜ್ಞಾನಕ್ಕಿಂತಲು ಶ್ರೇಷ್ಠವಾದುವುದೂ ಇಲ್ಲ. ಅದನ್ನು ದೊರಕಿಸಿಕೊಡುವ ಶ್ರೀಗುರುವಿಗೆ ನಮಸ್ಕಾರ.ಇದೂ ಹಿಂದೂವಿನ ಅಚಲ ನೆಲೆಗಟ್ಟು.

ನಮ್ಮ ಪರಂಪರೆಯಲ್ಲಿ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಪರಿಷ್ಕರಿಸಿ ಹಾಗೂ ವಿಭಾಗಿಸಿ ಶ್ರೀಕೃಷ್ಣದ್ವೈಪಾಯನರನ್ನು ‘ಭಗವಾನ್ ವೇದವ್ಯಾಸೋ ಋಷಿಃ’ ಎಂದು ಗುರುತಿಸಲಾಗಿದ್ದು ಅವರ ಈ ಅದ್ಭುತ ಸೇವೆಯನ್ನು ಕೃತಜ್ಞತೆಯಿಂದ ಪರಿಗಣಿಸಿ ಅದರ ಜಯಂತಿಯನ್ನು ‘ವ್ಯಾಸಪೂರ್ಣಿಮಾ’ ಅಥವಾ ‘ಗುರುಪೂರ್ಣಿಮಾ’ ಎಂದು ಆಚರಿಸಲಾಗುತ್ತಿದೆ. ತಮ್ಮ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಇವರುಗಳಿಗೆ ವ್ಯಾಸರು ವೇದಗಳನ್ನು ಬೋಧಿಸಿದರು.ವ್ಯಾಸಪೂರ್ಣಿಮೆಯ ಆಚರಣೆ ಸನ್ಯಾಸಿಗಳನ್ನು ಮೊದಲ್ಗೊಂಡು ವೇದಾಧ್ಯಯನ ಮಾಡುವ ವಟುಗಳಿಗೆ ಹಾಗೂ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸುವ ಕರ್ತವ್ಯವನ್ನು ನೆನಪಿಸುತ್ತದೆ.

ಚಾತುರ್ಮಾಸ್ಯ ಆಚರಣೆ
ನಾಲ್ಕು ಮಾಸಗಳ ಸಾಧನಾ ಅವಧಿ ಇದಾಗಿದ್ದು ‘ಚಾತುರ್ಮಾಸ್ಯ’ ಆಚರಣೆ ಎಂದೇ ಪ್ರಸಿದ್ಧವಾಗಿದ್ದು ವರ್ಷ ಋತುವಿನ ಈ ಅವಧಿಯಲ್ಲಿ ಯತಿಗಳು ಒಂದೆಡೆ ನೆಲೆಸಿ ಸಮಾಜಕ್ಕೆ ಧಾರ್ಮಿಕ, ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಾ ಬರುವುದೇ ಚಾತುರ್ಮಾಸ್ಯದ ವೈಶಿಷ್ಟ್ಯ
.
ಪ್ರಸಿದ್ಧ ಸಂಸ್ಕೃತ ಶ್ಲೋಕವೊಂದು ಹೇಳುತ್ತದೆ; ಚಾತುರ್ಮಾಸ್ಯ ಸಮಂ ನಾಸ್ತಿ| ವ್ರತಂಲೋಕೇ ಜಪ ದಾನನಮ್| ಶೃಣ್ವಂತು ಸಾಧವೋ ಭಕ್ತಾಃ ವ್ರತಂ ಇಷ್ಟಾರ್ಥ ಸಾಧನಮ್|| ಅಂದರೆ, ಪುಣ್ಯಾತ್ಮರಾದ ಸಾಧಕರೇ, ಭಕ್ತರೇ ಕೇಳಿ, ಚಾತುರ್ಮಾಸ್ಯಕ್ಕೆ ಸಮನಾದ ವ್ರತವಿಲ್ಲ. ಈ ವ್ರತದಿಂದ ನೀವು ಇಚ್ಛೆ ಪಟ್ಟಿದ್ದನ್ನು ಹೊಂದಬಹುದು!’.

ಒಟ್ಟಾರೆ ಹಿಂದೂ ಧರ್ಮದ ವ್ರತಗಳ ಹಾಗೂ ಪವಿತ್ರ ದಿನಗಳ ಆಚರಣೆಯು ಸಾಮಾನ್ಯನಿಗೆ ಭಕ್ಷ್ಯಗಳನ್ನು ತಯಾರಿಸಿ ಆನಂದಿಸುವ ಸಂಭ್ರಮವಿದೆನಿಸಿದರದು. ತಾತ್ವಿಕವಾಗಿ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವೂ,. ಶಾಶ್ವತವೂ ಆದ ಪಾರಮಾರ್ಥಿಕ ಸ್ತರದೆಡೆಗೆ ಪಯಣಿಸಲು ಅನುವು ಮಾಡಿಕೊಡುತ್ತದೆ.

ಹದಿಮೂರನೇ ಶತಮಾನದಲ್ಲಿದ್ದ ‘ಹೇಮಾದ್ರಿ’ ಎಂಬ ಪ್ರಾಜ್ಞನು ರಚಿಸಿರುವ ‘ಚತುರ್ವರ್ಗ ಚಿಂತಾಮಣಿ’ ಎಂಬ ಪುಸ್ತಕದಲ್ಲಿ ನೂರಾರು ವ್ರತಗಳ ಹಾಗೂ ಉತ್ಸವಗಳ ಉಲ್ಲೇಖವಿದ್ದು ಅದರ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತದೆ. ಆಷಾಢ ಮಾಸದಲ್ಲಿನ ಶಯನೀ ಏಕಾದಶೀ ಮತ್ತು ಪೂರ್ಣಿಮೆಯು ಅನುಕ್ರಮವಾಗಿ ಚಾತುರ್ಮಾಸ್ಯಾರಂಭ ಹಾಗೂ ಶ್ರೀ ಗುರುಪೂರ್ಣಿಮೆಯೆಂಬ ವಿಶೇಷ ಆಚರಣೆಯ ಸಂದರ್ಭಗಳಾಗಿವೆ.

ಆಷಾಢ ಮಾಸದ ಧಾರ್ಮಿಕ ಮಹತ್ವ

ಆಷಾಢಮಾಸವನ್ನು ವ್ರತಗಳ ದೃಷ್ಟಿಯಿಂದ ಬಹಳ ಮಹತ್ವದ್ದು ಎಂದು ನಮ್ಮ ಧಾರ್ಮಿಕ ಗ್ರಂತಗಳಲ್ಲಿದೆ.ಈ ಮಾಸದಲ್ಲಿ ಉಳಿದ ಮಾಸಗಳಲ್ಲಿ ನಡೆಯುವ ಮಾಮೂಲಿ ಶುಭ ಸಮಾರಂಭಗಳ ಬದಲಿಗೆ ವಿಶೇಷ ಆರಚಣೆಗಳಿಗೆ ಮಹತ್ವ ನೀಡಲಾಗಿದೆ, ಈ ಅರ್ಥದಲ್ಲಿ ಆಷಾಢಮಾಸವು ಉಳಿದ ಮಾಸಗಳಿಗಿಂತ ಹೆಚ್ಚು ಶುಭಕರ. ಈ ಸಮಯದಲ್ಲಿ ಮಾಡುವ ಪೂಜೆ ಮತ್ತು ವ್ರತಗಳಿಂದ ತಾತ್ಕಾಲಿಕ ನೆಮ್ಮದಿಯ ಬದಲಾಗಿ ಶಾಶ್ವತವಾದ ಫಲಗಳೇ ಸಿಕ್ಕುತ್ತವೆ ಎಂಬ ನಂಬಿಕೆಯಿದೆ. ಈ ಮಾಸದಲ್ಲಿ ‘ಏಕಭಕ್ತವ್ರತ’ವನ್ನು ಆಚರಿಸಿದರೆ ಧನ ಧಾನ್ಯ ಪುತ್ರಸಂಪತ್ತು ಲಭಿಸುವುದು ಎಂದು ‘ಧರ್ಮಸಿಂಧು’ವಿನಲ್ಲಿ ಹೇಳಲಾಗಿದೆ. ಹೀಗೆಂದರೆ ಒಂದೇ ದೇವರನ್ನು ಕುರಿತು ಅನನ್ಯವಾದ ಭಕ್ತಿಯಿಂದ ಪ್ರಾರ್ಥಿಸುವುದು. ಆಷಾಢ ಶುಕ್ಲ ದಶಮಿ ಮತ್ತು ಹುಣ್ಣಿಮೆಗಳು ‘ಮನ್ವಾದಿ’ಗಳು; ಎಂದರೆ ಯುಗಗಳು ಆರಂಭವಾದ ಮೂಹೂರ್ತಗಳು. ಇದರಿಂದ ಆ ದಿನಗಳಲ್ಲಿ ವಿಶೇಷ ಆಚರಣೆಗಳಿವೆ. ಆಷಾಢಮಾಸದ ಎರಡೂ ಏಕಾದಶಿಗಳಂದು ದೇಗುಲಗಳಲ್ಲಿ ಶಯನೋತ್ಸವವನ್ನು ಆಚರಿಸುತ್ತಾರೆ. ಏಕಾದಶಿ ರಾತ್ರಿಯಲ್ಲಿ ಶಯನೋತ್ಸವ, ಜಾಗರಣೆ, ದ್ವಾದಶಿ ದಿನ ಉತ್ಸವದ ಆಚರಣೆ ಮತ್ತು ತ್ರಯೋದಶಿಯಲ್ಲಿ ಗಾಯನ ನರ್ತನ ಸೇವೆ ಮಾಡಬೇಕು ಎಂದು ‘ಪುರುಷಾರ್ಥ ಚಿಂತಾಮಣಿ’ಯಲ್ಲಿ ಹೇಳಿದೆ. ದ್ವಾದಶಿಯಲ್ಲಿ ಅನುರಾಧ ನಕ್ಷತ್ರ ಬಂದರೆ ಅದರ ಪ್ರಥಮ ಪಾದವು ವಜ್ರ್ಯ. ಆಗ ಏಕಾದಶಿ ಮುಂದುವರಿದಿದೆ ಎಂದು ಭಾವಿಸಬೇಕು. ಈ ವ್ರತವನ್ನು ಮನೆಗಳಲ್ಲಿಯೂ ಆಚರಿಸಬಹುದಾಗಿದ್ದು, ಈ ಅವಕಾಶ ಆಷಾಢಮಾಸದಲ್ಲಿ ಮಾತ್ರ ಲಭಿಸುತ್ತದೆ.

ಆಷಾಢ ಶುದ್ಧ ಏಕಾದಶಿಯಿಂದ ಚಾತುಮಾಸ್ರ್ಯ ವ್ರತ ಆರಂಭ.ಇದನ್ನು ಲೌಕಿಕ ಮತ್ತು ಅಲೌಕಿಕ ನೆಮ್ಮದಿಗಾಗಿ ಆಚರಿಸಲಾಗುತ್ತದೆ. ಇದರಲ್ಲಿ ಶ್ರಾವಣಮಾಸದಲ್ಲಿ ಶಾಕ (ಕಾಯಿಪಲ್ಯೆ), ಭಾದ್ರಪದಮಾಸದಲ್ಲಿ ಮೊಸರು, ಆಶ್ವಯುಜಮಾಸದಲ್ಲಿ ಹಾಲು, ಕಾರ್ತಿಕದಲ್ಲಿ ದ್ವಿದಳ (ಬೇಳೆ ಮೊದಲಾದವು) ವಜ್ರ್ಯ, ಎಂದರೆ ಇದನ್ನು ಬಿಡಬೇಕು. ಈ ವ್ರತಗಳು ನಿತ್ಯ, ಎಂದರೆ ವ್ರತಾಚರಣೆ ಮಾಡುವವರು ಕಡ್ಡಾಯವಾಗಿ ಇವುಗಳ ಸೇವೆಯನ್ನು ಬಿಡಬೇಕು. ಇದಲ್ಲದೆ ‘ಹವಿಷ್ಯ ಭಕ್ಷಣ’ ಮೊದಲಾದ ವ್ರತಗಳಿದ್ದು ಇದನ್ನು ಮಾಡುವ ಇಚ್ಛೆ ಇದ್ದವರು ಸಂಕಲ್ಪದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದು ನಿರ್ದಿಷ್ಟ ಉದ್ದೇಶವಿದ್ದವರು ಮಾತ್ರ ಮಾಡಬಹುದಾಗಿದೆ. ಹೀಗೆ ಒಂದೊಂದು ಪದಾರ್ಥಗಳನ್ನು ತ್ಯಜಿಸುವುದರಿಂದ ಆಗುವ ಪ್ರಯೋಜನವನ್ನೂ ‘ಧರ್ಮಸಿಂಧು’ವಿನಲ್ಲಿ ಹೇಳಲಾಗಿದೆ .ಈ ವ್ರತದಲ್ಲಿ ಮೊಸರನ್ನು ಬಿಟ್ಟರೆ ಸ್ವರಮಾಧುರ್ಯ ಉಂಟಾಗುತ್ತದೆ. ಎಣ್ಣೆಯನ್ನು ವಜ್ರ್ಯ ಮಾಡಿದರೆ ದೇಹ ಸೌಂದರ್ಯ ಹೆಚ್ಚುತ್ತದೆ. ಶಾಕವರ್ಜನದಿಂದ ಇಹಲೋಕದಲ್ಲಿ ಸುಖವು ದೊರೆಯುವುದು ಎಂದು ಹೇಳಲಾಗಿದೆ ಈ ದಿನಗಳಲ್ಲಿ ವ್ರತವನ್ನು ಆಚರಿಸುವವರು ನೆಲದ ಮೇಲೆ ದರ್ಭೆಯನ್ನು ಹಾಸಿ ಮಲಗಬೇಕು .ಉಗುರು ಮತ್ತು ಕೂದಲನ್ನು ಕತ್ತರಿಸಬಾರದು. ಫಲ, ಮೂಲ, ಎಲೆ, ಅಂಕುರ ಮೊದಲಾದವನ್ನು ಸೇವಿಸಬಾರದು. ಅರಿಶಿನ, ಜೀರಿಗೆ ಮೊದಲಾದ ಸಾಂಬಾರು ಪದಾರ್ಥಗಳನ್ನು ಬಿಡಬೇಕು. ಆ ದಿಗಳಲ್ಲಿ ಉತ್ಪನ್ನವಾದ, ಬಿಸಿಲಿನಲ್ಲಿ ಒಣಗಿದ ಎಲ್ಲಾ ಶಾಕಗಳನ್ನು ಬಿಡಬೇಕು. ಆಷಾಢ ಏಕಾದಶಿಗಳಂದು ಆಸಕ್ತರು ‘ತಪ್ತ ಮುದ್ರಾಭರಣ’ವನ್ನು ಮಾಡಿಕೊಳ್ಳಬಹುದು.

ಆಷಾಢಮಾಸದಲ್ಲಿ ಇನ್ನೂ ಕೆಲವು ವಿಶೇಷವಾದ ವ್ರತಗಳಿವೆ. ಆಷಾಢಶುದ್ಧ ದ್ವಾದಶಿಯಲ್ಲಿ ವಾಮನಪೂಜೆಯನ್ನು ಮಾಡಿದರೆ ಬುದ್ಧಿಶಕ್ತಿ ಹೆಚ್ಚಾಗುವುದು. ಆಷಾಢಪೂರ್ಣಿಮೆಯಲ್ಲಿ ಅನ್ನದಾನವನ್ನು ಮಾಡಿದರೆ ಅಕ್ಷಯ ಪುಣ್ಯವು ಲಭಿಸುವುದು. ಇದೇ ರೀತಿ ಆಷಾಢ ಹುಣ್ಣಿಮೆಯಲ್ಲಿ ಕೋಕಿಲವ್ರತವನ್ನು ಹೇಳಿದೆ. ವಿವಾಹಕ್ಕೆ ಸೂಕ್ತ ಜೋಡಿಯನ್ನು ಹುಡುಕುವವರು ಈ ದಿನದಲ್ಲಿ ಕೋಕಿಲ ರೂಪಳಾದ ದೇವಿಯನ್ನು ಪೂಜಿಸಿ ಅನ್ನದಾನ ಮಾಡಬೇಕು ಎಂದು ಹೇಳಲಾಗಿದೆ. ಹಾಗೇ ಈ ಮಾಸದಲ್ಲಿ ಗೃಹಸ್ಥರು ಆಚರಿಸಬೇಕಾದ ವ್ರತವೂ ಇದೆ. ಆಷಾಢಕೃಷ್ಣ ಬಿದಿಗೆಯಲ್ಲಿ ‘ಅಶೂನ್ಯ ಶಯನ’ ವ್ರತವನ್ನು ಹೇಳಿದೆ.ಲಕ್ಷ್ಮೀ ಸಹಿತನಾದ ವಿಷ್ಣುವನ್ನು ಪಲ್ಲಂಗದಲ್ಲಿಟ್ಟು ಪೂಜಿಸಿದರೆ ದಾಂಪತ್ಯದಲ್ಲಿ ನೆಮ್ಮದಿ ದೊರಕುವುದು. ಈ ಮಾಸದಿಂದ ಆರಂಭಿಸಿ ನಾಲ್ಕು ಮಾಸಗಳ ಕೃಷ್ಣ ಬಿದಿಗೆಯಲ್ಲಿ ಈ ವ್ರತವನ್ನು ಆಚರಿಸುವವರೂ ಇದ್ದಾರೆ. ಹೀಗೆ ಮಾಡಿದರೆ ಏಳು ಜನ್ಮ ಪರ್ಯಂತ ಅಕ್ಷಯವಾದ ದಾಂಪತ್ಯಸುಖವು ದೊರಕುವುದು, ಗೃಹಸ್ಥ ಧರ್ಮವು ಚ್ಯುತಿ ಇಲ್ಲದೆ ಸಾಗುವುದು – ಎಂಬ ವಿಶ್ವಾಸವಿದೆ.

ಆಷಾಢ ಮಾಸ ಬಂದಿತವ್ವಾ…

ಹೆಣ್ಣೀನ ಜನುಮಾಕೆ ಅಣ್ಣತಮ್ಮರು ಬೇಕು |
ಬೆನ್ನ ಕಟ್ಟುವರು ಸಭೆಯೊಳಗೆ ಸಾವಿರ |
ಹೊನ್ನ ಕಟ್ಟುವರು ಉಡಿಯೊಳಗ ||

ಹೌದು, ತವರಿನ ಮಗಳ ಉಡಿ ತುಂಬುವ ಅಣ್ಣ, ತಮ್ಮಂದಿರು ಬಾಂಧವ್ಯದ ಬೆಸುಗೆಯ ಸೇತುವೆಯಾಗುತ್ತಾರೆ. ತವರಲ್ಲಿ ಮುದ್ದಿನ ಕೂಸಾಗಿ, ಕುಣಿದಾಡೋ ಲತೆಯಾಗಿ ಬೆಳೆದ ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ಹೊಸ ಬದುಕ ಕಟ್ಟಿಕೊಳ್ಳಲು ಯತ್ನಿಸುತ್ತಾಳೆ. ಸರದಾರನ ಹಿಗ್ಗಿನಲ್ಲೇ, ಅಮೃತ ಸಿಂಚನಗಳ ಕನಸಿನಲ್ಲೇ ಕಣ್ಣರಳಿಸಿದರೂ ಆಕೆಯ ಒಡಲಾಳದಲ್ಲೇನೋ ಕಾತುರ. ತಾನಿಲ್ಲದ ತವರು ಹೇಗಿರಬಹುದು? ಅಮ್ಮನ ಕೈಯೊಸಲು ಎಷ್ಟು ನೋಯುತ್ತಿರಬಹುದು? ನನಗಾಗಿ ತಿಂಡಿ ಪೊಟ್ಟಣ ಕಟ್ಟಿಸಿಕೊಂಡು ಬರುತ್ತಿದ್ದ ಅಣ್ಣ, ಕಂಡೊಡನೆ ಮೊಗವರಳಿಸುತ್ತಿದ್ದ ತಮ್ಮ ಈಗೇನು ಮಾಡುತ್ತಿರಬಹುದು? ಎನ್ನುವ ಚಿಂತೆ ಅವಳಿಗೆ. ತವರಿನ ವಿರಹದ ನೆನಹುಗಳಲ್ಲೇ ಹೊಸ ಬದುಕಿನ ಸವಿಯಲ್ಲೇ ಆಕೆ ಆಷಾಢದಲ್ಲಿ ತವರಿಗೆ ಕರೆದುಕೊಂಡು ಹೋಗಲು ಬರುವ ಕರುಳ ಬಳ್ಳಿಯ ನಿರೀಕ್ಷೆಯೊಂದಿಗೆ ಬಾಗಿಲ ಬಳಿ ಕಾದು ನಿಲ್ಲುತ್ತಾಳೆ. ತನ್ನ ಸರದಾರನನ್ನು ಕಂಡು:
ಸರದಾರ ಬರುವಾಗ ಸುರಿದಾವ ಮಲ್ಲೀಗಿ
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನಿ ಬಾಗಿ ಹಾಲ ಸುರಿದಾವ ||

ಎಂದು ತವರಿಗೆ ಹೋಗುವ ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಹೀಗೆ ವಿರಹದ ನುಡಿಯೊಂದಿಗೆ ಆರಂಭವಾಗುವ ಆಷಾಢಕ್ಕೆ ಮಗಳು ತವರಿಗೆ ತೆರಳುತ್ತಾಳೆ.

ಆಷಾಢದ ತಿಂಗಳಲ್ಲಿ ಅಮ್ಮನ ಸೆರಗಿನಂಚಿನಲ್ಲಿ ಗಂಡನ ಮನೆಯಲ್ಲಿ ಹೊಸ ಬಾಳು ಕಟ್ಟುವ ಪರಿಯನ್ನು ತಿಳಿದುಕೊಳ್ಳುತ್ತಾಳೆ. ಆಷಾಢ ಅಮಾವಾಸ್ಯೆಯಂದು ಪೂಜೆ ಮುಗಿಸಿ ಗಂಡನೊಂದಿಗೆ ತವರು ಮನೆಗೆ ಹೊರಡುತ್ತಾಳೆ, ಹೊರಡುವ ಮುನ್ನ ಆಕೆಯ ಕಣ್ಣಂಚಿನಲ್ಲೇನೋ ಹನಿಮುತ್ತುಗಳು. ತವರಿನ ಬಾಂಧವ್ಯವನ್ನು ಮುಂದುವರಿಸುವ ತವಕ. ಗಂಡನ ಕೈ ಹಿಡಿದು ಅಣ್ಣ, ತಮ್ಮಂದಿರತ್ತ ಅಕ್ಕರೆಯ ನೋಟ ಹರಿಸುವ ಆಕೆ ನಾಗರ ಪಂಚಮಿಗೆ ತನ್ನ ಮನೆಗೆ ಬರುವಂತೆ ಆಹ್ವಾನವೀಯುತ್ತಾಳೆ. ತವರಿನ, ಗಂಡನ ಮನೆಯ ನೆಂಟಸ್ತಿಕೆಯನ್ನು ಮುಂದುವರಿಸುತ್ತಾಳೆ.

ಹೀಗೆ ಬಾಂಧವ್ಯದ ಸೇತುವೆಯಾಗುವ ಹೆಣ್ಣುಮಗಳ ಭಾವನೆಯನ್ನೇ ಜನಪದರು:
ಎನಗ ಯಾರಿಲ್ಲಾಂತ ಮನದಾಗ ಮರುಗಿದರ
ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ
ಬಿದಿಗೆ ಚಂದ್ರಾಮ ಉದಿಯಾದ |

ಎನ್ನುತ್ತಾರೆ. ನಮ್ಮ ಜನಪದ ಸಮಾಜದಲ್ಲಿ ಅಣ್ಣ-ತಂಗಿ ಬಾಂಧವ್ಯ ಅಪೂರ್ವವಾದುದು. ಅವರೀವರ್ವರ ಒಡನಾಟ ಅನೂಹ್ಯವಾದುದು. ಹೃದಯ ಸ್ಪರ್ಶಿಯಾದುದು. ಆಷಾಢ ಬದುಕಿನ ಪಾಠವನ್ನೂ ಕಲಿಸುತ್ತದೆ. ಎಲ್ಲವೂ ಸಿಹಿಯಾದರೆ ಬದುಕಿನ ಮಹತ್ವ ತಿಳಿಯದು. ಒಂದಷ್ಟು ಕಹಿಯೂ ಇರಬೇಕು ಎನ್ನುವ ಸಂದೇಶವಿದೆ.

ಕಾರಣ ಏನಿರಬಹುದು?

ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎನ್ನುವ ಪದ್ಧತಿ ಕೆಲವೆಡೆಯಿದೆ. ಅದಕ್ಕೆ ಕಾರಣ ಹೀಗಿರಬಹುದು. ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಯ ಉಂಟಾಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬಹುದು.

ಇನ್ನೊಂದು ಅಂಶವೆಂದರೆ, ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗುವುದೇ ಕಷ್ಟಕರವಾಗಿರುತ್ತದೆ. ಹೀಗೆ ನಿರಂತರ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಅದರಿಂದಾಗಿ ಹೊರಗಿನ ಕೆಲಸ ಕಾರ್ಯಗಳು ಕುಂಠಿತವಾಗುತ್ತವೆ. ಮಳೆಯೊಂದಿಗೆ ರೈತಾಪಿ ಜನರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಶುರುವಾಗುತ್ತವೆ. ಅವರಿಗೆ ಬೇರೆ ವಿಷಯಗಳ ಬಗ್ಗೆ ಚಿಂತಿಸುವುದಕ್ಕೇ ಸಮಯ ಇರುವುದಿಲ್ಲ. ಬಹುಶಃ ಆ ಕಾರಣ ಅವರಿಗೆ ಹಬ್ಬ, ಹರಿದಿನ ಅಂತ ಸಮಯ ವ್ಯರ್ಥ ಮಾಡಿಕೊಳ್ಳುವುದಕ್ಕೆ ಮನಸ್ಸಿಲ್ಲದಿರಬಹುದು. ಶುಭಕಾರ್ಯಕ್ಕೆ ಅನಾನುಕೂಲವಿದ್ದ ಕಾರಣ ಆಷಾಢ ಅಶುಭ ಎನ್ನುವ ತೀರ್ಮಾನಕ್ಕೂ ಬಂದಿರಬಹುದು. ಬಾಂಧವ್ಯದ ಬೆಸುಗೆ ಹೀಗಾದರೆ ಆಷಾಢವು ಹಲವು ಹಬ್ಬಗಳಿಗೆ, ಯತಿಗಳ ಸಂಕಲ್ಪದೀಕ್ಷೆಯ ವೇದಿಕೆಯಾಗೂ ಗಮನ ಸೆಳೆಯುತ್ತದೆ.

ದಕ್ಷಿಣಾಯಣ ಪುಣ್ಯಕಾಲ

ಹಿಂದೂ ಪಂಚಾಂಗದ ರೀತ್ಯ ಬರುವ ನಾಲ್ಕನೆಯ ಮಾಸವೇ ಆಷಾಢ ಮಾಸ. ಈ ಮಾಸದಲ್ಲಿ ಸೂರ್ಯ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಕಾರಣ ಜುಲೈ ಕರ್ಕಾಟಕ ಸಂಕ್ರಮಣ ಕಾಲ .ಈ ಬಾರಿ ಜುಲೈ 17ರಂದು ಬರುತ್ತದೆ .ಕರ್ಕಾಟಕ ಸಂಕ್ರಮಣದೊಂದಿಗೆ ದಕ್ಷಿಣಾಯಣ ಪುಣ್ಯಕಾಲವು ಪ್ರಾರಂಭವಾಗುತ್ತದೆ. ಆಷಾಢಮಾಸದ ಮತ್ತೊಂದು ವಿಶೇಷವೆಂದರೆ ಹುಣ್ಣಿಮೆಯ ದಿನದಂದು ಪೂರ್ವ ಅಥವಾ ಉತ್ತರ ಆಷಾಢವೂ ಸೇರಿಕೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪೂರ್ವಾಷಾಡ ನಕ್ಷತ್ರವು ಧನೂ ರಾಶಿಯಲ್ಲಿದ್ದರೆ ಉತ್ತರಾಷಾಢ ನಕ್ಷತ್ರವು ಸ್ವಲ್ಪ ಭಾಗ ಧನೂ ರಾಶಿಯಲ್ಲೂ ಇನ್ನುಳಿದ ಭಾಗ ಮಕರ ರಾಶಿಯಲ್ಲೂ ಇರುತ್ತದೆ. ಪೂರ್ವಾಷಾಢದ ಅಧಿಪತಿ ಶುಕ್ರನಾದರೆ ಉತ್ತರಾಷಾಢದ ಅಧಿಪತಿ ಸೂರ್ಯನಾಗಿದ್ದಾನೆ. ಆಷಾಢ ಮಾಸದ ಆರಂಭದೊಂದಿಗೆ ಚಾತುರ್ಮಾಸ ವ್ರತವೂ ಪ್ರಾರಂಭವಾಗುತ್ತದೆ. ಶ್ರೀಮನ್ ನಾರಾಯಣ ಯೋಗನಿದ್ರೆಗೆ ಜಾರುವ ಶಯನಿ ಏಕಾದಶಿಯೂ ಆಷಾಢದಲ್ಲೇ ಬರುತ್ತದೆ. ಅದೇ ದಿನದಂದು ತಪ್ತಮುದ್ರಾ ಧಾರಣೆ ಹಾಕಿಸಿಕೊಳ್ಳುವ ಸಂಪ್ರದಾಯ ಒಂದು ವರ್ಗದವರಲ್ಲಿದೆ.

ಪ್ರಥಮ ಏಕಾದಶಿ

ಆಷಾಢ ಮಾಸದ ಶುದ್ಧ ಏಕಾದಶಿ ಎಂದರೆ ಪ್ರಥಮ ಏಕಾದಶಿ.ಅಂದು ವಾರಕರಿ ಸಂಪ್ರದಾಯದವರು ಪಾಂಡುರಂಗನ ಉಪಾಸನೆ ಮಾಡುತ್ತಾರೆ. ಪಂಢರಪುರದಲ್ಲಿ ಅಂದು ದೊಡ್ಡ ಪರಿಷೆ ಜರುಗುತ್ತದೆ. ಮರುದಿನ ದೇವರ ಪೂಜೆ ಮಾಡಿ ದ್ವಾದಶಿ ಪಾರಣೆ ಮಾಡುತ್ತಾರೆ. ಕರಾವಳಿಯಲ್ಲಿ ಆಷಾಢದ ಅಮಾವಾಸ್ಯೆಯ ದಿನವನ್ನು ಆಟಿ ಅಮಾವಾಸ್ಯೆ ಅಥವಾ ಅಳಿಯನ ಅಮಾವಾಸ್ಯೆ ಎಂದು ಕರೆಯುವುದುಂಟು.ಮಾವನ ಮನೆಗೆ ಅಳಿಯ ಆಗಮಿಸಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಳ್ಳುತ್ತಾನೆ. ಅಳಿಯನಿಗೆ ಹಲವು ಬಗೆಯ ಉಡುಗೊರೆಗಳನ್ನೂ ನೀಡಲಾಗುತ್ತದೆ.ಕನ್ಯೆಯರು ಶಿವನನ್ನು ಪೂಜಿಸಿ ತಮಗೆ ಒಳ್ಳೆಯ ಪತಿ ದೊರೆಯಲಿ ಎಂದು ಬೇಡಿಕೊಳ್ಳುತ್ತಾರೆ. ಅಲ್ಲದೆ ಒಡ ಹುಟ್ಟಿದ ಸೋದರರೊಂದಿಗೆ ಹಲವು ಆಚರಣೆಗಳಲ್ಲಿ ತೊಡಗಿಕೊಳ್ಳುತ್ತಾರೆ.

ಒಟ್ಟಾರೆ ಕೌಟುಂಬಿಕ ಪರಿಸರದಲ್ಲಿ ಸೋದರ ಬಾಂಧವ್ಯವನ್ನು ಗಟ್ಟಿಗೊಳಿಸಲು ಆಷಾಢ ಮಾಸ ನೆರವಾಗುತ್ತದೆ. ಸೋದರ ಸೋದರಿಯರು ಒಗ್ಗೂಡಿ ಆನಂದಿಸುತ್ತಾರೆ. ಹಳೆಯ ಆಚರಣೆಗಳನ್ನು ನಾವು ಅರ್ಥ ತಿಳಿದೋ ತಿಳಿಯದೆಯೋ ಅನುಸರಿಸುತ್ತಿದ್ದೇವೆ. ಅವುಗಳಲ್ಲಿನ ಮಾನವೀಯ ಮುಖಗಳನ್ನು ನಾವು ಅರ್ಥೈಸಿಕೊಳ್ಳಬೇಕು. ಮಾನವ ಸಂಬಂಧಗಳು ಹೆಚ್ಚು ಪ್ರಾಯೋಗಿಕ, ಹೀಗೆ ಆಷಾಢಮಾಸ ತನ್ನದೇ ಆದ ಮಹತ್ವವನ್ನು ಹೊಂದಿದೆ.

ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು, 9739369621

 

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group