ಕಳ್ಳನರಮನೆಗೊಬ್ಬ ಬಲುಗಳ್ಳ ಬಂದವನು
ಸಂಗಯ್ಯ ಕೈಯ್ಯಬಿಡು ನೊಂದಿತೆಂದು
ಬೈಯ್ದ ಬಸವೇಶ್ವರನು ಮಡದಿ ನೀಲಾಂಬಿಕೆಯ
ಸಂಗ್ರಹವೆ ಚೋರತನ – ಎಮ್ಮೆತಮ್ಮ
ಶಬ್ಧಾರ್ಥ
ಬಲುಗಳ್ಳ = ನಿಸ್ಸೀಮ ಕಳ್ಳ. ಮಡದಿ = ಹೆಂಡತಿ.
ಚೋರತನ = ಕಳ್ಳತನ
ತಾತ್ಪರ್ಯ
ಒಮ್ಮೆ ಬಿಜ್ಜಳನ ಮಹಾಮಂತ್ರಿ ಬಸವಣ್ಣನ ಅರಮನೆಗೆ
ಒಬ್ಬ ನಿಸ್ಸೀಮ ಕಳ್ಳನೊಬ್ಬ ರಾತ್ರಿ ನುಗ್ಗಿದನು. ಬಸವಣ್ಣ
ನೀಲಾಂಬಿಕೆಯರ ಮಲಗುವ ಕೋಣೆಗೆ ಹೋದನು. ಗಾಢವಾದ ನಿದ್ದೆಯಲ್ಲಿದ್ದ ನೀಲಾಂಬಿಕೆಯ ಕೊರಳಲ್ಲಿಯ ಚಿನ್ನದ ಒಡವೆ ಕಿತ್ತುಕೊಳ್ಳಲು ಕೈಹಾಕಿ ಜಗ್ಗಿದನು. ಆಗ ನೀಲಾಬಿಂಕೆಗೆ ಎಚ್ಚರವಾಗಿ ಅಯ್ಯೋ ಕಳ್ಳ ಕಳ್ಳ ಎನ್ನುತ್ತ ಅವನ ಕೈಯನ್ನು ಗಟ್ಟಿಯಾಗಿ ಹಿಡಿದಳು. ಆ ಶಬ್ಧಕ್ಕೆ ಬಸವಣ್ಣನೆದ್ದು “ಅವನು ಕಳ್ಳನಲ್ಲ. ಕಳ್ಳನಾದ ನನ್ನ ಅರಮನೆಗೆ ಬಂದವನು ಸಾಕ್ಷಾತ್ ಸಂಗಮನಾಥ. ಆತನ ಕೈ ನೊಂದೀತು ಕೈಬಿಡು ಎಲೆ ಚಾಂಡಾಲಗಿತ್ತಿ” ಎಂದು ಬೈಯ್ದು ಚಿನ್ನದ ಒಡವೆಯನ್ನು ಕಳ್ಳನಿಗೆ ಕೊಟ್ಟು ಕೈಮುಗಿಯುತ್ತಾನೆ. ಆಗ ಕಳ್ಳ ಪಚ್ಚಾತ್ತಾಪಪಟ್ಟು ಬಸವಣ್ಣನಿಂದ ಲಿಂಗ ಪಡೆದು
ಭಕ್ತನಾಗಿ ಮಾರ್ಪಟ್ಟು ಬಸವಣ್ಣನ ಮನೆಯ ಕಾಯುವ
ಕಾಯಕ ಮಾಡುತ್ತಾನೆ.ಎಲ್ಲರು ದೇವರೆಂಬ ಭಾವ ಮತ್ತು
ತಾನು ಅವಶ್ಯಕತೆಗಿಂತ ಸಂಪತ್ತು ಇಟ್ಟುಕೊಂಡ ಕಳ್ಳನೆಂಬ
ಭಾವ ಬಸವಣ್ಣನದಾಗಿತ್ತು. ಸಂಪತ್ತನ್ನು ಹೆಚ್ಚಿಗೆ ಸಂಪಾದಿಸಿ
ಇಟ್ಟುಕೊಳ್ಳದೆ ಬಡವರಿಗೆ ಹಂಚಿ ದಾಸೋಹ ಮಾಡಬೇಕೆಂದು ಈ ಪ್ರಸಂಗದಿಂದ ತಿಳಿಯುತ್ತದೆ. ಬಸವಣ್ಣ ಒಬ್ಬ ಒಳ್ಳೆಯ ಅರ್ಥ ಶಾಸ್ತ್ರಜ್ಞನಿದ್ದನೆಂದು ತಿಳಿದುಬರುಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990